ಸೋಡಿಯಂ ಬಳಸಿ ಸ್ಫೋಟ ಪ್ರಕರಣ; ತುಮಕೂರಿನ ಜನಕಲೋಟಿಗೆ ಡ್ರೋನ್ ಪ್ರತಾಪ್ ಕರೆತಂದು ಸ್ಥಳ ಮಹಜರು ನಡೆಸಿದ ಪೊಲೀಸರು
ಸೋಡಿಯಂ ಬಳಸಿ ಸ್ಫೋಟ ಪ್ರಕರಣ ತನಿಖೆಯನ್ನು ಮುಂದುವರಿಸಿರುವ ಪೊಲೀಸರು, ತುಮಕೂರಿನ ಜನಕಲೋಟಿಗೆ ಡ್ರೋನ್ ಪ್ರತಾಪ್ ಕರೆತಂದು ಸ್ಥಳ ಮಹಜರು ನಡೆಸಿದ್ದಾರೆ. ಈ ಪ್ರಕರಣದಲ್ಲಿ ಮತ್ತಿಬ್ಬರಿಗೆ ಸಂಕಷ್ಟ ಶುರುವಾಗಿದೆ.
ತುಮಕೂರು: ಜಿಲ್ಲೆಯ ಮಧುಗಿರಿ ತಾಲೂಕಿನ ಐ.ಡಿ.ಹಳ್ಳಿ ಹೋಬಳಿಯ ಜನಕಲೋಟಿ ಗ್ರಾಮದ ಕೃಷಿ ಹೊಂಡದಲ್ಲಿ ಸೋಡಿಯಂ ಸ್ಫೋಟಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಗ್‌ಬಾಸ್ ಖ್ಯಾತಿಯ ಡ್ರೋನ್ ಪ್ರತಾಪ್‌ನನ್ನು ಪೊಲೀಸರು ಗುರುವಾರ (ಡಿಸೆಂಬರ್ 12) ಬಂಧಿಸಿದ್ದು, ಇಂದು (ಡಿಸೆಂಬರ್ 13, ಶುಕ್ರವಾರ) ಬೆಳಗ್ಗೆ ಜನಕಲೋಟಿ ಗ್ರಾಮದ ಬಾಂಬ್ ಸ್ಫೋಟಗೊಂಡ ಸ್ಥಳಕ್ಕೆ ಕರೆ ತಂದು ಸ್ಥಳ ಮಹಜರು ಮಾಡಿದ್ದಾರೆ.
ಏನಿದು ಪ್ರಕರಣ?
ಮಧುಗಿರಿ ತಾಲೂಕಿನ ಜನಕಲೋಟಿ ಗ್ರಾಮದ ರಾಯರ ಬೃಂದಾವನ ಫಾರಂ ಹೌಸ್‌ನ ಕೃಷಿ ಹೊಂಡದಲ್ಲಿ ಡ್ರೋನ್ ಪ್ರತಾಪ್ ಸೋಡಿಯಂ ಬಳಸಿ ಬಾಂಬ್ ಪರೀಕ್ಷೆ ನಡೆಸಿದ್ದ, ಕೃಷಿ ಹೊಂಡದಲ್ಲಿ ಸ್ಫೋಟಿಸಿದ್ದ ವಿಡಿಯೋವನ್ನು ಯೂಟ್ಯೂಬ್‌ನಲ್ಲಿ ಪ್ರತಾಪ್ ಅಪ್‌ಲೋಡ್ ಮಾಡಿದ್ದ, ಆ ವಿಡಿಯೋ ಆಧರಿಸಿ ಬಿಎನ್‌ಎಸ್ ಕಾಯ್ದೆ ಸೆಕ್ಷನ್ 288 ಮತ್ತು ಸ್ಫೋಟಕ ವಸ್ತುಗಳ ನಿಯಂತ್ರಣ ಕಾಯ್ದೆ ಸೆಕ್ಷನ್ 3 ಅಡಿ ಎಫ್‌ಐಆರ್ ಸುಮೊಟೋ ಕೇಸು ದಾಖಲಿಸಿಕೊಂಡಿರುವ ಮಿಡಿಗೇಶಿ ಪೊಲೀಸರು ಡ್ರೋಣ್ ಪ್ರತಾಪ್ ನನ್ನು ಬಂಧಿಸಿದ್ದಾರೆ. ಮಧುಗಿರಿ ಡಿವೈಎಸ್‌ಪಿ ರಾಮಚಂದ್ರಪ್ಪ, ಬಡವನಹಳ್ಳಿ ಸಿಪಿಐ ಕಾಂತರೆಡ್ಡಿ, ಪಿಎಸ್‌ಐ ಅಮ್ಮಣಗಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನಾ ಸ್ಥಳದಲ್ಲಿ ಸ್ಫೋಟಕ್ಕೆ ಬಳಸಿದ್ದ ವಸ್ತುಗಳು ಪತ್ತೆಯಾಗಿವೆ, ಎಫ್‌ಎಸ್‌ಎಲ್ ಟೀಂ ನಿಂದ ಸ್ಥಳದಲ್ಲಿ ಪರಿಶೀಲನೆ ನಡೆಸಲಾಗಿದ್ದು, ಸ್ಫೋಟಕ ವಸ್ತುಗಳನ್ನ ಲ್ಯಾಬ್‌ಗೆ ಕಳುಹಿಸಲು ಸ್ಯಾಂಪಲ್ ಪಡೆದಿದ್ದಾರೆ.
ಸ್ಥಳ ಮಹಜರು ನಡೆಸಿದ ಮಿಡಿಗೇಶಿ ಪೊಲೀಸರು ಜನಕಲೋಟಿ ಗ್ರಾಮದ ಫಾರಂ ಹೌಸ್‌ಗೆ ಪ್ರತಾಪ್‌ನನ್ನು ಕರೆದುಕೊಂಡು ಬಂದು ಸ್ಥಳ ಮಹಜರು ನಡೆಸಿದ್ದಾರೆ. ನಂತರ ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಡ್ರೋನ್ ಪ್ರತಾಪ್‌ನನ್ನು ಕರೆದುಕೊಂಡು ಬಂದು ಆರೋಗ್ಯ ತಪಾಸಣೆ ನಡೆಸಿದ್ದು, ಆರೋಗ್ಯ ಸ್ಥಿರವಾಗಿದೆ ಎಂಬುದನ್ನು ಖಚಿತ ಪಡಿಸಿಕೊಂಡ ನಂತರ ಪಟ್ಟಣದ ನ್ಯಾಯಾಲಯದ ನ್ಯಾಯಾಧೀಶರ ಮುಂದೆ ಹಾಜರು ಪಡಿಸಿ ಮತ್ತೆ ತಮ್ಮ ವಶಕ್ಕೆ ಪಡೆದಿದ್ದಾರೆ.
ಯಾರ ವಿರುದ್ಧ ಕೇಸ್ ದಾಖಲು? ಡ್ರೋನ್ ಪ್ರತಾಪ್ ಸೇರಿ ಒಟ್ಟು ಮೂವರ ವಿರುದ್ಧ ತಾಲೂಕಿನ ಮಿಡಿಗೇಶಿ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ. ಡ್ರೋನ್ ಪ್ರತಾಪ್ ಸೇರಿ ಕೃಷಿ ಹೊಂಡದ ಮಾಲೀಕನ ವಿರುದ್ಧವೂ ಎಫ್‌ಐಆರ್ ದಾಖಲಾಗಿದೆ. ರಾಯರ ಬೃಂದಾವನ ಫಾರಂನ ಮಾಲೀಕ ಜಿತೇಂದ್ರ ಜೈನ್ ಹಾಗೂ ವಿಡಿಯೋ ಚಿತ್ರೀಕರಣ ಮಾಡಿದ ಮತ್ತೋರ್ವ ವ್ಯಕ್ತಿ ಸೇರಿ ಮೂವರ ಮೇಲೆ ಪ್ರಕರಣ ದಾಖಲಾಗಿದೆ.
ನಿವೇಶನ ಮಾಡಿ ಮಾರಾಟ ಮಾಡುವ ಪ್ಲಾನ್?
ಸ್ಫೋಟ ಮಾಡಿದ ಕೃಷಿ ಹೊಂಡವು ಸಾರ್ವಜನಿಕರು ಓಡಾಡುವ ರಸ್ತೆ ಮಗ್ಗುಲಲ್ಲೇ ಇದೆ, ಬಾಂಬ್ ಸ್ಫೋಟಿಸಿದ ಸಂದರ್ಭದಲ್ಲಿ ಪ್ರತಾಪ್‌ನ ಕೈ ಸುಟ್ಟ ಗಾಯಗಳಾಗಿದ್ದವು ಎನ್ನಲಾಗಿದ್ದು, ಗಾಳಿ ಜೋರಾಗಿ ಬೀಸಿದ್ದಲ್ಲಿ ಸಾರ್ವಜನಿಕರಿಗೆ ಬೆಂಕಿ ತಗಲುವ ಸಂಭವವಿತ್ತು, ಅದೃಷ್ಟವಶಾತ್ ಗ್ರಾಮಸ್ಥರು ದೂರದಲ್ಲಿದ್ದ ಹಿನ್ನೆಲೆಯಲ್ಲಿ ಬಚಾವಾಗಿದ್ದಾರೆ.
ಫಾರಂ ಬಳಿ ಕುರಿ, ದನ ಮೇಯಿಸುತಿದ್ದವರೆಲ್ಲರಿಗೂ ಸ್ಫೋಟದಿಂದ ಭಯ ಹುಟ್ಟಿಸಿದ್ದು, ಪ್ರತಾಪ್ ಸ್ಫೋಟ ಮಾಡಿರೋದು ಅಕ್ರಮ, ಅವನಿಗೆ ಶಿಕ್ಷೆಯಾಗಲಿ, ಸ್ಥಳೀಯರಿಗೆ ಉದ್ಯೋಗ ಕೊಡುವ ಕಂಪನಿ ನಿರ್ಮಾಣ ಮಾಡ್ತೀವಿ ಎಂದು ಸುಳ್ಳು ಹೇಳಿ ಮಾಲೀಕ ಜಿತೇಂದ್ರ ಜೈನ ಫಾರಂ ಹೌಸ್ ಮಾಡಿದ್ದರು ಎಂದು ಕೆಲ ಗ್ರಾಮಸ್ಥರು ಆರೋಪಿಸಿದ್ದಾರೆ. ಜಿತೇಂದ್ರ ಜೈನ್‌ಗೆ ಡ್ರೋನ್ ಪ್ರತಾಪ್ ಪಾರ್ಟನರ್ ಅಂತೆ, 25 ಎಕರೆ ಫಾರಂ ಹೌಸ್‌ನಲ್ಲಿ ನಿವೇಶನ ಮಾಡಿ ಮಾರಾಟ ಮಾಡುವ ಪ್ಲಾನ್ ಸಹ ಇತ್ತು ಎಂಬುದಾಗಿಯೂ ಜನಕಲೋಟಿ ಗ್ರಾಮಸ್ಥರು ಆರೋಪಿಸಿದ್ದಾರೆ.