Tumkur News: ಎರಡು ಅಪಘಾತ: ತುಮಕೂರು ಜಿಲ್ಲೆಯಲ್ಲಿ ಆರು ಮಂದಿ ಸಾವು
ಕನ್ನಡ ಸುದ್ದಿ  /  ಕರ್ನಾಟಕ  /  Tumkur News: ಎರಡು ಅಪಘಾತ: ತುಮಕೂರು ಜಿಲ್ಲೆಯಲ್ಲಿ ಆರು ಮಂದಿ ಸಾವು

Tumkur News: ಎರಡು ಅಪಘಾತ: ತುಮಕೂರು ಜಿಲ್ಲೆಯಲ್ಲಿ ಆರು ಮಂದಿ ಸಾವು

Tumkur Accident News ತುಮಕೂರು ಜಿಲ್ಲೆಯಲ್ಲಿ ದಿನದ ಅಂತರದಲ್ಲೇ ಎರಡು ಕಡೆ ಸಂಭವಿಸಿದ ಅಪಘಾತಗಳಲ್ಲಿ ಆರು ಮಂದಿ ಮೃತಪಟ್ಟಿದ್ದಾರೆ. ಒಂದು ಕಡೆ ಬೈಕ್‌ಗಳ ನಡುವೆ ಡಿಕ್ಕಿಯಾದರೆ, ಮತ್ತೊಂದು ಕಡೆ ಕಾರಿಗೆ ಲಾರಿ ಡಿಕ್ಕಿಯಾಗಿದೆ.

ತುಮಕೂರು ಜಿಲ್ಲೆ ಮಧುಗಿರಿ ತಾಲ್ಲೂಕಿನ ಮಿಡಿಗೇಶಿ ಬಳಿ ಲಾರಿ ಡಿಕ್ಕಿಯಿಂದ ನಜ್ಜುಗುಜ್ಜಾದ ಕಾರು.
ತುಮಕೂರು ಜಿಲ್ಲೆ ಮಧುಗಿರಿ ತಾಲ್ಲೂಕಿನ ಮಿಡಿಗೇಶಿ ಬಳಿ ಲಾರಿ ಡಿಕ್ಕಿಯಿಂದ ನಜ್ಜುಗುಜ್ಜಾದ ಕಾರು.

ತುಮಕೂರು: ಒಂದೇ ದಿನದ ಅಂತರದಲ್ಲಿ ತುಮಕೂರು ಜಿಲ್ಲೆಯಲ್ಲಿ ಸಂಭವಿಸಿದ ಎರಡು ಭೀಕರ ಅಪಘಾತಗಳಲ್ಲಿ ಆರು ಮಂದಿ ಮೃತಪಟ್ಟಿದ್ದಾರೆ.

ಎರಡು ಬೈಕ್‌ಗಳ ನಡುವೆ ನಡೆದ ಡಿಕ್ಕಿಯಲ್ಲಿ ಮೂವರು ಮೃತಪಟ್ಟ ಘಟನೆ ಜಿಲ್ಲೆಯಲ್ಲಿ ಮಂಗಳವಾರ ರಾತ್ರಿ ನಡೆದಿದೆ.

ಪಾವಗಡತಾಲ್ಲೂಕಿನ ನಿಡಗಲ್ ಹೋಬಳಿಯ ಮಂಗಳವಾಡ ಬಳಿ ಎರಡು ಬೈಕ್ ಗಳ ಮಧ್ಯೆ ನಡೆದ ಅಪಘಾತದಲ್ಲಿ ಮೂವರು ಮೃತಪಟ್ಟಿದ್ದಾರೆ.

ಪಾವಗಡ ತಾಲ್ಲೂಕಿನ ಚಿಕ್ಕತಿಮ್ಮನಹಟ್ಟಿಯ ದರ್ಶನ್(34), ಕೋಟಬಂಡೆಯ ಈಶ್ವರ್(50), ನಾಗರಾಜಪ್ಪ(53) ಮೃತರು.

ಅರಸೀಕೆರೆ ಮತ್ತು ಮಂಗಳವಾಡದಿಂದ ತೆರಳುತ್ತಿದ್ದ ಎರಡು ಬೈಕ್ ಗಳು ಮುಖಾಮುಖಿಯಾಗಿ ಅಪಘಾತವಾಗಿದೆ. ಡಿಕ್ಕಿ ಹೊಡೆದ ರಭಸಕ್ಕೆ ದರ್ಶನ್ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ತೀವ್ರವಾಗಿ ಗಾಯಗೊಂಡು ಜೀವನ್ಮರಣದ ನಡುವೆ ಹೋರಾಟ ನಡೆಸುತ್ತಿದ್ದ ಈಶ್ವರ್, ನಾಗರಾಜಪ್ಪ ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯದಲ್ಲಿ ಸಾವನ್ನಪ್ಪಿದ್ದಾರೆ.

ವಿಷಯ ತಿಳಿದು ಪಾವಗಡ ಪೊಲೀಸರು ಸ್ಥಳಕ್ಕೆ ಧಾವಿಸಿದರು. ಸಂಚಾರ ತೊಂದರೆಯಾಗದಂತೆ ನೋಡಿಕೊಂಡರು. ಈ ಸಂಬಂಧ ಪಾವಗಡ ಠಾಣೆಯಲ್ಲಿ ದೂರು ದಾಖಲಾಗಿದೆ.

ಬೈಕ್‌ನಲ್ಲಿ ಜೋರಾಗಿ ಬಂದವರು ಡಿಕ್ಕಿ ಹೊಡೆದುಕೊಂಡಿದ್ದರಿಂದ ಭಾರೀ ಅಪಘಾತವೇ ಸಂಭವಿಸಿದೆ. ಗಾಯಗೊಂಡವರನ್ನು ಆಸ್ಪತ್ರೆಗೆ ಸೇರಿಸಲು ನಾವು ಮುಂದಾದೆವು. ಆದರೆ ತೀವ್ರ ರಕ್ತಸ್ರಾವವಾಗಿ ಮೂವರು ಮೃತಪಟ್ಟಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ಮಾಹಿತಿ ನೀಡಿದ್ಧಾರೆ.

ಕೆಲವು ಬಾರಿ ತಿರುವುಗಳಲ್ಲಿ ಗೊತ್ತಾಗದೇ ಇಂತಹ ಅನಾಹುತ ಆಗುತ್ತವೆ. ರಾತ್ರಿ ಸಮಯದಲ್ಲಂತೂ ಇನ್ನೂ ಅನಾಹುತ ಹೆಚ್ಚು. ಬೈಕ್‌ ಓಡಿಸುವವರೂ ರಾತ್ರಿ ವೇಳೆ ನಿಧಾನವಾಗಿಯೇ ಹೋಗಬೇಕು. ಪೊಲೀಸ್‌ ಇಲಾಖೆ ಕೂಡ ಈ ನಿಟ್ಟಿನಲ್ಲಿ ಜಾಗೃತಿ ಫಲಕಗಳನ್ನು ಹಾಕಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

ಮಧುಗಿರಿ ತಾಲ್ಲೂಕಿನ ಮಿಡಿಗೇಶಿ ಬಳಿ ಸೋಮವಾರ ರಾತ್ರಿ ನಡೆದಿದ್ದ ಭೀಕರ ಅಪಘಾತದಲ್ಲಿ ಮೂವರು ಮೃತಪಟ್ಟಿದ್ದರು. ಕಾರು ಹಾಗೂ ಲಾರಿ ನಡುಇನ ಅಪಘಾತದಲ್ಲಿ ಮೂವರು ಸ್ಥಳದಲ್ಲೇ ಮೃತಪಟ್ಟರು. ಮತ್ತೊಬ್ಬರು ತೀವ್ರವಾಗಿ ಗಾಯಗೊಂಡಿದ್ದು ಚಿಕಿತ್ಸೆ ಪಡೆಯುತ್ತಿದ್ಧಾರೆ.

ಮೃತರನ್ನು ಪಾವಗಡ ತಾಲ್ಲೂಕಿನ ಗುಜ್ಜನೂಡು ಗ್ರಾಮದ ಆಕಾಶ್‌, ಕಾರ್ತಿಕ್‌ ಹಾಗೂ ಹೇಮಂತ್‌ ಎಂದು ಗುರುತಿಸಲಾಗಿದೆ. ಉಜ್ವಲ್‌ ಗಾಯಗೊಂಡವರು. ಬೆಂಗಳೂರಿನಿಂದ ಪಾವಗಡಕ್ಕೆ ಹೋಗುತ್ತಿದ್ದ ಕಾರು ಹಾಗು ಪಾವಗಡದಿಂದ ಬೆಂಗಳೂರು ಕಡೆ ಬರುತ್ತಿದ್ದ ಲಾರಿ ನಡುವೆ ಮುಖಾಮುಖಿ ಡಿಕ್ಕಿಯಾಗಿ ಈ ಅನಾಹುತ ಸಂಭವಿಸಿದೆ. ಗುಜ್ಜನುಡು ಗ್ರಾಮದಲ್ಲಿ ಆಯೋಜನೆಗೊಂಡಿದ್ದ ಮಾರಮ್ಮದೇವಿ ರಥೋತ್ಸವಕ್ಕೆ ಕಾರಿನಲ್ಲಿ ಹೊರಟಿದ್ದಾಗ ಈ ದುರ್ಘಟನೆ ಸಂಭವಿಸಿದೆ ಎಂದು ಮಿಡಿಗೇಶಿ ಠಾಣಾ ಪೊಲೀಸರು ತಿಳಿಸಿದ್ದಾರೆ.

Whats_app_banner