ತುಮಕೂರು: ಬಿಜೆಪಿ ಕಾರ್ಯಕರ್ತೆಯ ಮಗ ಆತ್ಮಹತ್ಯೆ; ಶಾಲಾ ಸಮವಸ್ತ್ರದಲ್ಲೇ 13 ವರ್ಷದ ಬಾಲಕನ ಮೃತದೇಹ ಪತ್ತೆ
ತುಮಕೂರಿನ ಬಿಜೆಪಿ ಕಾರ್ಯಕರ್ತೆ ಶಂಕುತಲಾ ನಟರಾಜ್ ಅವರ ಪುತ್ರ 13 ವರ್ಷದ ತ್ರಿಶಾಲ್ ಆತ್ಮಹತ್ಯೆಗೆ ಶರಣಾಗಿದ್ದಾನೆ. ಮನೆಯಲ್ಲಿ ತಾಯಿ ಇಲ್ಲದ ಸಮಯದಲ್ಲಿ ಡೇತ್ ನೋಟ್ ಬರೆದಿಟ್ಟು ಈ ಕೃತ್ಯವೆಸಗಿದ್ದಾನೆ ಎಂಬ ಮಾಹಿತಿ ಲಭಿಸಿದ್ದು, ಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತುಮಕೂರು: ಏಳನೇ ತರಗತಿಯಲ್ಲಿ ಓದುತ್ತಿದ್ದ ವಿದ್ಯಾರ್ಥಿಯೊಬ್ಬನ ಮೃತದೇಹ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಸ್ಥಿತಿಯಲ್ಲಿ ಪತ್ತೆಯಾಗಿದೆ. ತುಮಕೂರು ನಗರದ ವಿಜಯನಗರದ 2 ಮುಖ್ಯ ರಸ್ತೆಯಲ್ಲಿ ಘಟನೆ ನಡೆದಿದ್ದು, 13 ವರ್ಷ ವಯಸ್ಸಿನ ತ್ರಿಶಾಲ್ ಮೃತ ಬಾಲಕ. ಸರ್ವೋದಯ ಸ್ಕೂಲ್‌ನಲ್ಲಿ 7ನೇ ತರಗತಿಯಲ್ಲಿ ಓದುತ್ತಿದ್ದ ತ್ರಿಶಾಲ್, ಬಿಜೆಪಿ ಕಾರ್ಯಕರ್ತೆ ಶಂಕುತಲಾ ನಟರಾಜ್ ಪುತ್ರ ತ್ರಿಶಾಲ್.
ಇಂದು (ಜನವರಿ 10) ಮನೆಯಲ್ಲಿ ಯಾರು ಇಲ್ಲದ ವೇಳೆ ಬಾಲಕ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ. ಶಾಲಾ ಸಮವಸ್ತ್ರದಲ್ಲೇ ಮೃತದೇಹ ಸಿಕ್ಕಿದೆ. ತ್ರಿಶಾಲ್ ಮತ್ತು ಆತನ ತಾಯಿ ಶಂಕುತಲಾ ಜೊತೆ ವಿಜಯನಗರದ 2ನೇ ಮುಖ್ಯ ರಸ್ತೆಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದರು. ತಾಯಿ ಇಲ್ಲದ ಸಮಯದಲ್ಲಿ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆದರೆ ಡೆತ್‌ನೋಟ್ ಬಹಿರಂಗಗೊಂಡಿಲ್ಲ. ಪಾರಿವಾಳದ ಬೆಟ್ಟಿಂಗ್ ವಿಚಾರಕ್ಕೆ ಸಂಬಂಧಿಸಿದಂತೆ ಸ್ನೇಹಿತರ ಜೊತೆ ಗಲಾಟೆ ಮಾಡಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ.
ಸ್ಥಳಕ್ಕೆ ತುಮಕೂರಿನ ಜಯನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ತುಮಕೂರು ಜಿಲ್ಲಾಸ್ಪತ್ರೆಯ ಶವಗಾರಕ್ಕೆ ರವಾನೆ ಮಾಡಲಾಗಿದೆ. ಘಟನೆ ಸಂಬಂಧ ಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗಮನಿಸಿ: ಆತ್ಮಹತ್ಯೆ ಯಾವುದೇ ಸಮಸ್ಯೆಗೆ ಪರಿಹಾರವಲ್ಲ. ನಿಮ್ಮನ್ನು ಪ್ರೀತಿಸುವ, ಬೆಂಬಲಿಸುವ ಆಪ್ತರು ಇದ್ದೇ ಇರುತ್ತಾರೆ. ನಿಮ್ಮ ಸಮಸ್ಯೆಗಳನ್ನು ಅಂಥವರೊಂದಿಗೆ ಹಂಚಿಕೊಂಡು ನೆರವು ಪಡೆಯಿರಿ. ಮಾನಸಿಕ ಆರೋಗ್ಯದ ಬಗ್ಗೆ ಗಮನಹರಿಸಿ. ಆತ್ಮಹತ್ಯೆಯ ಆಲೋಚನೆಗಳು ಮನಸ್ಸಿಗೆ ಪದೇಪದೆ ಬರುತ್ತಿದ್ದರೆ ಹಿಂಜರಿಕೆಯಿಲ್ಲದೆ ಆಪ್ತಸಮಾಲೋಚಕರ ಮಾರ್ಗದರ್ಶನ ಪಡೆದುಕೊಳ್ಳಿ. ತುರ್ತು ಸಂದರ್ಭದಲ್ಲಿ ಬೆಂಗಳೂರಿನ SAHAI ಸಹಾಯವಾಣಿ (080 - 25497777) ಅಥವಾ ನಿಮ್ಹಾನ್ಸ್ ಸಹಾಯವಾಣಿಯ (080 – 4611 0007) ನೆರವು ಪಡೆಯಿರಿ.