ಊಟಕ್ಕಿಲ್ಲದ ಉಪ್ಪಿನಕಾಯಿ; ಬೈಕ್‌ನಲ್ಲಿ ಶವ ಸಾಗಿಸಿದ ಪ್ರಕರಣಕ್ಕೆ ಈಗ ಎಚ್ಚೆತ್ತುಕೊಂಡ್ರಂತೆ ಅಧಿಕಾರಿಗಳು
Tumakuru News: ಬೈಕ್‌ನಲ್ಲಿ ವೃದ್ಧನ ಶವ ಸಾಗಿಸಿದ ಪ್ರಕರಣಕ್ಕೆ ಸಂಬಂಧಿಸಿ ಎಚ್ಚೆತ್ತುಕೊಂಡ ಅಧಿಕಾರಿಗಳು, ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನ ವೈಎನ್ ಹೊಸಕೋಟೆ ಗ್ರಾಮದ ಸರ್ಕಾರಿ ಆಸ್ಪತ್ರೆಗೆ ಆ್ಯಂಬುಲೆನ್ಸ್ ಸೇವೆ ಒದಗಿಸಿದ್ದಾರೆ.
ತುಮಕೂರು: ಜಿಲ್ಲೆಯ ಪಾವಗಡ ತಾಲೂಕಿನ ವೈಎನ್ ಹೊಸಕೋಟೆ ಗ್ರಾಮದ ಸರ್ಕಾರಿ ಆಸ್ಪತ್ರೆಯಲ್ಲಿ ಆ್ಯಂಬುಲೆನ್ಸ್ (Ambulance service) ಸಿಗದ ಕಾರಣಕ್ಕೆ ಬೈಕ್ನಲ್ಲೇ ಶವ ಸಾಗಿಸಿದ ಹೃದಯ ವಿದ್ರಾವಕ ಘಟನೆಗೆ ಸಂಬಂಧಿಸಿ ಅಧಿಕಾರಿಗಳು ಎಚ್ಚೆತ್ತುಕೊಂಡಿದ್ದಾರೆ. ವೈದ್ಯಕೀಯ ಇಲಾಖೆ ಅಧಿಕಾರಿಗಳು ಗುರುವಾರ (ಸೆಪ್ಟೆಂಬರ್ 19) ಸಮುದಾಯ ಆರೋಗ್ಯ ಕೇಂದ್ರಕ್ಕೆ ಆ್ಯಂಬುಲೆನ್ಸ್ ಸೇವೆ ಒದಗಿಸಿದ್ದಾರೆ. ಆದರೆ ಜನರು ಊಟಕ್ಕಿಲ್ಲದ ಉಪ್ಪಿನಕಾಯಿ ಇದ್ದರೆಷ್ಟು ಬಿಟ್ಟರೆಷ್ಟು ಎಂದು ಹಿಗ್ಗಾಮುಗ್ಗಾ ಜಾಡಿಸಿದ್ದಾರೆ.
ಬುಧವಾರ ಚಿಕಿತ್ಸೆಗಾಗಿ ಬಂದಿದ್ದ ದಳವಾಯಿಹಳ್ಳಿ ಗ್ರಾಮದ ಹೊನ್ನೂರಪ್ಪ ಎಂಬ ವ್ಯಕ್ತಿ ಮೃತರಾಗಿದ್ದರು. ಆತನ ಮೃತ ದೇಹ ಸಾಗಿಸಲು ಆಸ್ಪತ್ರೆಯಲ್ಲಿ ಆ್ಯಂಬುಲೆನ್ಸ್ ಸೇವೆ ಕೇಳಿದ್ದರು. ಆದರೆ ಆ್ಯಂಬುಲೆನ್ಸ್ ಇಲ್ಲದ ಕಾರಣ ಮಕ್ಕಳು ಗೋಪಾಲಪ್ಪ ಮತ್ತು ಚಂದ್ರಣ್ಣ ದ್ವಿಚಕ್ರ ವಾಹನದಲ್ಲಿ ಸ್ವಗ್ರಾಮಕ್ಕೆ ಶವ ಸಾಗಿಸಿದ್ದರು. ಇದು ದೊಡ್ಡ ಸುದ್ದಿಯಾದ ಬೆನ್ನಲ್ಲೇ ಸಂಬಂಧಿಸಿದ ಇಲಾಖೆ ಎಚ್ಚೆತ್ತುಕೊಂಡಿತು. ತುಮಕೂರು ಜಿಲ್ಲಾ ಆರೋಗ್ಯಾಧಿಕಾರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿ ತಾಲ್ಲೂಕು ಕೇಂದ್ರದಲ್ಲಿದ್ದ ಆ್ಯಂಬುಲೆನ್ಸ್‌ಗಳ ಪೈಕಿ ಒಂದನ್ನು ವೈಎನ್ ಹೊಸಕೋಟೆ ಸಮುದಾಯ ಆರೋಗ್ಯ ಕೇಂದ್ರಕ್ಕೆ ನಿಯೋಜನೆ ಮಾಡಿದ್ದಾರೆ.
ಆ್ಯಂಬುಲೆನ್ಸ್ಗೆ ಒತ್ತಾಯಿಸಿದ್ದರೂ…
ಈ ಹಿಂದೆ ಇದ್ದ ಆ್ಯಂಬುಲೆನ್ಸ್ ವಾಹನ ಹಳೆಯದಾಗಿತ್ತು. ಆದರೆ ಚಾಲಕರ ಸಮಸ್ಯೆ ಇತ್ತು. ಈ ಕಾರಣದಿಂದ 2019 ರಿಂದ ಇಲ್ಲಿನ ರೋಗಿಗಳಿಗೆ ಸರ್ಕಾರಿ ಆ್ಯಂಬುಲೆನ್ಸ್ ಸೇವೆ ಸ್ಥಗಿತಗೊಂಡಿತ್ತು. ಅಗತ್ಯವಿದ್ದಾಗ 108 ಸೇವೆಗೆ ಕರೆ ಮಾಡಿ ಆ ವಾಹನ ಬಂದಾಗ ತುರ್ತು ಸೇವೆಗಳನ್ನು ಪಡೆಯಲಾಗುತ್ತಿತ್ತು. ಕೆಲವೊಮ್ಮೆ 108 ವಾಹನ ಬರುವುದು ತಡವಾಗಿ ಹಲವು ಅವಘಡ ಮತ್ತು ಅನಾಹುತಗಳು ಸಂಭವಿಸಿದ ಘಟನೆಗಳೂ ನಡೆದಿವೆ. ಆ ಬಳಿಕ ಸಾರ್ವಜನಿಕರು ಮತ್ತು ಸಂಘ ಸಂಸ್ಥೆಗಳು ಸರ್ಕಾರಿ ಆ್ಯಂಬುಲೆನ್ಸ್ ಸೇವೆಗೆ ಆರೋಗ್ಯ ಇಲಾಖೆ, ಜನಪ್ರತಿನಿಧಿಗಳನ್ನು ಒತ್ತಾಯಿಸುತ್ತಾ ಬಂದಿದ್ದರೂ ಯಾವುದೇ ಪ್ರಯೋಜನ ಆಗಿರಲಿಲ್ಲ. ಪ್ರಸ್ತುತ ಘಟನೆಯಿಂದ ಸರ್ಕಾರಿ ಆ್ಯಂಬುಲೆನ್ಸ್ ಸೇವೆ ಪ್ರಾರಂಭವಾಗಿದೆ. ಅದು, ನಿರಂತರವಾಗಿ ರೋಗಿಗಳಿಗೆ ದೊರೆಯಬೇಕು ಎಂದು ಜನತೆ ಕೋರಿದ್ದಾರೆ.