ಮತ್ತೊಂದು ದಾಖಲೆಗೆ ತುಮಕೂರು ಎಂಜಿ ಸ್ಟೇಡಿಯಂ ಸಜ್ಜು; 1.35 ಲಕ್ಷ ಖಾಲಿ ಪ್ಲಾಸ್ಟಿಕ್ ಬಾಟಲ್‌ಗಳಲ್ಲಿ ಅರಳಿದ ನಮ್ಮ ಸಂವಿಧಾನ
ಮತ್ತೊಂದು ದಾಖಲೆಗೆ ತುಮಕೂರು ಎಂಜಿ ಸ್ಟೇಡಿಯಂ ಸಜ್ಜುಗೊಂಡಿದೆ. 1.35 ಲಕ್ಷ ಖಾಲಿ ಪ್ಲಾಸ್ಟಿಕ್ ಬಾಟಲ್‌ಗಳಲ್ಲಿ ಅರಳಿದ ನಮ್ಮ ಸಂವಿಧಾನ ರಚಿಸುವ ಮೂಲಕ ಸಂವಿಧಾನದ ಕುರಿತು ಜಾಗೃತಿ ಮೂಡಿಸಲು ಜಿಲ್ಲಾಡಳಿತ ಮುಂದಾಗಿದೆ. (ವರದಿ- ಈಶ್ವರ್, ತುಮಕೂರು)
ತುಮಕೂರು: ನಗರದ ಎಂಜಿ ಸ್ಟೇಡಿಯಂನಲ್ಲಿ 1.5 ಲಕ್ಷ ಖಾಲಿ ಪ್ಲಾಸ್ಟಿಕ್ ಬಾಟಲ್ ಬಳಿಸಿ ತುಮಕೂರು ಎಂಬ ಕನ್ನಡ ಪದದ ಆಕೃತಿ ನಿರ್ಮಿಸಿದ್ದು ಇತ್ತೀಚೆಗೆ ಗಿನ್ನೆಸ್ ದಾಖಲೆಗೆ ಭಾಜನವಾಗಿತ್ತು. ಇದೀಗ ಅದೇ ಮಾದರಿಯಲ್ಲಿ ನಮ್ಮ ಸಂವಿಧಾನ ಎಂದು ಖಾಲಿ ಪ್ಲಾಸ್ಟಿಕ್ ಬಾಟಲ್ ಬಳಸಿದ ಆಕೃತಿಯ ಮೂಲಕ ಮತ್ತೊಂದು ದಾಖಲೆ ಬರೆಯಲು ಜಿಲ್ಲಾಡಳಿತ ಸಜ್ಜಾಗಿದೆ.
ಜಿಲ್ಲಾದ್ಯಂತ ಹಮ್ಮಿಕೊಂಡಿರುವ ಸಂವಿಧಾನ ಜಾಗೃತಿ ಜಾಥಾ ಕಾರ್ಯಕ್ರಮದ ಪ್ರಯುಕ್ತ 1,35,000 ಏಕ ಬಳಕೆ ಖಾಲಿ ಪ್ಲಾಸ್ಟಿಕ್ ಬಾಟಲಿಗಳನ್ನು ಬಳಸಿ ನಮ್ಮ ಸಂವಿಧಾನ ಎಂಬ ಕನ್ನಡ ಪದದ ವಿಶೇಷ ಆಕೃತಿ ರಚಿಸುವ ಮೂಲಕ ಮತ್ತೊಂದು ದಾಖಲೆ ನಿರ್ಮಿಸಲು ತುಮಕೂರು ಜಿಲ್ಲಾಡಳಿತ ವಿನೂತನ ಹೆಜ್ಜೆ ಇರಿಸಿದೆ ಎಂದು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತಿಳಿಸಿದರು.
ಮಹಾತ್ಮ ಗಾಂಧಿ ಕ್ರೀಡಾಂಗಣದಲ್ಲಿ ಸುದ್ದಿಗೋಷ್ಠಿ ನಡೆಸಿದ ಶುಭ ಕಲ್ಯಾಣ್, ಜನವರಿ 26 ರಿಂದ ಹಮ್ಮಿಕೊಂಡಿರುವ ಸಂವಿಧಾನ ಜಾಗೃತಿ ಜಾಥಾ ಕಾರ್ಯಕ್ರಮದ ಮೂಲಕ ಸಾರ್ವಜನಿಕರಲ್ಲಿ ಸಂವಿಧಾನದ ಮಹತ್ವದ ಬಗ್ಗೆ ವಿನೂತನವಾಗಿ ಅರಿವು ಮೂಡಿಸುವ ಸಲುವಾಗಿ ಈ ಕನ್ನಡ ಪದಗಳ ವಿಶೇಷ ಆಕೃತಿ ಜೋಡಿಸುವ ಪ್ರಯತ್ನ ಮಾಡಲಾಗಿದೆ, ಸುಮಾರು 305 ವಿದ್ಯಾರ್ಥಿಗಳು ಹಾಗೂ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ, ಸಿಬ್ಬಂದಿ ವರ್ಗದವರು ಪ್ಲಾಸ್ಟಿಕ್ ಬಾಟಲ್‌ಗಳನ್ನು ಜೋಡಿಸಿ ವಿಶೇಷ ಆಕೃತಿ ಅರಳಿಸಿದ್ದಾರೆ ಎಂದು ತಿಳಿಸಿದರು.
‘‘ನಮ್ಮ ಸಂವಿಧಾನ’’ ಕನ್ನಡ ಪದದ ಆಕೃತಿ ರಚಿಸಲು ಮೊದಲಿಗೆ ಕ್ಯಾಡ್ ವಿನ್ಯಾಸದಲ್ಲಿ ತಯಾರಿಸಿ 270X40 ಅಡಿ ಅಳತೆಯಲ್ಲಿ ಬಾಟಲ್‌ಗಳನ್ನು ಜೋಡಿಸಲಾಗಿದ್ದು, ಗಿನ್ನಿಸ್ ದಾಖಲೆ ನಿರ್ಮಿಸುವ ಪ್ರಯತ್ನ ಮಾಡಲಾಗಿದೆ. ಇದೇ ರೀತಿ ಕ್ರಿಯಾಶೀಲರಾಗಿ, ವಿನೂತನವಾಗಿ ಜಾಥಾ ಕಾರ್ಯಕ್ರಮ ಆಯೋಜಿಸಿ ಜನ ಸಾಮಾನ್ಯರಿಗೆ ಸಂವಿಧಾನದ ಮೂಲಭೂತ ಹಕ್ಕು ಮತ್ತು ಕರ್ತವ್ಯ, ಸಾಮಾಜಿಕ ಸಮಾನತೆ ಬಗ್ಗೆ ಅರಿವು ಮೂಡಿಸಬೇಕು ಹಾಗೂ ಫೆಬ್ರವರಿ 23 ರ ವರೆಗೆ ನಡೆಯಲಿರುವ ಈ ಜಾಥಾ ಕಾರ್ಯಕ್ರಮದಲ್ಲಿ ಸೃಜನಶೀಲರಾಗಿ ಅರಿವು ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ಜಿಲ್ಲೆಯನ್ನು ರಾಜ್ಯದಲ್ಲಿಯೇ ಮೊದಲನೇ ಸ್ಥಾನಕ್ಕೆ ತರಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.
ನಮ್ಮ ಸಂವಿಧಾನಕ್ಕೆ ಶಾಲಾ ಮಕ್ಕಳಿಂದ ಗೌರವ
ಮಹಾತ್ಮಗಾಂಧಿ ಕ್ರೀಡಾಂಗಣದಲ್ಲಿ ‘‘ನಮ್ಮ ಸಂವಿಧಾನ’’ ಎಂಬ ಕನ್ನಡ ಪದದ ವಿಶೇಷ ಆಕೃತಿಗೆ ಶಾಲಾ ಮಕ್ಕಳು ಗೌರವ ಸಮರ್ಪಿಸಿದರು, ನಗರದ ಸಿದ್ಧಗಂಗಾ ಪ್ರೌಢಶಾಲೆ, ಸಿದ್ಧಗಂಗಾ ಎಲಿಮೆಂಟರಿ ಶಾಲೆ, ಚೇತನ ವಿದ್ಯಾಮಂದಿರ, ಸಿಲ್ವರ್ ಜ್ಯೂಬಿಲಿ ಶಾಲೆ, ವಿವೇಕಾನಂದ ಶಾಲೆ, ಕಾರ್ಮೆಲ್ ಶಾಲೆ, ಚೈತನ್ಯ ಟೆಕ್ನೋ, ಸುಮತಿ ಶಾಲೆ, ಸೀತಾ ಪ್ರೌಢಶಾಲೆ, ಬಿ.ಎ.ಗುಡಿಪಾಳ್ಯ ಹಾಗೂ ಹನುಮಂತಪುರದ ಸರ್ಕಾರಿ ಶಾಲೆಗಳ ಸುಮಾರು 2000 ವಿದ್ಯಾರ್ಥಿಗಳು ನಮ್ಮ ಸಂವಿಧಾನ ಆಕೃತಿ ಸುತ್ತಲೂ ಸರಣಿಯಲ್ಲಿ ನಿಂತು ಗೌರವ ಸಲ್ಲಿಸಿ ಸಂವಿಧಾನ ಪೀಠಿಕೆ ಓದುವ ಮೂಲಕ ವಿನೂತನ ಪ್ರಯತ್ನಕ್ಕೆ ಸಾಕ್ಷಿಯಾದರು, ದ್ರೋಣ್ ಕ್ಯಾಾಮೆರಾದಲ್ಲಿ ‘‘ನಮ್ಮ ಸಂವಿಧಾನ’’ ವಿಶೇಷ ಆಕೃತಿ ಸೆರೆ ಹಿಡಿಯಲಾಯಿತು.
ಪ್ರತಿ ಪಂಚಾಯತಿಯಲ್ಲೂ ಜಾಥಾ ಕಾರ್ಯಕ್ರಮ
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ.ಪ್ರಭು ಮಾತನಾಡಿ, ಪ್ರತಿ ಪಂಚಾಯತಿಯಲ್ಲಿಯೂ ಜಾಥಾ ಕಾರ್ಯಕ್ರಮದ ಸ್ತಬ್ಧಚಿತ್ರ ವಾಹನವನ್ನು ಹಬ್ಬದ ವಾತಾವರಣದಲ್ಲಿ ಪೂರ್ಣ ಕುಂಭಗಳಿಂದ ಬರಮಾಡಿಕೊಂಡು ಸಂವಿಧಾನ ರಚನೆಗೆ ಡಾ. ಬಿ. ಆರ್. ಅಂಬೇಡ್ಕರ್ ಅವರ ಶ್ರಮವನ್ನು ಸ್ಮರಿಸುತ್ತಾ ಗೌರವದಿಂದ ಮುಂದಿನ ಗ್ರಾಮ ಪಂಚಾಯತಿಗೆ ಬೀಳ್ಕೊಡಲಾಗುತ್ತಿದೆ. ಕಾರ್ಯಕ್ರಮದಲ್ಲಿ ಸ್ಥಳೀಯ ಶಾಸಕರು, ವಿಧಾನ ಪರಿಷತ್ ಸದಸ್ಯರು, ಸಂಸದರು, ಸ್ಥಳೀಯ ಜನಪ್ರತಿನಿಧಿಗಳೂ ಕೂಡ ಭಾಗಿಯಾಗುತ್ತಿದ್ದಾರೆ. ಜನರಿಂದಲೂ ಉತ್ತಮ ಸ್ಪಂದನೆ ದೊರೆಯುತ್ತಿದೆ ಎಂದು ಹರ್ಷ ವ್ಯಕ್ತಪಡಿಸಿದರು.
ನಮ್ಮೆಲ್ಲರ ಅಸ್ತಿತ್ವವೇ ನಮ್ಮ ಸಂವಿಧಾನ, ಮಗುವಿನಿಂದ ಹಿಡಿದು ವೃದ್ಧರಾದಿಯಾಗಿ ಎಲ್ಲರಿಗೂ ಸಂವಿಧಾನದ ಮೂಲ ಸ್ವರೂಪವನ್ನು ತಿಳಿಸಬೇಕೆನ್ನುವ ದೃಷ್ಟಿಯಿಂದ ಸಂಚರಿಸುತ್ತಿರುವ ಜಾಗೃತಿ ಜಾಥಾ ಸ್ತಬ್ಧಚಿತ್ರ ವಾಹನವು ಈವರೆಗೂ ಜಿಲ್ಲೆಯ 130 ಗ್ರಾಮ ಪಂಚಾಯತಿ ಹಾಗೂ 4 ನಗರ ಸ್ಥಳೀಯ ಸಂಸ್ಥೆಗಳಲ್ಲಿ ಸಂವಿಧಾನದ ಬಗ್ಗೆ ಅರಿವು ಮೂಡಿಸಿದೆ, ಈಗಾಗಲೇ ತುಮಕೂರು ತಾಲೂಕು, ಚಿಕ್ಕನಾಯಕನಹಳ್ಳಿ ತಾಲೂಕಿನ ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಅರಿವು ಮೂಡಿಸಿ ಕುಣಿಗಲ್ ಹಾಗೂ ಶಿರಾ ತಾಲೂಕಿನಲ್ಲಿ ಅರಿವು ಕಾರ್ಯಕ್ರಮ ನಡೆಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.
(ವರದಿ- ಈಶ್ವರ್, ತುಮಕೂರು)