ಕನ್ನಡ ಸುದ್ದಿ  /  Karnataka  /  Traffic Advisory For Bengaluru Mysuru Expressway Ahead Of Pm Modi Visit Check Alternate Routes

Traffic advisory: ಗಮನಿಸಿ..ನಾಡಿದ್ದು ಪ್ರಧಾನಿ ಮೋದಿ ಬೆಂ-ಮೈ ಎಕ್ಸ್‌ಪ್ರೆಸ್‌ವೇ ಉದ್ಘಾಟನೆ; ವಾಹನ ಸಂಚಾರ ಮಾರ್ಗ ಬದಲಾವಣೆ

ಪ್ರಧಾನಿ ಮೋದಿಯವರು ಮಾರ್ಚ್ 12 ರಂದು ಮಂಡ್ಯಕ್ಕೆ ಭೇಟಿ ನೀಡುತ್ತಿದ್ದು, ಮಹತ್ವಾಕಾಂಕ್ಷೆಯ ಬೆಂಗಳೂರು-ಮೈಸೂರು ದಶ ಪಥದ ಎಕ್ಸ್‌ಪ್ರೆಸ್‌ವೇ ಲೋಕಾರ್ಪಣೆ ಮಾಡಲಿದ್ದಾರೆ. ಈ ಹಿನ್ನೆಲೆಯಲ್ಲಿ ವಾಹನ ಸಂಚಾರದ ಮಾರ್ಗ ಬದಲಾಯಿಸಲಾಗಿದೆ.

ಹೊಸದಾಗಿ ನಿರ್ಮಿಸಿರುವ ಬೆಂಗಳೂರು ಮೈಸೂರು ಹೆದ್ದಾರಿ
ಹೊಸದಾಗಿ ನಿರ್ಮಿಸಿರುವ ಬೆಂಗಳೂರು ಮೈಸೂರು ಹೆದ್ದಾರಿ

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರು ನಾಡಿದ್ದು (ಮಾರ್ಚ್ 12, ಭಾನುವಾರ) ಮಂಡ್ಯಕ್ಕೆ ಆಗಮಿಸುತ್ತಿದ್ದು, ಈ ಭಾಗದ ಮಹತ್ವಾಕಾಂಕ್ಷೆಯ ದಶ ಪಥ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇಯನ್ನು ಲೋಕಾರ್ಪಣೆ ಮಾಡಲಿದ್ದಾರೆ.

ಅಂದು ಪ್ರಧಾನಿ ಮೋದಿ ಭೇಟಿ ನೀಡುತ್ತಿರುವ ಹಿನ್ನೆಲೆಯಲ್ಲಿ ಈ ಮಾರ್ಗದಲ್ಲಿ ಸಂಚರಿಸುವ ವಾಹನಗಳ ಮಾರ್ಗ ಬದಲಾವಣೆ ಮಾಡಲಾಗಿದೆ. ಇದಕ್ಕಾಗಿ ಮಂಡ್ಯ ಜಿಲ್ಲಾಧಿಕಾರಿಗಳು ಪ್ರಯಾಣಿಕರ ದಟ್ಟಣೆಯನ್ನು ತಪ್ಪಿಸಲು ಮತ್ತು ಪ್ರಧಾನಿಯ ಸುರಕ್ಷತೆಯ ದೃಷ್ಟಿಯಿಂದ ವಾಹನ ಸಂಚಾರದ ಮಾರ್ಗಸೂಚಿಗಳನ್ನು ಹೊರಡಿಸಿದ್ದಾರೆ.

ಮಾರ್ಚ್ 12 ರಂದು ಬೆಳಿಗ್ಗೆ 6 ರಿಂದ ಸಂಜೆ 6 ರವರೆಗೆ 12 ಗಂಟೆಗಳ ಕಾಲ ಎಕ್ಸ್‌ಪ್ರೆಸ್‌ವೇಯಲ್ಲಿ ವಾಹನ ಸಂಚಾರವನ್ನು ನಿರ್ಬಂಧಿಸಿ ಮಂಡ್ಯ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ. ಈ ಆದೇಶವನ್ನು ಮಂಡ್ಯ ಪೊಲೀಸರು ಹಂಚಿಕೊಂಡಿದ್ದಾರೆ. ಈ ಮಾರ್ಗದಲ್ಲಿ ಸಂಚರಿಸುತ್ತಿದ್ದ ಪ್ರಯಾಣಿಕರಿಗೆ ಪರ್ಯಾಯ ಮಾರ್ಗಗಳನ್ನು ನೀಡಿರುವ ಬಗ್ಗೆಯೂ ಮಾಹಿತಿ ಹಂಚಿಕೊಂಡಿದ್ದಾರೆ.

ದಿನಾಂಕ 12-03-2023 ರಂದು ಪ್ರಧಾನಿ ನರೇಂದ್ರ ಮೋದಿ ಅವರು ಮಂಡ್ಯ ನಗರ ಮತ್ತು ಮದ್ದೂರಿಗೆ ಆಗಮಿಸುತ್ತಿರುವುದರಿಂದ ಅತೀ ಗಣ್ಯರ ಭದ್ರತಾ ದೃಷ್ಟಿಯಿಂದ ಅಂದು ಬೆಳಿಗ್ಗೆ 06-00 ಗಂಟೆಯಿಂದ ಸಂಜೆ 06-00 ಗಂಟೆಯವರೆಗೆ ಎಲ್ಲಾ ರೀತಿಯ ವಾಹನಗಳ ಮಾರ್ಗ ಬದಲಾವಣೆ ಮಾಡಿ ಮಾನ್ಯ ಜಿಲ್ಲಾಧಿಕಾರಿಯವರು ಹೊರಡಿಸಿರುವ ಆದೇಶದ ಪ್ರತಿಯನ್ನು ಮಂಡ್ಯ ಜಿಲ್ಲಾ ಎಸ್ಪಿ ಅವರು ಟ್ವಿಟರ್ ನಲ್ಲಿ ಹಂಚಿಕೊಂಡಿದ್ದಾರೆ.

ಅಂದು ವಾಹನ ಸವಾರರಿಗೆ ಮಾರ್ಗಸೂಚಿಗಳು ಮತ್ತು ಪರ್ಯಾಯ ಮಾರ್ಗಗಳು ಹೀಗಿವೆ

1. ಮೈಸೂರಿನಿಂದ ಮಂಡ್ಯ ಮಾರ್ಗವಾಗಿ ಬೆಂಗಳೂರಿಗೆ ತೆರಳುವ ವಾಹನಗಳು ಮೈಸೂರು-ಬನ್ನೂರು-ಕಿರುಗಾವಲು-ಹಲಗೂರು-ಕನಕಪುರ-ಬೆಂಗಳೂರು ರಸ್ತೆಯಲ್ಲಿ ಸಂಚರಿಸುವಂತೆ ಕೋರಲಾಗಿದೆ.

2. ಮೈಸೂರಿನಿಂದ ಮಂಡ್ಯ ಮೂಲಕ ತುಮಕೂರು ಕಡೆಗೆ ಹೋಗುವ ವಾಹನಗಳು ಮೈಸೂರು-ಶ್ರೀರಂಗಪಟ್ಟಣ-ಪಾಂಡವಪುರ-ನಾಗಮಂಗಲ-ಬೆಳ್ಳೂರು ಕ್ರಾಸ್-ತುಮಕೂರು ರಸ್ತೆಯಲ್ಲಿ ತೆರಳಲು ಕೋರಲಾಗಿದೆ.

3. ತುಮಕೂರಿನಿಂದ ಮಂಡ್ಯ ಮೂಲಕ ಮೈಸೂರು ಕಡೆಗೆ ಹೋಗುವ ವಾಹನಗಳು ತುಮಕೂರು-ಬೆಳ್ಳೂರು ಕ್ರಾಸ್-ನಾಗಮಂಗಲ-ಪಾಂಡವಪುರ-ಶ್ರೀರಂಗಪಟ್ಟಣ-ಮೈಸೂರು ರಸ್ತೆಯಲ್ಲಿ ತೆರಳಲು ಕೋರಲಾಗಿದೆ.

4. ಬೆಂಗಳೂರಿನಿಂದ ಮೈಸೂರು ಕಡೆಗೆ ತೆರಳುವ ವಾಹನಗಳು ಬೆಂಗಳೂರು-ಚನ್ನಪಟ್ಟಣ-ಹಲಗೂರು-ಮಳವಳ್ಳಿ-ಕಿರುಗಾವಲು-ಹಲಗೂರು-ಬನ್ನೂರು-ಮೈಸೂರು ರಸ್ತೆಯಲ್ಲಿ ಸಂಚರಿಸುವಂತೆ ಕೋರಲಾಗಿದೆ.

5. ಬೆಂಗಳೂರಿನಿಂದ ಮದ್ದೂರಿನ ಮೂಲಕ ಮಲೆಮಹದೇಶ್ವರ ಬೆಟ್ಟಕ್ಕೆ ತೆರಳುವ ವಾಹನಗಳು ಬೆಂಗಳೂರು-ಹಲಗೂರು-ಮಳವಳ್ಳಿ-ಕೊಳ್ಳೇಗಾಲ-ಎಂಎಂ ಹಿಲ್ಸ್ ರಸ್ತೆಯಲ್ಲಿ ತೆರಳಲು ಕೋರಲಾಗಿದೆ.

8,408 ಕೋಟಿ ವೆಚ್ಚದಲ್ಲಿ ನಿರ್ಮಿಸಲಾದ 118 ಕಿಮೀ ಎಕ್ಸ್‌ಪ್ರೆಸ್‌ವೇ ಬೆಂಗಳೂರು ಮತ್ತು ಮೈಸೂರು ನಡುವಿನ ಪ್ರಯಾಣದ ಸಮಯವನ್ನು 3.5 ಗಂಟೆಗಳಿಂದ ಸುಮಾರು 1.5 ಗಂಟೆಗೆ ಕಡಿಮೆ ಮಾಡುತ್ತದೆ.

ಉದ್ಘಾಟನೆಗೂ ಮುನ್ನ ಪ್ರಧಾನಿ ಮೋದಿ ಅವರು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರ ಟ್ವೀಟ್ ಅನ್ನು ಟ್ಯಾಗ್ ಮಾಡಿದ್ದು, ಎಕ್ಸ್‌ಪ್ರೆಸ್‌ವೇ ಕರ್ನಾಟಕದ ಬೆಳವಣಿಗೆಯ ಪಥಕ್ಕೆ ಕೊಡುಗೆ ನೀಡುವ ಪ್ರಮುಖ ಸಂಪರ್ಕ ಯೋಜನೆಯಾಗಿದೆ ಎಂದು ಹೇಳಿದ್ದಾರೆ.

IPL_Entry_Point