ಕನ್ನಡ ಸುದ್ದಿ  /  Karnataka  /  Tumakuru News Madhyama Habba Impression 2023 At Tumakuru University Mass Media Karnataka Education News In Kannada Arc

Tumakuru News: ತುಮಕೂರು ವಿಶ್ವ ವಿದ್ಯಾಲಯದಲ್ಲಿ ಮಾಧ್ಯಮ ಹಬ್ಬ ಉದ್ಘಾಟನೆ, ಪತ್ರಕರ್ತರಿಗೆ ಕೌತುಕ, ಸ್ಪಷ್ಟತೆ ಬಹಳ ಮುಖ್ಯ; ಅಜಿತ್

ತುಮಕೂರು ವಿಶ್ವವಿದ್ಯಾನಿಲಯದಲ್ಲಿ ನಡೆದ ಮಾಧ್ಯಮ ಹಬ್ಬದ ಅಂಗವಾಗಿ ನಡೆದ ವರದಿಗಾರಿಕೆ, ಫೇಸ್-ಟು- ಕ್ಯಾಮೆರಾ, ಚರ್ಚಾ ಸ್ಪರ್ಧೆ, ಪೋಸ್ಟರ್ ವಿನ್ಯಾಸ, ರಸಪ್ರಶ್ನೆ ಸ್ಪರ್ಧೆ, ಜಾಹಿರಾತು ನಿರ್ಮಾಣ ಸ್ಪರ್ಧೆಗಳಲ್ಲಿ ರಾಜ್ಯದ ನಾನಾ ಭಾಗಗಳಿಂದ ಆಗಮಿಸಿದ್ದ ಪದವಿ ಹಾಗೂ ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ತುಮಕೂರು ವಿಶ್ವ ವಿದ್ಯಾಲಯದಲ್ಲಿ ನೆಡೆದ ಇಂಪ್ರೆಶನ್- 2023 ಮಾಧ್ಯಮ ಹಬ್ಬ
ತುಮಕೂರು ವಿಶ್ವ ವಿದ್ಯಾಲಯದಲ್ಲಿ ನೆಡೆದ ಇಂಪ್ರೆಶನ್- 2023 ಮಾಧ್ಯಮ ಹಬ್ಬ

ತುಮಕೂರು: ಪತ್ರಕರ್ತರಿಗೆ ಕೌತುಕ ಮತ್ತು ಸ್ಪಷ್ಟತೆ ಬಹಳ ಮುಖ್ಯ, ಪತ್ರಿಕೋದ್ಯಮ ವಿದ್ಯಾರ್ಥಿಗಳ ಯಶಸ್ಸಿಗೆ ವೃತ್ತಿ ಮತ್ತು ಪ್ರವೃತ್ತಿ ಒಂದೇ ಆಗಿರಬೇಕು, ಅದರಿಂದ ಕಾರ್ಯಕ್ಷಮತೆ ಲಭಿಸುತ್ತದೆ ಎಂದು ಏಷ್ಯಾನೆಟ್ ಸುವರ್ಣ ನ್ಯೂಸ್ ಸಂಪಾದಕ ಅಜಿತ್ ಹನಮಕ್ಕನವರ್ ಹೇಳಿದರು.

ಟ್ರೆಂಡಿಂಗ್​ ಸುದ್ದಿ

ತುಮಕೂರು ವಿಶ್ವ ವಿದ್ಯಾಲಯದ ಸ್ನಾತಕೋತ್ತರ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ವತಿಯಿಂದ ಗುರುವಾರ ಆಯೋಜಿಸಿದ್ದ ಇಂಪ್ರೆಶನ್- 2023 ಮಾಧ್ಯಮ ಹಬ್ಬ ಉದ್ಘಾಟಿಸಿ ಮಾತನಾಡಿ, ನಿರಂತರ ಕಲಿಕೆ ಮತ್ತು ಅಭ್ಯಾಸದಿಂದ ತಜ್ಞತೆ ಲಭಿಸುತ್ತದೆ, ಬದಲಾವಣೆಗೆ ವೇಗವಾಗಿ ಒಗ್ಗಿಕೊಳ್ಳುವ ಕ್ಷಮತೆ ಬೆಳೆಸಿಕೊಳ್ಳಬೇಕು, ಮಾಧ್ಯಮ ಕಲಿಕಾರ್ಥಿಗಳು ಮೊದಲು ಗುರಿ ತಲುಪಲು ಮಾನಸಿಕವಾಗಿ ತಯಾರಾಗಬೇಕು, ಆತ್ಮ ಸಂತೃಪ್ತಿ ನೀಡುವಂತಹ ವೃತ್ತಿ ಆಯ್ದುಕೊಳ್ಳಬೇಕು ಎಂದರು.

ಕೊಪ್ಪಳ ವಿಶ್ವ ವಿದ್ಯಾಲಯದ ಕುಲಪತಿ ಬಿ.ಕೆ.ರವಿ ಮಾತನಾಡಿ, ವಿದ್ಯೆ, ವಿನಯ, ವಸ್ತುನಿಷ್ಠತೆ, ನಿರಂತರ ಶ್ರಮ, ಸದೃಢ ಮನಸ್ಥಿತಿ, ಈ ಐದು ಅಂಶಗಳನ್ನು ಪತ್ರಿಕೋದ್ಯಮ ಮತ್ತು ಸಂವಹನದ ವಿದ್ಯಾರ್ಥಿಗಳು ಅಳವಡಿಸಿಕೊಂಡರೆ ಭವಿಷ್ಯದಲ್ಲಿ ಉತ್ತಮ ಪತ್ರಕರ್ತರಾಗುತ್ತಾರೆ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ತುಮಕೂರು ವಿಶ್ವ ವಿದ್ಯಾಲಯದ ಕುಲಪತಿ ಪ್ರೊ.ಎಂ.ವೆಂಕಟೇಶ್ವರಲು ಮಾತನಾಡಿ, ಮನುಷ್ಯರಾದ ನಾವು ತಾಂತ್ರಿಕವಾಗಿ ಊಹೆಗೆ ನಿಲುಕದಷ್ಟು ಆವಿಷ್ಕಾರ ಸೃಷ್ಟಿಸುತ್ತಿದ್ದೇವೆ, ಪ್ರತಿ ಆರು ತಿಂಗಳಿಗೊಮ್ಮೆ ಬದಲಾಗುವ ವಿದ್ಯುನ್ಮಾನಗಳ ಕುರಿತು ವಿಶೇಷ ಉಪನ್ಯಾಸ ಮತ್ತು ಕಾರ್ಯಾಗಾರಗಳ ಮೂಲಕ ಮಾಧ್ಯಮದ ವಿದ್ಯಾರ್ಥಿಗಳಲ್ಲಿ ಬದಲಾವಣೆಗೆ ವೇಗವಾಗಿ ಒಗ್ಗಿಕೊಳ್ಳುವ ಕ್ಷಮತೆ ಬೆಳೆಸಬೇಕು ಎಂದರು.

ದುಬೈನ ಉನ್ನತ ತಂತ್ರಜ್ಞಾನ ಕಾಲೇಜಿನ ಅಪ್ಲೈಡ್ ಮಾಧ್ಯಮ ವಿಭಾಗದ ಉಪನ್ಯಾಸಕ ಡಾ.ಶ್ರೀಶ.ಎಂ.ಮಾತನಾಡಿ, ಇಂದಿಗೆ ಮಾಧ್ಯಮ ಕ್ಷೇತ್ರದಲ್ಲಿ ಅನೇಕ ಅವಕಾಶ ಮತ್ತು ಸಾಧ್ಯತೆಗಳಿವೆ, ಕರ್ತವ್ಯನಿಷ್ಠೆಯಷ್ಟೇ ಆದಾಯ ಗಳಿಕೆಯೂ ಬದುಕಿಗೆ ಅಗತ್ಯವೆಂಬುದನ್ನು ಅರಿತು ಯೋಜಿತವಾಗಿ ಕೆಲಸ ಮಾಡಬೇಕು, ಕೃತಕ ಬುದ್ಧಿ ಮತ್ತೆ ಪ್ರಪಂಚವನ್ನು ಆಳುವ ಕಾಲ ಸಮೀಪವಿದೆ ಎಂದರು.

ತುಮಕೂರು ವಿಶ್ವ ವಿದ್ಯಾಲಯದ ಮಾಧ್ಯಮ ಹಬ್ಬ ಹಾಗೂ ರಾಷ್ಟ್ರೀಯ ಸಮ್ಮೇಳನ ಸಂಘಟನಾ ಕಾರ್ಯದರ್ಶಿ ಡಾ.ಸಿಬಂತಿ ಪದ್ಮನಾಭಕೆ.ವಿ. ಮಾತನಾಡಿ, ಮಾಧ್ಯಮ ಕ್ಷೇತ್ರದಲ್ಲಿ ನಿರಂತರವಾಗಿ ಬದಲಾವಣೆ ಆಗುತ್ತಿರುತ್ತವೆ, ಹೊಸ ತಂತ್ರಜ್ಞಾನ ಹುಟ್ಟಿಕೊಳ್ಳುತ್ತಿರುತ್ತವೆ, ಅಂತಹ ಬದಲಾವಣೆಗಳ ಕುರಿತು ಸಮಾಜದಲ್ಲಿ ಸಾಕ್ಷರತೆ ಹೆಚ್ಚಿಸುವ ಸಲುವಾಗಿ ಹಾಗೂ ಮಾಧ್ಯಮದ ವಿದ್ಯಾರ್ಥಿಗಳಲ್ಲಿ ಕಾರ್ಯ ಕ್ಷೇತ್ರದ ಅನುಭವ ಒದಗಿಸುವ ಸಲುವಾಗಿ ಈ ಮಾಧ್ಯಮ ಹಬ್ಬ ಏರ್ಪಡಿಸಲಾಗಿದೆ ಎಂದರು.

ತುಮಕೂರು ವಿಶ್ವವಿದ್ಯಾಲಯದ ಕುಲಸಚಿವೆ ನಾಹಿದಾ ಜ಼ಮ್ ಜ಼ಮ್, ಪರೀಕ್ಷಾಂಗ ಕುಲಸಚಿವ ಪ್ರೊ.ಪ್ರಸನ್ನಕುಮಾರ್.ಕೆ, ವಿವಿ ಕಲಾ ಕಾಲೇಜಿನ ಪ್ರಾಂಶುಪಾಲ ಪ್ರೊ.ಬಿ.ಕರಿಯಣ್ಣ ಭಾಗವಹಿಸಿದ್ದರು. ಮಾಧ್ಯಮ ಹಬ್ಬದ ಅಂಗವಾಗಿ ನಡೆದ ವರದಿಗಾರಿಕೆ, ಪೀಸ್-ಟು- ಕ್ಯಾಮೆರಾ, ಚರ್ಚಾ ಸ್ಪರ್ಧೆ, ಪೋಸ್ಟರ್ ವಿನ್ಯಾಸ, ರಸಪ್ರಶ್ನೆ ಸ್ಪರ್ಧೆ, ಜಾಹಿರಾತು ನಿರ್ಮಾಣ ಸ್ಪರ್ಧೆಗಳಲ್ಲಿ ರಾಜ್ಯದ ನಾನಾ ಭಾಗಗಳಿಂದ ಆಗಮಿಸಿದ್ದ ಪದವಿ ಹಾಗೂ ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳು ಭಾಗವಹಿಸಿದ್ದರು.