National Farmers Day: ತಿಪಟೂರಲ್ಲಿ ಡಿ 23, 24 ಕ್ಕೆ ರಾಗಿ ರುಚಿ ಸವಿಯೋಣ, ರಾಗಿ ಚೀಲ ಎತ್ತೋಣ, ರೈತ ದಿನಾಚರಣೆ ವಿಶೇಷ ಕಾರ್ಯಕ್ರಮ ಮರೆಯಬೇಡಿ
ಕನ್ನಡ ಸುದ್ದಿ  /  ಕರ್ನಾಟಕ  /  National Farmers Day: ತಿಪಟೂರಲ್ಲಿ ಡಿ 23, 24 ಕ್ಕೆ ರಾಗಿ ರುಚಿ ಸವಿಯೋಣ, ರಾಗಿ ಚೀಲ ಎತ್ತೋಣ, ರೈತ ದಿನಾಚರಣೆ ವಿಶೇಷ ಕಾರ್ಯಕ್ರಮ ಮರೆಯಬೇಡಿ

National Farmers Day: ತಿಪಟೂರಲ್ಲಿ ಡಿ 23, 24 ಕ್ಕೆ ರಾಗಿ ರುಚಿ ಸವಿಯೋಣ, ರಾಗಿ ಚೀಲ ಎತ್ತೋಣ, ರೈತ ದಿನಾಚರಣೆ ವಿಶೇಷ ಕಾರ್ಯಕ್ರಮ ಮರೆಯಬೇಡಿ

ದೇಶಾದ್ಯಂತ ಡಿಸೆಂಬರ್ 23ರಂದು ರಾಷ್ಟ್ರೀಯ ರೈತ ದಿನಾಚರಣೆ ಆಚರಿಸಲ್ಪಡುತ್ತಿದೆ. ಇದೇ ನಿಮಿತ್ತವಾಗಿ ತಿಪಟೂರಿನಲ್ಲಿ ಡಿ.23 ಮತ್ತು 24ರಂದು ರಾಗಿ ರುಚಿ ಸವಿಯೋಣ ಬನ್ನಿ ಎಂಬ ವಿಶೇಷ ಕಾರ್ಯಕ್ರಮ ಆಯೋಜನೆಯಾಗಿದೆ. ಇದರ ವಿವರ ಇಲ್ಲಿದೆ.

ರೈತ ದಿನಾಚರಣೆ ಪ್ರಯುಕ್ತ ತಿಪಟೂರಿನಲ್ಲಿ ಡಿ.23, 24 ರಂದು  ರಾಗಿ ರುಚಿ ಸವಿಯೋಣ, ರಾಗಿ ಚೀಲ ಎತ್ತೋಣ ವಿಶೇಷ ಕಾರ್ಯಕ್ರಮ ನಡೆಯಲಿದೆ.
ರೈತ ದಿನಾಚರಣೆ ಪ್ರಯುಕ್ತ ತಿಪಟೂರಿನಲ್ಲಿ ಡಿ.23, 24 ರಂದು ರಾಗಿ ರುಚಿ ಸವಿಯೋಣ, ರಾಗಿ ಚೀಲ ಎತ್ತೋಣ ವಿಶೇಷ ಕಾರ್ಯಕ್ರಮ ನಡೆಯಲಿದೆ. (ESP/ HTKannada)

ತುಮಕೂರು: ರಾಷ್ಟ್ರೀಯ ರೈತ ದಿನಾಚರಣೆ ನಿಮಿತ್ತ ಡಿಸೆಂಬರ್ 23 ಮತ್ತು 24 ರಂದು ತಿಪಟೂರಿನಲ್ಲಿ ರಾಗಿ ರುಚಿ ಸವಿಯೋಣ ಬನ್ನಿ ಎಂಬ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಸೊಗಡು ಜನಪದ ಹೆಜ್ಜೆ ಅಧ್ಯಕ್ಷ ಸಿರಿಗಂಧ ಗುರು ತಿಳಿಸಿದರು.
ತಿಪಟೂರು ನಗರದ ಸತ್ಯ ಗಣಪತಿ ಆಸ್ಥಾನ ಮಂಟಪದಲ್ಲಿ ಸುದ್ದಿಗೋಷ್ಠಿ ನಡೆಸಿದ ಸಿರಿಗಂಧ ಗುರು, ಈ ಕಾರ್ಯಕ್ರಮದಲ್ಲಿ ರಾಗಿಯನ್ನು ಕಲ್ಲಿನಿಂದ ಬೀಸಿ ರಾಗಿ ಮುದ್ದೆ ಮಾಡಿ ಊಟ ಬಡಿಸಲಾಗುವುದು, ಜೊತೆಗೆ ರಾಗಿ ಚೀಲ ಎತ್ತುವ ಸ್ಪರ್ಧೆ ಹಮ್ಮಿಕೊಳ್ಳಲಾಗಿದೆ. ರಾಗಿ ಮುದ್ದೆ, ರಾಗಿ ಶ್ಯಾವಿಗೆ, ಇಡ್ಲಿ, ದೋಸೆ, ಅಂಬಲಿ, ಕಡುಬು, ರೊಟ್ಟಿ, ಹಬೆ ಉಪ್ಪಿಟ್ಟು, ನಿಪ್ಪಟ್ಟು, ಸಂಡಿಗೆ, ಚಕ್ಕಲಿ, ಕೀಲ್ಸ, ಹಸಿ ರಾಗಿ ಪಲ್ಲಾರ, ಇತರ ಖಾದ್ಯಗಳ ತಿಂಡಿ ತಿನಿಸುಗಳ ಆಯೋಜನೆಯಿದ್ದು, ರಾಗಿ ಕಣ, ರಾಗಿ ತಳಿ ಪ್ರದರ್ಶನ, ರಾಗಿ ಬಿತ್ತನೆ, ಒಕ್ಕಣೆ ಮಾಡುವ ಪ್ರಾತ್ಯಕ್ಷಿತೆ ತೋರಿಸಲಾಗುತ್ತೆ ಎಂದು ಹೇಳಿದರು.

ಸೊಗಡು ಜನಪದ ಹೆಜ್ಜೆಯು ಎರಡು ದಶಕಗಳಿಂದಲೂ ಗ್ರಾಮೀಣ ಭಾಗಕ್ಕೆ ಸಂಬಂಧಪಟ್ಟಂತಹ ಲಗೋರಿ, ಚಿನ್ನಿದಾಂಡು, ಕೆಸರುಗದ್ದೆ ಓಟ ಕಾರ್ಯಕ್ರಮ ಆಯೋಜನೆ ಮಾಡುತ್ತಾ ಬರುತ್ತಿದೆ. ಕಳೆದ ಬಾರಿ ಹಲಸಿನ ಹಬ್ಬ ಆಚರಣೆ ಮಾಡಿ ತಾಲೂಕಿನ ಜನತೆಗೆ ಗ್ರಾಮೀಣ ಭಾಗದ ಸೊಗಡನ್ನು ಬಿಂಬಿಸಲಾಗಿತ್ತು. ಅದೇ ರೀತಿಯಲ್ಲಿ ಈ ಬಾರಿ ಕೃಷಿ ಇಲಾಖೆ, ಜೇಮ್ಸ್ ಫೌಂಡೇಶನ್ ಹಾಗೂ ಸತ್ಯ ಗಣಪತಿ ಸೇವಾ ಟ್ರಸ್ಟ್ ಹಾಗೂ ಹಲವು ಸಂಘ ಸಂಸ್ಥೆಗಳ ಜೊತೆಯಾಗಿ ರಾಗಿ ರುಚಿ ಸವಿಯೋಣ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಸಿರಿಗಂಧ ಗುರು ತಿಳಿಸಿದರು.

ರಾಗಿ ತಿಂದು ನಿರೋಗಿ ಹಾಗೂ ಹಿಟ್ಟು ತಿಂದು ಗಟ್ಟಿಯಾಗು ಎಂಬ ಜಾನಪದ ಮಾತುಗಳ ಜೊತೆಯಲ್ಲಿ ರೈತ ದಿನಾಚರಣೆಯ ಅಂಗವಾಗಿ ನಡೆಸುತ್ತಿರುವ ಈ ಕಾರ್ಯಕ್ರಮದಲ್ಲಿ ಶನಿವಾರ ಮಹಿಳೆಯರಿಗಾಗಿ ರಾಗಿ ಕಲ್ಲು ಬೀಸುವ ಸ್ಪರ್ಧೆ, ರಾಗಿ ತಿನಿಸುಗಳ ರುಚಿ ಸ್ಪರ್ಧೆ, ಪುರುಷರಿಗೆ ರಾಗಿ ಮುದ್ದೆ ಊಟ ಮಾಡುವ ಸ್ಪರ್ಧೆ, ರಾಗಿ ಚೀಲ ಎತ್ತುವ ಸ್ಪರ್ಧೆ ಮಕ್ಕಳಿಗೆ ರಾಗಿ ಬೆಳೆ ಸಂಬಂಧಿಸಿದಂತೆ ಚಿತ್ರ ಬಿಡಿಸುವ, ಪ್ರಬಂಧ ಬರೆಯುವ ಸ್ಪರ್ಧೆ ಆಯೋಜನೆ ಮಾಡಲಾಗಿದೆ ಎಂದು ಸಂಸ್ಥೆಯ ಸಂಘಟಕ, ಶಿಕ್ಷಕ ಸುರೇಶ್ ತಿಳಿದರು.

ಜೇಮ್ಸ್ ಫೌಂಡೇಶನ್‌ನ ತರಕಾರಿ ಗಂಗಾಧರ್ ಮಾತನಾಡಿ, ಕಾರ್ಯಕ್ರಮ ಸಂಪೂರ್ಣವಾಗಿ ಗ್ರಾಮೀಣ ಭಾಗದ ಪರಿಚಯ ಮಾಡಿಕೊಡುತ್ತಿದ್ದು ಎರಡು ದಿನಗಳ ಕಾಲ ರಾಗಿಗೆ ಸಂಬಂಧಪಟ್ಟ ಅಧ್ಯಯನ ವಿಷಯಗಳು, ವಿವಿಧ ರೀತಿಯ ಮಾರಾಟ ವಸ್ತುಗಳ ವ್ಯವಸ್ಥೆ ಮನರಂಜನೆ ಹಾಗೂ ವಿವಿಧ ವಿಶೇಷ ಸ್ಪರ್ಧೆ ಆಯೋಜನೆ ಮಾಡಲಾಗಿದೆ ಎಂದು ತಿಳಿಸಿದರು.

ಸೊಗಡು ಜನಪದ ಹೆಜ್ಜೆಯ ಗೌರವಾಧ್ಯಕ್ಷ ಗುಂಗರ ಮಳೆ ನಿಸರ್ಗ ಪ್ರೇಮಿ ಮುರುಳೀಧರ್, ಇಂದಿನ ಜನರಿಗೆ ಮಣ್ಣಿನ ಜೊತೆ ಹಾಗೂ ಗ್ರಾಮೀಣ ಭಾಗದ ಬೆಳೆಗಳ ಜೊತೆ ಸಂಪರ್ಕ ಕಲ್ಪಿಸಿ ಕೊಡುವ ಕಾರ್ಯಕ್ರಮವಾಗಿದ್ದು ಯುವ ಪೀಳಿಗೆಗೆ ಆಧುನಿಕ ಶೈಲಿ ಆಹಾರ ಪದ್ಧತಿಯಲ್ಲಿ ರಾಗಿ ರೊಟ್ಟಿ, ರಾಗಿ ಮುದ್ದೆ ಆಕರ್ಷಣೆವಾಗಿ ಕಂಡು ಬರುತ್ತಿಲ್ಲ ಎಂಬುದನ್ನು ವಿಶೇಷ ರೀತಿಯಲ್ಲಿ ತಿಳಿಸುವ ಪ್ರಯತ್ನ ಮಾಡಲಾಗುತ್ತದೆ ಎಂದು ಹೇಳಿದರು

ಕೃಷಿ ಇಲಾಖೆಯ ತಾಂತ್ರಿಕ ಅಧಿಕಾರಿ ಸುಧಾಕರ್, ಇಲಾಖೆ ವತಿಯಿಂದ ರಾಗಿಯನ್ನು ಜನರಿಗೆ ಮುಟ್ಟಿಸಲು ಹಾಗೂ ರಾಗಿಯ ಬನ್ನ ಕಪ್ಪು ಎಂಬ ಭಾವನೆ ಬದಲಾವಣೆಗಾಗಿ ಹೊಸದಾಗಿ ರಾಗಿಯ ತಳಿ 340 ಬಿಳಿ ರಾಗಿ ಪರಿಚಯಿಸಿದರು ಸಹ ಕಪ್ಪು ರಾಗಿಗೆ ಇರುವ ಮಹತ್ವ ಹೇರಳವಾಗಿದೆ, ಇಂತಹ ರಾಗಿ ಬರಗಾಲ ಸಮಯದಲ್ಲೂ ಬೆಳೆದಿದ್ದು, ಇಲ್ಲಿನ ಕಾರ್ಯಕ್ರಮದಲ್ಲಿ ಪ್ರದರ್ಶನಕ್ಕೆ ಆಯೋಜಿಸಲಾಗಿದೆ ಎಂದು ತಿಳಿಸಿದರು.

ಕಾರ್ಯಕ್ರಮದ ಹೆಚ್ಚಿನ ಮಾಹಿತಿಗಾಗಿ 8217032421, 9972499756, 9731420228 ಕ್ಕೆ ಸಂಪರ್ಕಿಸಬಹುದು.

Whats_app_banner