ಆ್ಯಂಬುಲೆನ್ಸ್‌ ಸಿಗದೆ ಬೈಕ್‌ನಲ್ಲಿ ವೃದ್ಧನ ಮೃತ ದೇಹ ಸಾಗಣೆ: ತುಮಕೂರು ಜಿಲ್ಲೆಯಲ್ಲಿ ಹೃದಯ ವಿದ್ರಾವಕ ಸನ್ನಿವೇಶ
ಕನ್ನಡ ಸುದ್ದಿ  /  ಕರ್ನಾಟಕ  /  ಆ್ಯಂಬುಲೆನ್ಸ್‌ ಸಿಗದೆ ಬೈಕ್‌ನಲ್ಲಿ ವೃದ್ಧನ ಮೃತ ದೇಹ ಸಾಗಣೆ: ತುಮಕೂರು ಜಿಲ್ಲೆಯಲ್ಲಿ ಹೃದಯ ವಿದ್ರಾವಕ ಸನ್ನಿವೇಶ

ಆ್ಯಂಬುಲೆನ್ಸ್‌ ಸಿಗದೆ ಬೈಕ್‌ನಲ್ಲಿ ವೃದ್ಧನ ಮೃತ ದೇಹ ಸಾಗಣೆ: ತುಮಕೂರು ಜಿಲ್ಲೆಯಲ್ಲಿ ಹೃದಯ ವಿದ್ರಾವಕ ಸನ್ನಿವೇಶ

ತುಮಕೂರು ಜಿಲ್ಲೆಯ ಪಾವಗಡ ತಾಲ್ಲೂಕಿನಲ್ಲಿ ಆಂಬುಲೆನ್ಸ್‌ ಸಿಗದೇ ವೃದ್ದರೊಬ್ಬರ ಶವವನ್ನು ಬೈಕ್‌ನಲ್ಲಿಯೇ ಊರಿಗೆ ತೆಗೆದುಕೊಂಡು ಹೋದ ಘಟನೆ ನಡೆದಿದೆ.ವರದಿ: ಈಶ್ವರ್‌ ತುಮಕೂರು

ತುಮಕೂರು ಜಿಲ್ಲೆಯ ಪಾವಗಡದಲ್ಲಿ ಆಂಬುಲೆನ್ಸ್‌ ಸಿಗದೇ ವೃದ್ದರನ್ನು ಆಸ್ಪತ್ರೆಗೆ ಸಾಗಿಸಲಾಯಿತು,
ತುಮಕೂರು ಜಿಲ್ಲೆಯ ಪಾವಗಡದಲ್ಲಿ ಆಂಬುಲೆನ್ಸ್‌ ಸಿಗದೇ ವೃದ್ದರನ್ನು ಆಸ್ಪತ್ರೆಗೆ ಸಾಗಿಸಲಾಯಿತು,

ತುಮಕೂರು: ಆ್ಯಂಬುಲೆನ್ಸ್‌ ಸಿಗದೆ ವೃದ್ಧನ ಮೃತ ದೇಹವನ್ನು ಬೈಕ್‌ನಲ್ಲಿ ಮಕ್ಕಳು ಕೊಂಡೊಯ್ದ ಹೃದಯ ವಿದ್ರಾವಕ ಘಟನೆ ಬುಧವಾರ ಮಧ್ಯಾಹ್ನ ಗಡಿನಾಡು ಪಾವಗಡ ತಾಲ್ಲೂಕಿನಲ್ಲಿ ನಡೆದಿದೆ. ತಾಲ್ಲೂಕಿನ ವೈ.ಎನ್.ಹೊಸಕೋಟೆ ಸಮುದಾಯ ಆರೋಗ್ಯ ಕೇಂದ್ರದ ಬಳಿ ಬುಧವಾರ ಈ ಘಟನೆ ಜರುಗಿದ್ದು, ದಳವಾಯಿಹಳ್ಳಿ ಗ್ರಾಮದ ಗುಡುಕಲ್ಲು ಹೊನ್ನೂರಪ್ಪ ಎನ್ನುವ 80 ವರ್ಷದ ವೃದ್ಧ ವಯೋ ಸಹಜ ಕಾಯಿಲೆಯಿಂದ ಬಳಲುತ್ತಾ ವೈ.ಎನ್.ಹೋಸಕೋಟೆ ಸಮುದಾಯ ಆರೋಗ್ಯ ಕೇಂದ್ರಕ್ಕೆ ಬಂದಿದ್ದಾರೆ. ಪರಿಶೀಲನೆ ವೇಳೆ ವ್ಯಕ್ತಿ ಮೃತಪಟ್ಟಿರುವುದು ದೃಢವಾಗಿದೆ, ನಂತರ ಮೃತ ಹೊನ್ನೂರಪ್ಪರ ಶವ ಸಾಗಿಸಲು ಆ್ಯಂಬುಲೆನ್ಸ್‌ ಗಾಗಿ ಹುಡುಕಾಟ ನಡೆಸಲಾಗಿದೆ.

ತಕ್ಷಣವೇ ಸ್ಥಳೀಯ ಶಾಸಕ ವೆಂಕಟೇಶ್‌ ಅವರಿಗೆ ಸಂಬಂಧಿಕರು ಕರೆ ಮಾಡಿ ಅವ್ಯವಸ್ಥೆಯ ಬಗ್ಗೆ ತಿಳಿಸಿದಾಗ ಶಾಸಕರು ಸಂಬಂಧಿಸಿದ ವೈದ್ಯರ ಬಳಿ ಚರ್ಚಿಸಲಾಗಿ ಕಾನೂನು ರೀತ್ಯ 108 ವಾಹನದಲ್ಲಿ ಶವ ಸಾಗಿಸಲು ಸಾಧ್ಯವಿಲ್ಲ ಎಂಬ ಅಂಶ ತಿಳಿದು ಅದೇ ವಿಷಯವನ್ನು ಮೃತ ಸಂಬಂಧಿಗಳಿಗೆ ತಿಳಿಸಲಾಗಿದೆ.

ಹಾಗಾಗಿ ವಿಧಿ ಇಲ್ಲದೆ ಹೊನ್ನೂರಪ್ಪನ ಮಕ್ಕಳು ತಮ್ಮ ತಂದೆಯ ಮೃತ ದೇಹವನ್ನು ತಮ್ಮ ದ್ವಿಚಕ್ರ ವಾಹನದಲ್ಲಿ ಕೂರಿಸಿಕೊಂಡು ಗ್ರಾಮಕ್ಕೆ ತೆರಳಿದ್ದಾರೆ.

ಸೂಕ್ಷ್ಮ ಪ್ರದೇಶವಾದ ವೈ.ಎನ್.ಹೊಸಕೋಟೆಯ ಸಮುದಾಯ ಆರೋಗ್ಯ ಕೇಂದ್ರದ ವ್ಯಾಪ್ತಿಗೆ ಹೋಬಳಿ ಕೇಂದ್ರದ ಸುಮಾರು ಹದಿನೈದು ಸಾವಿರ ಜನ ಸೇರಿದಂತೆ ಸುತ್ತಮುತ್ತಲಿನ ಸುಮಾರು 34 ಹಳ್ಳಿಗಳ ರೋಗಿಗಳು ಹಾಗೂ ಆಂಧ್ರ ಪ್ರದೇಶದ ಜನತೆಯೂ ಇಲ್ಲಿಗೆ ಆರೋಗ್ಯ ಸಮಸ್ಯೆ ನಿವಾರಣೆಗಾಗಿ ಬರುತ್ತಾರೆ. ಪ್ರತಿನಿತ್ಯ ಸುಮಾರು 200- 250 ಜನ ರೋಗಿಗಳು ಭೇಟಿ ನೀಡುತ್ತಾರೆ.

ಈ ಹಿಂದೆ ಇದ್ದ ಆ್ಯಂಬುಲೆನ್ಸ್‌ ಸೇವೆ ನಿಂತು ವರ್ಷಗಳೇ ಕಳೆದಿವೆ, ಹಲವಾರು ಬಾರಿ ತಾಲ್ಲೂಕು ಮತ್ತು ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ, ಜನಪ್ರತಿನಿಧಿಗಳಿಗೆ ವಿಷಯ ತಲುಪಿಸಿದರೂ ಆ್ಯಂಬುಲೆನ್ಸ್‌ ವ್ಯವಸ್ಥೆ ಮರು ಸ್ಥಾಪನೆಯಾಗಿಲ್ಲದೆ ಅನೇಕ ಅವಘಡಗಳಿಗೆ ತೊಂದರೆಯಾಗಿರುವ ಉದಾಹರಣೆಗಳು ಇವೆ.

ಆದಾಗ್ಯೂ ಯಾರೊಬ್ಬರೂ ಎಚ್ಚೆತ್ತುಕೊಂಡು ಆ್ಯಂಬುಲೆನ್ಸ್‌ ಸೇವೆ ಒದಗಿಸದಿರುವುದು ಇಂತಹ ಘಟನೆಗಳಿಗೆ ಕಾರಣವಾಗಿದೆ.

ಆರೋಗ್ಯ ಇಲಾಖೆಯಲ್ಲಿ ಆಂಬುಲೆನ್ಸ್‌ ಸೇವೆಯನ್ನು ಕಡ್ಡಾಯವಾಗಿ ನೀಡುವಂತೆ ಸೂಚನೆ ನೀಡಲಾಗಿದೆ. ಆದರೂ ಕೆಲವೊಮ್ಮೆ ಆಂಬುಲೆನ್ಸ್‌ ಸಿಗದ ಕಾರಣ ಸಮಸ್ಯೆ ಎದುರಾಗಿದೆ.

ಉತ್ತರ ಭಾರತ ಸಹಿತ ಹಲವು ಕಡೆ ಇಂತಹ ಘಟನೆಗಳು ನಡೆದಿದ್ದರೂ ಕರ್ನಾಟಕದಲ್ಲಿ ಘಟನೆ ನಡೆದಿರುವುದು ಕಡಿಮೆ. ಇಲ್ಲಿಯೂ ಇಂತಹ ಘಟನೆ ವರದಿಯಾಗಿದೆ.

ಸಂಬಂಧಪಟ್ಟ ಶಾಸಕರು ಮತ್ತು ಸಚಿವರು ಇಂತಹ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಅಗತ್ಯವಿದೆ ಎನ್ನುವ ಒತ್ತಾಯ ಕೇಳಿ ಬಂದಿದೆ.

(ವರದಿ: ಈಶ್ವರ್‌ ತುಮಕೂರು)

Whats_app_banner