ರಾಜೀವ ಹೆಗಡೆ ಲೇಖನ: ಟೋಲ್‌ ರಸ್ತೆಗಳಲ್ಲಿಯೂ ವಾಹನಗಳ ವೇಗ ಮಿತಿ, ಪೊಲೀಸ್‌ ಇಲಾಖೆಗೇಕೆ ಗೊಂದಲ-traffic news karnataka toll highways vehicle speed limit police department confusions rajeev hegde article ,ಕರ್ನಾಟಕ ಸುದ್ದಿ
ಕನ್ನಡ ಸುದ್ದಿ  /  ಕರ್ನಾಟಕ  /  ರಾಜೀವ ಹೆಗಡೆ ಲೇಖನ: ಟೋಲ್‌ ರಸ್ತೆಗಳಲ್ಲಿಯೂ ವಾಹನಗಳ ವೇಗ ಮಿತಿ, ಪೊಲೀಸ್‌ ಇಲಾಖೆಗೇಕೆ ಗೊಂದಲ

ರಾಜೀವ ಹೆಗಡೆ ಲೇಖನ: ಟೋಲ್‌ ರಸ್ತೆಗಳಲ್ಲಿಯೂ ವಾಹನಗಳ ವೇಗ ಮಿತಿ, ಪೊಲೀಸ್‌ ಇಲಾಖೆಗೇಕೆ ಗೊಂದಲ

Vehicle Speed limit ಕರ್ನಾಟಕದ ಹೆದ್ದಾರಿಗಳಲ್ಲಿ( Karnataka Highways) ಪೊಲೀಸ್‌ ಇಲಾಖೆ( Karnataka police) ನಿಗದಿಪಡಿಸಿರುವ ವೇಗದ ಮಿತಿ ಕುರಿತು ಚರ್ಚೆಗಳು ಆಗುತ್ತಿದ್ದು. ಈ ಬಗ್ಗೆ ಲೇಖಕ ರಾಜೀವ್‌ ಹೆಗಡೆ ಅಭಿಪ್ರಾಯ ದಾಖಲಿಸಿದ್ದಾರೆ.

ಹೆದ್ದಾರಿಗಳಲ್ಲಿ ವಾಹನ ವೇಗಕ್ಕೆ ಮಿತಿ. ಪೊಲೀಸ್‌ ಇಲಾಖೆ ಆದೇಶದ ಕುರಿತು ರಾಜೀವ್‌ ಹೆಗಡೆ ಲೇಖನ
ಹೆದ್ದಾರಿಗಳಲ್ಲಿ ವಾಹನ ವೇಗಕ್ಕೆ ಮಿತಿ. ಪೊಲೀಸ್‌ ಇಲಾಖೆ ಆದೇಶದ ಕುರಿತು ರಾಜೀವ್‌ ಹೆಗಡೆ ಲೇಖನ

ರಾಜ್ಯ ಸರ್ಕಾರಕ್ಕೆ ಹಣದ ಕೊರತೆಯಿದೆ, ಸಂಬಳ ನೀಡಲೂ ಆಗುತ್ತಿಲ್ಲ ಹಾಗೂ ಇದಕ್ಕಾಗಿ ಜನಸಾಮಾನ್ಯರ ಮೇಲೆ ಹೊರೆ ಹಾಕಬೇಕಿದೆ ಎನ್ನುವುದು ನಮಗೆಲ್ಲ ತಿಳಿದಿರುವ ವಿಚಾರ. ಆದರೆ ಬೇಕಾಬಿಟ್ಟಿ ನಿಯಮಗಳನ್ನು ಮಾಡಿಕೊಂಡು ದಂಡ ವಸೂಲಿ ಮಾಡಲಾಗುತ್ತಿದೆ. ರಾಷ್ಟ್ರೀಯ ಹೆದ್ದಾರಿಗಳಿಗೆ ಬಂದು ಸ್ಥಳೀಯ ಪೊಲೀಸ್‌ ಠಾಣೆಯ ಅಧಿಕಾರಿಗಳು ಮನಸೋ ಇಚ್ಛೆ ದಂಡ ವಸೂಲಿ ಮಾಡಲು ಶುರು ಮಾಡಿದ್ದಾರೆ.

ಇದೇ ಗೊಂದಲದ ಹಿನ್ನೆಲೆಯಲ್ಲಿ ಕಳೆದ ನಾಲ್ಕು ದಿನಗಳಿಂದ ನಾನು ಸಂಚಾರ ಪೊಲೀಸ್‌ ಇಲಾಖೆ ಹಿಂದೆ ಬಿದ್ದಿದ್ದೆ. ಕೇವಲ ಒಂದು ಮಾಹಿತಿಗಾಗಿ ಸಹಾಯವಾಣಿಯಿಂದ ಹಿಡಿದು ಪೊಲೀಸ್‌ ಮುಖ್ಯಸ್ಥರ ಕಚೇರಿಯವರೆಗೆ 20ಕ್ಕೂ ಅಧಿಕ ಕರೆಗಳನ್ನು ಮಾಡಿದೆ. ಅಂತಿಮವಾಗಿ ರಾಜ್ಯ ಪೊಲೀಸ್‌ ಇಲಾಖೆಯ ಸಂಚಾರ ವಿಭಾಗದಿಂದ ಅಧಿಕೃತ ಮೇಲ್‌ ಪಡೆದುಕೊಳ್ಳಲು ಯಶಸ್ವಿಯಾಗಿದ್ದು, ಮಾಹಿತಿಯನ್ನು ಇಲ್ಲಿ ಹಂಚಿಕೊಳ್ಳುತ್ತಿದ್ದೇನೆ. ಈ ಮಾಹಿತಿಯು ನಿಮ್ಮ ಆಹ್ಲಾದಕರ ಪ್ರಯಾಣಕ್ಕೆ ನೆರವಾದೀತು. ನಿಮಗೆ ಸಹಾಯವಾದಾಗಲೆಲ್ಲ, ನನ್ನ ಸುಖಕರ ಪ್ರಯಾಣಕ್ಕೆ ಮನಸ್ಸಿನಲ್ಲೇ ಒಂದು ಶುಭಾಶಯ ಹೇಳಿ ಸಾಕು.

ನಾನು ಕೇಳಿದ್ದ ಮಾಹಿತಿ ಏನು?

ʼರಾಜ್ಯದಲ್ಲಿನ ರಾಷ್ಟ್ರೀಯ ಹೆದ್ದಾರಿ ಅಥವಾ ಇನ್ಯಾವುದೇ ರಸ್ತೆಯಲ್ಲಿ 130 ಕಿ.ಮೀ/ಗಂ+ ವೇಗದಲ್ಲಿ ಚಲಿಸಿದರೆ ಎಫ್‌ಐಆರ್‌ ದಾಖಲಿಸಿ, ಕಾನೂನು ಕ್ರಮ ಜರುಗಿಸಲು ಮುಂದಾಗಿರುವುದು ಸ್ವಾಗತಾರ್ಹ ಕ್ರಮ. ಆದರೆ ದಂಡ ರಹಿತವಾಗಿ ಚಲಿಸಬೇಕಿದ್ದಲ್ಲಿ ವೇಗದ ಮಿತಿ ಯಾವುದುʼ ಎನ್ನುವ ಮಾಹಿತಿ ನೀಡುವಂತೆ ಎಡಿಜಿಪಿ ಸಂಚಾರ ಪೊಲೀಸ್ ಕಚೇರಿಗೆ ಮೇಲ್‌ ಕಳುಹಿಸಿದ್ದೆ.

ಪೊಲೀಸರು ನೀಡದ ಉತ್ತರವೇನು?

ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವಾಲಯವು 2018ರ ಏಪ್ರಿಲ್‌ 6ರಂದು ಹೊರಡಿಸಿದ ಸುತ್ತೋಲೆಯನ್ನು ಕರ್ನಾಟಕ ಪೊಲೀಸ್‌ ಇಲಾಖೆಯು ಹಂಚಿಕೊಂಡಿದೆ. ಅಂದರೆ ನಾನು ಕೇಳಿದ ವೇಗದ ಮಿತಿ ಮಾಹಿತಿಗೆ ಇದು ಅಧಿಕೃತ ಸಂದೇಶವಾಗಿದೆ.

ಪೊಲೀಸ್‌ ಇಲಾಖೆ ಪ್ರಕಾರ ಗರಿಷ್ಠ ವೇಗದ ಮಿತಿ

8 ಜನರಿಗಿಂತ ಕಡಿಮೆ ಪ್ರಯಾಣಿಕರನ್ನು ಹೊಂದಿರುವ ವಾಹನ: ಇದರಲ್ಲಿಕಾರು, ಜೀಪು ಹಾಗೂ ಇತರೆ ವಾಹನಗಳು ಬರುತ್ತವೆ.

ಪ್ರವೇಶ ಹಾಗೂ ನಿರ್ಗಮನದ ನಿಯಂತ್ರಣ ಹೊಂದಿರುವ ಎಕ್ಸ್‌ಪ್ರೆಸ್‌ ವೇ- 120 ಕಿ.ಮೀ,

ಡಿವೈಡರ್‌ ಇರುವ ಚತುಷ್ಪಥ ಅಥವಾ ಅದಕ್ಕಿಂತ ಹೆಚ್ಚು ಪಥವಿರುವ ಹೆದ್ದಾರಿ: 100 ಕಿ.ಮೀ

ನಗರ ಪಾಲಿಕೆಗಳ ವ್ಯಾಪ್ತಿ: 70 ಕಿ.ಮೀ

ಇತರೆ ರಸ್ತೆ: 70 ಕಿ.ಮೀ

ಪೊಲೀಸ್‌ ಇಲಾಖೆ ಗೊಂದಲವೇಕೆ?

ಮೊನ್ನೆ ಫೇಸ್‌ಬುಕ್‌ ಸ್ನೇಹಿತರೊಬ್ಬರ ಪುಟದಲ್ಲಿ ವೇಗದ ಮಿತಿಗೆ ಸಂಬಂಧಿಸಿ ತುಮಕೂರು ಪೊಲೀಸರು ಮಾಡುತ್ತಿರುವ ವಸೂಲಿ ಬಗ್ಗೆ ಬರಹವೊಂದನ್ನು ನೋಡಿದೆ. ಅದಾದ ಬಳಿಕ ಶಿರಾದ ಸಂಚಾರ ಪೊಲೀಸ್‌ ಎಸ್‌ಐ ನಂಬರ್‌ ಪಡೆದುಕೊಂಡು ಮಾತನಾಡಿದೆ. ಆ ವ್ಯಕ್ತಿಯ ಪ್ರಕಾರ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಕಾರಿನ ವೇಗದ ಮಿತಿ 80 ಕಿ.ಮೀ ಪ್ರತಿ ಗಂಟೆಯಂತೆ. ನಿಮ್ಮ ಎಡಿಜಿಪಿ ಅಲೋಕ್‌ ಕುಮಾರ್‌ ಅವರು ಸುದ್ದಿಗೋಷ್ಠಿಯಲ್ಲಿ ನೀಡಿದ ಮಾಹಿತಿಯಂತೆ 100 ಕಿ.ಮೀ/ಗಂ ಅಲ್ಲವೇ ಎಂದು ಪ್ರಶ್ನಿಸಿದಾಗ, ʼನೀವು ಕೋರ್ಟ್‌ಗೆ ಹೋಗಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ(ಪಿಐಎಲ್‌) ದಾಖಲಿಸಿಕೊಂಡು ಇದನ್ನೆಲ್ಲ ಪ್ರಶ್ನಿಸಿಕೊಂಡು ಬನ್ನಿʼ ಎನ್ನುವ ಧಿಮಾಕಿನ ಉತ್ತರ ಬಂತು. ಇವರ ಕ್ರಮವನ್ನು ಹೆದ್ದಾರಿಯಲ್ಲಿನ ವಾಹನ ಚಾಲಕರು ಪ್ರಶ್ನಿಸಿದಾಗಲೂ, ಇದೇ ರೀತಿಯ ಅಸಡ್ಡೆಯ ಉತ್ತರವನ್ನು ನೀಡಿದ್ದರಂತೆ. ಅವರ ಪ್ರತಿಕ್ರಿಯೆಯಿಂದ ಕೋಪ ಬಂದರೂ, ದಯವಿಟ್ಟು ನಿಮ್ಮ ಬಳಿ ಇರುವ ಆದೇಶ ಪ್ರತಿಯನ್ನು ಕಳುಹಿಸಿಕೊಡಿ ಎಂದು ವಾಟ್ಸ್​​ಆ್ಯಪ್‌ನಲ್ಲಿ ಸಂದೇಶ ಕೂಡ ಕಳುಹಿಸಿದ್ದೆ. ಅದೇ ಸಮಯಕ್ಕೆ ಅವರ ಮುಖ್ಯಸ್ಥರ ಕಚೇರಿಗೂ ಮಾಹಿತಿ ಕೇಳಿದ್ದೆ. ಎಡಿಜಿಪಿ ಕಚೇರಿಯಿಂದ ಆದೇಶದ ಪ್ರತಿಯ ಮಾಹಿತಿ ಬಂದರೂ, ಈ ಎಸ್‌ಐಗೆ ಸಮಯ ಸಿಕ್ಕಿಲ್ಲ ಎನಿಸುತ್ತದೆ.

ವಸೂಲಿಗೂ ಮಿತಿ ಇರಲಿ!

ಅತಿಯಾದ ವೇಗವು ಅಪಘಾತಕ್ಕೆ ಕಾರಣವಾಗುತ್ತದೆ ಎನ್ನುವುದನ್ನು ನಾನು ಕಡ ಒಪ್ಪುತ್ತೇನೆ. ಆದರೆ ನೂರಾರು ರೂಪಾಯಿ ಟೋಲ್‌ ಪಡೆಯುವ ರಸ್ತೆಯಲ್ಲಿ ಐದಾರು ಗೇರ್‌ಗಳಿರುವ ಕಾರುಗಳಿಗೆ 80 ಕಿ.ಮೀ/ಗಂ ವೇಗದ ಮಿತಿ ಹಾಕುವುದು ಅವೈಜ್ಞಾನಿಕ ಹಾಗೂ ಅತ್ಯಂತ ಹೇಸಿಗೆಯ ವಿಚಾರ. ಒಂದೊಮ್ಮೆ ಇದೇ ವೇಗದಲ್ಲಿ ಪ್ರಯಾಣಿಕರು ಹೋಗಬೇಕು ಎನ್ನುವುದು ನಿಮ್ಮ ನಿಯಮವಾಗಿದ್ದರೆ, ಮೊದಲು ಟೋಲ್‌ಗಳನ್ನು ಕಿತ್ತು ಹಾಕಿ. ಇಲ್ಲವಾದಲ್ಲಿ ಜಿಲ್ಲೆಗೊಂದು, ಠಾಣೆಗೊಂದು ನಿಯಮ ಮಾಡಿಕೊಂಡು ಕೂರಬೇಡಿ. ರಾಷ್ಟ್ರೀಯ ಹೆದ್ದಾರಿಯ ನಿಯಮಗಳೆಂದರೆ ಇಡೀ ದೇಶಕ್ಕೆ ಅನ್ವಯವಾಗುತ್ತದೆ. ದೇಶದ ನಿಯಮ ಅನ್ವಯವಾಗುವುದಿಲ್ಲ ಎಂದಾದರೆ, ಕನಿಷ್ಠ ಪಕ್ಷ ನಿಮ್ಮ ರಾಜ್ಯದ ಪೊಲೀಸ್‌ ಮುಖ್ಯಸ್ಥರು ಮಾಡಿರುವ ಆದೇಶವನ್ನು ಪಾಲಿಸುವ ಸಾಮಾನ್ಯ ಜ್ಞಾನವನ್ನು ಜಿಲ್ಲಾ ಪೊಲೀಸರು ಹೊಂದಬೇಕಿದೆ. ಹಾಗೆಯೇ ನನಗೆ ತಿಳಿದಂತೆ ರಾಷ್ಟ್ರೀಯ ಹೆದ್ದಾರಿ ನಿಯಮಗಳ ಪ್ರಕಾರ, ಟೋಲ್‌ ರಸ್ತೆಗಳಲ್ಲಿ ರಾಜ್ಯ ಸಂಚಾರ ಪೊಲೀಸರು ಬಂದು ಗಾಡಿಗಳನ್ನು ತಡೆದು ದಂಡ ಹಾಕಲು ಅವಕಾಶವೇ ಇಲ್ಲ. ಈ ಹಿಂದೆ ನಾನೊಂದು ಪೋಸ್ಟ್‌ ಹಾಕಿದ ಬಳಿಕ, ಚಿತ್ರದುರ್ಗ ಪೊಲೀಸರು ರಾಷ್ಟ್ರೀಯ ಹೆದ್ದಾರಿಗಳಲ್ಲಿ ಮಾಡುತ್ತಿದ್ದ ದಂಧೆಗೆ ಕಡಿವಾಣ ಹಾಕಲು ರಾಜ್ಯ ಪೊಲೀಸ್‌ ಮುಖ್ಯಸ್ಥರ ಕಚೇರಿಯಿಂದ ಸೂಚನೆ ಹೋಗಿತ್ತು.

ಕೊನೆಯದಾಗಿ: ನಾವು ಸಂಚಾರ ನಿಯಮವನ್ನು ಪಾಲಿಸಲು ತಯಾರಿದ್ದೇವೆ. ಕಾನೂನನ್ನು ಗೌರವಿಸುವ ನಮ್ಮನ್ನೂ ಸ್ವಲ್ಪ ಮರ್ಯಾದೆಯಿಂದ ನಡೆಸಿಕೊಳ್ಳಿ. ಉತ್ತಮವಾಗಿ ರಸ್ತೆಗಳನ್ನು ನಿರ್ವಹಿಸದ ಗುತ್ತಿಗೆದಾರರ ವಿರುದ್ಧವೂ ಪ್ರಕರಣ ದಾಖಲಿಸಿ. ಪಥ ಶಿಸ್ತನ್ನು ಪಾಲಿಸದ ಭಾರಿ ವಾಹನಗಳ ಬಗ್ಗೆ ಗಮನವಹಿಸಿ. ಹೇಗಿದ್ದರೂ ನಮ್ಮ ಪರ್ಸಿನಲ್ಲಿ ಅಥವಾ ವ್ಯಾಲೆಟ್‌ನಲ್ಲಿ ದುಡ್ಡಿದೆ ಎನ್ನುವ ಕಾರಣಕ್ಕೆ ಎಲ್ಲ ದಂಡವನ್ನು ನಮಗೆ ಸೀಮಿತಗೊಳಿಸಬೇಡಿ. ಹಾಗೆಯೇ ದಯವಿಟ್ಟು ನಿಮ್ಮದೇ ಸರ್ಕಾರ, ಪೊಲೀಸರು ಮಾಡಿರುವ ನಿಯಮಗಳನ್ನು ಏಕರೂಪವಾಗಿ ಎಲ್ಲೆಡೆ ಪಾಲಿಸಿ.

-ರಾಜೀವ್‌ ಹೆಗಡೆ, ಬೆಂಗಳೂರು

(ವಿಶೇಷ ಸೂಚನೆ: ನನ್ನ ಪ್ರಶ್ನೆ ಹಾಗೂ ಉತ್ತರದ ಮೇಲ್ ಸಂಬಂಧಿಸಿದ ಮಾಹಿತಿಯನ್ನು ಕಾಮೆಂಟ್ ಬಾಕ್ಸಿನಲ್ಲಿ ಹಾಕಿದ್ದೇನೆ)