ಕನ್ನಡ ಸುದ್ದಿ  /  ಕರ್ನಾಟಕ  /  Transgender Survey: ಮೈಸೂರು, ವಿಜಯಪುರಗಳಲ್ಲಿ ಮಾ.10ರಿಂದ ಟ್ರಾನ್ಸ್‌ಜೆಂಡರ್ಸ್‍ಗಳಿಂದಲೇ ಟ್ರಾನ್ಸ್‌ಜೆಂಡರ್ಸ್‍ಗಳ ಸಮೀಕ್ಷೆ

Transgender Survey: ಮೈಸೂರು, ವಿಜಯಪುರಗಳಲ್ಲಿ ಮಾ.10ರಿಂದ ಟ್ರಾನ್ಸ್‌ಜೆಂಡರ್ಸ್‍ಗಳಿಂದಲೇ ಟ್ರಾನ್ಸ್‌ಜೆಂಡರ್ಸ್‍ಗಳ ಸಮೀಕ್ಷೆ

Transgender Survey: ಸಮೀಕ್ಷೆ ಕಾರ್ಯ ಕೈಗೊಳ್ಳಲು ಈಗಾಗಲೇ ಪೂರ್ವ ತಯಾರಿ ಮಾಡಿಕೊಳ್ಳಲಾಗಿದೆ. ವಿದ್ಯುನ್ಮಾನ ನಾಗರಿಕ ಸೇವಾ ವಿತರಣಾ ನಿರ್ದೇಶನಾಲಯದ ಮೂಲಕ "KARMANI Web Application ನ್ನು ಸಿದ್ದಪಡಿಸಿದ್ದು, ಅದರ ಮೂಲಕ ಮಂಗಳಮುಖಿಯರ (ಟ್ರಾನ್ಸ್‌ಜೆಂಡರ್‌) ಸಮೀಕ್ಷೆ ಕೈಗೊಳ್ಳಲು ನಿರ್ಧರಿಸಲಾಗಿದೆ ಎಂದು ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮ ತಿಳಿಸಿದೆ.

ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ (REUTERS/Demetrius Freeman/File Photo)

ಬೆಂಗಳೂರು: ರಾಜ್ಯಾದ್ಯಂತ ಟ್ರಾನ್ಸ್‌ಜೆಂಡರ್ಸ್‍ ಮೂಲ ಹಂತದ ಸಮೀಕ್ಷೆಯನ್ನು ಟ್ರಾನ್ಸ್‌ಜೆಂಡರ್ಸ್‌ಗಳಿಂದಲೇ ಮಾಡಿಸಲು ರಾಜ್ಯ ಸರ್ಕಾರ ಮುಂದಾಗಿದೆ. ವಿಜಯಪುರ ಮತ್ತು ಮೈಸೂರು ಜಿಲ್ಲೆಗಳಲ್ಲಿ ಮಾ.10 ರಿಂದ ಏಪ್ರಿಲ್‌ 24ರ ತನಕ 45 ದಿನ ಈ ಸಮೀಕ್ಷೆ ಪ್ರಾಯೋಗಿಕವಾಗಿ ನಡೆಯಲಿದೆ. ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮ ಈ ಸಮೀಕ್ಷೆಯನ್ನು ಮಾಡಿಸುತ್ತಿದೆ.

ಟ್ರೆಂಡಿಂಗ್​ ಸುದ್ದಿ

ನಿಮಗದ ವ್ಯವಸ್ಥಾಪಕ ನಿರ್ದೇಶಕರು ನೀಡಿದ ಮಾಹಿತಿ ಪ್ರಕಾರ, ಸಮೀಕ್ಷೆ ಕಾರ್ಯ ಕೈಗೊಳ್ಳಲು ಈಗಾಗಲೇ ಪೂರ್ವ ತಯಾರಿ ಮಾಡಿಕೊಳ್ಳಲಾಗಿದೆ. ವಿದ್ಯುನ್ಮಾನ ನಾಗರಿಕ ಸೇವಾ ವಿತರಣಾ ನಿರ್ದೇಶನಾಲಯದ ಮೂಲಕ "KARMANI Web Application ನ್ನು ಸಿದ್ದಪಡಿಸಿದ್ದು, ಅದರ ಮೂಲಕ ಮಂಗಳಮುಖಿಯರ (ಟ್ರಾನ್ಸ್‌ಜೆಂಡರ್‌) ಸಮೀಕ್ಷೆ ಕೈಗೊಳ್ಳಲು ನಿರ್ಧರಿಸಲಾಗಿದೆ. ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ.

ಈ ಸಮೀಕ್ಷೆಯನ್ನು ತಾಲೂಕುಮಟ್ಟದಲ್ಲಿ ಪೂರ್ವ ನಿಗದಿತ ಸ್ಥಳಗಳಲ್ಲಿ 45 ದಿನಗಳ ಕಾಲ ಸಮೀಕ್ಷೆ ಕಾರ್ಯ ಕೈಗೊಳ್ಳಲಾಗುತ್ತಿದೆ. ನಿಗದಿತ ಸ್ಥಳಗಳ ಮಾಹಿತಿಯನ್ನು ಒದಗಿಸಲಾಗುವುದು. ಟ್ರಾನ್ಸ್ ಜೆಂಡರ್ ಸಮುದಾಯದವರ ಮೂಲಕವೇ ಸಮೀಕ್ಷೆ ಕಾರ್ಯ ಕೈಗೊಳ್ಳುತ್ತಿರುವುದು ಸದರಿ ಸಮೀಕ್ಷೆಯ ವಿಶೇಷತೆಯಾಗಿದೆ.

ಹೀಗಾಗಿ ಸಮೀಕ್ಷೆ ನಡೆಸುವ ಸಮುದಾಯದ ವ್ಯಕ್ತಿಗಳಿಗೆ ಈಗಾಗಲೇ ತಾಂತ್ರಿಕ ತರಬೇತಿ ನೀಡಲಾಗಿದೆ ಹಾಗೂ ಲಿಂಗತ್ವ ಅಲ್ಪಸಂಖ್ಯಾತರ ಬಗ್ಗೆ ಅರಿವು ಮೂಡಿಸುವ ತರಬೇತಿಗಳನ್ನು ನೀಡಲಾಗಿದೆ. ಮೈಸೂರು ಮತ್ತು ವಿಜಯಪುರ ಜಿಲ್ಲೆಗಳ ಸಂಬಂಧಪಟ್ಟ ಇಲಾಖಾ ಅಧಿಕಾರಿಗಳಿಗೂ ಹಾಗೂ ಸಿಬ್ಬಂದಿಗಳಿಗೂ ಸಹ ತರಬೇತಿಯನ್ನು ನೀಡಲಾಗಿದೆ. ಮೂಲ ಹಂತದ ಸಮೀಕ್ಷೆಯಲ್ಲಿ 7 ವಿಭಾಗಗಳಡಿ - ವ್ಯಕ್ತಿಗಳ ವಿವರಗಳು, ಶಿಕ್ಷಣ, ಉದ್ಯೋಗ, ವಸತಿ, ಆರೋಗ್ಯ, ಸಾಮಾಜಿಕ ಭದ್ರತೆ ಮತ್ತು ಹೆಚ್ಚುವರಿ ಮಾಹಿತಿಯನ್ನು ಸಂಗ್ರಹಿಸಲಾಗುವುದು.

ಮೂಲಹಂತದ ಸಮೀಕ್ಷೆಯ ಉದ್ದೇಶ

  • ಟ್ರಾನ್ಸ್‌ಜೆಂಡರ್ಸ್‍ ಅನ್ನು ಮುಖ್ಯ ವಾಹಿನಿಗೆ ತರುವ ಸಲುವಾಗಿ ಅಗತ್ಯವಾದ ಸೌಲಭ್ಯಗಳನ್ನು ಒದಗಿಸುವ ಸಲುವಾಗಿ ಮೂಲ ಹಂತದ ಸಮೀಕ್ಷೆಯನ್ನು ಕೈಗೊಳ್ಳಲಾಗುತ್ತಿದೆ.
  • ಉದ್ಯೋಗ ಮತ್ತು ಶಿಕ್ಷಣ ಮೀಸಲಾತಿಯನ್ನು ಒದಗಿಸಲು ಈ ಸಮುದಾಯದ ಜನಸಂಖ್ಯೆ, ಶೈಕ್ಷಣಿಕ ಮಟ್ಟದ, ಸಾಮಾಜಿಕ ಹಾಗೂ ಆರ್ಥಿಕ ಸ್ಥಿತಿಗತಿಗಳ ಮಾಹಿತಿಯು ಅತೀ ಅಗತ್ಯವಾಗಿರುತ್ತದೆ.
  • ಮಾಹಿತಿ ಕೊರತೆಯು ಸಾಮಾಜಿಕ ನ್ಯಾಯ ಸ್ಥಾಪನೆ ಹಾಗೂ ಸಬಲೀಕರಣಕ್ಕೆ ಅಡ್ಡಿಯಾಗಿರುತ್ತದೆ. ಏಕೆಂದರೆ ಈ ಸಮುದಾಯದ ಅಭ್ಯುದಯಕ್ಕೆ ಪೂರಕವಾದ ಯೋಜನೆಗಳನ್ನು ರೂಪಿಸಲು ಹಾಗೂ ಅನುಷ್ಠಾನಗೊಳಿಸಲು ಮೂಲದತ್ತಾಂಶ ಅವಶ್ಯಕತೆ ಇದೆ.

ಈ ನಿಟ್ಟಿನಲ್ಲಿ ಸಮೀಕ್ಷೆ ಸಹಕಾರಿಯಾಗಲಿದೆ ಎಂಬ ಅಭಿಪ್ರಾಯವನ್ನು ವ್ಯವಸ್ಥಾಪಕ ನಿರ್ದೇಶಕರು ವ್ಯಕ್ತಪಡಿಸಿದ್ದಾರೆ.

ಟ್ರಾನ್ಸ್‌ಜೆಂಡರ್ಸ್‍ ಮೂಲ ಹಂತದ ಸಮೀಕ್ಷೆಯು ವಿವಿಧ ಹಂತಗಳಲ್ಲಿ ಸಮನ್ವಯ, ಸಹಕಾರವನ್ನು ಸಾಧಿಸಿ, ಮತ್ತು ಯಶಸ್ವಿಯಾಗಿ ಸಮೀಕ್ಷೆಯನ್ನು ಕೈಗೊಳ್ಳಲು ಕಾರ್ಯಕ್ರಮ ನಿರ್ವಹಣಾ ಸಮಿತಿ, ಮೇಲುಸ್ತುವಾರಿ ಮತ್ತು ಮೌಲ್ಯಮಾಪನ ಸಮಿತಿ,ಹಣಕಾಸು ನಿರ್ವಹಣಾ ಸಮಿತಿ, ಸಂವಹನ ಸಮಿತಿ ಮತ್ತು ತರಬೇತಿ ಸಮಿತಿಗಳನ್ನು ರಚಿಸಲಾಗಿದೆ.

ಜಿಲ್ಲಾ ಮಟ್ಟದಲ್ಲಿ ಸಂಬಂಧಪಟ್ಟ ಜಿಲ್ಲಾಧಿಕಾರಿಗಳು ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರು, ಸಮನ್ವಯತೆಯಲ್ಲಿ ಸಮೀಕ್ಷೆ ಕಾರ್ಯ ಕೈಗೊಳ್ಳಲಾಗುತ್ತಿದೆ ಎಂದು ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕರು ತಿಳಿಸಿದ್ದಾರೆ.

IPL_Entry_Point