ಅಯೋಧ್ಯೆ ರಾಮ ಮಂದಿರ ಉದ್ಘಾಟನೆ; ಮನೆಮನ ಮುಟ್ಟಲಿ ರಾಮಾಯಣ ಗ್ರಂಥ, ಪುಸ್ತಕ
ಕನ್ನಡ ಸುದ್ದಿ  /  ಕರ್ನಾಟಕ  /  ಅಯೋಧ್ಯೆ ರಾಮ ಮಂದಿರ ಉದ್ಘಾಟನೆ; ಮನೆಮನ ಮುಟ್ಟಲಿ ರಾಮಾಯಣ ಗ್ರಂಥ, ಪುಸ್ತಕ

ಅಯೋಧ್ಯೆ ರಾಮ ಮಂದಿರ ಉದ್ಘಾಟನೆ; ಮನೆಮನ ಮುಟ್ಟಲಿ ರಾಮಾಯಣ ಗ್ರಂಥ, ಪುಸ್ತಕ

Ayodhya Ram Mandir: ಅಯೋಧ್ಯೆ ರಾಮ ಮಂದಿರದಲ್ಲಿ ನಾಡಿದ್ದು ಸೋಮವಾರ ಬಾಲರಾಮ ವಿಗ್ರಹದ ಪ್ರಾಣ ಪ್ರತಿಷ್ಠೆ ನಡೆಯಲಿದೆ. ಈ ಸಂದರ್ಭದಲ್ಲಿ ವೈಯಕ್ತಿಕವಾಗಿ ನಾವೇನು ಮಾಡಬಹುದು ಎಂಬ ಆಲೋಚನೆ ಮನಸ್ಸಿನಲ್ಲಿದ್ದರೆ, ಇಲ್ಲಿದೆ ಒಂದು ಸರಳ ಉಪಾಯ. ಮನೆ ಮನೆಗೆ ರಾಮಾಯಣ ತಲುಪುವಂತೆ ಮಾಡಬಹುದು. ಹೇಗೆ ಅಂತೀರಾ…

ಅಯೋಧ್ಯೆ ರಾಮ ಮಂದಿರದಲ್ಲಿ ಬಾಲರಾಮನ ಪ್ರಾಣ ಪ್ರತಿಷ್ಠೆ ನಿಮಿತ್ತ ಮನೆಮನಕ್ಕೆ ತಲುಪಲಿ ರಾಮಾಯಣ ಮೂಲಗ್ರಂಥ ಮತ್ತು ಪುಸ್ತಕಗಳು. (ಸಾಂಕೇತಿಕ ಚಿತ್ರ)
ಅಯೋಧ್ಯೆ ರಾಮ ಮಂದಿರದಲ್ಲಿ ಬಾಲರಾಮನ ಪ್ರಾಣ ಪ್ರತಿಷ್ಠೆ ನಿಮಿತ್ತ ಮನೆಮನಕ್ಕೆ ತಲುಪಲಿ ರಾಮಾಯಣ ಮೂಲಗ್ರಂಥ ಮತ್ತು ಪುಸ್ತಕಗಳು. (ಸಾಂಕೇತಿಕ ಚಿತ್ರ)

ಅಯೋಧ್ಯೆ ಶ್ರೀರಾಮ ಜನ್ಮಭೂಮಿಯ ರಾಮಮಂದಿರದಲ್ಲಿ ಈಗಾಗಲೇ ದೇಶದ ಬಹುದೊಡ್ಡ ಹಬ್ಬ ಶುರುವಾಗಿದೆ. ದೇಶ ವಿದೇಶಗಳಲ್ಲಿ ಕೂಡ ರಾಮ ಭಕ್ತಿ, ರಾಮಾಯಣಗಳ ಹವಾ ಕಾಣತೊಡಗಿದೆ. ಬಹುತೇಕ ಪ್ರತಿಯೊಬ್ಬರೂ ತಮ್ಮಿಂದಾದ ರಾಮಸೇವೆ ಮಾಡಲಾರಂಭಿಸಿದ್ದಾರೆ.

ಸೋಷಿಯಲ್ ಮೀಡಿಯಾ ಪೋಸ್ಟ್‌ಗಳನ್ನು ಗಮನಿಸಿದರೆ ಅಲ್ಲೂ ಇಂತಹ ಪ್ರಯತ್ನಗಳಿಗೆ ಸಂಬಂಧಿಸಿದ ಮಾಹಿತಿಗಳಿರುವುದನ್ನು ಗಮನಿಸಬಹುದು. ಕೆಲವರು ಐಡಿಯಾಗಳನ್ನು ಶೇರ್ ಮಾಡಿದರೆ, ಇನ್ನು ಕೆಲವರು ತಾವೇನು ಮಾಡಿದ್ದೇವೆ, ಮಾಡುತ್ತಿದ್ದೇವೆ ಎಂಬ ಮಾಹಿತಿಯನ್ನು ಹಂಚಿಕೊಳ್ಳುತ್ತಿದ್ದಾರೆ.

ಇದರಲ್ಲಿ ರಾಮಾಯಣ ಮತ್ತು ರಾಮನಿಗೆ ಸಂಬಂಧಿಸಿದ ಪುಸ್ತಕಗಳನ್ನು ಮನೆಗಳಿಗೆ ತಲುಪಿಸುವ ಪ್ರಯತ್ನವೂ ಒಂದು. ಅಂತಹ ಎರಡು ಆಯ್ದ ಪ್ರಯತ್ನಗಳ ಪೋಸ್ಟ್‌ ಇಲ್ಲಿವೆ. ಮೊದಲನೇಯದ್ದು ಲೇಖಕ ವಿಶ್ವನಾಥ ಸುಂಕಸಾಲ ಅವರು ಬರೆದ ಪೋಸ್ಟ್, ಎರಡನೇಯದ್ದು ಸಾಹಿತ್ಯ ಭಾರತಿಯ ಪೋಸ್ಟ್.

ರಾಮಾಯಣದ ಮೂಲಗ್ರಂಥಗಳು ಮನೆಮನಕ್ಕೆ ತಲುಪಲಿ; ವಿಶ್ವನಾಥ ಸುಂಕಸಾಲ ಅಭಿಮತ

ರಾಮಪರ್ವ ಆರಂಭವಾಗಿದೆ. ನಾಡಿದ್ದು ಪ್ರಾಣಪ್ರತಿಷ್ಠೆ ನಡೆಯಲಿದೆ. ಈ ಸಂದರ್ಭದಲ್ಲಿ ನಾವೇನಾದರೂ ಇದಕ್ಕೆ ಪೂರಕವಾಗಿ ಮಾಡಬೇಕು. ಆ ಮೂಲಕ ನಮ್ಮನ್ನು ನಾವು ರಾಮನೊಂದಿಗೆ ಜೋಡಿಸಿಕೊಳ್ಳಬೇಕು.

ನಾವು ಮಾಡಬಹುದಾದ ಒಂದು ದೊಡ್ಡ ಕಾರ್ಯವೆಂದರೆ, ರಾಮಾಯಣವನ್ನು ಎಲ್ಲೆಡೆ ತಲುಪಿಸುವುದು. ಬೌದ್ಧಿಕವಾಗಿ, ತಾತ್ತ್ವಿಕವಾಗಿ, ಮೌಲ್ಯದ ದೃಷ್ಟಿಯಿಂದ ನಮ್ಮ ಮುಂದಿನ ತಲೆಮಾರು ಗಟ್ಟಿಯಾಗಬೇಕೆಂದರೆ ಮೂಲಗ್ರಂಥಗಳ ಅಧ್ಯಯನ, ಅವುಗಳ ಪ್ರಸರಣ ಆಗಲೇಬೇಕು.

ರಾಮಮಂದಿರ ಸಾವಿರಾರು ವರ್ಷಗಳ ಕಾಲ ಇರುವಂತೆ, ಇವತ್ತು ನಾವು ಮಾಡುವ ಈ ಕೈಂಕರ್ಯವೂ ಶಾಶ್ವತವಾಗಿ ನೆಲೆ ನಿಲ್ಲುವಂತಾಗಬೇಕು. ಅದಕ್ಕೆ ನಾವು ಮಾಡಬಹುದಾದ ಒಂದು ಸಣ್ಣ ಕಾರ್ಯವೇ ರಾಮಾಯಣ ಪುಸ್ತಕಗಳ ಹಂಚಿಕೆ.

ಭಾರತ ದರ್ಶನ ಪ್ರಕಾಶನವು 66 ವರ್ಷಗಳಿಂದ ರಾಮಾಯಣ, ಮಹಾಭಾರತ, ಭಾಗವತ, ಹರಿವಂಶ, ಮಾರ್ಕಂಡೇಯ ಪುರಾಣ, ವಿಷ್ಣುಪುರಾಣಗಳನ್ನು ಕನ್ನಡದಲ್ಲಿ ಶುದ್ಧವಾಗಿ, ಮೂಲ ಶ್ಲೋಕಗಳ ಜೊತೆಗೆ, ಮೂಲಕ್ಕೆ ಅನುಸಾರವಾಗಿ ಸರಳವಾದ ಭಾಷೆಯಲ್ಲಿ ವಿವರಣೆಯೊಂದಿಗೆ, ಹೃದ್ಯವಾದ ನಿರೂಪಣೆಯ ಜೊತೆಗೆ ಅಗತ್ಯವಿದ್ದಲ್ಲಿ ಟಿಪ್ಪಣಿಗಳನ್ನು ಸೇರಿಸಿ ವಿಶೇಷ ವಿಚಾರಗಳನ್ನು ಕೂಡ ಒಳಗೊಂಡು ಅನೇಕ ಸಂಪುಟಗಳಲ್ಲಿ ಪ್ರಕಾಶಿಸುತ್ತಾ ಬರುತ್ತಿದೆ.

ಅತ್ಯಂತ ಕಡಿಮೆ ಬೆಲೆಗೆ ಈ ಪುಸ್ತಕಗಳನ್ನು ಒದಗಿಸುತ್ತಾ ಕಳೆದ 66 ವರ್ಷಗಳಿಂದ ನಾಡಿನ ಆದ್ಯಂತ ಭಾರತೀಯ ಸಂಸ್ಕೃತಿಯ ಪ್ರಸಾರದಲ್ಲಿ ತೊಡಗಿಕೊಂಡಿರುವ ಈ ಸಂಸ್ಥೆಯ ರಾಮಾಯಣದ ಹನ್ನೊಂದು ಸಂಪುಟಗಳನ್ನು ನಾವು ಕೊಂಡುಕೊಳ್ಳುವ ಮೂಲಕ, ಹತ್ತಿರದ ನಾಲ್ಕಾರು ಶಾಲೆಗಳಿಗೆ ಪುಸ್ತಕ ದಾನದ ಮೂಲಕ, ನಮ್ಮ ಬಂಧು ಬಳಗಕ್ಕೆ ಉಡುಗೊರೆಯಾಗಿ ಕೊಡುವ ಮೂಲಕ, ಗ್ರಂಥಾಲಯಗಳಿಗೆ ನೀಡುವ ಮೂಲಕ ಈ ಕ್ಷಣಗಳನ್ನು ಅಮರವಾಗಿಸಿಕೊಳ್ಳಬಹುದಾಗಿದೆ.

ರಾಮಾಯಣವೆಂಬ ಮಹಾನದಿಯ ಹರಿವಿಗೆ ನಮ್ಮದೂ ಒಂದು ಬೊಗಸೆ ಶ್ರದ್ಧೆ ಸಮರ್ಪಿತವಾಗಲಿ. ವಿವರಣೆಗಳನ್ನು ಓದಿ, ಪ್ರಕಾಶಕರನ್ನು ಸಂಪರ್ಕಿಸಬಹುದಾಗಿದೆ. ಪ್ರಕಾಶಕರ ಸಂಪರ್ಕ ಸಂಖ್ಯೆ : +917892082483

  • ವಿಶ್ವನಾಥ ಸುಂಕಸಾಲ

ರಾಮಕಥೆಯನ್ನು ಓದೋಣ, ನಮ್ಮ ಪರಿಚಿತರು ಆಪ್ತರಿಗೂ ಓದಿಸೋಣ; ಸಾಹಿತ್ಯ ಭಾರತಿ

“ಅಯೋಧ್ಯೆ ರಾಮಜನ್ಮಭೂಮಿಯಲ್ಲಿ ಭವ್ಯ ರಾಮಮಂದಿರ ನಿರ್ಮಾಣವಾಗುತ್ತಿದೆ. ಪುರುಷೋತ್ತಮನ ದಿವ್ಯಮೂರ್ತಿ ಪ್ರತಿಷ್ಠಾಪನೆಗೊಳ್ಳಲಿದೆ. ತನ್ನದೇ ನೆಲದಲ್ಲಿ ಐದು ಶತಮಾನಗಳ ತರುವಾಯ ರಾಮ ವಿರಾಜಮಾನನಾಗುತ್ತಿದ್ದಾನೆ. ಇಂಥ ಸಂದರ್ಭದಲ್ಲಿ, ನಮ್ಮ ನಮ್ಮ ಮನೆಗಳಿಗೆ-ಮನಗಳಿಗೆ ಆ ರಾಮನನ್ನು ಬರಮಾಡಿಕೊಳ್ಳಬೇಡವೆ?” ಎಂಬ ಪ್ರಶ್ನೆಯೊಂದಿಗೆ ಸಾಹಿತ್ಯ ಭಾರತಿಯು ರಾಮಾಯಣ ಓದಬೇಕಾದ ಅಗತ್ಯವನ್ನು ಸ್ಮರಿಸಿದೆ.

ಶ್ರೀರಾಮಾಯಣ_ಕಥಾಸಾರ ಇದು ಸರಳ ಮತ್ತು ಸುಂದರ ಭಾಷೆಯಲ್ಲಿರುವ ಗದ್ಯ ರಾಮಾಯಣ. ಕನ್ನಡ ಸಾಹಿತ್ಯ-ಸಂಸ್ಕೃತಿ-ಪತ್ರಿಕಾಕ್ಷೇತ್ರದಲ್ಲಿ ಮೊದಲ ಸಾಲಿನ ಮಹನೀಯರಲ್ಲಿ ಒಬ್ಬರು, ಸುಬೋಧ ರಾಮರಾಯರು. ಶಾಲಾ ಅಧ್ಯಾಪಕರಾಗಿದ್ದು, ತಮ್ಮ ಉದ್ಯೋಗಕ್ಕೆ ರಾಜಿನಾಮೆ ನೀಡಿ, ಸಾಹಿತ್ಯ ಮತ್ತು ಪತ್ರಿಕಾಕ್ಷೇತ್ರಕ್ಕೆ ದುಮುಕಿದ ರಾಮರಾಯರು ತಾವೇ ಪ್ರಾರಂಭಿಸಿದ 'ಸುಬೋಧ' ಮಾಸಪತ್ರಿಕೆಯನ್ನು ನಿರಂತರ ನಡೆಸುತ್ತಲೇ ರಚಿಸಿದ ಕೃತಿಗಳು ನೂರ ಅರವತ್ತಕ್ಕೂ ಹೆಚ್ಚು ಎಂಬುದನ್ನು ನೋಡುವಾಗ, ಅವರ ಸಾಮರ್ಥ್ಯ ಮತ್ತು ಅಗಾಧ ಪ್ರತಿಭೆಯನ್ನು ಕುರಿತು ಬೆರಗಾಗುತ್ತದೆ. ಸುಬೋಧ ರಾಮರಾಯರ ಶ್ರೀರಾಮಾಯಣ ಕಥಾಸಾರವನ್ನು ಒಮ್ಮೆಯಾದರೂ ಓದಲೇಬೇಕು ಎಂದು ಸಾಹಿತ್ಯ ಭಾರತಿ ಹೇಳಿದೆ.

ಶ್ರೀರಾಮಾಯಣ ಕಥಾಸಾರವನ್ನು ಖರೀದಿಸಲು 07483681708 ಸಂಖ್ಯೆಗೆ ವಾಟ್ಸ್ಆಪ್‌ ಮಾಡಬಹುದು.

ವಾಲ್ಮೀಕಿಮುನಿ ಕಟ್ಟಿಕೊಟ್ಟ ರಾಮಕಥೆಯನ್ನು ಓದುತ್ತ ಓದುತ್ತ ನಮ್ಮ ಚಿತ್ತಭಿತ್ತಿಯ ಮೇಲೆ ಪುರುಷೋತ್ತಮನ ಚಿತ್ರ ಬರೆಯಬೇಕಲ್ಲವೆ?, ಬನ್ನಿ, ಶ್ರೀರಾಮಕಥೆಯನ್ನು ಓದೋಣ... ನಮ್ಮ ಪರಿಚಿತರು-ಆಪ್ತರಿಗೂ ಓದಿಸೋಣ....! ಏನಂತೀರಿ..

----------------------

'ಮನೆ-ಮನದಲ್ಲಿ ಶ್ರೀರಾಮ' ಸರಣಿಗೆ ನೀವೂ ಬರೆಯಿರಿ. ಇತರರೂ ಬರೆಯುವಂತೆ ಪ್ರೇರೇಪಿಸಿ.. ನಮ್ಮ ಇಮೇಲ್: ht.kannada@htdigital.in

Whats_app_banner