ಕನ್ನಡ ಸುದ್ದಿ  /  Karnataka  /  Tumakuru News Karnataka Congress Guarantees Are Useless Gs Siddheshwar Criticized State Government And Praised Modi Prs

GS Siddheshwar: ಗ್ಯಾರಂಟಿಗಳು ಉಪಯೋಗಕ್ಕೆ ಬರಲ್ಲ, ಇದು ಕಣ್ಣೊರೆಸುವ ತಂತ್ರ; ಕಾಂಗ್ರೆಸ್​ ಸರ್ಕಾರವನ್ನು ಟೀಕಿಸಿ, ಮೋದಿಯನ್ನ ಕೊಂಡಾಡಿದ ಸಂಸದ

ಆರ್ಥಿಕ ತಜ್ಞ ನಂಜುಂಡಪ್ಪ ವರದಿಯನ್ವಯ ತುಮಕೂರು ಜಿಲ್ಲೆಯ 8 ತಾಲೂಕುಗಳೂ ಅತಿ ಹಿಂದುಳಿದವು ಎಂಬ ಕುಖ್ಯಾತಿಗೆ ಒಳಗಾಗಿದ್ದವು. ಆದರೆ, ಕಳೆದ 9 ವರ್ಷಗಳಲ್ಲಿ ಮೋದಿಯ ದೂರದೃಷ್ಟಿ ಯೋಜನೆಗಳ ಫಲವಾಗಿ ಎಲ್ಲಾ ತಾಲೂಕುಗಳು ಮುಂದುವರೆದಿವೆ ಎಂದು ಸಂಸದ ಜಿಎಸ್ ಬಸವರಾಜು (MP GS Siddheshwar) ತಿಳಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಂಸದ ಜಿಎಸ್ ಬಸವರಾಜು
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಂಸದ ಜಿಎಸ್ ಬಸವರಾಜು

ತುಮಕೂರು: ಹೆಚ್‌ಎಎಲ್, ಇಸ್ರೋ, ನೀರಾವರಿ, ಕೃಷಿ, ತೋಟಗಾರಿಕೆ, ಕೈಗಾರಿಕೆ ಸೇರಿ ಎಲ್ಲಾ ವಿಭಾಗದಲ್ಲೂ ಜಿಲ್ಲೆ ಅಭಿವೃದ್ಧಿ ಕಂಡಿದೆ. ಇದಕ್ಕೆ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಹಲವು ಯೋಜನೆಗಳೇ ಕಾರಣ ಎಂದು ಸಂಸದ ಜಿಎಸ್ ಬಸವರಾಜು (MP GS Siddheshwar) ತಿಳಿಸಿದ್ದಾರೆ. ನರೇಂದ್ರ ಮೋದಿ ಅವರು (Prime minister Narendra modi) ಪ್ರಧಾನಿಯಾಗಿ 9 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಅವರ ಯೋಜನೆಗಳ ಕುರಿತು ಮಾತನಾಡಿದ್ದಾರೆ.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಆರ್ಥಿಕ ತಜ್ಞ ನಂಜುಂಡಪ್ಪ ವರದಿಯನ್ವಯ ತುಮಕೂರು ಜಿಲ್ಲೆಯ 8 ತಾಲೂಕುಗಳೂ ಅತಿ ಹಿಂದುಳಿದವು ಎಂಬ ಕುಖ್ಯಾತಿಗೆ ಒಳಗಾಗಿದ್ದವು.  ಆದರೆ, ಕಳೆದ 9 ವರ್ಷಗಳಲ್ಲಿ ಮೋದಿಯ ದೂರದೃಷ್ಟಿ ಯೋಜನೆಗಳ ಫಲವಾಗಿ ಎಲ್ಲಾ ತಾಲೂಕುಗಳು ಮುಂದುವರೆದಿವೆ ಎಂದಿದ್ದಾರೆ.

10 ಸಾವಿರ ಪ್ರೋತ್ಸಾಹ

ಮಿಷನ್ ಅಮೃತ ಸರೋವರ, ಅಟಲ್ ಭೂ ಜಲ ಯೋಜನೆಯ ಕೆರೆಗಳ ಅಂತರ್ಜಲ ವೃದ್ಧಿಯಾಗುವಂತೆ ಮಾಡಲಾಗಿದೆ. ಇದರ ಜೊತೆಗೆ ಭದ್ರ ಮೇಲ್ದಂಡೆ ಯೋಜನೆಗೆ 5000ಕ್ಕೂ ಹೆಚ್ಚು ಕೋಟಿ ಅನುದಾನ ನೀಡಲಾಗಿದೆ. ಹಾಗಾಗಿ ಜಿಲ್ಲೆಯಲ್ಲಿ ಜಲ ಸಮೃದ್ದಿ ಹೆಚ್ಚಾಗಿ, ರೈತರು ಕೃಷಿ ಮಾಡಿ ಸಮೃದ್ದಿಯ ಜೀವನ ನಡೆಸುತಿದ್ದಾರೆ ಎಂದು ಸಂಸದರು ನುಡಿದರು.

ಕೃಷಿ ಮತ್ತು ತೋಟಗಾರಿಕೆ ಇಲಾಖೆಯಿಂದ ಸಿರಿಧಾನ್ಯ ಕೃಷಿಗೆ ಉತ್ತೇಜನ ನೀಡಲು ಪ್ರತಿ ಹೆಕ್ಟೇರ್‌ಗೆ 10 ಸಾವಿರ ರೂಪಾಯಿ ಪ್ರೋತ್ಸಾಹ ಧನ ನೀಡಲಾಗುತ್ತಿದೆ. ಕೃಷಿ ಸಂಶೋಧನಾ ಸಂಸ್ಥೆ ಹಿರೇಹಳ್ಳಿಯ ಮೂಲಕ ಕೇಂದ್ರದ ಎಂಡಿಐ ಯೋಜನೆಯಡಿ ಡ್ಯಾಗ್ರನ್ ಪ್ರೂಟ್‌ಗೆ ಸಂಬಂಧಿಸಿದ ಸೆಂಟರ್‌ಅಫ್ ಎಕ್ಸಲೆನ್ಸ್ ಸ್ಥಾಪಿಸಲು ಅನುಮೋದನೆ ದೊರೆತಿರುವುದು ಸಂತೋಷದ ವಿಚಾರ ಎಂದರು.

ಗ್ರೇಟರ್​ ನೋಯಿಡಾ ಆಗುತ್ತೆ

ಜಿಲ್ಲೆಯಲ್ಲಿ ಕಳೆದ 9 ವರ್ಷಗಳಲ್ಲಿ ಕೈಗಾರಿಕೆಗೆ ಹೆಚ್ಚು ಒತ್ತು ನೀಡಲಾಗಿದೆ. ಬೆಂಗಳೂರು- ಮುಂಬೈ ಎಕನಾಮಿಕ್ಸ್ ಇಂಡಸ್ಟ್ರಿಯಲ್ ಕಾರಿಡಾರ್‌ಗೆ ಕೇಂದ್ರ ಸರ್ಕಾರ ಒಪ್ಪಿದೆ. ಮುಂದೊಂದು ದಿನ ವಸಂತ ನರಸಾಪುರ ಕೈಗಾರಿಕಾ ವಸಾಹತು ಮತ್ತೊಂದು ಗ್ರೇಟರ್ ನೋಯಿಡಾ ಆಗುವ ಎಲ್ಲಾ ಲಕ್ಷಣ ಹೊಂದಿದೆ. ಫೆಬ್ರವರಿಯಲ್ಲಿ ಲೋಕಾರ್ಪಣೆಗೊಂಡ ಹೆಚ್‌ಎಎಲ್ ಬಹುಉಪಯೋಗಿ ಲಘು ಹೆಲಿಕ್ಯಾಪ್ಟರ್ ಘಟಕದಿಂದ ತುಮಕೂರು ವಿಶ್ವ ಭೂಪಟದಲ್ಲಿ ಗುರುತಿಸಿಕೊಳ್ಳುವಂತಾಗಿದೆ ಎಂದು ತಮ್ಮ ಸರ್ಕಾರದ ಸಾಧನೆಯನ್ನು ಕೊಂಡಾಡಿದ್ದಾರೆ.

ಹಲವು ಯೋಜನೆಗಳಿಗೆ ಮೋದಿ ಸಹಕಾರ

ಹಳೆಯ ಹೆಚ್‌ಎಂಟಿ ಜಾಗದಲ್ಲಿ ಇರುವ ಇಸ್ರೋ ಘಟಕದಿಂದ ರಾಕೆಟ್ ಉಡಾವಣೆಗೆ ಬೇಕಾದ ಬಿಡಿ ಭಾಗಗಳ ಉತ್ಪಾದನಾ ಘಟಕ ಶೀಘ್ರದಲ್ಲಿಯೇ ಆರಂಭಗೊಳ್ಳಲಿದೆ. ತುಮಕೂರು- ದಾವಣಗೆರೆ, ತುಮಕೂರು ರಾಯದುರ್ಗ ರೈಲ್ವೆ ಲೈನ್‌ಗಳ ಜೊತೆಗೆ, ತುಮಕೂರು, ಕುಣಿಗಲ್, ಮದ್ದೂರು, ಚಾಮರಾಜನಗರ ಹೊಸ ರೈಲು ಮಾರ್ಗದ ಸರ್ವೆ ಕಾರ್ಯ ಸಹ ನಡೆದಿದೆ ಎಂದು ಹೇಳಿದ್ದಾರೆ.

ಚಳ್ಳಕೆರೆ, ಹಿರಿಯೂರು, ಚಿ.ನಾ. ಹಳ್ಳಿ, ತುರುವೇಕೆರೆ, ಚನ್ನರಾಯಪಟ್ಟಣ ಹೊಸ ರೈಲು ಮಾರ್ಗಕ್ಕೆ ಒಪ್ಪಿಗೆ ದೊರೆತಿದೆ. ತುಮಕೂರು ಜಿಲ್ಲೆಗೆ ಜಲಜೀವನ್ ಮೀಷನ್ ಯೋಜನೆ, 100 ಹಾಸಿಗೆಗಳ ಇಎಸ್‌ಐ ಆಸ್ಪತ್ರೆಯ ಮಂಜೂರಾತಿ… ಈ ಎಲ್ಲಾ ಯೋಜನೆಗಳ ಹಿಂದೆ ಮೋದಿ ಅವರ ಸಹಕಾರವಿದೆ ಎಂದಿದ್ದಾರೆ.

ಗ್ಯಾರಂಟಿಗಳು ಜನರಿಗೆ ಉಪಯೋಗವಾಗಲ್ಲ

ರಾಜ್ಯದ ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿರುವ ಐದು ಗ್ಯಾರಂಟಿಗಳಿಂದ ಜನ ಸಾಮಾನ್ಯರಿಗೆ ಯಾವುದೇ ಉಪಯೋಗವಾಗಲ್ಲ. ಇದು ಕೇವಲ ಕಣ್ಣೊರೆಸುವ ತಂತ್ರ, ಇದರಿಂದ ಆರ್ಥಿಕ ಹೊರೆ ಹೆಚ್ಚಾಗಲಿದೆ. ಕೆಲಸಕ್ಕೆ ಜನರಿಲ್ಲದಂತಾಗುತ್ತದೆ. ನಿರುದ್ಯೋಗ ಭತ್ಯೆಯಿಂದ ಯುವ ಜನರಿಗೆ ಉದ್ಯೋಗ ಹುಡುಕುವ ಕಾತುರತೆ ಇಲ್ಲದಂತಾಗಿದೆ. ಹಣಕ್ಕಾಗಿ ಯಾರ ತಲೆ ಬೋಳಿಸುತ್ತಾರೆ ನೋಡಬೇಕಿದೆ ಎಂದು ಸಂಸದ ಜಿಎಸ್ ಬಸವರಾಜು ಕಾಂಗ್ರೆಸ್​ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ.

ತಮ್ಮ ಹೇಳಿಕೆಗೆ ಸ್ಪಷ್ಟನೆ ಕೊಟ್ಟ ಸಂಸದ

ತುಮಕೂರು ಲೋಕಸಭಾ ಕ್ಷೇತ್ರಕ್ಕೆ ಮುಂದಿನ ಬಾರಿ ಸೋಮಣ್ಣ ಅಭ್ಯರ್ಥಿಯಾಗುತ್ತಾರೆ ಎಂದು ಹೇಳಿಲ್ಲ. ಪತ್ರಿಕೆಯೊಂದರಲ್ಲಿ ಬಂದ ವರದಿಯನ್ನಷ್ಟೇ ಉಲ್ಲೇಖಿಸಿದ್ದೇನೆ. ನನ್ನ ನಂತರ ಯಾರು ಎಂದು ಹೇಳುವ ಹಕ್ಕು ನನಗಿಲ್ಲ. ಅದು ಪಕ್ಷದ ಹೈಕಮಾಂಡ್ ತೀರ್ಮಾನ, ನನ್ನ ಅಭಿಪ್ರಾಯ ಕೇಳಿದರೆ, ಹೇಳುತ್ತೇನೆ ಎಂದು ಮುಂದಿನ ಎಂಪಿ ಅಭ್ಯರ್ಥಿ ವಿ.ಎಸ್.ಸೋಮಣ್ಣ ಎಂಬ ತಮ್ಮ ಹೇಳಿಕೆಗೆ ಸ್ಪಷ್ಟನೆ ನೀಡಿದರು. ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಹೆಚ್ಎಸ್ ರವಿಶಂಕರ್, ಮುಖಂಡರಾದ ಎಸ್​​ಪಿ ಚಿದಾನಂದ್ ಸೇರಿದಂತೆ ಪ್ರಮುಖರು ಇದ್ದರು.

IPL_Entry_Point