ಎಷ್ಟೊಂದ್ ಜನ ಇಲ್ಲಿ ಯಾರು ನನ್ನೋರು: ಬೆಂಗಳೂರಿನಲ್ಲಿ ಒಂಟಿತನ ಕಾಡುತ್ತೆ ಎಂದ ಪೋಸ್ಟ್‌ ಈಗ ವೈರಲ್, ಯೋಚಿಸಬೇಡ ಬ್ರೋ ಎಂದ ನೆಟ್ಟಿಗರು-trending news viral reddit post of a corporate mazdoor revealed his loneliness of living in bengaluru news uks ,ಕರ್ನಾಟಕ ಸುದ್ದಿ
ಕನ್ನಡ ಸುದ್ದಿ  /  ಕರ್ನಾಟಕ  /  ಎಷ್ಟೊಂದ್ ಜನ ಇಲ್ಲಿ ಯಾರು ನನ್ನೋರು: ಬೆಂಗಳೂರಿನಲ್ಲಿ ಒಂಟಿತನ ಕಾಡುತ್ತೆ ಎಂದ ಪೋಸ್ಟ್‌ ಈಗ ವೈರಲ್, ಯೋಚಿಸಬೇಡ ಬ್ರೋ ಎಂದ ನೆಟ್ಟಿಗರು

ಎಷ್ಟೊಂದ್ ಜನ ಇಲ್ಲಿ ಯಾರು ನನ್ನೋರು: ಬೆಂಗಳೂರಿನಲ್ಲಿ ಒಂಟಿತನ ಕಾಡುತ್ತೆ ಎಂದ ಪೋಸ್ಟ್‌ ಈಗ ವೈರಲ್, ಯೋಚಿಸಬೇಡ ಬ್ರೋ ಎಂದ ನೆಟ್ಟಿಗರು

ನಾನಾ ಕಾರಣಕ್ಕೆ ಊರು ಬಿಟ್ಟು ಬೆಂಗಳೂರು ಸೇರುವವರು ಹಲವರು. ಒಬ್ಬೊಬ್ಬರೇ ಬಂದು ದೊಡ್ಡ ದೊಡ್ಡ ಪಟ್ಟಣ ಸೇರಿದಾಗ ಅಲ್ಲಿ ಆಗುವ ವೈಯಕ್ತಿಕ ಅನುಭವಗಳು ಸೋಷಿಯಲ್‌ ಮೀಡಿಯಾ ಜಗತ್ತಿನಲ್ಲಿ ಬಹುಬೇಗ ವೈರಲ್ ಆಗಿಬಿಡ್ತಾವೆ. ಅಂತಹ ಒಂದು ಪೋಸ್ಟ್ ಇದು. ಬೆಂಗಳೂರಿನ 27ವರ್ಷದ ಯುವಕನ ರೆಡ್ಡಿಟ್ ಪೋಸ್ಟ್ ವೈರಲ್‌ ಆಗಿದ್ದು, ಎಷ್ಟೊಂದು ಜನ, ಇಲ್ಲಿ ಯಾರು ನನ್ನೋರು ಎಂದು ಕೇಳಿದಂತಿದೆ

ಬೆಂಗಳೂರು ಬದುಕು (ಸಾಂಕೇತಿಕ ಚಿತ್ರ)
ಬೆಂಗಳೂರು ಬದುಕು (ಸಾಂಕೇತಿಕ ಚಿತ್ರ)

ಬೆಂಗಳೂರು: ಮಹಾನಗರವಾದರೇನು ಒಂಟಿಯಾಗಿ ಬದುಕಬಲ್ಲೆ ಎಂಬ ಭಾವನೆ ಬಹುತೇಕರಲ್ಲಿರುತ್ತದೆ. ಆದರೂ ಭಾವನೆಗಳನ್ನು ಹಂಚಿಕೊಳ್ಳುವುದಕ್ಕೆ, ಹರಟೆ ಹೊಡೆಯುವುದಕ್ಕೆ ಒಂದಷ್ಟು ಗೆಳೆಯರು ಇರಬೇಕು. ಹಾಗಿಲ್ಲದೇ ಇದ್ದರೆ ಒಂದು ರೀತಿಯ ಏಕತಾನತೆ ಆವರಿಸಿಬಿಡುತ್ತದೆ. ಇಷ್ಟೆಲ್ಲ ಪೀಠಿಕೆ ಯಾಕೆ ಎಂದು ಹುಬ್ಬೇರಿಸಬೇಡಿ!

ಬೆಂಗಳೂರಲ್ಲಿ ಒಂಟಿಯಾಗಿ ಬದುಕು ಸಾಗಿಸುತ್ತಿರುವ 27 ವರ್ಷದ ಯುವಕನೊಬ್ಬ ಇತ್ತೀಚೆಗೆ ರೆಡ್ಡಿಟ್‌ ಎಂಬ ಸಾಮಾಜಿಕ ತಾಣದಲ್ಲಿ ಮಾಡಿದ ಪೋಸ್ಟ್ ಸದ್ಯ ಚರ್ಚೆಗೆ ಗ್ರಾಸವಾಗಿದೆ. ಒಂಟಿಯಾಗಿರುವುದು ಎಂದರೆ ಸ್ವತಂತ್ರವಾಗಿರೋದು ಎಂಬ ಭಾವನೆ ಬಲವಾಗಿರುವಾಗಲೇ, ಅದು ಹೆಚ್ಚುವರಿ ಹೊಣೆಗಾರಿಕೆಗಳಿಂದ ಕೂಡಿರುವುದು ಎಂಬುದನ್ನು ಅರ್ಥಮಾಡಿಸಿಕೊಟ್ಟಿತು ಎಂಬುದನ್ನು ಆ ಯುವಕ ವಿವರಿಸಿದ್ದು ಇದಕ್ಕೆ ಕಾರಣ. ಆದರೂ ಬೆಂಗಳೂರಿನ ಗಡಿಬಿಡಿ ಜೀವನ ತನ್ನನ್ನು ಏಕಾಂಗಿ ಮಾಡಿದ್ದು ಹೇಗೆ ಎಂಬುದನ್ನೂ ಆ ಯುವಕ ವಿವರಿಸಿದ್ದಾರೆ.

ಬೆಂಗಳೂರಲ್ಲಿ ಒಂಟಿ ಬದುಕು ಹೇಗಿರುತ್ತೆ

ಬೆಂಗಳೂರಿನಲ್ಲಿ ತನ್ನ ಒಂಟಿ ಬದುಕನ್ನು ವಿವರಿಸಿದ 27 ವರ್ಷದ ಯುವಕ ತನ್ನನ್ನು ತಾನು “ಕಾರ್ಪೊರೇಟ್ ಕೂಲಿ” ಎಂದು ಹೇಳಿಕೊಂಡಿದ್ದಾರೆ. ಅವರು ಆ ಬದಕನ್ನು ವಿವರಿಸಿರೋದು ಹೀಗೆ -

“ಒಂಟಿಯಾಗಿ ಬದುಕುವುದು ಎಂದರೆ ಒಂದೆಡೆ ನಿಮ್ಮ ಖಾಸಗಿತವನ್ನು ಒದಗಿಸುವ ಒಂದು ನಿಶ್ಚಿತ ಸ್ವಾತಂತ್ರ್ಯ ಪಡೆದುಕೊಳ್ಳುವುದು. ಅದರೊಂದಿಗೆ ಕೆಲವು ಹೊಣೆಗಾರಿಕೆಗಳೂ ಇರುತ್ತವೆ. ನನ್ನ ಆಹಾರ ನಾನೇ ತಯಾರಿಸಬೇಕು. ನನಗೇನು ಬೇಕೋ ಅದನ್ನು ನೋಡಬಹುದು ಮತ್ತು ನಾನಿರುವ ಸ್ಥಳದ ಸ್ವಚ್ಛತೆ (ಯಾರಾದರೂ ಮಾಡಲೇಬೇಕಾದ ಕನಿಷ್ಠ ಸ್ವಚ್ಛತೆ) ನನ್ನದೇ ಹೊಣೆಗಾರಿಕೆ ಇದ್ದೇ ಇದೆ. ಇನ್ನೊಂದೆಡೆ, ಒಂಟಿಯಾಗಿರುವ ಕಾರಣ ಸಹಜವಾಗಿಯೇ ಅದೊಂದು ಭಾವ ಕಾಡುತ್ತಿರುತ್ತದೆ. ಹೊರಗೆಲ್ಲ ನಗರದ ಗೌಜಿ ಗದ್ದಲದ ವಾತಾವರಣ. ಮನೆಯೊಳಗೆ ಮತ್ತದೇ ಮೌನ ಕಾಡುತ್ತದೆ”

ಇನ್ನು ಹೊಣೆಗಾರಿಕೆಗಳ ಬಗ್ಗೆ ಬರೆದ ಆ ಯುವಕ, ವಿವಿಧ ಹೊಣೆಗಾರಿಕೆಯ ಪಾತ್ರಗಳನ್ನು ಅಂದರೆ ಷೆಫ್‌, ಕ್ಲೀನರ್‌, ಎಂಟರ್‌ಟೇನರ್‌ ಆಗಿ ಕೂಡ ಕೆಲಸ ನಿಭಾಯಿಸಬೇಕಾದ ಅನಿವಾರ್ಯತೆಯನ್ನೂ ಹೇಳಿಕೊಂಡಿದ್ದಾರೆ. ಇವೆಲ್ಲವೂ ತನ್ನದೇ ಸಂತೋಷಕ್ಕೆ ಎಂಬುದನ್ನು ಆತ ಹೇಳಿಕೊಂಡಿರುವುದು ಹೀಗೆ -

“ಕೆಲವು ದಿನಗಳಲ್ಲಿ ಆ ಮೌನದ ತೀವ್ರತೆ ಅಗಾಧವಾದ ಸಂದರ್ಭ ಇರುತ್ತಲ್ಲ ಆಗ ಮನಸ್ಸಿಗೆ ಖುಷಿ ಕೊಡುವ ಕೆಲಸವನ್ನು ನಾವೇ ಮಾಡಬೇಕು. ಬೆಂಗಳೂರು ಅದ್ಭುತವಾದ ನಗರ. ಸುತ್ತಮುತ್ತ ತುಂಬಾ ಜನ ಇರ್ತಾರೆ. ಆದರೆ ಅವರು ನಮ್ಮವರಾ ಎಂದು ನೋಡಿದರೆ ಆಗ ಏಕಾಂಗಿಯಾಗಿರುವ ಭಾವನೆ ತುಂಬಿಕೊಳ್ಳುತ್ತದೆ. ಈ ನಗರದಲ್ಲಿ ಮೇಲ್ನೋಟ ಮೀರಿದ ಭಾವ ಸಂಬಂಧ ಕಂಡುಕೊಳ್ಳುವುದು ಕಷ್ಟ. ಸಾಮಾಜಿಕವಾಗಿ ಬೆರೆಯಲು ಸಮಯವೇ ಕೊಡದಷ್ಟು ನಿತ್ಯ ಬದುಕು ಜನರನ್ನು ಎಷ್ಟು ತಲ್ಲೀನವಾಗಿಸಿಬಿಡುತ್ತದೆ”.

ರೆಡ್ಡಿಟ್ ಪೋಸ್ಟ್‌ಗೆ ಭಾರಿ ಸ್ಪಂದನೆ, ಪೋಸ್ಟ್‌ ಡಿಲೀಟ್‌

ಈ ಪೋಸ್ಟ್ ಅನ್ನು ಆಗಸ್ಟ್ 21 ರಂದು ಹಂಚಿಕೊಳ್ಳಲಾಗಿದೆ. ಪೋಸ್ಟ್ ಮಾಡಿದ ನಂತರ, ಇದು 500 ಕ್ಕೂ ಹೆಚ್ಚು ಮತಗಳನ್ನು ಗಳಿಸಿದ್ದು, ವೈರಲ್ ಆಗಿದೆ. ಅನೇಕ ಜನರು ಪೋಸ್ಟ್‌ನ ಕಾಮೆಂಟ್‌ಗಳ ವಿಭಾಗದಲ್ಲಿ ತಮ್ಮ ಪ್ರತಿಕ್ರಿಯೆಗಳನ್ನು ಹಂಚಿಕೊಂಡಿದ್ದಾರೆ. ಬಹುತೇಕ ಕಾಮೆಂಟ್‌ಗಳಲ್ಲಿ ಏಕಾತನತೆ ಹೋಗಲಾಡಿಸಲು ತಾವೇನು ಮಾಡುತ್ತಿದ್ದೇವೆ ಎಂಬುದನ್ನು ಕೆಲವರು ಬರೆದುಕೊಂಡಿದ್ದಾರೆ. ಇನ್ನು ಕೆಲವರು ಕುಟುಂಬ ಸದಸ್ಯರೊಂದಿಗೆ ನಿತ್ಯವೂ ಮಾತುಕತೆ ನಡೆಸುವಂತೆ ಸಲಹೆ ನೀಡಿದ್ದಾರೆ.

ಒಬ್ಬ ವ್ಯಕ್ತಿ, “ನನಗೆ 28 ವರ್ಷ ಮತ್ತು ನಿಮಗಾದ ಅನುಭವವೇ. ಎಲ್ಲವೂ ಚೆನ್ನಾಗಿತ್ತು. ನಾಲ್ವರು ಸ್ನೇಹಿತರು ಜೊತೆಗಿದ್ದೆವು. ಮೂವರು ನಗರ ಬಿಟ್ಟು ಹೋದರು. ಈಗ ನಾನೊಬ್ಬನೇ. ಯಾರಾದರೂ ಬಂದು ಈ ಒಂಟಿತನದಿಂದ ನನ್ನನ್ನು ಪಾರುಮಾಡುವರೇ, ಅಂಥದ್ದೊಂದ ಪವಾಡ ನಡೆಯುವುದೇ ಎಂದು ಎದುರುನೋಡುತ್ತಿದ್ದೇನೆ" ಎಂದು ಬರೆದುಕೊಂಡಿದ್ದಾರೆ.

"ಜನರಿಂದ ತುಂಬಿರುವ ಕೋಣೆಯಲ್ಲಿಯೂ ತಾನು ಒಂಟಿತನ ಅನುಭವಿಸುತ್ತಿದ್ದೇನೆ ಎಂದು ಕೊಹ್ಲಿ ಒಮ್ಮೆ ಹೇಳಿದ್ದರು. ನಾನು ಬೇರೆ ಯಾರೊಂದಿಗೂ ಉತ್ತಮ ಸಂಬಂಧ ಹೊಂದಿಲ್ಲ. ನೀವು ಊಹಿಸದೆಯೇ ಒಂಟಿತನ ಕಾಡಿಬಿಡುತ್ತದೆ" ಎಂದು ಬೇರೊಬ್ಬರು ಪ್ರತಿಕ್ರಿಯಿಸಿದ್ದಾರೆ.

ರೆಡ್ಡಿಟ್ ಪೋಸ್ಟ್‌ನ ಲಿಂಕ್ - www.reddit.com/r/bangalore/comments/1exvlcl/the_loneliness_and_hustle_of_living_alone_in/? ಇದಾಗಿದ್ದು, ಸದ್ಯ ಇದು ಡಿಲೀಟ್‌ ಆಗಿದೆ. ಆದಾಗ್ಯೂ, ಅಲ್ಲಿ 300ಕ್ಕೂ ಹೆಚ್ಚು ಕಾಮೆಂಟ್‌ಗಳಿರುವುದು ಕಂಡುಬರುತ್ತದೆ.

ಕೊನೇ ಮಾತು- ಈ ಪೋಸ್ಟ್ ಓದುತ್ತಿರುವಾಗ ಚಿನ್ನಾರಿ ಮುತ್ತ ಸಿನಿಮಾದ ಇಲ್ಲಿ ಎಷ್ಟೊಂದು ಜನ ಇಲ್ಲಿ ಯಾರು ನನ್ನೋರು ಹಾಡು ನೆನಪಾಯಿತು ನೋಡಿ.