ನಂದಿನಿ ತುಪ್ಪ ಪ್ಯೂರ್ ಅಂತ ತಿರುಪತಿ ಪ್ರಸಾದದ ವಿವಾದ ಮತ್ತೆ ಸಾಬೀತು ಮಾಡ್ತು: ರೇಣುಕಾ ಮಂಜುನಾಥ್ ಬರಹ-tirupati laddu row renuka manjunath shared her opinion on nandini pure ghee on facebook namma nandini namma hemme prs ,ಕರ್ನಾಟಕ ಸುದ್ದಿ
ಕನ್ನಡ ಸುದ್ದಿ  /  ಕರ್ನಾಟಕ  /  ನಂದಿನಿ ತುಪ್ಪ ಪ್ಯೂರ್ ಅಂತ ತಿರುಪತಿ ಪ್ರಸಾದದ ವಿವಾದ ಮತ್ತೆ ಸಾಬೀತು ಮಾಡ್ತು: ರೇಣುಕಾ ಮಂಜುನಾಥ್ ಬರಹ

ನಂದಿನಿ ತುಪ್ಪ ಪ್ಯೂರ್ ಅಂತ ತಿರುಪತಿ ಪ್ರಸಾದದ ವಿವಾದ ಮತ್ತೆ ಸಾಬೀತು ಮಾಡ್ತು: ರೇಣುಕಾ ಮಂಜುನಾಥ್ ಬರಹ

Tirupati Laddu Row: ತಿರುಪತಿ ಲಾಡು ಪ್ರಸಾದದ ವಿವಾದ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿದೆ. ಇದರ ಬೆನ್ನಲ್ಲೇ ಕರ್ನಾಟಕದ ಹೆಮ್ಮೆ ನಂದಿನಿ ತುಪ್ಪಕ್ಕೆ ಬೇಡಿಕೆಯೂ ಹೆಚ್ಚಾಗಿದೆ. ವಿಶ್ವದ ಅತ್ಯಂತ ಶ್ರೀಮಂತ ದೇಗುಲಕ್ಕೆ ನಮ್ಮ ನೆಲದ ಗೋವುಗಳ ತುಪ್ಪವೇ ಉತ್ಕೃಷ್ಟ ಎಂದೀಗ ಸಾರ್ವಜನಿಕವಾಗಿ ಸಾಬೀತಾಗಿದೆ!

ನಂದಿನಿ ತುಪ್ಪ.
ನಂದಿನಿ ತುಪ್ಪ. (ಸಾಂದರ್ಭಿಕ ಚಿತ್ರ)

Nandini Ghee: ತಿರುಪತಿ ತಿರುಮಲ ದೇವಸ್ಥಾನದ ಲಾಡು ಪ್ರಸಾದದ ವಿವಾದ (Tirupati Laddu Row) ತಾರಕಕ್ಕೇರುತ್ತಿದೆ. ಇದರ ನಡುವೆ ಕರ್ನಾಟಕದ ನಂದಿನಿ ತುಪ್ಪದ ಬೇಡಿಕೆ ಗ್ರಾಫ್​ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಸಾಮಾಜಿಕ ಜಾಲತಾಣದಲ್ಲಿ (Social media) ‘ನಮ್ಮ ನಂದಿನಿ ನಮ್ಮ ಹೆಮ್ಮೆ’ ಎಂಬ ಹ್ಯಾಶ್​ಟ್ಯಾಗ್​ನೊಂದಿಗೆ ಕನ್ನಡಿಗರು ಟ್ರೆಂಡ್ ಕೂಡ ಮಾಡಿದ್ದುಂಟು. ಇದು ಕೆಎಂಎಫ್​ ಜವಾಬ್ದಾರಿ ಹೆಚ್ಚಿಸಿದೆ. ಗುಣಮಟ್ಟ ಕಾಪಾಡುವುದು ಸಹ ಕೆಎಂಎಫ್ ಪ್ರಮುಖ ಧ್ಯೇಯವಾಗಿದೆ. ಈ ಮೊದಲು ನಂದಿನಿ, ಅಮುಲ್​​ ತುಪ್ಪದೊಂದಿಗೆ ವಿಲೀನ ಆಗೋದಷ್ಟೇ ಬಾಕಿ ಇತ್ತು. ಇದು ಕೂಡ ದೊಡ್ಡ ವಿವಾದ ಸೃಷ್ಟಿತ್ತು. ಒಂದ್ವೇಳೆ ವಿಲೀನ ಆಗಿದ್ದರೂ ನಂದಿನಿ ತುಪ್ಪಕ್ಕೆ ಈ ಬೇಡಿಕೆ ಇರುತ್ತಿರಲಿಲ್ಲ ಎಂದರೂ ತಪ್ಪಾಗಲ್ಲ. ವಿಶ್ವದ ಅತ್ಯಂತ ಶ್ರೀಮಂತ ದೇಗುಲಕ್ಕೆ ನಮ್ಮ ನೆಲದ ಗೋವುಗಳ ತುಪ್ಪವೇ ಉತ್ಕೃಷ್ಟ ಎಂದೀಗ ಸಾರ್ವಜನಿಕವಾಗಿ ಮತ್ತೆ ಸಾಬೀತಾಗಿದೆ ಎಂದು ರೇಣುಕಾ ಮಂಜುನಾಥ್ ಎಂಬವರು ಫೇಸ್​ಬುಕ್​ನಲ್ಲಿ ಮಾಡಿದ ಪೋಸ್ಟ್​ನಲ್ಲಿ ಬರೆದಿದ್ದಾರೆ.

ತಿರುಪತಿ ತಿಮ್ಮಪ್ಪನ ಲಡ್ಡು ಪ್ರಸಾದದ ಹಗರಣದಲ್ಲಿ ನಮ್ಮ ನಂದಿನಿ ತುಪ್ಪವನ್ನು ತಿರಸ್ಕರಿಸಿದ್ದು, ಈಗ ಪುರಸ್ಕರಿಸುತ್ತಿರುವುದು ಬಹಳ ಗಮನಿಸಬೇಕಾದ ಸಂಗತಿಯಾಯ್ತು. ನಮ್ಮ ರಾಜ್ಯ ಹಲವು ವಿಷಯಗಳಲ್ಲಿ ಹೆಮ್ಮೆ ಪಡುವಂತಹುದು. ಪಶ್ಚಿಮಘಟ್ಟಗಳ ಜೀವವೈವಿಧ್ಯ ಸಸ್ಯಸಂಕುಲವಾಗಲಿ, ನಮ್ಮ ಶಿಕ್ಷಣ ಸಂಸ್ಥೆಗಳ ಕೊಡುಗೆಯಾಗಿ ವಿಶ್ವದಾದ್ಯಂತ ನೆಲೆಸಿರುವ ಸಾಫ್ಟ್‌ವೇರ್ ಇಂಜಿನಿಯರ್‌ಗಳಾಗಲೀ, ವೈದ್ಯರಾಗಲೀ, ನಮ್ಮ‌ಕರ್ನಾಟಕದ ಹವಾಮಾನ ನೀರು ಗಾಳಿ ಮತ್ತೊಂದಾಗಲೀ, ನಮ್ಮ ಕನ್ನಡಿಗರ ಸಭ್ಯತೆ ಸುಸಂಸ್ಕೃತಿಯಾಗಲೀ, ಜ್ಞಾನಪೀಠಪ್ರಶಸ್ತಿಗಳ ಮೂಲಕ ಅಗ್ರಸಾಲಲ್ಲಿ ಮಿಂಚುವ ನಮ್ಮ ಸಾಹಿತ್ಯ ಕ್ಷೇತ್ರವಾಗಲೀ... ಹೀಗೆ ಪಟ್ಟಿಮಾಡುತ್ತಾ ಹೋಗಬಹುದಾದ ನಮಗೆ 'ನಮ್ಮ ನಂದಿನಿ ನಮ್ಮ ಹೆಮ್ಮೆ' ಎಂಬುದು ಮನಮನದ ಮನೆಮನೆಯ ವಿಷಯ!

ಬೆಳಗಾದರೆ ನಾವು ದಿನ ಆರಂಭಿಸುವುದೇ ನಂದಿನಿ ಹಾಲಿನ ಮೂಲಕ! ರಾಜ್ಯಾದ್ಯಂತ ಅದೆಷ್ಟು ಗೋವುಗಳಿದ್ದಾವೆ! ಅದೆಷ್ಟು ಗೋಪಾಲಕರಿದ್ದಾರೆ! ಅಂದಮೇಲೆ ನಮ್ಮ ನೆಲದಲ್ಲಿ ಫಲವತ್ತತೆ ಇಲ್ಲದೆ ಅಷ್ಟು ಹಾಲು ಉತ್ಪಾದನೆ ಸಾಧ್ಯವೇ? ವಿಶ್ವದ ಅತ್ಯಂತ ಶ್ರೀಮಂತ ದೇಗುಲಕ್ಕೆ ನಮ್ಮ ನೆಲದ ಗೋವುಗಳ ತುಪ್ಪವೇ ಉತ್ಕೃಷ್ಟ ಎಂದೀಗ ಸಾರ್ವಜನಿಕವಾಗಿ ಸಾಬೀತಾಗಿದೆ! ಈ ಖುಷಿ ಹಂಚಿಕೊಂಡ ನನ್ನೊಂದು ಸಾಮಾನ್ಯ ಪೋಸ್ಟ್‌ಗೆ ಬಂದ ಅನೇಕ ಪ್ರತಿಕ್ರಿಯೆಗಳಲ್ಲಿ ನಾವೆಲ್ಲಾ ಅರಿಯಬೇಕಾದ್ದು, ತಿಳಿಯಬೇಕಾದ್ದು ಬಹಳವೇ ಇತ್ತು! ಅದನ್ನೆಲ್ಲಾ ಒಟ್ಟುಗೂಡಿಸಿ ಎಲ್ಲರ‌ ಗಮನಕ್ಕಿರಲೆಂದು ಮತ್ತೊಂದು ಪೋಸ್ಟ್ ಮಾಡಿದ್ದೇನಷ್ಟೆ. ಸ್ಪಂದಿಸಿದ ಎಲ್ಲರಿಗೂ ಅನಂತ ಧನ್ಯವಾದಗಳು. ವಿಶೇಷವಾಗಿ, ಕೆ. ರಾಜಕುಮಾರ್, ಪ್ರೇಮನಾಥ್ ಎಎಸ್ ಪ್ರೇಮ್, ಸವಿತಾ ಭರಮಗೌಡ, ಇಂದುಶೇಖರ್ ಅಂಗಡಿ, ಭರತ್ ಕುಮಾರ್ ಮತ್ತೆಲ್ಲರಿಗೂ ಧನ್ಯವಾದ…

ರಾಜಕುಮಾರ್ ಕೆ ಪೋಸ್ಟ್​

ಏನೇ ಹೇಳಿ, ಎಷ್ಟೇ ಹೇಳಿ. ನಂದಿನಿಯ ಬಗೆಗಿನ ನಮ್ಮ ಪ್ರೀತಿಗೆ ಎಣೆಯೇ ಇಲ್ಲ. ಮೂರು ವರ್ಷದ ಹಿಂದೆ ನಮ್ಮ ಹೆಮ್ಮೆಯ ನಂದಿನಿಯನ್ನು ಗುಜರಾತಿನ ಅಮುಲ್ ಕಂಪನಿಯ ಜೊತೆ ವಿಲೀನಗೊಳಿಸುವ ಪ್ರಕ್ರಿಯೆ ನಡೆದಿತ್ತಲ್ಲವೆ? ಕರುನಾಡಿಗರ ಒಕ್ಕೊರಲ ಪ್ರತಿಭಟನೆಯಿಂದ ಅದನ್ನು ತಡೆದಿದ್ದಾಯಿತು. ಆಗ ನಂದಿನಿ ತಾನು ಈ ನಾಡಿನ ಅಸ್ಮಿತೆ ಎಂಬುದನ್ನು ಮನಗಾಣಿಸಿತು. ಅಮಿತೋತ್ಸಾಹದಿಂದ ನಂದಿನಿಗೆ ಹುಳಿ ಬೆರೆಸಲು ಹೋದ ಮುತ್ಸದ್ದಿಯಲ್ಲದ ರಾಜಕಾರಣಿಗಳಿಗೆ ವಿಪ್ಲವವಿಲ್ಲದೆಯೇ 'ನಂದಿನಿ ಪ್ರಸಂಗ' ಪಾಠ ಕಲಿಸಿತು. ನಂದಿನಿ ಕಾನೂನಿನ ದೃಷ್ಟಿಯಲ್ಲಿ ಟ್ರೇಡ್ ಮಾರ್ಕ್ ಪಡೆದಿರಬಹುದು. ಆದರೆ, ಭಾವನಾತ್ಮಕವಾಗಿ, ನಮ್ಮ ಪಾಲಿಗೆ GI ಟ್ಯಾಗ್ ಪಡೆದ ಅಮೂಲ್ಯ ಪದಾರ್ಥ.

ಅದು ಭೌಗೋಳಿಕ ಸೂಚಕ ಸ್ಥಾನಮಾನವನ್ನು ಪಡೆದಿದೆ ಎಂಬಂತೆಯೇ ಭಾಸ. ಭೌಗೋಳಿಕ ಸೂಚಕ ಎಂಬುದು ಒಂದು ಸಮುದಾಯದ ಆಸ್ತಿ. ನಂದಿನಿ ಇಡೀ ಕನ್ನಡ ಕುಲದ ಆಸ್ತಿ. ನಂದಿನಿಯ ಶ್ರೇಯವನ್ನು ಮುಗಿಲೆತ್ತರಕ್ಕೆ ಏರಿಸಿದ ಅದರ ಅಧಿಕಾರಿ ಪ್ರೇಮಕುಮಾರ್ ಹಾಗೂ ನಂದಿನಿಯ ಬಳಕೆಯನ್ನು ಉತ್ತೇಜಿಸಲು ಉಚಿತವಾಗಿ ಜಾಹೀರಾತು ತುಣುಕಿನಲ್ಲಿ ಭಾಗಿಯಾದ ಡಾ. ರಾಜ್ ಈರ್ವರೂ ನೆನಪಾಗುತ್ತಾರೆ. ನಂದಿನಿಯನ್ನು ಕುರಿತಂತೆ ಸಂದರ್ಭೋಚಿತವಾಗಿ ಮೊಗಬರೆಹವನ್ನು ಲೇಖಿಸಿದ ರೇಣುಕಾ ಮಂಜುನಾಥ್ ಅವರ ಜಾಣ್ಮೆ ಮತ್ತು ವಿವೇಕಕ್ಕೆ ಭಲೇ ಎನ್ನುವೆ.

ಪ್ರೇಮನಾಥ್ ಎಸ್​ ಪ್ರೇಮ್

ನಂದಿನಿ ಬಗ್ಗೆ ನಮ್ಮ ಬಗ್ಗೆ ನಿಮ್ಮ ವಿಶ್ವಾಸಕ್ಕೆ ಅನಂತ ಧನ್ಯವಾದಗಳು. ವಿವರ ತುಂಬಾ ಇದೆ. ಅದರೆ ಇಲ್ಲಿ ಸಂಕ್ಷಿಪ್ತವಾಗಿ ಮುಖ್ಯವಾದ ಸಾರಾಂಶ ಏನೆಂದರೆ, ಬೆಳ್ಳಗಿರುವುದೆಲ್ಲಾ ಹಾಲಲ್ಲ! ತುಪ್ಪವೆಲ್ಲಾ… ಹಸುವಿನ ಶುದ್ಧ ತುಪ್ಪವಲ್ಲ! ನಂದಿನಿ ತುಪ್ಪ - ಹಸುವಿನ ಶುದ್ಧ ತುಪ್ಪ. ಹೌದು, ಕರ್ನಾಟಕ ಕೆಎಂಎಫ್​ನಲ್ಲಿ ಹಾಲಿನ ಹೊಳೆಯೇ ಹರಿಯುತ್ತಿದೆ. ಸುಗ್ಗಿ ಕಾಲದಲ್ಲಿ ಹಾಲು ಸಂಗ್ರಹಣೆ ದಿನಕ್ಕೆ ಸುಮಾರು ಒಂದು ಕೋಟಿ ಲೀಟರ್ ಮುಟ್ಟಿ ಹತ್ತಿರದಲ್ಲಿತ್ತು, ಕೆಎಂಎಫ್ ಸದಾ ಹಾಲು ಮೊಸರು ಬೆಣ್ಣೆ ತುಪ್ಪ ದಿಂದ ಸದಾ ಸಮೃದ್ಧವಾಗಿದೆ. 1993 -96 ಸುಮಾರಿನಿಂದ ತಿರುಪತಿ ವೆಂಕಟೇಶ್ವರ ದೇವರ ಪ್ರಸಾದ ಲಡ್ಡು ತಯಾರಿಕೆಗೆ ಅವರ ಬೇಡಿಕೆಯಂತೆ ನಾವೇ ಸ್ವಯಂ ಪ್ರೇರಿತರಾಗಿ ದರದಲ್ಲಿ ಹೆಚ್ಚು ಲಾಭಾಂಶವಿಡದೆ ನಮಗೂ ನಷ್ಟವಾಗದಂತೆ ಒಂತರ ರೀಸನೇಬಲ್ (ಕಡಿಮೆ) ದರದಲ್ಲೇ ತುಪ್ಪ ಕೊಟ್ಟು ದೇವರ ಸೇವೆಗೆ ಅನ್ನುವ ಭಾವದಲ್ಲೇ ಸರಬರಾಜು ಮಾಡುತ್ತಿದ್ದೆವು.

ಮೊದಲು ಕಡಿಮೆಯಿದ್ದ ತುಪ್ಪದ ಪ್ರಮಾಣ ಬರು ಬರುತ್ತಾ ವಾರ್ಷಿಕ 1500 ಮೆಟ್ರಿಕ್ ಟನ್​​ಗಳಿಂದ 2000 ಟನ್​ಗೂ ಹೆಚ್ಚು ಏರಿಕೆಯಾಗಿ ಸರಬರಾಜು ಮಾಡಿದ್ದೂ ಇದೆ. ಆಮೇಲೆ ಈ ಭಾರೀ ವಹಿವಾಟಿನ ಮೇಲೆ ಖಾಸಗಿಯವರ ಕಣ್ಣು ಬಿತ್ತೆಂದು ಕಾಣುತ್ತದೆ. ಟೆಂಡರ್​​ನಲ್ಲಿ ನಮಗಿಂತ ಕಡಿಮೆ ದರ ಹಾಕಿ.. ಹೇಗೋ ತುಪ್ಪದ ಟೆಂಡರ್ ನಮಗೆ ತಪ್ಪಿಸಿ ಅವರುಗಳೇ ಪಡೆಯುವಂತ ಮ್ಯಾಜಿಕ್ ಅಲ್ಲಿ ಶುರುವಾಯಿತು. ನಮ್ಮ ದೇಶದಲ್ಲಿ ತಿರುಪತಿಯ ಹೆಚ್ಚಿನ ತುಪ್ಪದ ಬೇಡಿಕೆ ಪೂರ್ಣವಾಗಿ ಪೂರೈಸುವ ಸಾಮರ್ಥ್ಯ ಕೇವಲ ನಂದಿನಿ ಅಥವಾ ಅಮುಲ್​ಗೆ ಸಹಕಾರಿ ಡೈರಿ ಸಂಸ್ಥೆಗಳಿಗೆ ಮಾತ್ರ ಇದೆ. ಆದರೆ, ಅಮುಲ್ ಈವರೆಗೆ ಇಲ್ಲಿಗೆ ತುಪ್ಪ ಸರಬರಾಜು ಮಾಡಿಲ್ಲ. ಅವರೂ ಮೊನ್ನೆ ಇದನ್ನು ದೃಢೀಕರಿಸಿದ್ದಾರೆ. ಅವರದೇ ಕಾರಣ ಬೇರೆ ಬೇರೆ ಇದ್ದರೂ ಮುಖ್ಯವಾಗಿ ದಕ್ಷಿಣ ರಾಜ್ಯಗಳ ಬಿಟ್ಟರೆ, ಅಲ್ಲಿನದು ಹೆಚ್ಚು ಎಮ್ಮೆಯ ಹಾಲಿನ ತುಪ್ಪವಾದ ಕಾರಣ, ನಂದಿನಿ ಹಸುವಿನ ಹಾಲಿನ ತುಪ್ಪದಲ್ಲಿ ಬರುವ ಹೊಂಬಣ್ಣ/ಸುವಾಸನೆ - ಅಷ್ಟಾಗಿ ಬಾರದಿರವ ಕಾರಣವೂ ಸೇರಿರಬಹುದು.

ಹಾಗಾಗಿ ಖಾಸಗಿಯವರು ವಹಿವಾಟಿನ ಆಸೆಗೆ ಇಲ್ಲಿಗೆ ಬಂದರೂ ಅವರ ತುಪ್ಪದ ಜೊತೆ, ಹೆಚ್ಚಿನ ತುಪ್ಪ ಬೇರೆ ಮೂಲಗಳಿಂದ ಪಡೆದು ಸೇರಿಸಿ ಸರಬರಾಜು ಮಾಡಬೇಕಾಗುತ್ತದೆ. ಜೊತೆಗೆ ಟೆಂಡರ್ ದರ ಕಡಿಮೆ ಕೊಟ್ಟು ಸರಬರಾಜು ಮಾಡಬೇಕಾದರೆ ಬೇರೆ ರೀತಿ ಪ್ರಯತ್ನಿಸಬೇಕಾಗುತ್ತದೆ. ಇದೆ ಆಗುತ್ತಿರಬಹುದು. ಪೂರ್ತಿಯಾಗಿ ನಂದಿನಿ ತುಪ್ಪ ಬಳಸಿ ಅಂದರೆ ಜೊತೆಯಲ್ಲಿ ಅರ್ಧ ಬೇರೆ ತುಪ್ಪ ಸೇರಿಸದೆ ಮಾಡುವ ತಿರುಪತಿ ಲಡ್ಡು ಪ್ರಸಾದದ ಗುಣಮಟ್ಟ ರುಚಿಯೇ ಬೇರೆ ಅತ್ಯಂತ ಉತ್ಕೃಷ್ಟ ಮಟ್ಟದ್ದು. ಬಲ್ಲವರೇ ಬಲ್ಲರು ಆ ನೈಜ ಉತ್ಕೃಷ್ಟ ರುಚಿಯ.. ಸವಿಯ! ತಿರುಪತಿ ಲಡ್ಡು ರುಚಿ ಹೆಚ್ಚಳಕ್ಕೆ ಮತ್ತೆ ನಂದಿನಿ ತುಪ್ಪ. ಈ ಬಗ್ಗೆ ,ಕೆಎಂಎಫ್​ನ ಹಿಂದಿನ ಅಧಿಕಾರಿ/ಎಂಡಿಯಾಗಿ ನನ್ನ ಸೇವಾ ಅವಧಿಯ ಅನುಭವದಲ್ಲಿ ಕಂಡ ಕೆಲವು ಆಸಕ್ತಿಕರ ಮಾಹಿತಿಗಳು ಹೀಗಿವೆ.

ಹಿಂದಿನ ಹಲವು ವರ್ಷಗಳಿಂದ ಅಂದರೆ 90ರ ದಶಕದಿಂದಲೂ ತಿರುಪತಿ ದೇವಸ್ಥಾನಕ್ಕೆ ನಂದಿನಿ ತುಪ್ಪ ಆದ್ಯತೆಯಲ್ಲಿ ಅವರ ಬೇಡಿಕೆಯಂತೆಯೇ ಸರಬರಾಜು ಮಾಡುತ್ತಿದ್ದೆವು. ತಿರುಪತಿಗೆ ಟನ್​ಗಟ್ಟಲೆ ನಂದಿನಿ ತುಪ್ಪವನ್ನು ಆದ್ಯತೆಯಲ್ಲಿ ಕೆಎಂಎಫ್ ಆಡಳಿತ ಮಂಡಳಿ ಅನುಮೋದನೆಯಂತೆ ಸೂಕ್ತ ದರದಲ್ಲಿ ಒದಗಿಸುವ ವ್ಯವಸ್ಥೆಯಲ್ಲಿ ಭಾಗಿಯಾಗುವ ಅವಕಾಶ ನನಗೆ ಸಿಕ್ಕಿತ್ತು. ತಿರುಪತಿ ದೇವಸ್ಥಾನದ ಲಡ್ಡು ಪ್ರಸಾದ ತಯಾರಿಸುವ ಅಡುಗೆಮನೆಯ ಸಿಬ್ಬಂದಿಗೆ ಆ ರಾಜ್ಯದ ಅಥವಾ ಬೇರೆ ರಾಜ್ಯಗಳ ಹಾಲು ಒಕ್ಕೂಟಗಳ ತುಪ್ಪಕ್ಕಿಂತ, ನಮ್ಮ ಕರ್ನಾಟಕದ ಕೆಎಂಎಫ್​ನ ಚಿನ್ನದ ಬಣ್ಣದ (ಹಳದಿ) ಬಣ್ಣದ ಹರಳು ಹರಳು, ಘಮ ಘಮಿಸುವ ನಂದಿನಿ ಶುದ್ಧ ತುಪ್ಪವೇ ಮೊದಲ ಆದ್ಯತೆಯಲ್ಲಿ ಬೇಕಾಗಿತ್ತು. ಇದಕ್ಕೆ ಕಾರಣ ನಂದಿನಿ ತುಪ್ಪದಿಂದ ಮಾತ್ರವೇ ಲಡ್ಡುವಿನಲ್ಲಿ ವಿಶಿಷ್ಟ ರುಚಿ - ಸ್ವಾದ , ಟೆಕ್ಸ್ಚರ್ (texture ) ಮತ್ತು ಬಾಳಿಕೆ, ಮತ್ತಷ್ಟು ಉತ್ತಮವಾಗಿ/ಗಣನೀಯವಾಗಿ ಹೆಚ್ಚಾಗುತಿತ್ತು.

ಮೊದಲೆಲ್ಲಾ 15 ಕೆಜಿ ಟಿನ್​ಗಳಲ್ಲಿ ಸರಬರಾಜಾಗುತ್ತಿದ್ದ ನಂದಿನಿ ತುಪ್ಪವನ್ನು ಅವರಿಗೆ ಅನುಕೂಲಕರವಾಗಿ ದೊಡ್ಡ ಪ್ರಮಾಣದಲ್ಲಿ ಅಂದರೆ 9000/10000 ಲೀಟರ್ ಟ್ಯಾಂಕರ್​​ಗಳಲ್ಲಿ ಕರ್ನಾಟಕದಿಂದಲೇ ಕೆಎಂಎಫ್​ನಿಂದ ನಾವು ಮೊದಲು ಸರಬರಾಜು ಮಾಡಲು ಶುರು ಮಾಡಿದೆವು. ಆ ಸಂದರ್ಭದಲ್ಲಿ ನಾವು ಕೆಎಂಎಫ್​ನಿಂದ (ಮುಖ್ಯವಾಗಿ ನಿರ್ದೇಶಕರು, ಇಂಜಿನಿಯರಿಂಗ್ ಆಗಿದ್ದ ರವಿ ಕುಮಾರ್ ಕಾಕಡೆ) ಶ್ರಮ ವಹಿಸಿ ತಿರುಪತಿ ದೇವಸ್ಥಾನದಲ್ಲಿ ನಮ್ಮ ಟ್ಯಾಂಕರ್​ನಿಂದ ತುಪ್ಪವನ್ನು ಅಲ್ಲಿನ ಬೃಹತ್ ಟ್ಯಾಂಕ್​​ಗಳಲ್ಲಿ ಸ್ವೀಕರಿಸಿ ಸಂಗ್ರಹಿಸಿಟ್ಟು ಬಳಸುವ ಟ್ಯಾಂಕ್ ವ್ಯವಸ್ಥೆಗೆ ಅಣಿ ಮಾಡಿಕೊಟ್ಟು ಅಗತ್ಯ ತಾಂತ್ರಿಕ ಸಹಕಾರ ನೀಡಿ -ಸೇವೆ ಮಾಡಿದೆವು.

ಹಿಂದೆ ಒಮ್ಮೆ ಕರ್ನಾಟಕದಲ್ಲಿ ಭೀಕರ ಬರಗಾಲದ ಕಾರಣ ಬೇಸಿಗೆಯಲ್ಲಿ ಹಾಲು ಉತ್ಪಾದನೆ ಕುಂಠಿತವಾಗಿ ತುಪ್ಪದ ಉತ್ಪಾದನೆಗೆ ತೀವ್ರ ಕೊರತೆಯಾದಾಗಲೂ ತಿರುಪತಿ ದೇವಸ್ಥಾನದ ಆಡಳಿತ ಮಂಡಳಿಯವರು ಅವರ ಮುಖ್ಯಮಂತ್ರಿಗಳಿಂದ ನಮ್ಮ ಆಗಿನ ಮುಖ್ಯ ಮಂತ್ರಿಗಳಿಗೆ ಮಾತನಾಡಿ ದೇವಸ್ಥಾನಕ್ಕೆ ತುಪ್ಪ ಕಡಿತ ಮಾಡದೆ ನಿರಂತರ ತುಪ್ಪ ಸರಬರಾಜಿಗೆ ಖುದ್ದು ಬೇಡಿಕೆ ಸಲ್ಲಿಸಿ ಒತ್ತಾಯಿಸಿದ ಕಾರಣ ಆಗಿನ ಸಿಎಂರ (ಸಿದ್ದರಾಮಯ್ಯ ಅವರು ಅಲ್ಲ) ಸೂಚನೆಯಂತೆ ಸ್ವಲ್ಪ ತಿಂಗಳು ಇಲ್ಲಿ ಸ್ಥಳೀಯ ನಂದಿನಿ ತುಪ್ಪ ಮಾರಾಟ ನಿಯಂತ್ರಿಸಿ ದೇವಸ್ಥಾನಕ್ಕೆ ನಂದಿನಿ ತುಪ್ಪ ಸರಬರಾಜು ನಿರಂತರವಾಗಿ ಮಾಡಿ ಸಹಕರಿಸಿದ್ದೂ ಇದೆ.

ಹೀಗೆಲ್ಲಾ, ಹಲವು ದಶಕಗಳಿಂದಲೂ ಉತ್ತಮ ಗುಣಮಟ್ಟ/ರುಚಿ ಆಧಾರದಲ್ಲಿ, ಕೆಎಂಎಫ್ ನಂದಿನಿ ತುಪ್ಪ ಮತ್ತು ತಿರುಪತಿ ದೇವಸ್ಥಾನದ ಮದ್ಯೆ ಲಡ್ಡು ಪ್ರಸಾದದ ವಿಷಯದಲ್ಲಿ ಒಳ್ಳೆಯ ಗಟ್ಟಿ ಭಾಂದವ್ಯವಿದ್ದರೂ, ನಂತರದ ಇತ್ತೀಚಿನ 2/3 ವರ್ಷಗಳ ಹಿಂದೆ, ಬದಲಾದ ಪರಿಸ್ಥಿತಿಯಲ್ಲಿ, ಟೆಂಡರ್ ನಿಯಮಗಳ ಹೆಸರಿನಲ್ಲಿ ಕಡಿಮೆ ದರ ಸೂಚಿಸುವ ಆಧಾರದಲ್ಲಿ ಒತ್ತಡದಲ್ಲಿ ಬೇರೆ ಬೇರೆ ಸಂಸ್ಥೆಗಳು (ಖಾಸಗಿಯೂ ಸೇರಿದಂತೆ) ತುಪ್ಪ ಸರಬರಾಜು ಟೆಂಡರ್ ಪಡೆದು ಅನಿವಾರ್ಯವಾಗಿ (ಉತ್ತಮ ಗುಣಮಟ್ಟದ ನಂದಿನಿ ತುಪ್ಪದ ದರ ಹೆಚ್ಚಿದ್ದ) ಹಿನ್ನೆಲೆಯಲ್ಲಿ ತುಪ್ಪ ಸರಬರಾಜು ಕೆಲಕಾಲ ನಿಂತಿತ್ತು. ಲಡ್ಡು ಗುಣಮಟ್ಟವೂ ಸ್ವಲ್ಪ ರುಚಿಯಲ್ಲಿ ಸ್ವಾದದಲ್ಲಿ ತುಂಬಾ ವ್ಯತ್ಯಾಸವಾಗಿತ್ತೆಂದು ಭಕ್ತರು/ಸಾರ್ವಜನಿಕರು ಅತೃಪ್ತಿ ವ್ಯಕ್ತ ಪಡಿಸಿ ಪದೇ ಪದೆ ಹೇಳುತ್ತಿದ್ದರು. (ಈ ತುಪ್ಪ ಸರಬರಾಜು ವಿಷಯ ನಂತರ ರಾಜಕೀಯವಾಗಿಯೂ ಬಣ್ಣ ಪಡೆದಿತ್ತು) ತಿರುಪತಿಗೆ ತುಪ್ಪ ಸರಬರಾಜು ಸಂಬಂಧ ಬೇರೆಯ ಮಾಹಿತಿಗಳನ್ನೂ ಇತ್ತೀಚೆಗೆ ತಾನೇ ವಿವರವಾಗಿ ಎಫ್​​ಬಿನಲ್ಲಿ ನನ್ನ ಪೋಸ್ಟ್​​​ನಲ್ಲಿ ಬರೆದಿದ್ದೆ. ಬೇರೆಯಾಗಿ ನೀಡಿರುವೆ.

ಸವಿತಾ ಭರಮಗೋಡ

ಈ ಹಿಂದೆ ನಂದಿನಿ/ಕೆಎಂಎಫ್ ಉತ್ಪನ್ನಗಳು ತಾಜಾ ಮತ್ತು ಕಲಬೆರಕೆ ಇಲ್ಲದ ಶುದ್ಧ ಉತ್ಪನ್ನಗಳು... ಎಲ್ಲ ಹಂತಗಳಲ್ಲೂ ಕೂಡ ಗುಣಮಟ್ಟ ಕಾಯ್ದುಕೊಳ್ಳಲು ಬೇಕಾದ ಕ್ರಮಗಳನ್ನು ತೆಗೆದುಕೊಳ್ಳುತ್ತಾರೆ. ಅವರ ತಯಾರಿಕ ಹಂತಗಳನ್ನು ನಾನು food safety & regulatory audit ಮಾಡಿದ್ದೇನೆ ಅಂದಾಗ, ಬಹಳ ಜನ, ತಿಳಿವಳಿಕೆ ಇಲ್ಲದೇ ನನಗೆ personal attack ಕೂಡ ಮಾಡಿದ್ರು. "ಹಾಲು ಮತ್ತು ಉತ್ಪನ್ನಗಳು ತಾಜಾ, ಕಲಬೆರಕೆ ಮಾಡಲ್ಲ. preservatives ಬಳಸುವುದಿಲ್ಲ, ಅನ್ನುವುದನ್ನು ಕೆಎಂಎಫ್ process ನೋಡಿದ ಯಾರು ಅಲ್ಲಗಳೆಯಲು ಸಾಧ್ಯ ಇಲ್ಲ. Arguments ಏನೇ ಇದ್ರೂ ಅದು ಬೇರೆ ವಿಷಯಗಳಲ್ಲಿ ಮಾತ್ರ. ದೇಶದಲ್ಲಿಯೇ ನಂಬಿಕೆ ಅರ್ಹ ಅಂತ ನಂದಿನಿಗೆ ಹೇಳಬಹುದು. ನಾನು ಇತರೆ brands ಗಳ audit ಕೂಡ ಮಾಡಿದ್ದೇನೆ.

ಇಂದುಶೇಖರ್​ ಅಂಗಡಿ

KMF ಹಾಗೂ KSRTC ಎರಡೂ ನಮ್ಮ ಕನ್ನಡಿಗರ ಹೆಮ್ಮೆಯ ಸಂಸ್ಥೆಗಳು.. ಈ ಎರಡೂ ಸಂಸ್ಥೆಗಳ ಕಾರ್ಯ ಕ್ಷಮತೆ, ಹೊರರಾಜ್ಯಗಳಲ್ಲಿ ಕನ್ನಡಿಗರ ಬಗ್ಗೆ ಗೌರವ ಹಾಗೂ ಪ್ರತಿಷ್ಠೆ ತಂದುಕೊಟ್ಟಿವೆ. ಅಲ್ಲದೇ ಬಹಳಷ್ಟು ಕನ್ನಡಿಗರಿಗೆ/ರೈತರಿಗೆ ಉದ್ಯೋಗವನ್ನೂ ಒದಗಿಸಿಕೊಟ್ಟಿವೆ. ಈ ಯಶಸ್ಸಿನಲ್ಲಿ ಬೆಳಗಾವಿ ಹಾಗೂ ಧಾರವಾಡ ಹಾಲು ಒಕ್ಕೂಟಗಳ ಪಾತ್ರ ಬಹಳ ಇದೆ.

ಭರತ್ ಕುಮಾರ್​

ತಾವು ಹೇಳಿದ್ದು ನಿಜ. ನಮ್ಮ ನಂದಿನಿ ನಮ್ಮ ಹೆಮ್ಮೆ. ಆದರೆ, ವ್ಯವಸ್ಥೆಯಲ್ಲಿರುವ ವ್ಯವಸ್ಥಿತ ಸೋರಿಕೆಗಳನ್ನು ತಡೆಗಟ್ಟುವ ಮೂಲಕ ಕೆಎಂಎಫ್ ಹೈನುಗಾರರಿಗೂ ಹಾಗೂ ಹಾಲಿನ ಗ್ರಾಹಕರಿಗೂ ಮತ್ತಷ್ಟು ನೆಮ್ಮದಿ ತರಬಹುದಾಗಿದೆ. ಹೈನುಗಾರರಿಗೆ ಹಣ ಹೆಚ್ಚು ನೀಡಬೇಕು ಎಂದಾಗಲೆಲ್ಲಾ ಗ್ರಾಹಕರಿಗೆ ಬರೆ ಹಾಕಲಾಗುತ್ತದೆಯೇ ಹೊರತು ಸಂಸ್ಥೆಯಲ್ಲಿರುವ ಸೋರಿಕೆಯ ಕುರಿತು ಪ್ರಶ್ನೆಗಳೇ ಏಳುವುದಿಲ್ಲ.

ಎಂಎಸ್ ಪ್ರಸಾದ್

ನಾವು ಮೊದಲಿನಿಂದಲೂ ನಂದಿನಿಯನ್ನು ಬಳಸುತ್ತಿದ್ದೇವೆ ಮತ್ತು ಅದರ ಸ್ಥಿರತೆ ಮತ್ತು ವಾಸನೆಯನ್ನು ನಾವು ಪ್ರಶಂಸಿಸುತ್ತೇವೆ.. ಬೇರೆ ಯಾವುದೇ ತುಪ್ಪವು ಇದಕ್ಕೆ ಹೊಂದಿಕೆಯಾಗುವುದಿಲ್ಲ.

mysore-dasara_Entry_Point