Vehicle Speed Limit: 130 ಕಿಮೀ ವೇಗದಲ್ಲಿ ವಾಹನ ಚಲಾಯಿಸುತ್ತಿದ್ದೀರಾ? ಹಾಗಾದ್ರೆ ಎಫ್ ಐ ಆರ್ ಖಚಿತ; ಆಗಸ್ಟ್ 1ರಿಂದ ಹೊಸ ನಿಯಮ
ಕನ್ನಡ ಸುದ್ದಿ  /  ಕರ್ನಾಟಕ  /  Vehicle Speed Limit: 130 ಕಿಮೀ ವೇಗದಲ್ಲಿ ವಾಹನ ಚಲಾಯಿಸುತ್ತಿದ್ದೀರಾ? ಹಾಗಾದ್ರೆ ಎಫ್ ಐ ಆರ್ ಖಚಿತ; ಆಗಸ್ಟ್ 1ರಿಂದ ಹೊಸ ನಿಯಮ

Vehicle Speed Limit: 130 ಕಿಮೀ ವೇಗದಲ್ಲಿ ವಾಹನ ಚಲಾಯಿಸುತ್ತಿದ್ದೀರಾ? ಹಾಗಾದ್ರೆ ಎಫ್ ಐ ಆರ್ ಖಚಿತ; ಆಗಸ್ಟ್ 1ರಿಂದ ಹೊಸ ನಿಯಮ

ವಾಹನಗಳ ವೇಗ ಮಿತಿ ತಗ್ಗಿಸಿ ಅಪಘಾತಗಳನ್ನು ತಪ್ಪಿಸುವ ಉದ್ದೇಶದಿಂದ ಕರ್ನಾಟಕ ಪೊಲೀಸರು ಆಗಸ್ಟ್‌ 1ರಿಂದ ಹೊಸ ಕಾನೂನಿನೊಂದಿಗೆ ದಂಡ ವಿಧಿಸಲು ಆರಂಭಿಸಲಿದ್ದಾರೆ.ವರದಿ: ಎಚ್‌.ಮಾರುತಿ. ಬೆಂಗಳೂರು

ಕರ್ನಾಟಕದಲ್ಲಿ ವಾಹನಗಳ ವೇಗದ ಮಿತಿ ಮೇಲೆ ಇನ್ನಷ್ಟು ಕಣ್ಗಾವಲು ಹೆಚ್ಚಲಿದೆ.
ಕರ್ನಾಟಕದಲ್ಲಿ ವಾಹನಗಳ ವೇಗದ ಮಿತಿ ಮೇಲೆ ಇನ್ನಷ್ಟು ಕಣ್ಗಾವಲು ಹೆಚ್ಚಲಿದೆ.

ಬೆಂಗಳೂರು: ನಿಮ್ಮ ವಾಹನದ ವೇಗಕ್ಕೆ ನೀವೇ ಮಿತಿ ಹಾಕಿಕೊಳ್ಳಿ. ಒಂದು ವೇಳೆ ಮಿತಿ ಮೀರಿ ವಾಹನವನ್ನು ಚಲಾಯಿಸಿದರೆ ಪ್ರಕರಣ ದಾಖಲಾಗುವುದು ಖಚಿತ. ಪೊಲೀಸರಿಗೆ ಹೆದರಿಕೊಂಡು ಈ ಮಿತಿಯನ್ನು ಅನುಸರಿಸಲು ಹೋಗಬೇಡಿ, ನಿಮ್ಮ ಸುರಕ್ಷತೆಯ ದೃಷ್ಟಿಯಿಂದ ವಾಹನ ಚಲಾಯಿಸಿ. ವೇಗದ ಸಂಚಾರಕ್ಕೆ ಕಡಿವಾಣ ಹಾಕುವ ದೃಷ್ಟಿಯಿಂದ ಅಗಸ್ಟ್ 1 ರಿಂದ 130 ಕಿಮೀಗಿಂತ ಹೆಚ್ಚಿನ ವೇಗದಲ್ಲಿ ವಾಹನ ಚಲಾಯಿಸಿದರೆ ಎಫ್ ಐ ಆರ್ ದಾಖಲಿಸುವುದಾಗಿ ಸಂಚಾರ ಮತ್ತು ಸುರಕ್ಷತಾ ಇಲಾಖೆ ಎಚ್ಚರಿಕೆ ನೀಡಿದೆ.

ಸಂಚಾರಿ ವಿಭಾಗದ ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕ ಅಲೋಕ್ ಕುಮಾರ್ ಎಕ್ಸ್ ನಲ್ಲಿ ಈ ಮಾಹಿತಿಯನ್ನು ಹಂಚಿಕೊಂಡಿದ್ದು ಆಗಸ್ಟ್ 1ರಿಂದ ರಾಜ್ಯಾದ್ಯಂತ ಈ ನಿಯಮ ಜಾರಿಗೆ ಬರಲಿದೆ ಮತ್ತು ಕಟ್ಟು ನಿಟ್ಟಾಗಿ ಅನುಸರಿಸುವುದಾಗಿ ತಿಳಿಸಿದ್ದಾರೆ.

ಈ ರೀತಿ ಅತಿಯಾದ ವೇಗವಾಗಿ ಚಲಾಯಿಸುವ ಕಾರುಗಳೆಂದರೆ ದುಬಾರಿ ಕಾರುಗಳು. ಶೇ.65ರಿಂದ ಶೇ.100ರಷ್ಟು ಮಿತಿಯನ್ನು ಮೀರಿ ವಾಹನ ಚಲಾಯಿಸುವುದು ಕಂಡು ಬಂದಿದೆ. ಶೇ.90ರಷ್ಟು ಅಪಘಾತಗಳಿಗೆ ಅತಿಯಾದ ವೇಗವೇ ಕಾರಣವಾಗಿದೆ. ಸ್ಪಾಟ್ ಸ್ಪೀಟಡ್ ಮತ್ತು ಸೆಕ್ಷನಲ್ ಸ್ಪೀಡ್ ಅಧಾರದಲ್ಲಿ ವಾಹನ ಚಾಲನೆ ಮಾಡುವವರ ವಿರುದ್ಧ ಪ್ರಕರಣ ದಾಖಲಿಸಲಾಗುವುದು ಮತ್ತು ದಂಡವನ್ನೂ ವಿಧಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

ಸ್ಪಾಟ್ ಸ್ಪೀಡ್ ಎಂದರೆ ಕ್ಯಾಮೆರಾ ಸಮೀಪ ದಾಖಲಾಗುವ ವೇಗ. ಸೆಕ್ಷನಲ್ ಸ್ಪೀಡ್ ಎಂದರೆ ಎರಡು ಕ್ಯಾಮೆರಾಗಳ ಮಧ್ಯೆ ವಾಹನ ಸಾಗುವ ಸರಾಸರಿ ವೇಗ. ಈ ಎರಡೂ ಅಂಶಗಳನ್ನು ಪರಿಗಣಿಸಿ ದೂರು ದಾಖಲಿಸುವುದಾಗಿ ಅವರು ತಿಳಿಸಿದ್ದಾರೆ.

ದೇಶದಲ್ಲಿ ಹೆದ್ದಾರಿಗಳಲ್ಲಿ ವೇಗದ ಮಿತಿಯನ್ನು ಪ್ರತಿ ಘಂಟೆಗೆ 100 ಕಿಮೀ ಎಂದು ನಿಗದಿಪಡಿಸಲಾಗಿದೆ. ಶೇ.5ರಷ್ಟು ತಪ್ಪನ್ನು ಮನ್ನಿಸಬಹುದಾಗಿದೆ. ವೇಗದ ಮಿತಿ ಮೀರಿ ವಾಹನ ಚಲಾಯಿಸುತ್ತಿದ್ದದೆ ೬ ತಿಂಗಳು ಜೈಲು ಶಿಕ್ಷೆ ಅಥವಾ 2 ಸಾವಿರ ರೂ. ದಂಡ ವಿಧಿಸುವುದಾಗಿ ಕಾನೂನಿನಲ್ಲಿ ಅವಕಾಶವಿದೆ ಎಂದು ಹೇಳಿದ್ದಾರೆ. ಬೆಂಗಳೂರು ಮೈಸೂರು ಹೆದ್ದಾರಿಯಲ್ಲಿ ಸಂಭವಿಸುವ ಶೇ.90 ರಷ್ಟು ಅಪಘಾತಗಳು ಅತಿಯಾದ ವೇಗದಿಂದ ವಾಹನ ಚಲಾಯಿಸುವುದರಿಂದ ಸಂಭವಿಸುತ್ತಿವೆ ಎನ್ನುವುದು ಸಮೀಕ್ಷೆಯಿಂದ ತಿಳಿದು ಬಂದಿದೆ ಎಂದು ತಿಳಿಸಿದ್ದಾರೆ.

ಇಂತಹ ಅಪಯಕಾರಿ ವೇಗಕ್ಕೆ ಕಡಿವಾಣ ಹಾಕುವ ದೃಷ್ಟಿಯಿಮದ 130 ಕಿಮೀಗಿಂತಲೂ ವೇಗವಾಗಿ ವಾಹನ ಚಲನೆ ಮಾಡಿದರೆ ಅಜಾಗರೂಕತೆ ಮತ್ತು ನಿರ್ಲಕ್ಷ್ಯದ ವಾಹನ ಚಾಲನೆ ಎಂದು ಪರಿಗಣಿಸಿ ಪ್ರಕರಣ ದಾಖಲಿಸಿ ಕಾನೂನು ಪ್ರಕ್ರಿಯೆ ಆರಂಭಿಸಲಾಗುವುದು ಎಂದು ಮಾಹಿತಿ ನೀಡಿದ್ದಾರೆ.

ಜುಲೈ 25ರಂದು ಬೆಂಗಳೂರು ಮೈಸೂರು ಹೆದ್ದಾರಿಯಲ್ಲಿ 155ವಾಹನಗಳು 130 ಕಿಮೀ. ಗಿಂತಲೂ ಹೆಚ್ಚಿನ ವೇಗದಲ್ಲಿ ಸಂಚರಿಸಿರುವುದನ್ನು ಗುರುತಿಸಲಾಗಿದೆ. ಅಚ್ಚರಿ ಎಂದರೆ ರಾಜ್ಯ ರಸ್ತೆ ಸಾರಿಗೆ ನಿಗಮದ ಬಸ್ ಗಳು ಮತ್ತು ಸರ್ಕಾರಿ ವಾಹನಗಳೂ 130 ಕಿಮೀ ಮೀರಿ ವೇಗವಾಗಿ ಸಂಚರಿಸಿವೆ. ಇನ್ನೂ ಕೆಲವು ವಾಹನಗಳು 159 ಕಿಮೀ ವೇಗದಲ್ಲಿ ಸಂಚರಿಸಿರುವುದು ಸಿಸಿಟಿವಿ ಕ್ಯಾಮೆರಾಗಳಲ್ಲಿ ಸೆರೆಯಾಗಿದೆ ಎಂದು ಅಲೋಕ್ ಕುಮಾರ್ ಹೇಳಿದ್ದಾರೆ.

ಸದ್ಯಕ್ಕೆ ಬೆಂಗಳೂರು ಮೈಸೂರು ಹೆದ್ದಾರಿಯಲ್ಲಿ ಹತ್ತು ಪ್ರದೇಶಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಮುಂಬರುವ ದಿನಗಳಲ್ಲಿ ರಾಜ್ಯದ ಇತರ ಭಾಗಗಳಲ್ಲೂ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲು ತೀರ್ಮಾನಿಸಲಾಗಿದೆ ಎನ್ನುತ್ತವೆ ಪೊಲೀಸ್‌ ಮೂಲಗಳು.

ಅಸಭ್ಯ ವರ್ತನೆ; ಯುವಕನ ಬಂಧಿಸಿದ ಪೊಲೀಸರು

ರ‍್ಯಾಪಿಡೋ ಬೈಕ್ ಟ್ಯಾಕ್ಸಿ ಚಲಾಯಿಸುತ್ತಿದ್ದ ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಯುವಕನೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ರ‍್ಯಾಪಿಡೋ ದ್ವಿಚಕ್ರ ವಾಹನ ಚಲಾಯಿಸುತ್ತಿದ್ದ 35 ವರ್ಷದ ಮಹಿಳೆ ಹೆಸರಘಟ್ಟ ರಸ್ತೆಯ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಟ್ಯಾಕ್ಸಿ ಬುಕ್ ಮಾಡಿದ್ದ ರಾಜಸ್ಥಾನದ ಜೈಪುರ ನಿವಾಸಿ ಮಹೇಶ್ ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಜಾಲಹಳ್ಳಿ ಎಚ್ ಎಂಟಿಯಿಂದ ದಾಸರಹಳ್ಳಿಗೆ ರ‍್ಯಾಪಿಡೋ ವಾಹನವನ್ನು ಕಾಯ್ದಿರಿಸಿದ್ದ. ಹಿಂದೆ ಕುಳಿತಿದ್ದ ಈತ ಮಾರ್ಗ ಮಧ್ಯದಲ್ಲಿ ವಾಹನ ಚಲಾಯಿಸುತ್ತಿದ್ದ ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸಿದ್ದಾನೆ. ನಂತರ ಮಹಿಳೆಯು ಹೊಯ್ಸಳ ಪೊಲೀಸರಿಗೆ ಕರೆ ಮಾಡಿ ದೂರು ನೀಡಿದ್ದಾರೆ. ಕೂಡಲೇ ಆಗಮಿಸಿದ ಪೊಲೀಸರು ಮಹೇಶನನ್ನು ಬಂಧಿಸಿದ್ದಾರೆ.

(ವರದಿ: ಎಚ್. ಮಾರುತಿ, ಬೆಂಗಳೂರು)

Whats_app_banner