Tomato Price Down: ಟೊಮೆಟೊ ದರದಲ್ಲಿ ಭಾರೀ ಕುಸಿತ, ಕೆಜಿಗೆ 10 ರೂ.ಗಿಂತ ಕಡಿಮೆ, ಸಂಕಷ್ಟಕ್ಕೆ ಸಿಲುಕಿದ ರೈತ, ನೆರವಿಗೆ ಸರ್ಕಾರಕ್ಕೆ ಮೊರೆ
ಕನ್ನಡ ಸುದ್ದಿ  /  ಕರ್ನಾಟಕ  /  Tomato Price Down: ಟೊಮೆಟೊ ದರದಲ್ಲಿ ಭಾರೀ ಕುಸಿತ, ಕೆಜಿಗೆ 10 ರೂ.ಗಿಂತ ಕಡಿಮೆ, ಸಂಕಷ್ಟಕ್ಕೆ ಸಿಲುಕಿದ ರೈತ, ನೆರವಿಗೆ ಸರ್ಕಾರಕ್ಕೆ ಮೊರೆ

Tomato Price Down: ಟೊಮೆಟೊ ದರದಲ್ಲಿ ಭಾರೀ ಕುಸಿತ, ಕೆಜಿಗೆ 10 ರೂ.ಗಿಂತ ಕಡಿಮೆ, ಸಂಕಷ್ಟಕ್ಕೆ ಸಿಲುಕಿದ ರೈತ, ನೆರವಿಗೆ ಸರ್ಕಾರಕ್ಕೆ ಮೊರೆ

Tomato Price Down: ಕಳೆದ ವರ್ಷ ಭಾರೀ ಬೆಲೆಯೊಂದಿಗೆ ಚಿನ್ನದ ಹಣ್ಣು ಎಂದೇ ಕರೆಯಿಸಿಕೊಂಡಿದ್ದ ಟೊಮೆಟೊ ಬೆಲೆ ಈ ಬಾರಿ ಕುಸಿದಿದೆ. ಟೊಮೆಟೊ ಬೆಳೆದ ರೈತರು ನಷ್ಟ ಅನುಭವಿಸಿದ್ದಾರೆ.ವರದಿ: ಎಚ್.ಮಾರುತಿ.ಬೆಂಗಳೂರು

ಕರ್ನಾಟಕದಲ್ಲಿ ಟೊಮೆಟೊ ಬೆಲೆ ಭಾರೀ ಕುಸಿತ ಕಂಡಿದೆ.
ಕರ್ನಾಟಕದಲ್ಲಿ ಟೊಮೆಟೊ ಬೆಲೆ ಭಾರೀ ಕುಸಿತ ಕಂಡಿದೆ.

Tomato Price Down: ಶುಭ ಸಮಾರಂಭಗಳು, ಮದುವೆ ಹಬ್ಬಗಳ ನಡುವೆಯೂ ಟೊಮೆಟೊ ಬೆಲೆ ದಿಢೀರ್ ಎಂದು ಕುಸಿದಿರುವುದು ಬೆಳೆಗಾರರ ಕಣ್ಣಲ್ಲಿ ಕಣ್ಣೀರು ತರಿಸಿದೆ. ಅಧಿಕ ಇಳುವರಿ, ಕುಸಿದ ರಫ್ತು, ರೋಗ ಮತ್ತು ಬೇಗ ಹಾಳಾಗುವ ಕಾರಣಕ್ಕೆ ಟೊಮೆಟೊ ಬೆಲೆ ಕುಸಿದಿದೆ. ಬೆಂಗಳೂರಿಗೆ ಹೊಂದಿಕೊಂಡಿರುವ ಕೋಲಾರ ಮತ್ತು ಚಿಕ್ಕಬಳ್ಳಾಪುರದಲ್ಲಿ ಟೊಮೆಟೊ ಹೆಚ್ಚು ಬೆಳೆಯಲಾಗುತ್ತಿದೆ. ಕೆಜಿಗೆ 100 ರೂ. ಆಸುಪಾಸು ಇದ್ದ ಬೆಲೆ ರೂ.10 ರೂ.ಗೆ ಕುಸಿದಿದೆ. ಹೋಲ್‌ಸೇಲ್‌ ಮಾರುಕಟ್ಟೆಯಲ್ಲಿ 15 ಕೆಜಿ ಟೊಮೆಟೊ ಬಾಕ್ಸ್ ಬೆಲೆ 100-150 ರೂ.ಗೆ ಕುಸಿದಿದೆ. ಕೆಲವೇ ದಿನಗಳ ಹಿಂದೆ ಪ್ರತಿ ಬಾಕ್ಸ್ ಗೆ 800-1000 ರೂವರೆಗೂ ಮಾರಾಟವಾಗುತ್ತಿತ್ತು. ಬೆಂಗಳೂರಿನ ತರಕಾರಿ ಅಂಗಡಿಗಳಲ್ಲಿ ಪ್ರತಿ ಕೆಜಿಗೆ 15-20 ರೂಗೆ ಮಾರಾಟವಾಗುತ್ತಿದೆ. ಇಲ್ಲಿಯೂ ಮಧ್ಯವರ್ತಿಗಳಿಗೆ ಲಾಭವಾಗುತ್ತಿದೆಯೇ ಹೊರತು ರೈತರಿಗೆ ಪ್ರಯೋಜನವಾಗುತ್ತಿಲ್ಲ.

ಕರ್ನಾಟಕದ ಹಲವೆಡೆ ಆತಂಕ

ಟೊಮೆಟೊ ಬೆಲೆ ಕುಸಿದಿದ್ದು, ರಸ್ತೆ ಬದಿಗೆ ಸುರಿದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಕೆಲವು ತಿಂಗಳ ಹಿಂದೆ ಟೊಮೆಗೆ ಚಿನ್ನದ ಬೆಲೆ ಇತ್ತು. ಇದೇ ಕಾರಣಕ್ಕೆ ಅನೇಕ ರೈತರು ಏಕಾಏಕಿ ಟೊಮೆಟೊ ಬೆಳೆಯಲು ಆರಂಭಿಸಿದ್ದರು. ಕೇವಲ ಕೋಲಾರ, ಚಿಕ್ಕಬಳ್ಳಾಪುರ ಮಾತ್ರವಲ್ಲದೆ ದಾವಣಗೆರೆ, ರಾಣೆಬೆನ್ನೂರು ಸೇರಿದಂತೆ ಅನೇಕ ಜಿಲ್ಲೆಗಳ ರೈತರು ಟೊಮೆಟೊ ಬಿತ್ತನೆ ಮಾಡಿ ಲಾಭದ ನಿರೀಕ್ಷೆಯಲ್ಲಿದ್ದರು. ಕೃಷಿ ಎನ್ನುವುದು ಜೂಜು ಎಂಬ ಮಾತು ಪದೇ ಪದೇ ನಿಜವಾಗುತ್ತಿದ್ದು, ರೈತ ನಷ್ಟ ಅನುಭವಿಸುತ್ತಿದ್ದಾನೆ. ಕೆಲವು ಜಿಲ್ಲೆಗಳಲ್ಲಿ ಉತ್ತಮ ಫಸಲು ಬಂದಿದೆ.

ಆದರೆ, ಸೂಕ್ತ ಧಾರಣೆ ಸಿಗುತ್ತಿಲ್ಲ. ತಮಿಳುನಾಡು, ಕೇರಳಕ್ಕೆ ಸಾಗಣೆಯಾಗುವುದು ಕಡಿಮೆಯಾಗಿದೆ.

ಉದಾಹರಣೆಗೆ ಚಾಮರಾಜನಗರ ಮೊದಲಾದ ಜಿಲ್ಲೆಗಳಲ್ಲಿ ಟೊಮೆಟೊಗೆ ಹೂಜಿ ನೊಣ ಮತ್ತು ನುಸಿ ಪೀಡೆ ಭಾದಿಸತೊಡಗಿದೆ. ಇದರಿಂದ ಹಣ್ಣಿನ ಗುಣಮಟ್ಟ ಕಡಿಮೆಯಾಗಿದ್ದು, ಬೇಗ ಹಾಳಾಗುತ್ತಿದೆ. 1 ಟನ್ ಟೊಮೆಟೊ ಕೊಯ್ಲು ಮಾಡಿದರೆ, 50 ರಿಂದ 100 ಕೆ.ಜಿಗೂ ಹೆಚ್ಚಿನ ಹಣ್ಣು ಕೊಳೆತು ಹೋಗಿರುತ್ತದೆ. ಹೋಲ್‌ ಸೇಲ್‌ ವ್ಯಾಪಾರಿಗಳು ಈ ಹಣ್ಣನ್ನು ಪ್ರತ್ಯೇಕಿಸಿ ನಂತರ ಟೊಮೆಟೊಗೆ ಬೆಲೆ ನಿರ್ಧರಿಸುತ್ತಾರೆ. ಮೊದಲೇ ಬೆಲೆ ಕುಸಿದಿದ್ದು, ಬೆಲೆ ಇಲ್ಲದೆ ಇರುವ ಕಾರಣಕ್ಕೆ ಕೊಯ್ಲು ಮಾಡುವುದನ್ನೇ ಬಿಟ್ಟಿದ್ದಾರೆ.

ಬೆಳೆಗಾರರು ಕಂಗಾಲು

ಇಂದು ಟೊಮೆಟೊ ಬೆಳೆಯಲು ಖರ್ಚು ವೆಚ್ಚಗಳು ಹೆಚ್ಚು. ಕೂಲಿಯವರ ಸಂಖ್ಯೆಯೂ ಕಡಿಮೆಯಾಗಿದ್ದು, ಕೇಳಿದಷ್ಟು ಕೂಲಿ ಕೊಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ಹಾಕಿದ ಬಂಡವಾಳವೂ ಹುಟ್ಟುತ್ತಿಲ್ಲ ಎಂದು ರೈತರು ಅಲವತ್ತುಕೊಳ್ಳುತ್ತಾರೆ.

ಬೆಲೆ ಕುಸಿತ ಕಂಡ ಬೆನ್ನಲ್ಲೇ ಟೊಮೆಟೊ ಕಟಾವನ್ನೇ ಬಿಟ್ಟು ಬಿಟ್ಟಿದ್ದಾರೆ. ಪ್ರತಿ ಎಕರೆಗೆ 80 ಸಾವಿರದಿಂದ 1 ಲಕ್ಷದ ವರೆಗೂ ಖರ್ಚು ತಗುಲುತ್ತದೆ. ಈಗ ಸಾಲದ ಸುಳಿಯಲ್ಲಿ ಸಿಲುಕಿದ್ದು ದಿಕ್ಕು ತೋಚದಂತಾಗಿದೆ ಎಂದು ಹೇಳುತ್ತಾರೆ. ಈ ಮೊದಲು ಸರ್ಕಾರ ಗೊಬ್ಬರ ಮತ್ತು ಬೀಜವನ್ನು ಪೂರೈಕೆ ಮಾಡುತ್ತಿತ್ತು. ಈಗ ಆ ಯೋಜನೆಯೂ ಸ್ಥಗಿತವಾಗಿದೆ.

ಕುಸಿತಕ್ಕೆ ಕಾರಣವಾದರೂ ಏನು

ಟೊಮೆಟೊ ಬೆಲೆ ಕುಸಿತವಾಗಿರುವುದು ಕೃಷಿಕನ ಕಣ್ಣಲ್ಲಿ ನೀರು ತರಿಸುತ್ತಿದೆಯಾದರೂ ಗ್ರಾಹಕನಿಗೆ ಸಂತಸ ತಂದಿದೆ. ಈ ಹಿಂದೆ ಕೆಜಿಗೆ 90 ರೂ.ವರೆಗೂ ಬೆಲೆ ಕೊಡಬೇಕಾಗಿತ್ತು. ಕಲವು ತಿಂಗಳ ಕಾಲ ಟೊಮೆಟೊ ಖರೀದಿಯನ್ನೇ ಬಿಟ್ಟು ಹುಣಿಸೆಹಣ್ಣನ್ನು ಬಳಸುತ್ತಿದ್ದೆವು. ಈಗ ಟೊಮೆಟೊ ಖರೀದಿ ಮಾಡುತ್ತಿದ್ದೇವೆ ಎನ್ನುತ್ತಾರೆ ಗ್ರಾಹಕರು. ಈ ಹಿಂದೆ ಆಗಸ್ಟ್‌ ನಲ್ಲಿಯೂ ಟೊಮೆಟೊ ಬೆಲೆ ಕುಸಿದಿತ್ತು. ಆಗ ಕೆಜಿಗೆ 10-20 ರೂ.ಗೆ ಇಳಿದಿತ್ತು.

ಟೊಮೆಟೊ ಬೆಳೆಯಲು ಪ್ರತಿ ಎಕರೆಗೆ 1 ಲಕ್ಷ ರೂ.ವರೆಗೂ ಬಂಡವಾಳ ಹೂಡಿ ನಷ್ಟ ಅನುಭವಿಸುತ್ತಿದ್ದೇವೆ. ಉತ್ಪಾದನಾ ವೆಚ್ಚವೂ ಸಿಗುತ್ತಿಲ್ಲ. ಆದ್ದರಿಂದ ಸರ್ಕಾರ ಮಧ್ಯೆ ಪ್ರವೇಶಿಸಿ ಟೊಮೆಟೊ ಬೆಳೆಗಾರರ ರಕ್ಷಣೆಗೆ ಧಾವಿಸಬೇಕು ಎಂದು ಆಗ್ರಹಪಡಿಸುತ್ತಿದ್ದಾರೆ. ಸರ್ಕಾರ ಮಧ್ಯೆ ಪ್ರವೇಶಿಸಲಿದೆಯೇ ಎನ್ನುವ ನಿರೀಕ್ಷೆಯನ್ನು ಕೃಷಿಕರು ಇಟ್ಟುಕೊಂಡಿದ್ದಾರೆ.

ವರದಿ: ಎಚ್.‌ ಮಾರುತಿ, ಬೆಂಗಳೂರು

 

Umesha Bhatta P H

TwittereMail
ಕುಂದೂರು ಉಮೇಶಭಟ್ಟ ಪಿ.ಎಚ್.: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಡೆಪ್ಯುಟಿ ಚೀಫ್ ಕಂಟೆಂಟ್ ಪ್ರೊಡ್ಯೂಸರ್. ವಿಜಯ ಕರ್ನಾಟಕದಲ್ಲಿ ವಿಜಯಪುರ ಬ್ಯೂರೊ ಚೀಫ್ ಸೇರಿ ಹಲವು ಮಹತ್ವದ ಹುದ್ದೆಗಳ ನಿರ್ವಹಣೆ. ಮಲೆನಾಡು ಮಿತ್ರ, ಆಂದೋಲನ ಸೇರಿ ವಿವಿಧ ಪತ್ರಿಕೆಗಳಲ್ಲಿ 25 ವರ್ಷಗಳ ಅನುಭವ. ಪರಿಸರ, ಅರಣ್ಯ, ವನ್ಯಜೀವಿ, ಅಭಿವೃದ್ದಿ, ರಾಜಕೀಯ ಆಸಕ್ತಿ ಕ್ಷೇತ್ರಗಳು. 'ಕಾಡಿನ ಕಥೆಗಳು' ಅಂಕಣ ಬರೆಯುತ್ತಿದ್ದಾರೆ. ದಾವಣಗೆರೆ ಜಿಲ್ಲೆಯ ಕುಂದೂರು ಸ್ವಂತ ಊರು. ಸದ್ಯಕ್ಕೆ ಮೈಸೂರು ನಿವಾಸಿ.
Whats_app_banner