ತುಮಕೂರು: ಎಮ್ಮೇಕರಕನ ಹಟ್ಟಿಯಲ್ಲಿ ಹುಟ್ಟು ಮುಟ್ಟು ಆಚರಣೆ ಮುಂದುವರಿಕೆ, ಜೈಲಿಗೆ ಕಳುಹಿಸುವ ಎಚ್ಚರಿಕೆ ನೀಡಿ ಮೌಢ್ಯಾಚರಣೆಗೆ ತಡೆ
ಕನ್ನಡ ಸುದ್ದಿ  /  ಕರ್ನಾಟಕ  /  ತುಮಕೂರು: ಎಮ್ಮೇಕರಕನ ಹಟ್ಟಿಯಲ್ಲಿ ಹುಟ್ಟು ಮುಟ್ಟು ಆಚರಣೆ ಮುಂದುವರಿಕೆ, ಜೈಲಿಗೆ ಕಳುಹಿಸುವ ಎಚ್ಚರಿಕೆ ನೀಡಿ ಮೌಢ್ಯಾಚರಣೆಗೆ ತಡೆ

ತುಮಕೂರು: ಎಮ್ಮೇಕರಕನ ಹಟ್ಟಿಯಲ್ಲಿ ಹುಟ್ಟು ಮುಟ್ಟು ಆಚರಣೆ ಮುಂದುವರಿಕೆ, ಜೈಲಿಗೆ ಕಳುಹಿಸುವ ಎಚ್ಚರಿಕೆ ನೀಡಿ ಮೌಢ್ಯಾಚರಣೆಗೆ ತಡೆ

ತುಮಕೂರು ಜಿಲ್ಲೆ ಹುಳಿಯಾರು ಹೋಬಳಿಯ ಎಮ್ಮೇಕರಕನ ಹಟ್ಟಿಯಲ್ಲಿ ಹುಟ್ಟು ಮುಟ್ಟು ಆಚರಣೆ ಮುಂದುವರಿದಿದೆ. ಮೌಢ್ಯಾಚರಣೆ ಮಾಡದಂತೆ ಜಾಗೃತಿ ಮೂಡಿಸಿದ ಬಳಿಕ, ತಹಶೀಲ್ದಾರ್‌ ಕಾನೂನು ಕ್ರಮದ ಎಚ್ಚರಿಕೆ ಜೈಲಿಗೆ ಕಳುಹಿಸಿದ್ರೂ ಬಾಣಂತಿ ಮಗುವನ್ನು ಮನೆಗೆ ಸೇರಿಸದ ಘಟನೆ ನಡೆದಿದೆ. (ವರದಿ- ಈಶ್ವರ್, ತುಮಕೂರು)

ತುಮಕೂರು: ಎಮ್ಮೇಕರಕನಹಟ್ಟಿಯಲ್ಲಿ ಹುಟ್ಟು ಮುಟ್ಟು ಆಚರಣೆ ಮುಂದುವರಿಕೆಯಾಗಿದ್ದು, ಅಧಿಕಾರಿಗಳು ತಪ್ಪಿತಸ್ಥರನ್ನು ಜೈಲಿಗೆ ಕಳುಹಿಸುವ ಎಚ್ಚರಿಕೆ ನೀಡಿ ಮೌಢ್ಯಾಚರಣೆಯನ್ನು ತಡೆದಿದ್ದಾರೆ.
ತುಮಕೂರು: ಎಮ್ಮೇಕರಕನಹಟ್ಟಿಯಲ್ಲಿ ಹುಟ್ಟು ಮುಟ್ಟು ಆಚರಣೆ ಮುಂದುವರಿಕೆಯಾಗಿದ್ದು, ಅಧಿಕಾರಿಗಳು ತಪ್ಪಿತಸ್ಥರನ್ನು ಜೈಲಿಗೆ ಕಳುಹಿಸುವ ಎಚ್ಚರಿಕೆ ನೀಡಿ ಮೌಢ್ಯಾಚರಣೆಯನ್ನು ತಡೆದಿದ್ದಾರೆ.

ತುಮಕೂರು: ಹುಟ್ಟು ಮುಟ್ಟು ಮೌಢ್ಯಾಚರಣೆಗೆ ಕೊನೆ ಎಂದು ಎಂಬ ಪ್ರಶ್ನೆ ಪದೇ ಪದೆ ಕೇಳುವಂತಾಗಿದೆ. ಯಾಕೆಂದರೆ ಊರಿನ ಹೊರಗೆ ಕುಟೀರದಲ್ಲಿ ಬಿಟ್ಟಿದ್ದ ಎಳೆ ಕಂದಮ್ಮನ ಸಹಿತ ಬಾಣಂತಿಯನ್ನು ಅಧಿಕಾರಿಗಳ ಮಧ್ಯಸ್ಥಿಕೆಯಲ್ಲಿ ಮನೆಯೊಳಗೆ ಕಳುಹಿಸಿದ್ದ ಬಲ್ಲಪ್ಪನ ಹಟ್ಟಿ ಪ್ರಕರಣ ಇನ್ನೂ ನೆನಪಿನಲ್ಲಿರುವಾಗಲೇ ಚಿಕ್ಕನಾಯಕನ ಹಳ್ಳಿಯ ಹುಳಿಯಾರು ಹೋಬಳಿಯ ಎಮ್ಮೇಕರಕನ ಹಟ್ಟಿ ಗ್ರಾಮದಲ್ಲಿ ಇಂತಹದೇ ಪ್ರಕರಣ ನಡೆದಿದೆ. ಆದರೆ ಈ ಬಾರಿ ಜೈಲಿಗೆ ಕಳುಹಿಸಿದರೂ ಹುಟ್ಟು ಮುಟ್ಟು ಆಚರಣೆ ಬಿಡಲ್ಲ ಎಂದು ಪಟ್ಟು ಹಿಡಿದಿದ್ದ ಪೋಷಕರಿಗೆ ಕಾನೂನು ಎಚ್ಚರಿಕೆ ನೀಡಿ, ಮನೆಯೊಳಗೆ ಬಾಣಂತಿ ಮತ್ತು ಮಗುವನ್ನು ಮನೆಯೊಳಗೆ ಕಳುಹಿಸಿದ ಘಟನೆ ನಡೆದಿದೆ.

ಹುಳಿಯಾರು ಹೋಬಳಿಯ ಬಲ್ಲಪ್ಪನಹಟ್ಟಿಯಲ್ಲಿ ಇತ್ತೀಚೆಗೆ ನಡೆದಿದ್ದ ಮೌಢ್ಯಾಚರಣೆ ಬಗ್ಗೆ ಅರಿವು ಮೂಡಿಸಲು ತಹಸೀಲ್ದಾರ್ ಪಿ.ವಿ.ವಿನಾಯಕ ಸಾಗರ್ ಹಾಗೂ ಮಹಿಳೆ ಮತ್ತು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಜಿ.ಹೊನ್ನಪ್ಪ ಜಂಟಿಯಾಗಿ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ಬಲ್ಲಪ್ಪನಹಟ್ಟಿ ಸಮೀಪದ ಎಮ್ಮೇಕರಕನ ಹಟ್ಟಿಯಲ್ಲೂ ಮನೆ ಮುಂದೆ ಟಾರ್ಪಲ್ ಕಟ್ಟಿ ಬಾಣಂತಿ ಮತ್ತು ಎಳೆ ಮಗುವನ್ನು ಬಿಟ್ಟಿದ್ದಾರೆ ಎಂಬ ಸುದ್ದಿ ಅಧಿಕಾರಿಗಳ ಕಿವಿಗೆ ಬಿತ್ತು, ತಕ್ಷಣ ಇಬ್ಬರೂ ಎಮ್ಮೆಕರಿಕೆ ಹಟ್ಟಿಗೆ ಭೇಟಿ ಕೊಟ್ಟು ಪರಿಶೀಲನೆ ನಡೆಸಿದರು.

ಎಮ್ಮೆಕರಿಕನ ಹಟ್ಟಿಯ ರಾಮಣ್ಣನ ಮನೆಯಲ್ಲಿ ಹುಟ್ಟುಮುಟ್ಟು ಮೌಢ್ಯ

ಈ ಸಂದರ್ಭದಲ್ಲಿ ಎಮ್ಮೆಕರಿಕನ ಹಟ್ಟಿಯ ರಾಮಣ್ಣ ಎಂಬುವರ ಕುಟುಂಬ ಹಸಿಹಸಿ ಬಾಣಂತಿಯಾದ ತಮ್ಮ ಮನೆ ಮಗಳನ್ನು ಮನೆಯೊಳಗೆ ಸೇರಿಸದೆ ಮನೆಯಾಚೆಗಿನ ಪಾಕೆ- ಗುಡಿಸಲಲ್ಲಿ ತಂದು ಬಿಟ್ಟಿದ್ದನ್ನು ಪರಿಶೀಲಿಸಿದ ತಹಸೀಲ್ದಾರರು ಆಕೆಯನ್ನು ಮತ್ತು ಆಕೆಯ ನವಜಾತ ಶಿಶುವನ್ನೂ ಮನೆಯೊಳಕ್ಕೆ ಸೇರಿಸಿಕೊಳ್ಳಲು ಹೇಳಿದರು. ಇದಕ್ಕೆ ಕುಟುಂಬದ ಯಜಮಾನ ರಾಮಣ್ಣ, ರಾಮಣ್ಣನ ಪತ್ನಿ ಮತ್ತು ಅಲ್ಲಿದ್ದ ವಯೋವೃದ್ಧ ಅಜ್ಜಿ ಎಲ್ಲರೂ ವಿರೋಧ ವ್ಯಕ್ತಪಡಿಸಿದರು.

ಮನೆಯೊಳಗೆ ಸೇರಿಸಿಕೊಳ್ಳದಿದ್ದರೆ ನಿಮ್ಮ ಮೇಲೆ ಕೇಸ್ ಹಾಕಿ ಜೈಲಿಗೆ ಹಾಕಬೇಕಾಗುತ್ತದೆ ಎಂದು ಎಚ್ಚರಿಕೆ ಸಹ ನೀಡಿದರು, ಜೈಲಿಗೆ ಬೇಕಾದ್ರೆ ಹಾಕಿ ಸ್ವಾಮಿ, ನಾವು ಜೈಲಿಗೆ ಹೋಗಲು ಸಿದ್ಧ, ಆದರೆ ಇವರನ್ನು ಮನೆಯೊಳಗೆ ಸೇರಿಸಿಕೊಳ್ಳುವುದಿಲ್ಲ, ಇವರನ್ನು ನಾವು ಚೆನ್ನಾಗಿಯೇ ನೋಡಿಕೊಳ್ಳುತ್ತಿದ್ದೇವೆ, ಊರಿಂದ ಆಚೆ ಬಿಡದೆ ಮನೆಯ ಮುಂದೆಯೇ ಇಟ್ಟು ಕೊಂಡಿದ್ದೇವೆ ಎಂದು ಸಮರ್ಥಿಸಿಕೊಂಡರು.

ಬರೋಬ್ಬರಿ ಒಂದು ಗಂಟೆಗಳ ಕಾಲ ಕುಟುಂಬದ ಮನವೊಲಿಸಲು ಪ್ರಯತ್ನಿಸಿದರೂ ಪೋಷಕರು ಸ್ಪಂದಿಸದಿದ್ದಾಗ ನಿಮ್ಮ ಮನೆ ಬಳಿ ಬಂದಿರುವುದು ತಾಲ್ಲೂಕು ದಂಡಾಧಿಕಾರಿ, ಈಗಲೇ ನಿಮಗೆ ಕಠಿಣ ದಂಡನೆ ನೀಡುವುದಾಗಿ ಎಚ್ಚರಿಸಿ ಪೊಲೀಸ್ ಹಾಗೂ ಆ್ಯಂಬುಲೆನ್ಸ್‌ಗೆ ಕರೆ ಮಾಡಲು ಸಿಬ್ಬಂದಿಗೆ ಸೂಚಿಸಿ ಗರಂ ಆದರು, ಇದರಿಂದ ಎಲ್ಲರೂ ಜಾಗೃತರಾಗಿ ಬಾಣಂತಿ- ಮಗಳನ್ನು ಮನೆಯೊಳಕ್ಕೆ ಸೇರಿಸಿಕೊಂಡರು, ಆದರೆ ಈ ಸಂದರ್ಭದಲ್ಲಿ ತಹಸೀಲ್ದಾರ್ ಮತ್ತು ಸಿಡಿಪಿಒಗೆ ನಮ್ಮ ಆಚಾರ ವಿಚಾರಕ್ಕೆ ತೊಂದರೆ ಕೊಡುತ್ತಿರುವ ನಿಮ್ಮನ್ನು ನಮ್ಮ ದೇವರು ಸುಮ್ಮನೆ ಬಿಡುವುದಿಲ್ಲ ನೋಡ್ತಾ ಇರಿ ಎಂದು ಬೈಯ್ದುಕೊಂಡರು, ಇದಕ್ಕೆ ತಹಸೀಲ್ದಾರ್ ಆಯ್ತು ಆ ದೇವರು ನಮಗೆ ಶಿಕ್ಷೆ ಕೊಡಲಿ ನೀವೊಬ್ಬರೇ ಚೆನ್ನಾಗಿರಿ ಎಂದು ಶುಭ ಹಾರೈಸಿ ಹಿಂದಿರುಗಿದರು.

ಅಜ್ಜಯ್ಯನ ಶಾಪಕ್ಕೆ ತುತ್ತಾಗುವ ಆತಂಕ ಬೇಡ; ಕಾನೂನು ಗೌರವಿಸಿ

ಈ ಅನಿಷ್ಟ ಸಂಪ್ರದಾಯದಿಂದ ಮುಕ್ತಿ ಪಡೆಯಬೇಕು ಎಂದು ಜಾಗೃತಿ ಅರಿವು ಮೂಡಿಸಲು ಬಗೆಬಗೆಯಾದ ಕಾರ್ಯಕ್ರಮ ಮಾಡುತ್ತಿದ್ದರೂ ದೇವರ ಭಯ, ಅಜ್ಜಯ್ಯನ ಶಾಪಕ್ಕೆ ತುತ್ತಾಗುವ ಆತಂಕ ಅವರಲ್ಲಿ ಮನೆ ಮಾಡಿದೆ, ಹಾಗಾಗಿ ಸ್ವತಃ ಎಳೆ ಬಾಣಂತಿಯಾದ ಮಗಳನ್ನೇ ಮನೆಯೊಳಗೆ ಸೇರಿಸಿಕೊಳ್ಳುತ್ತಿರಲಿಲ್ಲ, ಇದನ್ನು ಗಮನಿಸಿದರೆ ಇನ್ನೂ ಜನರ ಮೌಢ್ಯ ಮತ್ತು ಜಡ ಸಂಪ್ರದಾಯಗಳ ಮೇಲಿನ ಮೋಹ ನಿರ್ಮೂಲನೆ ಆಗಿಲ್ಲ, ಇದಕ್ಕೆ ಕಾನೂನು ಮತ್ತು ಕಠಿಣ ಶಿಕ್ಷೆಯೇ ಅಂತಿಮ ಪರಿಹಾರ ಚಿಕ್ಕನಾಯಕನ ಹಳ್ಳಿ ತಹಸೀಲ್ದಾರ್ ಪಿ.ವಿ.ವಿನಾಯಕ ಸಾಗರ್ ತಿಳಿಸಿದ್ದಾರೆ.

ಸರ್ಕಾರಿ ಯೋಜನೆಗಳ ಫಲಾಪೇಕ್ಷೆ ಬಯಸುವ ದೇಶದ ಪ್ರಜೆಗಳು ದೇಶದ ಸಂವಿಧಾನ ಮತ್ತು ಕಾನೂನನ್ನು ಗೌರವಿಸುವಂತಾಗಬೇಕು, ಸಂವಿಧಾನ ನೀಡಿರುವ ಮಹಿಳಾ ಸಮಾನತೆಯ ಹಕ್ಕನ್ನು ಮೊಟಕುಗೊಳಿಸಲು ಯಾರೂ ಯತ್ನಿಸಬಾರದು, ಅದು ಕಾನೂನು ದೃಷ್ಟಿಯಿಂದ ಗುರುತರ ಅಪರಾಧ, ನಿಸರ್ಗ ಸಹಜವಾಗಿ ನಡೆಯುವ ಜೈವಿಕ ಕ್ರಿಯೆಯೊಂದನ್ನು ಅನಿಷ್ಟ ಎಂದು ಬಗೆದರೆ ಅದು ಮನುಷ್ಯ ವಿರೋಧಿ ಕೆಲಸವಾಗುತ್ತದೆ, ಅಂಥವರು ಕಠಿಣ ದಂಡನೆಗೆ ಗುರಿಯಾಗಬೇಕಾಗುತ್ತದೆ ಚಿಕ್ಕನಾಯಕನ ಹಳ್ಳಿ ಸಿಡಿಪಿಒ ಜಿ.ಹೊನ್ನಪ್ಪ ಎಚ್ಚರಿಕೆ ನೀಡಿದ್ದಾರೆ.

(ವರದಿ- ಈಶ್ವರ್, ತುಮಕೂರು)