ಬೆಂಗಳೂರಿನ ರಸ್ತೆಗಳಲ್ಲಿ ಮುಂದುವರಿದ ಟ್ರ್ಯಾಕ್ಟರ್‌ಗಳ ಹಾವಳಿ: ಸುರಕ್ಷತೆ , ಪರಿಸರಕ್ಕೆ ಧಕ್ಕೆ; ಸಾರ್ವಜನಿಕರ ಆಕ್ರೋಶ
ಕನ್ನಡ ಸುದ್ದಿ  /  ಕರ್ನಾಟಕ  /  ಬೆಂಗಳೂರಿನ ರಸ್ತೆಗಳಲ್ಲಿ ಮುಂದುವರಿದ ಟ್ರ್ಯಾಕ್ಟರ್‌ಗಳ ಹಾವಳಿ: ಸುರಕ್ಷತೆ , ಪರಿಸರಕ್ಕೆ ಧಕ್ಕೆ; ಸಾರ್ವಜನಿಕರ ಆಕ್ರೋಶ

ಬೆಂಗಳೂರಿನ ರಸ್ತೆಗಳಲ್ಲಿ ಮುಂದುವರಿದ ಟ್ರ್ಯಾಕ್ಟರ್‌ಗಳ ಹಾವಳಿ: ಸುರಕ್ಷತೆ , ಪರಿಸರಕ್ಕೆ ಧಕ್ಕೆ; ಸಾರ್ವಜನಿಕರ ಆಕ್ರೋಶ

ಟ್ರ್ಯಾಕ್ಟರ್‌ಗಳ ಹಾವಳಿ ನಿಯಂತ್ರಣಕ್ಕೆ ಲಾರಿ ಮಾಲೀಕರು ಮತ್ತು ಸಾರ್ವಜನಿಕರು ಆಗ್ರಹಿಸಿದ್ದಾರೆ. ಅದಾದ ನಂತರ ಸಾರಿಗೆ ಇಲಾಖೆ ಕ್ರಮಕ್ಕೆ ಮುಂದಾಗಿದೆ. (ವರದಿ: ಎಚ್.ಮಾರುತಿ)

ಟ್ರ್ಯಾಕ್ಟರ್‌ನಲ್ಲೇ ನಿದ್ದೆ ಹೋಗಿರುವ ಚಾಲಕ (ಸಾಂದರ್ಭಿಕ ಚಿತ್ರ)
ಟ್ರ್ಯಾಕ್ಟರ್‌ನಲ್ಲೇ ನಿದ್ದೆ ಹೋಗಿರುವ ಚಾಲಕ (ಸಾಂದರ್ಭಿಕ ಚಿತ್ರ) (Pappi Sharma)

ಬೆಂಗಳೂರು: ಟ್ರ್ಯಾಕ್ಟರ್‌ಗಳನ್ನು ಸಾಮಾನ್ಯವಾಗಿ ಕೃಷಿ ಕೆಲಸಗಳಿಗೆ ಬಳಸಲಾಗುತ್ತದೆ. ಇವುಗಳನ್ನು ಕೃಷಿ ಕೆಲಸಗಳಿಗೆ ಅನುಕೂವಾಗುವಂತೆಯೂ ವಿನ್ಯಾಸ ಮಾಡಲಾಗಿರುತ್ತದೆ. ಆದರೆ ಬೆಂಗಳೂರಿನಲ್ಲಿ ಟ್ರ್ಯಾಕ್ಟರ್‌ಗಳ ಹಾವಳಿ ಹೆಚ್ಚಿದ್ದು ಸುರಕ್ಷತಾ ನಿಯಮಗಳನ್ನು ಉಲ್ಲಂಘಿಸುತ್ತಾ ಅನೇಕ ಸಮಸ್ಯೆಗಳಿಗೆ ಕಾರಣವಾಗಿದೆ. ಕಟ್ಟಡಗಳ ತ್ಯಾಜ್ಯ ಸಾಗಣೆ ಮೊದಲಾದ ಕೆಲಸಗಳಿಗೆ ಟ್ರ್ಯಾಕ್ಟರ್‌ಗಳನ್ನು ಬಳಸಲಾಗುತ್ತಿದ್ದು ಸಾರ್ವಜನಿಕ ಸುರಕ್ಷತೆ ಮತ್ತು ಪರಿಸರಕ್ಕೆ ಮಾರಕವಾಗಿವೆ. ನಗರದ ಯಾವುದೇ ರಸ್ತೆಗಳಲ್ಲಿ ಸಂಚರಿಸುತ್ತಿದ್ದರೂ ಈ ಟ್ರ್ಯಾಕ್ಟರ್‌ಗಳು ಕಣ್ಣಿಗೆ ಬೀಳುತ್ತವೆ. ಕಿರಿದಾದ ರಸ್ತೆಗಳಲ್ಲಿ ಸಾಗುತ್ತಾ ಖಾಲಿ ಉಳಿದಿರುವ ಪ್ರದೇಶಗಳಲ್ಲಿ ವಿವಿಧ ರೀತಿಯ ತ್ಯಾಜ್ಯವನ್ನು ಸುರಿಯುವ ದೃಶ್ಯಗಳು ಸರ್ವೇ ಸಾಮಾನ್ಯವಾಗಿವೆ. ಈ ಟ್ರ್ಯಾಕ್ಟರ್‌ಗಳಿಗೆ ಈ ಯಾವ ಕೆಲಸಕ್ಕೂ ಅನುಮತಿ ಇರುವುದಿಲ್ಲ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಟ್ರ್ಯಾಕ್ಟರ್‌ಗಳನ್ನು ನಿಯಂತ್ರಿಸಲು ಮುಂದಾಗಿದೆ.

ಕೃಷಿ ಚಟುವಟಿಕೆಗಳ ಹೆಸರಿನಲ್ಲಿ ಟ್ರ್ಯಾಕ್ಟರ್‌ಗಳ ದುರ್ಬಳಕೆಯಾಗುತ್ತಿದೆ. ಲಾಭದ ದೃಷ್ಟಿಯಿಂದ ಕೃಷಿಯೇತರ ವಾಣಿಜ್ಯ ಚಟುವಟಿಕೆಗಳನ್ನು ನಡೆಸುತ್ತಿವೆ. ಸಿಮೆಂಟ್‌, ಕಲ್ಲು, ಸಿಮೆಂಟ್‌ ಬ್ಲಾಕ್‌, ಕಲ್ಲು, ಜೆಲ್ಲಿಯನ್ನು ಸಾಗಣೆ ಮಾಡುತ್ತವೆ. ಆದ್ದರಿಂದ ಟ್ರ್ಯಾಕ್ಟರ್‌ಗಳನ್ನು ನಿಯಂತ್ರಿಸಲು ಪ್ರತ್ಯೇಕ ತಪಾಸಣಾ ತಂಡಗಳನ್ನು ರಚಿಸಲು ಉದ್ದೇಶಿಸಲಾಗಿದೆ ಎಂದು ಸಾರಿಗೆ ಇಲಾಖೆ ಅಧಿಕಾರಿಯೊಬ್ಬರು ಹೇಳುತ್ತಾರೆ.

ಲಾರಿ ಮಾಲೀಕರ ಅತಂಕ:

ಏಪ್ರಿಲ್‌ನಲ್ಲಿ ಲಾರಿ ಮಾಲೀಕರು ಮುಷ್ಕರ ನಡೆಸಿದ ನಂತರವಂತೂ ನಗರದೊಳಗೆ ಟ್ರ್ಯಾಕ್ಟರ್‌ಗಳ ಹಾವಳಿ ಹೆಚ್ಚಾಗಿದೆ. ಟ್ರ್ಯಾಕ್ಟರ್‌ಗಳು, ಲಾರಿ ಮಾಲೀಕರು ಮತ್ತು ನೌಕರರ ಹೊಟ್ಟಪಾಡಿಗೆ ಕಲ್ಲು ಹಾಕುತ್ತಿವೆ. ಲಾರಿ ಮಾಡುವ ಕೆಲಸಗಳನ್ನು ಮಾಡುತ್ತಿರುವುದು ಕಾನೂನು ಬಾಹಿರ ಚಟುವಟಿಕೆಯಾಗಿದೆ. ಯಾವುದೇ ವಾಣಿಜ್ಯ ಪರವಾನಗಿ ಇಲ್ಲದೆ ಕೆಲಸ ಮಾಡುತ್ತಿದ್ದು ಎಲ್ಲೆಂದರಲ್ಲಿ ತ್ಯಾಜ್ಯ ಮತ್ತು ಕಸವನ್ನು ಸುರಿಯುತ್ತಿವೆ ಎಂದು ಲಾರಿ ಮಾಲೀಕರ ಸಂಘದ ಅಧ್ಯಕ್ಷ ಷಣ್ಮುಖಪ್ಪ ಆತಂಕ ವ್ಯಕ್ತಪಡಿಸುತ್ತಾರೆ. ಈ ಸಂಬಂಧ ಲಾರಿ ಮಾಲೀಕರ ಜತೆ ನಡೆದ ಸಭೆಯಲ್ಲಿ ವಿಷಯವನ್ನು ಪ್ರಸ್ತಾಪಿಸಲಾಗಿದ್ದು, ಕ್ರಮ ಜರುಗಿಸುವುದಾಗಿ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಭರವಸೆ ನೀಡಿದ್ದಾರೆ ಎಂದೂ ಅವರು ಹೇಳಿದ್ದಾರೆ.

ಕೃಷಿ ಬಳಕೆಗಾಗಿ ಎಂದು ಟ್ರ್ಯಾಕ್ಟರ್‌ ಮಾಲೀಕರು ಈ ವಾಹನಗಳನ್ನು ಖರೀದಿ ಮಾಡುತ್ತಲೇ ಇರುತ್ತಾರೆ. ಆದರೆ ಕಟ್ಟಡಗಳ ತ್ಯಾಜ್ಯ ಮತ್ತು ಕಟ್ಟಡ ನಿರ್ಮಾಣದ ಸಾಮಗ್ರಿಗಳನ್ನು ಸಾಗಣೆ ಮಾಡುತ್ತಿವೆ. ತ್ಯಾಜ್ಯವನ್ನು ಖಾಲಿ ಮೈದಾನ ಇಲ್ಲವೇ ಕೆರೆಗಳ ಸುತ್ತ ಸುರಿಯುತ್ತಿವೆ ಎಂದು ಸಾರಿಗೆ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ತ್ಯಾಜ್ಯ ನಿರ್ವಹಣೆಗಾಗಿಯೇ ಅನುಮತಿ ಪಡೆದಿರುವ ಲಾರಿ ಮಾಲೀಕರೂ ಈ ಟ್ರ್ಯಾಕ್ಟರ್‌ಗಳ ಹಾವಳಿ ಕುರಿತು ಆತಂಕ ವ್ಯಕ್ತಪಡಿಸುತ್ತಾರೆ. ಟ್ರ್ಯಾಕ್ಟರ್‌ಗಳು ಸಣ್ಣ ಸಣ್ಣ ರಸ್ತೆಗಳಲ್ಲೂ ಸಾಗುವುದರಿಂದ ಅವಶ್ಯಕತೆ ಇರುವವರು ಟ್ರ್ಯಾಕ್ಟರ್‌ಗಳನ್ನೇ ಆಶ್ರಯಿಸುತ್ತಾರೆ. ಇದರಿಂದ ಪರವಾನಗಿ ಪಡೆದ ಲಾರಿ ಮಾಲೀಕರು ಮತ್ತು ಕಾರ್ಮಿಕರು ನಷ್ಟ ಅನುಭವಿಸುವಂತಾಗಿದೆ ಎಂದೂ ಹೇಳುತ್ತಾರೆ.

ರಸ್ತೆ ಸುರಕ್ಷತೆ ಕಾಳಜಿ:

ವ್ಯಾವಹಾರಿಕ ವಿಷಯಗಳನ್ನು ಹೊರತುಪಡಿಸಿಯೂ ಸಾರ್ವಜನಿಕರು ಟ್ರ್ಯಾಕ್ಟರ್‌ಗಳ ಹಾವಳಿ ಕುರಿತು ಕಳವಳ ವ್ಯಕ್ತಪಡಿಸುತ್ತಿದ್ದಾರೆ. ಈ ವಾಹನಗಳನ್ನು ಸುರಕ್ಷತೆಯಿಂದ ಚಲಾಯಿಸುವುದಿಲ್ಲ. ಟ್ರ್ಯಾಕ್ಟರ್‌ಗಳಲ್ಲಿ ಸಾಮರ್ಥ್ಯ ಮೀರಿ ತ್ಯಾಜ್ಯ ಇಲ್ಲವೇ ಸಾಮಗ್ರಿಗಳನ್ನು ಲೋಡ್‌ ಮಾಡಲಾಗಿರುತ್ತದೆ. ಚಾಲಕರೂ ಬೇಕಾಬಿಟ್ಟಿ ಚಲಾಯಿಸುತ್ತಾರೆ. ತ್ಯಾಜ್ಯವನ್ನು ಮುಚ್ಚಿರುವುದಿಲ್ಲ. ಇದು ಎಲ್ಲೆಂದರಲ್ಲಿ ರಸ್ತೆಯುದ್ದಕ್ಕೂ ಬೀಳುತ್ತಲೇ ಇರುತ್ತದೆ. ಇದು ಬೈಕ್‌ ಸವಾರರು ಮತ್ತು ಪಾದಾಚಾರಿಗಳಿಗೆ ಭಯವನ್ನುಂಟು ಮಾಡುತ್ತದೆ. ಆದ್ದರಿಂದ ಸರ್ಕಾರ ಕೂಡಲೇ ಕಠಿಣ ನಿಯಮಗಳನ್ನು ರೂಪಿಸಬೇಕು ಎಂದು ಬೈಕ್‌

ಸವಾರ ಮನೋಹರ್‌ ಆಗ್ರಹಪಡಿಸುತ್ತಾರೆ. ಟ್ರ್ಯಾಕ್ಟರ್‌ಗಳಲ್ಲಿ ಸುರಕ್ಷತೆ ಎನ್ನುವುದು ಇರುವುದೇ ಇಲ್ಲ. ಸಾರಿಗೆ ಇಲಾಖೆ, ಸಂಚಾರಿ ಪೊಲೀಸ್‌ ಮತ್ತು ಬಿಬಿಎಂಪಿ ಜಂಟಿಯಾಗಿ ಸಮನ್ವಯತೆ ಸಾಧಿಸಿ ಟ್ರ್ಯಾಕ್ಟರ್‌ಗಳನ್ನು ನಿಯಂತ್ರಿಸಬೇಕು ಎಂದೂ ಸಾರ್ವಜನಿಕರು ಒತ್ತಾಯಿಸುತ್ತಾರೆ.

ವರದಿ: ಎಚ್.ಮಾರುತಿ

Kiran Kumar I G

TwittereMail
ಕಿರಣ್ ಐ.ಜಿ.: 'ಹಿಂದೂಸ್ತಾನ್ ಟೈಮ್ಸ್​​ ಕನ್ನಡ'ದಲ್ಲಿ ಸೀನಿಯರ್​ ಕಂಟೆಂಟ್ ಪ್ರೊಡ್ಯೂಸರ್. ಜನರ ಬದುಕು ಸುಧಾರಿಸಬಲ್ಲ ಟೆಕ್‌ ಮತ್ತು ಗ್ಯಾಜೆಟ್ ಇವರ ಆಸಕ್ತಿಯ ಕ್ಷೇತ್ರ. ಯಾವುದೇ ವಿಷಯವಾದರೂ ಶ್ರದ್ಧೆಯಿಂದ ಕಲಿಯಬಲ್ಲೆ, ಬರೆಯಬಲ್ಲೆ ಎನ್ನುವುದು ಇವರ ವಿಶ್ವಾಸ. ಊರು ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ. ಪ್ರಜಾವಾಣಿ, ವಿಜಯವಾಣಿ ಮತ್ತು ವಿಜಯ ಕರ್ನಾಟಕ ವೆಬ್ ಹಾಗೂ ಟಿವಿ9 ಕನ್ನಡ ಡಿಜಿಟಲ್‌ನ ವಿವಿಧ ವಿಭಾಗಗಳಲ್ಲಿ ಒಟ್ಟು 10 ವರ್ಷ ಕೆಲಸ ಮಾಡಿದ ಅನುಭವ. ಇಮೇಲ್: kiran.kumar@htdigital.in