ಬೆಂಗಳೂರು ಚೆನ್ನೈ ಪಯಣ ಇನ್ನು 4 ಗಂಟೆ, ಕ್ಷಿಪ್ರ ಸಂಚಾರಕ್ಕೆ ಮುನ್ನುಡಿ ಬರೆಯಲಿದೆ ಭಾರತೀಯ ರೈಲ್ವೆಯ ವಂದೇ ಭಾರತ್
Train Route: ಔದ್ಯಮಿಕ ಮಹತ್ವ ಹೊಂದಿರುವ ಬೆಂಗಳೂರು ಮತ್ತು ಚೆನ್ನೈ ನಗರಗಳನ್ನು ಸಂಪರ್ಕಿಸುವ ರೈಲು ಪ್ರಯಾಣದ ಅವಧಿ ಇನ್ನು ಕೇವಲ 4 ಗಂಟೆ ಮಾತ್ರ. ಹೌದು ಈ ರೀತಿ ಕ್ಷಿಪ್ರ ಸಂಚಾರಕ್ಕೆ ಭಾರತೀಯ ರೈಲ್ವೆಯ ವಂದೇ ಭಾರತ್ ಮುನ್ನುಡಿ ಬರೆಯಲಿದೆ. ಇದರ ವಿವರ ಇಲ್ಲಿದೆ.
Train Route: ಬೆಂಗಳೂರು- ಚೆನ್ನೈ ರೈಲು ಮಾರ್ಗದ ಸಂಚಾರಕ್ಕೆ ವೇಗ ಸಿಕ್ಕಿದ್ದು ಎರಡು ನಗರಗಳ ನಡುವಿನ ಪಯಣದ ಅವಧಿ ಈಗ ಇರುವ ಅವಧಿಗಿಂತ 25 ನಿಮಿಷ ಇಳಿಕೆಯಾಗಲಿದೆ. ಭಾರತೀಯ ರೈಲ್ವೆಯ ವಂದೇ ಭಾರತ್ ಈ ವಿಚಾರದಲ್ಲಿ ಮುನ್ನುಡಿ ಬರೆಯಲಿದೆ. ಸರಳವಾಗಿ ಹೇಳಬೇಕು ಎಂದರೆ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಈ ಎರಡು ನಗರಗಳ ನಡುವಿನ ಸಂಚಾರವನ್ನು ಕೇವಲ 4 ಗಂಟೆಗಳಲ್ಲಿ ಮುಗಿಸಲಿದೆ. ಈಗ ಅದು 4 ಗಂಟೆ 25 ನಿಮಿಷ ತೆಗೆದುಕೊಳ್ಳುತ್ತಿದೆ. ಇದೇ ರೀತಿ ಶತಾಬ್ದಿ ಎಕ್ಸ್‌ಪ್ರೆಸ್ ರೈಲು ತನ್ನ ಪ್ರಯಾಣದಲ್ಲಿ 20 ನಿಮಿಷ ಉಳಿಸಲಿದೆ ಎಂದು ಮನಿ ಕಂಟ್ರೋಲ್ ವರದಿ ಮಾಡಿದೆ. ಈ ಬದಲಾವಣೆಗಳು ಹೆಚ್ಚಿನ ಬೇಡಿಕೆಯ ಕಾರಿಡಾರ್‌ನಲ್ಲಿ ರೈಲಿನ ವೇಗವನ್ನು ಹೆಚ್ಚಿಸುವ ನೈಋತ್ಯ ರೈಲ್ವೆನ ವಿಸ್ತೃತ ಪ್ರಯತ್ನದ ಭಾಗವಾಗಿರುವುದಾಗಿ ವರದಿ ವಿವರಿಸಿದೆ.
ಬೆಂಗಳೂರು- ಜೋಳಾರ್‌ಪೇಟ್ಟೈ ನಡುವೆ ರೈಲು ವೇಗದ ಪ್ರಯೋಗ
ನೈಋತ್ಯ ರೈಲ್ವೆಯ ಬೆಂಗಳೂರು ವಿಭಾಗವು ಬೆಂಗಳೂರು-ಜೋಲಾರ್‌ಪೆಟ್ಟೈ ವಿಭಾಗದಲ್ಲಿ ರೈಲಿನ ವೇಗದ ಪ್ರಯೋಗವನ್ನು ಡಿಸೆಂಬರ್ 5 ರಂದು ನಡೆಸಿತು. ರೈಲಿನ ವೇಗದ ಮಿತಿಯನ್ನು ಗಂಟೆಗೆ 110 ಕಿಮೀನಿಂದ 130 ಕಿಮೀಗೆ ಹೆಚ್ಚಿಸುವ ಸಾಧ್ಯತೆಯನ್ನು ಅಂದಾಜಿಸುವುದಕ್ಕಾಗಿ ಈ ಪ್ರಯೋಗವನ್ನು ನಡೆಸಿತ್ತು. ರೈಲ್ವೆ ಸುರಕ್ಷತಾ ಆಯುಕ್ತರು ಅನುಮೋದನೆ ನೀಡಿದ ನಂತರ ಪರಿಷ್ಕೃತ ವೇಗವನ್ನು ಜಾರಿಗೆ ತರಲಾಗುತ್ತದೆ. ಅನುಮೋದನೆ ಸಿಕ್ಕ ಬಳಿಕ ಗಂಟೆಗೆ 130 ಕಿಮೀ ವೇಗವನ್ನು ಬೆಂಗಳೂರು ಚೆನ್ನೈ ರೈಲು ಮಾರ್ಗಕ್ಕೆ ಅನ್ವಯಿಸಲಾಗುತ್ತದೆ. ಈಗಾಗಲೇ ಚೆನ್ನೈ ಜೋಲಾರ್‌ಪೆಟ್ಟೈ ಮಾರ್ಗ ಈ ವೇಗವನ್ನು ಬೆಂಬಲಿಸಿದೆ. ನವೀಕರಿಸಿದ ವೇಗದ ಮಿತಿಗಳು ಈ ಹೆಚ್ಚಿನ ಸಾಂದ್ರತೆಯ ಕಾರಿಡಾರ್‌ನಲ್ಲಿ ಪ್ರತಿದಿನ ಕಾರ್ಯನಿರ್ವಹಿಸುವ ಎರಡು ವಂದೇ ಭಾರತ್ ಮತ್ತು ಎರಡು ಶತಾಬ್ದಿ ರೈಲುಗಳಿಗೆ ಪ್ರಯೋಜನವನ್ನು ಉಂಟುಮಾಡಲಿದೆ. ಬೆಂಗಳೂರಿನ ಟೆಕ್ ಮತ್ತು ಸ್ಟಾರ್ಟ್‌ಅಪ್ ಹಬ್‌ಗಳನ್ನು ಚೆನ್ನೈನ ಆಟೋಮೊಬೈಲ್ ಉತ್ಪಾದನೆ ಮತ್ತು ಕೈಗಾರಿಕಾ ವಲಯಗಳೊಂದಿಗೆ ಸಂಪರ್ಕಿಸುವ ಈ ಮಾರ್ಗವು ಔದ್ಯಮಿಕವಾಗಿ ಮಹತ್ವದ್ದಾಗಿದೆ.
ಹೊಸ ವಂದೇ ಭಾರತ್ ರೈಲುಗಳ ಸಂಚಾರ
ಪ್ರಧಾನಿ ನರೇಂದ್ರ ಮೋದಿ ಅವರು ಆಗಸ್ಟ್‌ನಲ್ಲಿ, ಉತ್ತರ ಪ್ರದೇಶ, ತಮಿಳುನಾಡು ಮತ್ತು ಕರ್ನಾಟಕದಲ್ಲಿ ಸಂಪರ್ಕವನ್ನು ಹೆಚ್ಚಿಸಲು ಮೂರು ಹೊಸ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳಿಗೆ ವೀಡಿಯೊ ಕಾನ್ಫರೆನ್ಸಿಂಗ್ ಮೂಲಕ ಚಾಲನೆ ನೀಡಿದರು ಎಂದು ರೈಲ್ವೆ ಸಚಿವಾಲಯ ತಿಳಿಸಿತ್ತು. 100 ಕ್ಕೂ ಹೆಚ್ಚು ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳ ಜಾಲಕ್ಕೆ ಹೊಸ ಮೂರು ರೈಲುಗಳು ಸೇರ್ಪಡೆಯಾಗಿದ್ದು, 280 ಕ್ಕೂ ಹೆಚ್ಚು ಜಿಲ್ಲೆಗಳನ್ನು ಸಂಪರ್ಕಿಸುತ್ತವೆ. ಪ್ರಧಾನಿ ಮೋದಿ ಅವರು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಉದ್ಘಾಟಿಸಿದ ಮೂರು ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳಿವು- ಒಂದು ಚೆನ್ನೈ ಸೆಂಟ್ರಲ್‌ನಿಂದ ನಾಗರ್‌ಕೋಯಿಲ್‌ಗೆ, ಎರಡನೆಯದು ಮಧುರೈನಿಂದ ಬೆಂಗಳೂರು ಕಂಟೋನ್ಮೆಂಟ್‌ಗೆ ಮತ್ತು ಮೂರನೆಯದು ಮೀರತ್ ಸಿಟಿ-ಲಕ್ನೋದಿಂದ ಸಂಚರಿಸುತ್ತದೆ.
ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳ ಸಂಚಾರವು ಮಧ್ಯಮ ದೂರದ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ಸೇವೆಯಾಗಿದೆ. ಇದನ್ನು ಭಾರತೀಯ ರೈಲ್ವೇ ನಿರ್ವಹಿಸುತ್ತಿದ್ದು, ಇದರಲ್ಲಿ ಕಾಯ್ದಿರಿಸಿದ , ಹವಾನಿಯಂತ್ರಿತ ಚೇರ್ ಕಾರ್ ಸೇವೆ ಲಭ್ಯವಿದೆ. 800 ಕಿಮೀ (500 ಮೈಲಿ) ಗಿಂತ ಕಡಿಮೆ ಅಂತರದಲ್ಲಿರುವ ಅಥವಾ ಅಸ್ತಿತ್ವದಲ್ಲಿರುವ ಸೇವೆಗಳೊಂದಿಗೆ ಪ್ರಯಾಣಿಸಲು ಹತ್ತು ಗಂಟೆಗಳಿಗಿಂತ ಕಡಿಮೆ ಸಮಯ ತೆಗೆದುಕೊಳ್ಳುವ ನಗರಗಳನ್ನು ಈ ರೈಲುಗಳು ಸಂಪರ್ಕಿಸುತ್ತವೆ. ಇದು ಭಾರತ ಸರ್ಕಾರದ ' ಮೇಕ್ ಇನ್ ಇಂಡಿಯಾ ' ಉಪಕ್ರಮದ ಭಾಗವಾಗಿದ್ದು, 2019ರ ಫೆಬ್ರವರಿ 15ರಂದು ಮೊದಲ ರೈಲು ಸೇವೆ ಶುರುವಾಯಿತು.