Tumkur News: ಪತಿಯ ಸಾವಿನ ನೋವು; ಇಬ್ಬರು ಮಕ್ಕಳೊಂದಿಗೆ ಕೆರೆಗೆ ಹಾರಿ ತಾಯಿ ಆತ್ಮಹತ್ಯೆ
ಅನಾರೋಗ್ಯದಿಂದ ಪತಿ ಸಾವನ್ನಪ್ಪಿದ್ದರು. ಈ ನೋವನ್ನು ತಾಳಲಾರದೆ ಇಬ್ಬರು ಮಕ್ಕಳೊಂದಿಗೆ ಕೆರೆಗೆ ಹಾರಿ ತಾಯಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಗುಬ್ಬಿ (ತುಮಕೂರು): ಹನ್ನೊಂದು ತಿಂಗಳ ಮಗು, 4 ವರ್ಷದ ಮಗನೊಂದಿಗೆ ಗೃಹಿಣಿ ಕೆರೆಗೆ ಬಿದ್ದು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಗುಬ್ಬಿ ತಾಲ್ಲೂಕಿನ ನಿಟ್ಟೂರಿನಲ್ಲಿ ನಡೆದಿದೆ.
ಮೃತ ಮಹಿಳೆಯನ್ನು ನಿಟ್ಟೂರಿನ ವಿಜಯಲಕ್ಷ್ಮಿ ಎಂದು ಗುರುತಿಸಲಾಗಿದೆ. ಕಳೆದ ಒಂದು ತಿಂಗಳ ಹಿಂದೆ ವಿಜಯಲಕ್ಷ್ಮೀ ಅವರ ಪತಿ ನವೀನ್ ಅನಾರೋಗ್ಯದಿಂದ ಸಾವನ್ನಪ್ಪಿದ್ದರು.
ಪತಿ ಸಾವಿನಿಂದ ಕಂಗೆಟ್ಟಿದ್ದ ವಿಜಯಲಕ್ಷ್ಮೀ ಗುರುವಾರ (ನವೆಂಬರ್ 30) ತನ್ನ ಹನ್ನೊಂದು ತಿಂಗಳ ಮಗು ಹಾಗೂ 4 ವರ್ಷದ ಮಗನೊಂದಿಗೆ ನಿಟ್ಟೂರು ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮೃತ ವಿಜಯಲಕ್ಷ್ಮಿ ಹಾಗೂ 11 ತಿಂಗಳ ಮಗುವಿನ ದೇಹ ಪತ್ತೆಯಾಗಿದೆ. 4 ವರ್ಷದ ಬಾಲಕನ ಮೃತದೇಹ ಪತ್ತೆಗಾಗಿ ಅಗ್ನಿ ಶಾಮಕ ದಳದ ಸಿಬ್ಬಂದಿ ಹುಡುಕಾಟ ನಡೆಸಿದ್ದಾರೆ.
ಘಟನಾ ಸ್ಥಳಕ್ಕೆ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಪಿ.ಬಿ. ಚಂದ್ರಶೇಖರ್ ಬಾಬು ಭೇಟಿ ನೀಡಿ ಸಂಬಂಧಿಕರಿಗೆ ಸಾಂತ್ವನ ಹೇಳಿದ್ದಾರೆ. ಸರ್ಕಲ್ ಇನ್ಸ್‌ಪೆಕ್ಟರ್ ಗೋಪಿನಾಥ್ ಹಾಗೂ ಸಬ್ ಇನ್ಸ್‌ಪೆಕ್ಟರ್ ದೇವಿಕಾ ದೇವಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಗುಬ್ಬಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.