ಕನ್ನಡ ಸುದ್ದಿ  /  Karnataka  /  Tumkur Crime News 3 Dead Bodies Found In Burnt Car Case Six Accused Arrested By Police Esp

ಸುಟ್ಟ ಕಾರಿನಲ್ಲಿ ಮೂವರ ಶವಗಳು ಪತ್ತೆ ಪ್ರಕರಣ ಭೇದಿಸಿದ ತುಮಕೂರು ಪೊಲೀಸರು; ಚಿನ್ನದ ಆಸೆ ತೋರಿಸಿ ಕೊಲೆ ಆರೋಪದಲ್ಲಿ 6 ಮಂದಿ ಬಂಧನ

ಕೆರೆಯ ಅಂಗಳದಲ್ಲಿ ಸುಟ್ಟ ಕಾರಿನಲ್ಲಿ ಮೂರು ಶವಗಳು ಪತ್ತೆಯಾದ ಪ್ರಕರಣವನ್ನು ಭೇದಿಸುವಲ್ಲಿ ತಮಕೂರು ಪೊಲೀಸರು ಯಶಸ್ವಿಯಾಗಿದ್ದಾರೆ. ಆರು ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ.

ಸುಟ್ಟ ಕಾರಿನ ಪರಿಶೀಲನೆ ನಡೆಸುತ್ತಿರುವ ತುಮಕೂರು ಪೊಲೀಸರು.
ಸುಟ್ಟ ಕಾರಿನ ಪರಿಶೀಲನೆ ನಡೆಸುತ್ತಿರುವ ತುಮಕೂರು ಪೊಲೀಸರು.

ತುಮಕೂರು: ತಾಲ್ಲೂಕಿನ ಕುಚ್ಚಂಗಿ ಕೆರೆಯ ಅಂಗಳದಲ್ಲಿ ಕಾರು ಸುಟ್ಟು ಅದರಲ್ಲಿ ಮೂವರು ಶವ ಪತ್ತೆಯಾಗಿತ್ತು, ಈ ಘಟನೆ ಹೇಗೆ ನಡೆಯಿತು, ಕೊಲೆ ಮಾಡಿ ಕಾರಿಗೆ ಬೆಂಕಿ ಹಚ್ಚಲಾಗಿದೆಯಾ ಎಂಬ ಪ್ರಶ್ನೆ ಎದುರಾಗಿತ್ತು, ಇದೀಗ ಪೊಲೀಸರು ಈ ಪ್ರಕರಣ ಭೆೇದಿಸಿದ್ದು, ಕೊಲೆ ಮಾಡಿದ್ದ ಆರು ಆರೋಪಿಗಳನ್ನು ಬಂಧಿಸಿದ್ದಾರೆ. ಮೃತರು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನವರು ಎಂದು ತಿಳಿದು ಬಂದಿದೆ. ಬೆಳ್ತಂಗಡಿ ತಾಲೂಕಿನ ಇಸಾಕ್ (56), ಶಾಹುಲ್ ಹಮೀದ್ (45), ಇಮ್ತಿಯಾಜ್ ಸಿದ್ದೀಕ್ ( 34) ಎಂಬವವರೇ ಕೊಲೆಯಾದವರು. ಪ್ರಕರಣದ ಪ್ರಮುಖ ಆರೋಪಿ ತುಮಕೂರಿನ ಸ್ವಾಮಿ ಮತ್ತು ಐದು ಜನರನ್ನು ಕೋರಾ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದು, ವಿಚಾರಣೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.

ಏನಿದು ಚಿನ್ನದ ಆಸೆ? ದಕ್ಷಿಣ ಕನ್ನಡದಿಂದ ತುಮಕೂರಿನವರೆಗೆ ಪ್ರಯಾಣ

ನಕಲಿ ಚಿನ್ನದ ದಂಧೆಯ ಆಸೆಗೆ ಬಿದ್ದು ಮೂವರು ಬಲಿಯಾಗಿದ್ದಾರೆ ಎಂದು ತಿಳಿದು ಬಂದಿದೆ. ನಮ್ಮ ಜಮೀನಿನಲ್ಲಿ ಕೃಷಿ ಮಾಡುವಾಗ ಚಿನ್ನದ ಹಂಡೆ ಸಿಕ್ಕಿದ್ದು, ಅದನ್ನು ಕಡಿಮೆ ಬೆಲೆಗೆ ನೀಡುವುದಾಗಿ ಆರೋಪಿ ಸ್ವಾಮಿ ಎಂಬಾಂತ ಸುಳ್ಳು ಹೇಳಿ ಮೂವರನ್ನು ಕರೆದು ಹಣ ದೋಚುವ ಪ್ಲ್ಯಾನ್ ಮಾಡಿದ್ದಾನೆ. ಸ್ವಾಮಿಯ ಮಾತು ನಂಬಿದ ಮೂವರು ದಕ್ಷಿಣ ಕನ್ನಡ ಜಿಲ್ಲೆಯ ಮದ್ದಡ್ಕದ ರಫೀಕ್ ಎಂಬುವವರ ಎಸ್‌ಪ್ರೆಸ್ ಕಾರನ್ನು ಬಾಡಿಗೆ ಪಡೆದು ತುಮಕೂರಿಗೆ ಬಂದಿದ್ದಾರೆ.

ಆರೋಪಿಗಳು ಮೂವರ ಕೈಕಾಲನ್ನು ಕಟ್ಟಿ ಹಾಕಿ, ಕಾರಿನೊಳಗೆ ಹಾಕಿ ಬೆಂಕಿ ಹಚ್ಚಿ ಕೊಲೆ ಮಾಡಿದ್ದಾರೆ ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಸುಮೊಟೋ ಪ್ರಕರಣ ದಾಖಲು ಮಾಡಿಕೊಂಡಿರುವ ಕೋರಾ ಠಾಣೆ ಪೊಲೀಸರು ತನಿಖೆ ತೀವ್ರಗೊಳಿಸಿದ್ದಾರೆ. ಮೂವರ ಶವ ಸಂಪೂರ್ಣ ಸುಟ್ಟಿರುವ ಕಾರಣ ಡಿಎನ್‌ಎ ಪರೀಕ್ಷೆ ನಂತರ ಮನೆಯವರಿಗೆ ಶವ ನೀಡಲಿದ್ದಾರೆ.

ಕೊಲೆಯಾಗಿರುವ ಇಸಾಕ್ ರಿಯಲ್ ಎಸ್ಟೇಟ್ ವ್ಯವಹಾರ ಮಾಡುತ್ತಿದ್ದ ಎಂದು ತಿಳಿದು ಬಂದಿದೆ. ಸಾಹುಲ್ ಹಮೀದ್ ಆಟೋ ಚಾಲಕನಾಗಿದ್ದ ಹಾಗೂ ಇಮ್ತಿಯಾಜ್ ಸಿದ್ದಿಕ್ ಚಪ್ಪಲಿ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಎಂದು ತಿಳಿದು ಬಂದಿದೆ. ಚಿನ್ನದ ಆಸೆಗೆ ಬಂದು ತುಮಕೂರಿನಲ್ಲಿ ಕೊಲೆಯಾಗಿ ಸುಟ್ಟು ಕರಕಲಾಗಿದ್ದಾರೆ. ಸದ್ಯ ಪ್ರಮುಖ ಆರೋಪಿ ಸ್ವಾಮಿ ಸೇರಿ ಒಟ್ಟು 6 ಜನರನ್ನು ಪೊಲೀಸರ ವಶಕ್ಕೆ ಪಡೆದಿದ್ದು, ತನಿಖೆ ಮುಂದುವರೆಸಿದ್ದಾರೆ.