ಲೋಕಸಭಾ ಚುನಾವಣೆ; ತುಮಕೂರು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವಿ ಸೋಮಣ್ಣ ನಾಮಪತ್ರ ಸಲ್ಲಿಕೆ, ಬಿಜೆಪಿ, ಜೆಡಿಎಸ್ ಕಾರ್ಯಕರ್ತರ ಮೆರವಣಿಗೆ
ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರದ ಕಾವು ಏರತೊಡಗಿದೆ. ತುಮಕೂರು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವಿ ಸೋಮಣ್ಣ ಅವರು ಬುಧವಾರ (ಏಪ್ರಿಲ್ 4) ನಾಮಪತ್ರ ಸಲ್ಲಿಸಿದರು. ಮಾಜಿಮುಖ್ಯಮಂತ್ರಿಗಳಾದ ಬಿಎಸ್ ಯಡಿಯೂರಪ್ಪ, ಹೆಚ್ ಡಿ ಕುಮಾರಸ್ವಾಮಿ ಜೊತೆಗಿದ್ದು ಶಕ್ತಿ ಪ್ರದರ್ಶನಕ್ಕೆ ಬಲತುಂಬಿದರು. (ವರದಿ ಈಶ್ವರ್, ತುಮಕೂರು)
ತುಮಕೂರು: ತುಮಕೂರು ಲೋಕಸಭಾ ಕ್ಷೇತ್ರದ ಎನ್‌ಡಿಎ ಅಭ್ಯರ್ಥಿ ವಿ.ಸೋಮಣ್ಣ ಅವರು ಬುಧವಾರ (ಏಪ್ರಿಲ್ 3) ನಗರದಲ್ಲಿ ಬಿಜೆಪಿ ಹಾಗೂ ಜೆಡಿಎಸ್‌ನ ಸಹಸ್ರಾರು ಕಾರ್ಯಕರ್ತರೊಂದಿಗೆ ಬೃಹತ್ ಮೆರವಣಿಗೆಯಲ್ಲಿ ತೆರಳಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಚುನಾವಣಾಧಿಕಾರಿಗಳಿಗೆ ತಮ್ಮ ನಾಮಪತ್ರ ಸಲ್ಲಿಸಿದರು. ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ, ಹೆಚ್.ಡಿ.ಕುಮಾಸ್ವಾಮಿ, ವಿಪಕ್ಷ ನಾಯಕ ಆರ್.ಅಶೋಕ್, ಸಂಸದ ಜಿ.ಎಸ್.ಬಸವರಾಜು ಅವರು ಕೂಡ ಸೋಮಣ್ಣ ಜೊತೆಗಿದ್ದರು.
ಎನ್‌ಡಿಎ ಅಭ್ಯರ್ಥಿ ವಿ.ಸೋಮಣ್ಣ ಹಾಗೂ ಬಿಜೆಪಿ, ಜೆಡಿಎಸ್ ನಾಯಕರು ತುಮಕೂರಿನ ಬಿಹೆಚ್ ರಸ್ತೆಯ ವಿನಾಯಕ ನಗರದ ಗಣಪತಿ ದೇವಸ್ಥಾನದಲ್ಲಿ ಬೆಳಗ್ಗೆ ಪೂಜೆ ಸಲ್ಲಿಸಿದರು. ಅಲ್ಲಿಂದ ನಂತರ ಎರಡೂ ಪಕ್ಷಗಳ ಬೆಂಬಲಿಗರ ಜೊತೆಗೆ ಬೃಹತ್ ಮೆರವಣಿಗೆಯಲ್ಲಿ ಪಾಲ್ಗೊಂಡರು. ಬಿಜೆಪಿ ಮತ್ತು ಜೆಡಿಎಸ್ ಕಾರ್ಯಕರ್ತರು ಮೆರವಣಿಗೆ ಉದ್ದಕ್ಕೂ ತಮ್ಮ ಪಕ್ಷಗಳ ಬಾವುಟ ಪ್ರದರ್ಶಿಸಿ ಸಂಭ್ರಮಿಸಿದರು. ಮೆರವಣಿಯಲ್ಲಿ “ಮೋದಿ, ಮೋದಿ ಮತ್ತೊಮ್ಮೆ ಮೋದಿ” ಎಂಬ ಘೋಷಣೆ ಮುಗಿಲುಮುಟ್ಟಿತ್ತು. ಗಣಪತಿ ದೇವಸ್ಥಾನದಿಂದ ಬಿಹೆಚ್ ರಸ್ತೆ, ಎಂಜಿ ರಸ್ತೆ, ಜಿಲ್ಲಾಧಿಕಾರಿಗಳ ಕಚೇರಿವರೆಗೂ ಬಿಜೆಪಿ ಮತ್ತು ಜೆಡಿಎಸ್ ಕಾರ್ಯಕರ್ತರ, ಬೆಂಬಲಿಗರೇ ಹೆಚ್ಚು ತುಂಬಿಕೊಂಡಿದ್ದರು.
ಸೋಮಣ್ಣ ಗೆಲುವಿಗೆ ಮುನ್ನುಡಿ- ಬಿಎಸ್‌ವೈ
ಮೆರವಣಿಗೆಯಲ್ಲಿ ಬಂದ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಾತನಾಡಿ, ಸೋಮಣ್ಣನವರ ನಾಮಪತ್ರ ಸಲ್ಲಿಕೆಗೆ ಎರಡೂ ಪಕ್ಷಗಳ ಇಷ್ಟೊಂದು ಜನ ಸೇರಿರುವುದು ದೊಡ್ಡ ದಾಖಲೆ, ಇದು ಸೋಮಣ್ಣ ಅವರ ಗೆಲುವಿನ ಮುನ್ಸೂಚನೆ, ಸೋಮಣ್ಣ ಎರಡು ಲಕ್ಷ ಮತಗಳ ಅಂತರದಿಂದ ಚುನಾವಣೆಯಲ್ಲಿ ಜಯಗಳಿಸುತ್ತಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಪ್ರಧಾನಿ ನರೇಂದ್ರ ಮೋದಿಯವರು ರೈತರಿಗೆ ನೀಡುವ ಕಿಸಾನ್ ಸಮ್ಮಾನ್ ಯೋಜನೆಯಲ್ಲಿ ನೀಡುವ 6,000 ರೂಪಾಯಿ ಜೊತೆಗೆ ನಾವು ಮುಖ್ಯಮಂತ್ರಿಯಾಗಿದ್ದಾಗ 4,000 ರೂಪಾಯಿ ಸೇರಿಸಿ 10,000 ರೂಪಾಯಿ ಮಾಡಿ ಅದನ್ನು ರೈತರ ಬ್ಯಾಂಕ್ ಖಾತೆಗೆ ಜಮೆ ಮಾಡುತ್ತಿದ್ದೆವು. ಈಗಿನ ಸಿದ್ದರಾಮಯ್ಯ ಸರ್ಕಾರ ಆ ಹಣವನ್ನು ಖಾತೆಗೆ ಹಾಕುವುದನ್ನು ನಿಲ್ಲಿಸಿ ರೈತರಿಗೆ ಅನ್ಯಾಯ ಮಾಡಿದೆ. ಬಿಜೆಪಿ ಸರ್ಕಾರವಿದ್ದಾಗ ಜಾರಿಗೆ ತಂದಿದ್ದ ಭಾಗ್ಯಲಕ್ಷ್ಮಿ ಯೋಜನೆಯಿಂದ ಕೋಟ್ಯಂತರ ಮಹಿಳೆಯರಿಗೆ ಅನುಕೂಲವಾಗುತ್ತಿತ್ತು. ಆದರೆ ಈ ಸರ್ಕಾರ ಆ ಯೋಜನೆಯನ್ನು ಸ್ಥಗಿತಗೊಳಿಸಿದೆ. ಅದನ್ನು ಯಾಕೆ ಸ್ಥಗಿತಗೊಳಿಸಿದ್ದೀರಿ ಎಂಬುದನ್ನು ಸಿದ್ದರಾಮಯ್ಯ ಅವರು ಸ್ಪಷ್ಟಪಡಿಸಬೇಕು ಎಂದು ಯಡಿಯೂರಪ್ಪ ಆಗ್ರಹಿಸಿದರು.
ದೇಶದ ಭವಿಷ್ಯದ ಚುನಾವಣೆ- ಹೆಚ್‌ಡಿಕೆ
ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಮಾತನಾಡಿ, ವಿ ಸೋಮಣ್ಣ ಅವರಿಗೆ ತುಮಕೂರು ಕ್ಷೇತ್ರದ ಎರಡೂ ಪಕ್ಷದ ಜನ ಅಭೂತಪೂರ್ವವಾಗಿ ಬೆಂಬಲ ನೀಡಿದ್ದೀರಿ, ಇಷ್ಟು ಜನ ಸೇರಿರುವುದು ಐತಿಹಾಸಿಕ ದಾಖಲೆ, ರಾಜ್ಯದ ಕಾಂಗ್ರೆಸ್ ಸರ್ಕಾರದ ಜನ ವಿರೋಧಿ ನೀತಿಗೆ ಜನ ಬೇಸತ್ತಿದ್ದಾರೆ, ಕಾಂಗ್ರೆಸ್ ಸರ್ಕಾರದವರು ಪದೇ ಪದೇ ಕೇಂದ್ರ ಸರ್ಕಾರದ ಮೇಲೆ ಗೂಬೆ ಕೂರಿಸಿವುದು ಬಿಟ್ಟರೆ ಜನರ ಸಂಕಷ್ಟ ನಿವಾರಣೆಗೆ ಯಾವುದೇ ಪ್ರಯತ್ನ ಮಾಡುತ್ತಿಲ್ಲ, ಬರದಿಂದ ರೈತರು, ಜನ ತತ್ತರಿಸಿ ಹೋಗಿದ್ದಾರೆ, ಅವರ ನೆರವಿಗೆ ಸರ್ಕಾರ ಸ್ಪಂದಿಸಿಲ್ಲ, ನುಡಿದಂತೆ ನಡೆದಿದ್ದೇವೆ ಎಂದು ಪ್ರಚಾರ ಪಡೆಯುವ ಕಾಂಗ್ರೆಸ್‌ನವರು ಪ್ರಚಾರದ ಜಾಹಿರಾತಿಗಾಗಿ ರಾಜ್ಯದ ಜನರ 300 ಕೋಟಿ ರೂ.ತೆರಿಗೆ ಹಣ ಖರ್ಚು ಮಾಡಿದ್ದಾರೆ, ಆದರೆ ಬರ ಪರಿಹಾರ ಕಾರ್ಯಗಳಿಗೆ ನೆರವಾಗಿಲ್ಲ, ಕಾಂಗ್ರೆಸ್‌ನವರು ಗ್ಯಾರಂಟಿ ಯೋಜನೆಗಳಿಗೆ ಸಾಲ ಮಾಡಿದ ಹಣ, ಜನರ ತೆರಿಗೆ ಹಣ ನೀಡುತ್ತಿದ್ದಾರೆ, ಈ ಸಾಲವನ್ನು ಸಿದ್ದರಾಮಯ್ಯ ತೀರಿಸುವುದಿಲ್ಲ, ರಾಜ್ಯದ ಏಳು ಕೋಟಿ ಜನ ತೀರಿಸಬೇಕಾಗಿದೆ ಎಂದರು.
ಕಾಂಗ್ರೆಸ್ ಪಕ್ಷ ಅಧಿಕಾರ ಚುಕ್ಕಾಣಿ ಹಿಡಿದಾಗೆಲ್ಲ ರಾಜ್ಯದಲ್ಲಿ ಬರಗಾಲ. ಹಿಂದೆಯೂ ಇದೇ ರೀತಿ ಆಗಿತ್ತು. ಈಗಲೂ ಬರ ಪರಿಸ್ಥಿತಿ ಇದೆ. ಬಿ ಎಸ್ ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿ, ಮೊದಲ ಸಚಿವ ಸಂಪುಟ ಸಭೆ ನಡೆಸಿ ಹೊರಗೆ ಬರುತ್ತಿದ್ದಂತೆ ಮಳೆಯಾಗಿದೆ. ಇದನ್ನು ಜನ ಗಮನಿಸಬೇಕು. ಕಾಂಗ್ರೆಸ್ ಪಕ್ಷ ಬಂದರೆ ಬರ, ಬಿಜೆಪಿ ಅಧಿಕಾರಕ್ಕೆ ಬಂದರೆ ಮಳೆ ಎಂದು ವಿಪಕ್ಷ ನಾಯಕ ಆರ್ ಅಶೋಕ್ ಇದೇ ವೇಳೆ ಹೇಳಿದರು.
ಎನ್‌ಡಿಎ ಅಭ್ಯರ್ಥಿ ವಿ ಸೋಮಣ್ಣ ಅವರು ಮಾತನಾಡಿ, ಭಾರತ ಈಗಿರುವ ಸಂಕಷ್ಟದ ಪರಿಸ್ಥಿತಿಯಲ್ಲಿ ದೇಶವನ್ನು ಮುನ್ನಡೆಸಲು ಯೋಗ್ಯರಾದ ನಾಯಕರು ಬೇಕು. ಭವಿಷ್ಯದ ಬಾರತ ನಿರ್ಮಾಣ ಮಾಡಬೇಕು. ಜನರ ಭವಿಷ್ಯದ ಕನಸು ನನಸು ಮಾಡಬೇಕು ಎಂಬ ದೂರಾಲೋಚನೆ ಹೊಂದಿರುವ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಅವರು ಸೇರಿದಂತೆ ಹಲವಾರು ನಾಯಕರು ಪ್ರಧಾನಿ ನರೇಂದ್ರ ಮೋದಿ ಅವರನ್ನೇ ಮತ್ತೊಮ್ಮೆ ಪ್ರಧಾನಿ ಮಾಡಲು ಚಿಂತನೆ ಮಾಡಿದ್ದಾರೆ. ಈ ಚುನಾವಣೆಯಲ್ಲಿ ಅವರನ್ನು ಗೆಲ್ಲಿಸಬೇಕು ಎಂದು ಸಕ್ರಿಯರಾಗಿದ್ದಾರೆ. ಹೀಗಾಗಿಯೇ ಕರ್ನಾಟಕದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಮಾಡಿಕೊಂಡು ಈ ಸಲದ ಲೋಕಸಭಾ ಚುನಾವಣೆಯನ್ನು ಒಟ್ಟಿಗೆ ಎದುರಿಸುತ್ತಿದ್ದೇವೆ. ಈ ಚುನಾವಣೆಯ ಗೆಲುವಿನೊಂದಿಗೆ ಕರ್ನಾಟಕದಲ್ಲೂ ಹೊಸ ಶಕೆ ಆರಂಭವಾಗಲಿದೆ. ಏಪ್ರಿಲ್ 26ಕ್ಕೆ ನಡೆಯುವ ಮತದಾನದಲ್ಲಿ ಕ್ಷೇತ್ರದ ಮತದಾರರು ಆಶೀರ್ವಾದ ಮಾಡಿ ಗೆಲ್ಲಿಸಬೇಕು ಎಂದು ಮನವಿ ಮಾಡಿದರು.
(ವರದಿ ಈಶ್ವರ್, ತುಮಕೂರು)
ಕರ್ನಾಟಕದ ಮತ್ತಷ್ಟು ತಾಜಾ ಸುದ್ದಿ, ಕ್ರೈಮ್ ಸುದ್ದಿ, ಬೆಂಗಳೂರು ನಗರ ಸುದ್ದಿ, ರಾಜಕೀಯ ವಿಶ್ಲೇಷಣೆ ಓದಿ.