Tumakuru News: ದನದ ಕೊಟ್ಟಿಗೆ ಬಿಲ್ ಪಾವತಿ ವಿಳಂಬ, ಯಳನಾಡು ಗ್ರಾಮ ಪಂಚಾಯಿತಿ ಎದುರು ದನಗಳನ್ನು ಕಟ್ಟಿ ಪ್ರತಿಭಟಿಸಿದ ರೈತರು
ತುಮಕೂರು ಜಿಲ್ಲೆಯ ಯಳನಾಡು ಗ್ರಾಮ ಪಂಚಾಯಿತಿ ಕಚೇರಿ ಎದುರು ದನಗಳನ್ನು ಕಟ್ಟಿಹಾಕಿದ ರೈತರು, ಶೀಘ್ರವಾಗಿ ದನದ ಕೊಟ್ಟಿಗೆ ಬಿಲ್ ಪಾವತಿಸುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಿದರು.
ತುಮಕೂರು: ಉದ್ಯೋಗ ಖಾತ್ರಿ ಯೋಜನೆಯಲ್ಲಿ ದನದ ಕೊಟ್ಟಿಗೆ ನಿರ್ಮಿಸಿ ಎರಡು ಮೂರು ವರ್ಷ ಕಳೆದರೂ ಸಾಮಗ್ರಿಗಳ ಬಿಲ್ ಪಾವತಿಸದೆ ಸತಾಯಿಸುತ್ತಿದ್ದಾರೆ ಎಂದು ಆರೋಪಿಸಿ ಗ್ರಾಮ ಪಂಚಾಯಿತಿ ಮುಂದೆಯೇ ದನ ಕರುಗಳನ್ನು ತಂದು ಕಟ್ಟಿ ಪ್ರತಿಭಟನೆ ಮಾಡಿದ ಘಟನೆ ಚಿಕ್ಕನಾಯಕನಹಳ್ಳಿ ತಾಲೂಕು ಹುಳಿಯಾರು ಹೋಬಳಿಯ ಯಳನಾಡು ಗ್ರಾಮದಲ್ಲಿ ಜರುಗಿದೆ.
2021 ನೇ ಸಾಲಿನಲ್ಲೇ ದನಕ ಕೊಟ್ಟಿಗೆ ನಿರ್ಮಿಸಿದ್ದೇವೆ, ಅದರ ಬಾಬ್ತು ಕೂಲಿ ಹಣ ಫಲಾನುಭವಿಗಳ ಖಾತೆಗೆ ಹಾಕಿದ್ದಾರೆ. ಆದರೆ ಸಾಮಗ್ರಿಗಳ ಬಿಲ್ ಕೊಡದೆ ಸತಾಯಿಸುತ್ತಿದ್ದಾರೆ. 3 ವರ್ಷಗಳಿಂದ ಬಂದಿದ್ದ ಪಿಡಿಒಗಳಿಗೆ ಮನವಿ ಕೊಟ್ಟುಕೊಟ್ಟು ಸಾಕಾಗಿ ಹೋಗಿದೆ, ಈಗ ಹಾಕುತ್ತೇವೆ, ಆಗ ಹಾಕುತ್ತೇವೆ ಎಂದು ದಿನ ದೂಡುತ್ತಿದ್ದಾರೆ ವಿನಾ ರೈತನ ನೆರವಿಗೆ ಧಾವಿಸುತ್ತಿಲ್ಲ, ಈ ಬಗ್ಗೆ ಇಒ, ಸಿಇಒಗೆ ದೂರು ಕೊಟ್ಟರೂ ಪ್ರಯೋಜನವಾಗಿಲ್ಲ ಎಂದು ಪ್ರತಿಭಟನಾಕಾರರು ಆರೋಪಿಸಿದರು.
3 ವರ್ಷಗಳಿಂದ ಪಂಚಾಯಿತಿ ವ್ಯಾಪ್ತಿಯ ಎಲ್ಲಾ ಉದ್ಯೋಗ ಖಾತ್ರಿ ಫಲಾನುಭವಿಗಳ ಸಾಮಗ್ರಿಗಳ ಬಿಲ್ ಪೆಂಡಿಂಗ್ ಇಟ್ಟಿದ್ದರೆ ನಮ್ಮ ತಕರಾರು ಇರುತ್ತಿರಲಿಲ್ಲ. ಆದರೆ ತಮಗೆ ಬೇಕಾದವರ ಬಿಲ್ ಪಾವತಿಸಿ ನಮ್ಮ ಬಿಲ್ ಮಾತ್ರ ಪೆಂಡಿಂಗ್ ಇಟ್ಟಿದ್ದಾರೆ. ಅಲ್ಲದೆ ದನದ ಕೊಟ್ಟಿಗೆ ಕಾಮಗಾರಿ ಮಾಡದವರಿಗೆ ಬಿಲ್ ಕೊಟ್ಟಿದ್ದಾರೆ/ ಆದರೆ ಸಾಲಸೋಲ ಮಾಡಿ ದನದ ಕೊಟ್ಟಿಗೆ ನಿರ್ಮಿಸಿರುವ ನಮಗೆ ಕೊಟ್ಟಿಲ್ಲ. ಅದರಲ್ಲೂ ಇತ್ತೀಚೆಗೆ ಮಾಡಿದ ಸಮುದಾಯ ಕಾಮಗಾರಿ ಹಾಗೂ ಅಧ್ಯಕ್ಷರ ಊರಿನ ಕಾಮಗಾರಿಗೆ ಮಾತ್ರ ಎಫ್‌ಟಿಒ ಮಾಡಿ ಪುನಃ ನಮ್ಮನ್ನು ಕಡೆಗಣಿಸಿರುವುದರಿಂದ ಪ್ರತಿಭಟನೆಯ ಹಾದಿ ತುಳಿದಿದ್ದೇವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮ್ಯಾನ್ ಡೇಸ್ ಆಧಾರದ ಮೇಲೆ ಮೆಟಿರಿಯಲ್ ಬಿಲ್ ಬಿಡುಗಡೆಯಾಗುತ್ತದೆ, ಹಾಗಾಗಿ ರೈತರಿಂದ ಉದಿಬದ ಮಾಡಿಸಿ ಮ್ಯಾನ್ ಡೇಸ್ ಹೆಚ್ಚಾದ ತಕ್ಷಣ ರೈತರಿಗೆ ಮೆಟಿರಿಯಲ್ ಬಿಲ್ ಹಾಕದೆ ಯಾರೋ ಗುತ್ತಿಗೆದಾರ ಮಾಡಿದ ಸಮುದಾಯದ ವರ್ಕ್‌ಗಳಿಗೆ ಮೆಟಿರಿಯಲ್ ಬಿಲ್ ಹಾಕುತ್ತಾರೆ, ಬರಗಾಲದ ಈ ಸಂದರ್ಭದಲ್ಲಿ ರೈತರಿಗೆ ದನದ ಕೊಟ್ಟಿಗೆ, ಕುರಿಶೆಡ್, ಕೋಳಿ ಶೆಡ್‌ಗಳನ್ನು ನಿರ್ಮಿಸಿಕೊಟ್ಟು ಉಪಕಸುಬು ಮಾಡಲು ಉತ್ತೇಜಿಸುವ ಬದಲು ಉದಿಬದು ಮಾತ್ರ ಕೊಟ್ಟು ಮ್ಯಾನ್ ಡೇಸ್ ಹೆಚ್ಚಿಸಿಕೊಳ್ಳುತ್ತಾರೆ, ಹಾಗಾಗಿಯೇ ನಮ್ಮ ಪಂಚಾಯ್ತಿ ಉದ್ಯೋಗ ಖಾತ್ರಿಯಲ್ಲಿ ಕಳಪೆ ಪ್ರಗತಿಯಲ್ಲಿದೆ ಎಂದು ಆರೋಪಿಸಿದರು.
ನಿಮ್ಮ ಫೈಲ್ ಕಳೆದುಹೋಗಿದೆ, ಕೆಲ ದಾಖಲಾತಿಗಳು ಇಲ್ಲ, ಸ್ಪಾಟ್ ಇನ್‌ಸ್ಪೆಕ್ಷನ್ ಮಾಡಿ ಆಮೇಲೆ ಬಿಲ್ ಕೊಡುತ್ತೇವೆ ಎನ್ನುತ್ತಾರೆ. ಆದರೆ ನಮ್ಮಲ್ಲಿ ಕೆಲವರ ಕಾಮಗಾರಿಯನ್ನು ಖುದ್ದು ವೀಕ್ಷಿಸಿ ದಾಖಲಾತಿಗಳೆಲ್ಲವೂ ಸರಿಯಿದ್ದರೂ ಮೆಟಿರಿಯಲ್ ಬಿಲ್ ಕೊಡದೆ ನಿರ್ಲಕ್ಷಿಸಿದ್ದಾರೆ, ನಿತ್ಯ ಕಷ್ಟಪಟ್ಟು ಮಾಡಿದ ಕೆಲಸದ ಹಣಕ್ಕೆ ನಿತ್ಯ ಪಂಚಾಯಿತಿ ಕಚೇರಿಗೆ ಅಲೆದು ಅಲೆದು ಸಾಕಾಗಿ ಹೋಗಿದೆ, ಇಲ್ಲಿ ಅನ್ನದಾತನದು ಅರಣ್ಯ ರೋಧನವಾಗಿದೆ, ಈ ಬಾರಿ ಮೆಟಿರಿಯಲ್ ಬಿಲ್ ಮಾಡದಿದ್ದರೆ ಪಂಚಾಯಿತಿ ಎದುರು ವಿಷ ಕುಡಿಯುತ್ತೇವೆ ಎಂದು ಎಚ್ಚರಿಸಿದರು.
ಯತೀಶ್, ಕಂಟಪ್ಪ, ಮಾರುತಿ, ಷಡಾಕ್ಷರಿ, ರಾಮಣ್ಣ, ಸುರೇಶ್, ದಯಾನಂದ್, ರಾಜಣ್ಣ, ಕುಮಾರ್ ಸೇರಿದಂತೆ ಅನೇಕರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
(ವರದಿ - ಈಶ್ವರ್ ತುಮಕೂರು)