ತುಮಕೂರು: ನೆರವಿಗೆ ಬಾರದ ಬಂಧುಗಳು; ತಂದೆಯ ಅಂತ್ಯ ಸಂಸ್ಕಾರ ನೆರೆವೇರಿಸಿದ 6ನೇ ತರಗತಿಯ ಬಾಲಕಿ, ಮನಕಲಕಿದ ಘಟನೆ
ತುಮಕೂರು ತಾಲೂಕು ಪೆಮ್ಮನಹಳ್ಳಿ ಗ್ರಾಮದಲ್ಲಿ ಬಂಧುಗಳು ನೆರವಿಗೆ ಬಾರದ ಕಾರಣ 6ನೇ ತರಗತಿಯ ಬಾಲಕಿ ತನ್ನ ತಂದೆಯ ಅಂತ್ಯಸಂಸ್ಕಾರವನ್ನು ತಾನೇ ನಿರ್ವಹಿಸಿದ ಮನಕಲಕುವ ಘಟನೆ ಗಮನಸೆಳೆದಿದೆ. (ವರದಿ- ಈಶ್ವರ್, ತುಮಕೂರು)
ತುಮಕೂರು: ಕ್ಯಾನ್ಸರ್ ಕಾಯಿಲೆ ಕಾರಣ ಮೃತಪಟ್ಟ ತಂದೆಯ ಅಂತ್ಯ ಸಂಸ್ಕಾರ ನೆರವೇರಿಸಲು ಬಂಧುಗಳು ಕೈ ಜೋಡಿಸದ ಕಾರಣ, 6ನೇ ತರಗತಿ ಬಾಲಕಿಯೊಬ್ಬಳು ತಾನೇ ಆ ಕೆಲಸ ಮಾಡಿದ್ದು ಜನ ಮೆಚ್ಚುಗೆಗೆ ಪಾತ್ರವಾಗಿದೆ. ನೋವಿನ ನಡುವೆಯೂ ಕರ್ತವ್ಯ ಮೆರೆದ ಬಾಲಕಿಗೆ ಗ್ರಾಮಸ್ಥರು ನೆರವಾಗಿದ್ದು, ಮನಕಲಕುವ ಘಟನೆ ತುಮಕೂರು ತಾಲೂಕು ಪೆಮ್ಮನಹಳ್ಳಿ ಗ್ರಾಮದಿಂದ ವರದಿಯಾಗಿದೆ.
ತಂದೆಯ ಅಂತ್ಯ ಸಂಸ್ಕಾರ ನೆರೆವೇರಿಸಿದ 6ನೇ ತರಗತಿಯ ಬಾಲಕಿ, ಏನಿದು ಪ್ರಕರಣ
ತುಮಕೂರು ತಾಲೂಕು ಹಿರೇಹಳ್ಳಿ ಅಂಚೆಯ ಪೆಮ್ಮನಹಳ್ಳಿ ಗ್ರಾಮದ 6ನೇ ತರಗತಿ ವಿದ್ಯಾರ್ಥಿನಿ 11 ವರ್ಷ ಮೊನಿಷಾ ಈ ದಿಟ್ಟತನ ತೋರಿದ ಬಾಲಕಿ. ಕ್ಯಾನ್ಸರ್ ಕಾಯಿಲೆ ಕಾರಣ ಬಾಲಕಿ ಮೊನಿಷಾ ಅವರ ತಂದೆ ಕೆಂಪರಾಜು ಎರಡು ದಿನಗಳ ಹಿಂದೆ ಮೃತಪಟ್ಟಿದ್ದರು. ಅವರಿಗೆ 48 ವರ್ಷ ವಯಸ್ಸಾಗಿತ್ತು. ವೃತ್ತಿಯಲ್ಲಿ ಆಟೋ ಚಾಲಕರಾಗಿದ್ದ ಕೆಂಪರಾಜು, ಕ್ಯಾನ್ಸರ್ ಕಾಯಿಲೆಗೆ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದರು.
ಮೃತ ಕೆಂಪರಾಜುವಿಗೆ ಇಬ್ಬರು ಪುತ್ರಿಯರು. ಅವರ ಪೈಕಿ ಮೊನಿಷಾ ಹಿರಿಯ ಪುತ್ರಿ. ಕೆಂಪರಾಜು ಅವರ ಅಂತ್ಯ ಸಂಸ್ಕಾರ ನೆರವೇರಿಸಲು ಕುಟುಂಬ ಸದಸ್ಯರು ಬಂಧುಗಳ ನೆರವು ಯಾಚಿಸಿದರು. ಬಡತನದಲ್ಲಿರುವ ಕುಟುಂಬದ ನೆರವಿಗೆ ಬಂಧುಗಳು ಬಾರದ ಕಾರಣ, ಮೊನಿಷಾ ಗ್ರಾಮಸ್ಥರ ನೆರವಿನೊಂದಿಗೆ ತನ್ನ ತಂದೆಯ ಅಂತ್ಯಸಂಸ್ಕಾರ ನೆರವೇರಿಸಿದರು.
ಮೊನಿಷಾ ಬೆಂಬಲಕ್ಕೆ ನಿಂತ ಗ್ರಾಮಸ್ಥರು
ತುಮಕೂರು ತಾಲೂಕಿನ ಪೆಮ್ಮನಹಳ್ಳಿಯ ಬಾಲಕಿ ಮೊನಿಷಾ ಬೆಂಬಲಕ್ಕೆ ನಿಂತ ಗ್ರಾಮಸ್ಥರು, ಕೆಂಪರಾಜು ಅವರ ಅಂತ್ಯಸಂಸ್ಕಾರ ನೆರವೇರಿಸಲು ಅಗತ್ಯ ಕ್ರಮಗಳನ್ನು ತೆಗೆದುಕೊಂಡರು. ಅಂತ್ಯಕ್ರಿಯೆ ಬಳಿಕ ಅವರ ಬಂಧುಗಳು ಬಂದಿದ್ದು, ನೆರವು ನೀಡುವುದಾಗಿ ಹೇಳಿದ್ದಾರೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ. ಆದಾಗ್ಯೂ ಸಮಯಕ್ಕೆ ಬಾರದ ಬಂಧುಗಳ ಕ್ರಮದ ಬಗ್ಗೆ ಅಸಮಾಧಾನ ವ್ಯಕ್ತವಾಗಿದೆ. ಬಾಲಕಿ ಮೊನಿಷಾ ಸ್ಥಳೀಯ ಸರ್ಕಾರಿ ಶಾಲೆಯಲ್ಲಿ ಕಲಿಯುತ್ತಿದ್ದು, ಆಕೆಯ ನಡೆ ವ್ಯಾಪಕ ಮೆಚ್ಚುಗೆ ಗಳಿಸಿದೆ.
(ವರದಿ- ಈಶ್ವರ್, ತುಮಕೂರು)