Tumul Election 2025: ತುಮುಲ್ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಮೇಲುಗೈ; ನಿರ್ದೇಶಕ ಸ್ಥಾನಗಳ ಫಲಿತಾಂಶ ಪ್ರಕಟ
Tumul Election 2025: ತುಮಕೂರು ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ (ತುಮುಲ್) ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಮೇಲುಗೈ ಸಾಧಿಸಿದೆ. ತುಮುಲ್‌ನ ನಿರ್ದೇಶಕ ಸ್ಥಾನಗಳ ಫಲಿತಾಂಶ ಪ್ರಕಟವಾಗಿದೆ. ಅದರ ವಿವರ ಇಲ್ಲಿದೆ (ವರದಿ- ಈಶ್ವರ್, ತುಮಕೂರು)
Tumul Election 2025: ತೀವ್ರ ಕುತೂಹಲ ಮೂಡಿಸಿದ್ದ ತುಮಕೂರು ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ ನಿರ್ದೇಶಕರ ಸ್ಥಾನಗಳಿಗೆ ನಡೆದಿದ್ದ ಚುನಾವಣೆಯ ಫಲಿತಾಂಶ ಹೊರ ಬಿದ್ದಿದ್ದು, ಆಡಳಿತಾರೂಢ ಕಾಂಗ್ರೆಸ್ ಪಕ್ಷ ಮೇಲುಗೈ ಸಾಧಿಸಿದೆ. ತುಮಕೂರು ನಗರದ ತಾಲ್ಲೂಕು ಕಚೇರಿಯಲ್ಲಿ ಚುನಾವಣಾಧಿಕಾರಿ ಹಾಗೂ ಉಪ ವಿಭಾಗಾಧಿಕಾರಿ ಗೌರವಕುಮಾರ್ ಶೆಟ್ಟಿ ಅವರ ಸಮಕ್ಷದಲ್ಲಿ ಬೆಳಗ್ಗೆ 8 ಗಂಟೆಗೆ ಮತ ಎಣಿಕೆ ಕಾರ್ಯ ಆರಂಭವಾಗಿ 10 ಗಂಟೆ ವೇಳೆಗೆ ಸಂಪೂರ್ಣ ಫಲಿತಾಂಶ ಪ್ರಕಟವಾಯಿತು.
ತುಮುಲ್ ಚುನಾವಣೆ ಫಲಿತಾಂಶ ವಿವರ
ತುಮಕೂರು ಗ್ರಾಮಾಂತರ, ತಿಪಟೂರು, ಮಧುಗಿರಿ, ಪಾವಗಡ ಹಾಗೂ ಗುಬ್ಬಿ ತಾಲ್ಲೂಕುಗಳಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಗೆಲುವು ಸಾಧಿಸಿದರೆ, ಕುಣಿಗಲ್, ಶಿರಾ, ಕೊರಟಗೆರೆ ತಾಲ್ಲೂಕಿನಿಂದ ಜೆಡಿಎಸ್ ಹಾಗೂ ಬಿಜೆಪಿ ಮೈತ್ರಿ ಪಕ್ಷದ ಬೆಂಬಲಿತ ಅಭ್ಯರ್ಥಿಗಳು, ತುರುವೇಕೆರೆ ಮತ್ತು ಚಿಕ್ಕನಾಯಕನ ಹಳ್ಳಿ ತಾಲ್ಲೂಕಿನಿಂದ ಸ್ವತಂತ್ರ ಅಭ್ಯರ್ಥಿ ಜಯಗಳಿಸಿದ್ದಾರೆ.
ತುಮಕೂರು ತಾಲ್ಲೂಕಿನಿಂದ ಸ್ಪರ್ಧಿಸಿದ್ದ ಹೆಚ್.ಎಂ.ನಂಜೇಗೌಡ 83 ಮತಗಳನ್ನು ಪಡೆದು ಹೆಚ್.ಕೆ. ರೇಣುಕಾಪ್ರಸಾದ್ (66 ಮತ) ಅವರ ವಿರುದ್ಧ ಗೆಲುವು ಸಾಧಿಸಿದ್ದಾರೆ. ಗುಬ್ಬಿ ತಾಲ್ಲೂಕಿನಿಂದ ಶಾಸಕ ಹಾಗೂ ಕೆಎಸ್ಸಾರ್ಟಿಸಿ ನಿಗಮದ ಅಧ್ಯಕ್ಷ ಎಸ್.ಆರ್.ಶ್ರೀನಿವಾಸ್ ಅವರ ಪತ್ನಿ ಭಾರತಿದೇವಿ.ಕೆ.ಪಿ. ಅವರು 68 ಮತಗಳನ್ನು ಪಡೆದು ಚಂದ್ರಶೇಖರ್.ಜಿ. (52 ಮತ) ವಿರುದ್ಧ ಜಯಗಳಿಸಿದ್ದಾರೆ.
ಚಿಕ್ಕನಾಯಕನ ಹಳ್ಳಿ ತಾಲ್ಲೂಕಿನಿಂದ ಬಿ.ಎನ್.ಶಿವಪ್ರಕಾಶ್ ಅವರು 82 ಮತ ಪಡೆದು ಎಸ್.ರಾಜಶೇಖರ್ (27 ಮತ) ಅವರ ವಿರುದ್ಧ ಗೆಲುವು ಸಾಧಿಸಿದ್ದಾರೆ. ತಿಪಟೂರು ತಾಲ್ಲೂಕಿನಿಂದ ಸ್ಪರ್ಧಿಸಿದ್ದ ಎಂ.ಕೆ.ಪ್ರಕಾಶ್ ಅವರು 105 ಮತಗಳನ್ನು ಪಡೆದು ತ್ರಿಯಂಬಕ (34 ಮತ) ವಿರುದ್ಧ ವಿಜಯಿಯಾಗಿದ್ದಾರೆ. ತುರುವೇಕೆರೆ ತಾಲ್ಲೂಕಿನಿಂದ ಸಿ.ವಿ.ಮಹಲಿಂಗಯ್ಯ 85 ಮತಗಳನ್ನು ಪಡೆದು ಪಿ.ಟಿ. ಗಂಗಾಧರಯ್ಯ ವಿರುದ್ಧ ಜಯಗಳಿಸಿದ್ದಾರೆ.
(ವರದಿ- ಈಶ್ವರ್, ತುಮಕೂರು)