ಗೊರವನಹಳ್ಳಿ ಮಹಾಲಕ್ಷ್ಮಿಗೆ ವಿಶೇಷ ಪೂಜೆ, ವರಮಹಾಲಕ್ಷ್ಮಿಯ ದರ್ಶನ ಪಡೆದ ಭಕ್ತರು, ದೇಗುಲದಲ್ಲಿ ಹಬ್ಬದ ಸಂಭ್ರಮ ಸಡಗರ
Varamahalakshmi habba; ತುಮಕೂರು ಜಿಲ್ಲೆ ಕೊರಟಗೆರೆ ತಾಲೂಕು ಗೊರವನಹಳ್ಳಿ ಲಕ್ಷ್ಮಿ ದೇವಾಲಯದಲ್ಲಿ ಇಂದು ವರಮಹಾಲಕ್ಷ್ಮಿ ಹಬ್ಬದ ಸಂಭ್ರಮ ಸಡಗರ. ತಾಯಿ ಲಕ್ಷ್ಮಿಗೆ ವಿಶೇಷ ಅಲಂಕಾರ ಮತ್ತು ಪೂಜೆ ನೆರವೇರಿತು. ಸಾವಿರಾರು ಭಕ್ತರು ದೇವಿಯ ದರ್ಶನ ಪಡೆದರು. (ವರದಿ- ಈಶ್ವರ್, ತುಮಕೂರು)
ತುಮಕೂರು: ನಾಡಿನೆಲ್ಲೆಡೆ ಶ್ರೀ ವರಮಹಾ ಲಕ್ಷ್ಮೀ ಹಬ್ಬದ ಸಡಗರ ಸಂಭ್ರಮ ಜೋರಾಗಿತ್ತು. ಪ್ರತಿ ವರ್ಷದಂತೆ ಈ ವರ್ಷವೂ ವರಮಹಾಲಕ್ಷ್ಮೀ ಹಬ್ಬದ ಪ್ರಯುಕ್ತ ರಾಜ್ಯದ ನಾನಾ ಭಾಗಗಳಿಂದ ಕೊರಟಗೆರೆ ತಾಲೂಕಿನ ಗೊರವನಹಳ್ಳಿ ಶ್ರೀಮಹಾಲಕ್ಷ್ಮೀ ದೇವಾಲಯಕ್ಕೆ ಭಕ್ತರು ಭೇಟಿ ನೀಡಿ ತಾಯಿಯ ದರ್ಶನ ಪಡೆದು ತಮ್ಮ ಇಷ್ಟಾರ್ಥ ಈಡೇರಿಸುವಂತೆ ಪ್ರಾರ್ಥನೆ ಮಾಡಿಕೊಂಡರು.
ವರಮಹಾಲಕ್ಷ್ಮೀ ಹಬ್ಬದ ಪ್ರಯುಕ್ತ ಬೆಳಗ್ಗೆ 6 ರಿಂದ 7.30ರ ವರೆಗೆ ಪಂಚಾಮೃತ ಅಭಿಷೇಕ, ನಂತರ ಗಣಪತಿ ಹೋಮ ಸೇರಿ ವಿಶೇಷ ಪೂಜೆ ನೆರವೇರಿತು. ತಾಯಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು, ಪದ್ಮಶ್ರೀ ಪುರಸ್ಕೃತೆ ಸಾಲುಮರದ ತಿಮ್ಮಕ್ಕ, ಎಲೆರಾಂಪುರ ಶ್ರೀಮಠದ ಡಾ.ಹನುಮಂತನಾಥ ಸ್ವಾಮೀಜಿ, ತಗ್ಗೀಹಳ್ಳಿ ಶ್ರೀಮಠದ ರಮಾನಂದ ಸ್ವಾಮೀಜಿ ಸೇರಿದಂತೆ ಹಲವು ಗಣ್ಯರು ದೇವಸ್ಥಾನಕ್ಕೆ ಭೇಟಿ ನೀಡಿ ತಾಯಿಯ ದರ್ಶನ ಪಡೆದರು.
ಶ್ರೀಗೊರವನ ಹಳ್ಳಿ ಮಹಾಲಕ್ಷ್ಮೀ ದರ್ಶನ ಸುಸೂತ್ರ
ಎಲೆರಾಂಪುರ ಶ್ರೀಮಠದ ಡಾ.ಹನುಮಂತನಾಥ ಸ್ವಾಮೀಜಿ ಮಾತನಾಡಿ, ಪ್ರತಿವರ್ಷದಂತೆ ಈ ವರ್ಷವು ಸಹ ಗೊರವನಹಳ್ಳಿ ಶ್ರೀಮಹಾಲಕ್ಷ್ಮೀ ದೇವಾಲಯದಲ್ಲಿ ಹಬ್ಬವನ್ನು ಅರ್ಥಪೂರ್ಣವಾಗಿ ಆಚರಣೆ ಮಾಡಲಾಗಿದೆ, ರಾಜ್ಯದ ನಾನಾ ಭಾಗಗಳಿಂದ ಬರುವ ಭಕ್ತರಿಗೆ ವಿಶೇಷ ದರ್ಶನಕ್ಕೆ ಮತ್ತು ದಾಸೋಹ ವ್ಯವಸ್ಥೆ ಕಲ್ಪಿಸಿದ್ದಾರೆ, ಈ ವರ್ಷ ನಿರೀಕ್ಷೆಗೂ ಮೀರಿದ ಜನರು ತಾಯಿಯ ದರ್ಶನ ಪಡೆದಿದ್ದು, ಗೊರವನಹಳ್ಳಿ ಮಹಾಲಕ್ಷ್ಮೀ ಚಾರಿಟಬಲ್ ಟ್ರಸ್ಟ್ ಉತ್ತಮ ಕಾರ್ಯ ನಿರ್ವಹಿಸಿದೆ ಎಂದು ಹೇಳಿದರು.
ಕೊರಟಗೆರೆ ತಾಲೂಕಿನ ಶ್ರೀಗೊರವನ ಹಳ್ಳಿ ಮಹಾಲಕ್ಷ್ಮೀ ಚಾರಿಟಬಲ್ ಟ್ರಸ್ಟ್ ವತಿಯಿಂದ ಭಕ್ತರ ದರ್ಶನಕ್ಕೆ ವಿಶೇಷ ವ್ಯವಸ್ಥೆ ಸಹ ಕಲ್ಪಿಸಲಾಗಿತ್ತು, ಬಂದಂತಹ ಭಕ್ತರಿಗೆ ನೂತನ ದಾಸೋಹ ಕಟ್ಟಡದಲ್ಲಿ ದಾಸೋಹದ ವ್ಯವಸ್ಥೆ ಕೂಡ ಮಾಡಲಾಗಿದ್ದು, ಫ್ರೆಂಡ್ಸ್ ಗ್ರೂಪ್‌ನವರು ದಾಸೋಹ ಕಾರ್ಯದಲ್ಲಿ ಕೈ ಜೋಡಿಸಿದರು, ಪೊಲೀಸ್ ಇಲಾಖೆ ಅಧಿಕಾರಿಗಳು ಸೂಕ್ತ ಭದ್ರತೆ ನೀಡಿ ಭಕ್ತರ ದರ್ಶನಕ್ಕೆ ಅನುಕೂಲ ಮಾಡಿಕೊಟ್ಟರು.
ಧರ್ಮಜಾಗೃತಿಗಾಗಿ ವರಮಹಾಲಕ್ಷ್ಮಿ ವ್ರತಾಚರಣೆ
ತಗ್ಗಿಹಳ್ಳಿ ಶ್ರೀಮಠದ ಸ್ವಾಮಿ ರಮಾನಂದಜೀ ಮಾತನಾಡಿ, ವರಮಹಾಲಕ್ಷ್ಮೀ ಹಬ್ಬವು ಅರ್ಥಪೂರ್ಣವಾಗಿ ಆಚರಣೆ ಮಾಡುವಂತಾಗಬೇಕು, ಅರ್ಥಪೂರ್ಣವಾಗಿ ಆಚರಿಸದಿದ್ದರೆ ಧರ್ಮ ಜಾಗೃತಿ ಖಂಡಿತ ಆಗುವುದಿಲ್ಲ, ಆಧುನಿಕ ತಂತ್ರಜ್ಞಾನ ಮುಂದುವರೆದಂತೆ ಧರ್ಮ ಜಾಗೃತಿಯನ್ನು ಇಂದಿನ ಯುವ ಪೀಳಿಗೆ ಮರೆಯುತ್ತಿದೆ, ಗ್ರಾಮೀಣ ಭಾಗದ ರೈತಾಪಿ ಕುಟುಂಬದಿಂದ ಮಾತ್ರ ಧರ್ಮ ಜಾಗೃತಿ ಕೆಲಸ ಆಗುತ್ತಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಗೊರವನಹಳ್ಳಿ ಶ್ರೀಮಹಾಲಕ್ಷ್ಮೀ ಚಾರಿಟಬಲ್ ಟ್ರಸ್ಟ್‌ನ ಅಧ್ಯಕ್ಷ ವಾಸುದೇವ, ವಿಶೇಷ ಅಧಿಕಾರಿ ಕೇಶವಮೂರ್ತಿ, ಕಾರ್ಯದರ್ಶಿ ಮುರುಳಿಕೃಷ್ಣ, ಖಚಾಂಚಿ ಜಗದೀಶ್, ಧರ್ಮದರ್ಶಿಗಳಾದ ಡಾ.ಲಕ್ಷ್ಮೀಕಾಂತ, ನಟರಾಜು, ಶ್ರೀಪ್ರಸಾದ್, ರವಿರಾಜೇ ಅರಸ್, ಮಂಜುನಾಥ್, ಓಂಕಾರೇಶ್, ಚಿಕ್ಕ ನರಸಯ್ಯ, ಬಾಲಕೃಷ್ಣ, ನರಸರಾಜು, ಲಕ್ಷ್ಮೀನರಸಯ್ಯ, ನಾಗರಾಜು, ಕಾರ್ಯ ನಿರ್ವಾಹಕ ಅಧಿಕಾರಿ ಜಿ.ಸಿ.ಲಕ್ಷ್ಮಯ್ಯ, ಫ್ರೆಂಡ್ಸ್ ಗ್ರೂಪ್‌ನ ರವಿಕುಮಾರ್, ಮಲ್ಲಣ್ಣ ಇತರರು ಇದ್ದರು.
(ವರದಿ- ಈಶ್ವರ್, ತುಮಕೂರು)