Kunigal Stud Farm: ಕುಣಿಗಲ್ ಕುದುರೆ ಫಾರಂ ಉಳಿಸಲು ಹೆಚ್ಚಿದ ಒತ್ತಡ: ತುಮಕೂರಿನಲ್ಲಿ ಭಾರೀ ಪ್ರತಿಭಟನೆ
Tumkur News ತುಮಕೂರು ಜಿಲ್ಲೆ ಕುಣಿಗಲ್‌ನಲ್ಲಿರುವ ಕುದುರೆ ಫಾರಂ ಸಂರಕ್ಷಿಸುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಿ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು. (ವರದಿ: ಈಶ್ವರ್ ತುಮಕೂರು)
ತುಮಕೂರು: ಕುಣಿಗಲ್‌ನ ಪುರಾತನ ಕುದುರೆ ಫಾರಂ ಅನ್ನು ಉಳಿಸುವಂತೆ ಈಗಾಗಲೇ ನಿರಂತರ ಪ್ರಯತ್ನಗಳು ನಡೆಯುತ್ತಿವೆ. ನಾನಾ ಸಂಘಟನೆಗಳು ಒತ್ತಡಗಳನ್ನು ಹೇರುತ್ತಲೇ ಇವೆ. ಇದರ ಮುಂದುವರೆದ ಭಾಗವಾಗಿ ಕುದುರೆ ಫಾರಂ ಅನ್ನು ಬದಲಾಯಿಸುವ ಪ್ರಯತ್ನ ನಡೆಯುತ್ತಿದೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಈ ಹಿನ್ನೆಲೆಯಲ್ಲಿಯೇ ಪಾರಂಪರಿಕ ಕುಣಿಗಲ್ ಕುದುರೆ ಫಾರಂ ಉಳಿಸಿ ಹೋರಾಟ ಸಮಿತಿ ವತಿಯಿಂದ ಕುದುರೆ ಫಾರಂ ಉಳಿಸುವಂತೆ ಆಗ್ರಹಿಸಿ ಹಲವಾರು ಸಂಘಟನೆಗಳು ಪಕ್ಷಾತೀತವಾಗಿ ಬುಧವಾರ ಬೃಹತ್ ಪ್ರತಿಭಟನೆ ನಡೆಸಿ ಉಪ ವಿಭಾಗಾಧಿಕಾರಿ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ವಿವಿಧ ಕನ್ನಡಪರ ಸಂಘಟನೆಗಳು, ಸಂಘ, ಸಂಸ್ಥೆಗಳು, ಪರಿಸರ ಪ್ರಿಯರು,ಇತಿಹಾಸ ತಜ್ಞರು, ರಾಜಕೀಯ ಪಕ್ಷದ ಮುಖಂಡರು, ಮಹಿಳಾ ಸಂಘಟನೆಗಳು, ವಿದ್ಯಾರ್ಥಿಗಳು ಕುಣಿಗಲ್ ಪಟ್ಟಣದ ಪ್ರವಾಸಿಮಂದಿರದ ಬಳಿ ಜಮಾವಣೆಗೊಂಡು ತಾಲೂಕು ಕಚೇರಿವರೆಗೂ ಪ್ರತಿಭಟನಾ ಮೆರವಣಿಗೆ ನಡೆಸಿ ಮೆರವಣಿಗೆಯಲ್ಲಿ ರಾಜ್ಯ ಸರ್ಕಾರದ ಕ್ರಮ ಖಂಡಿಸಿ ಘೋಷಣೆ ಕೂಗಿ ತಾಲೂಕು ಕಚೇರಿ ಆವರಣದಲ್ಲಿ ಪ್ರತಿಭಟನಾ ಸಭೆ ನಡೆಸಿದರು.
421 ವರ್ಷದ ಇತಿಹಾಸದ ಫಾರಂ
ಸಭೆಯಲ್ಲಿ ಮಾತನಾಡಿದ ಇತಿಹಾಸ ತಜ್ಞ ಪ್ರೊ.ನಂಜೆರಾಜ ಅರಸ್, ರಾಜಕಾರಣಿಗಳಿಗೆ ಇತಿಹಾಸ, ಪಾರಂಪರಿಕ ತಾಣಗಳ ಬಗ್ಗೆ ಅರಿವಿರುವುದಿಲ್ಲ, 421 ವರ್ಷದ ಇತಿಹಾಸ ಇರುವ ಕುದುರೆ ಫಾರಂನ್ನು ಪಾರಂಪರಿಕ ತಾಣವನ್ನಾಗಿಸಿ, ಇದನ್ನು ಸಮಗ್ರವಾಗಿ ಅಭಿವೃದ್ಧಿಗೊಳಿಸಿ ಮುಂದಿನ ಪೀಳಿಗೆಗೆ ಉಳಿಸುವಂತೆ ಮಾಡಬೇಕು, ಸಿಎಂ, ಡಿಸಿಎಂ ಇಬ್ಬರೂ ಸಾಕಷ್ಟು ಸಂಪಾದಿಸಿದ್ದು ಪಾರಂಪರಿಕ ತಾಣಗಳ ಮೇಲೆ ಕಣ್ಣು ಹಾಕಿರುವುದು ಖಂಡನೀಯ, ಟೌನ್‌ಶಿಪ್ ಕೈಬಿಟ್ಟು ಫಾರಂ ಹಾಗೆ ಉಳಿಸಬೇಕು, ಇಲ್ಲವಾದಲ್ಲಿ ಉಗ್ರ ಹೋರಾಟ ಅನಿವಾರ್ಯ ಎಂದರು.
ಡಿಕೆಶಿ ಸಹೋದರರ ಪ್ರಯತ್ನ
ಸಾಮಾಜಿಕ ಹೋರಾಟಗಾರ, ಚಿತ್ರನಟ ಚೇತನ್ ಮಾತನಾಡಿ, ನೀರಾವರಿ ನೆಪದಲ್ಲಿ ಮೇಕೆದಾಟು ಪರಿಸರ ಹಾಳು ಮಾಡಲು ಡಿಕೆಶಿ ಸಹೋದರರು ಮುಂದಾಗಿದ್ದು, ಇವರ ಸಂಬಂಧಿಯಾದ ಶಾಸಕ ಡಾ.ರಂಗನಾಥ್ ತಾಲೂಕಿನ ಪಾರಂಪರಿಕ ತಾಣ ಕುದುರೆ ಫಾರಂ ಹಾಳು ಮಾಡಲು ಮುಂದಾಗಿರುವುದು ಖಂಡನೀಯ, ಬಂಡವಾಳ ಶಾಹಿಗಳಿಗೆ ಪಾರಂಪರಿಕ ತಾಣ ಅಡ ಇಡುತ್ತಿರುವ ಸರ್ಕಾರದ ಕ್ರಮ ಖಂಡನೀಯ, ಜನಾಕ್ರೋಶ ಹೆಚ್ಚಿದೆ, ಇನ್ನಾದರೂ ಸರ್ಕಾರ ತನ್ನ ನಿರ್ಧಾರ ಬದಲಿಸಬೇಕು, ಇಲ್ಲವಾದಲ್ಲಿ ಜನತೆ ತಕ್ಕ ಉತ್ತರ ನೀಡುತ್ತಾರೆ ಎಂದರು.
ಆಮ್ ಆದ್ಮಿ ಪಕ್ಷದ ಮುಖ್ಯಮಂತ್ರಿ ಚಂದ್ರು ಮಾತನಾಡಿ, ರಾಜ್ಯದ ಮುಖ್ಯಮಂತ್ರಿಗಳು ಪಾರಂಪರಿಕ ತಾಣವಾದ ಕುದುರೆ ಫಾರಂನ್ನು ಟೌನ್‌ಶಿಪ್ ಮಾಡುವ ಧೋರಣೆ ಕೈಬಿಡಬೇಕು, ಏಷಿಯಾ ಖಂಡದಲ್ಲೆ ಎರಡನೇ ಪ್ರಮುಖ ಕುದುರೆ ಸಂವರ್ಧನೆ ತಾಣವಾದ ಕುದುರೆ ಫಾರಂನಲ್ಲಿ ಪಾಶುವಾರು ಚಟುವಟಿಕೆ ನಡೆಸಬೇಕು ಹೊರತು ಬೇರೆ ಚಟುವಟಿಕೆ ನಡೆಯಬಾರದು, ಪ್ರಜಾಪ್ರಭುತ್ವ ವ್ಯವಸ್ಥೆಯಡಿಯಲ್ಲಿ ಬಂದಿರುವ ಸಿದ್ದರಾಮಯ್ಯನವರು ತಾಲೂಕಿನ ಜನರ ಭಾವನೆಗೆ ಬೆಲೆಕೊಟ್ಟು ಟೌನ್‌ಶಿಪ್ ನಿರ್ಮಾಣ ಕೈಬಿಡಬೇಕೆಂದರು.
ರೈತ ಸಂಘದ ಜಿಲ್ಲಾಧ್ಯಕ್ಷ ಆನಂದ್ ಪಟೇಲ್ ಮಾತನಾಡಿ, ವಯಸ್ಸಾಯಿತು ಎಂದು ಹೆತ್ತ ತಂದೆ ತಾಯಿಯನ್ನು ಯಾರು ಮಾರೊಲ್ಲ, ಹಾಗೇಯೆ ಅಭಿವೃದ್ಧಿ ನೆಪದಲ್ಲಿ ಪಾರಂಪರಿಕ ಇತಿಹಾಸ ಪ್ರಸಿದ್ದ ತಾಣ ಕುದುರೆ ಫಾರಂನ್ನು ಸರ್ಕಾರ ಬೇರೆ ಉದ್ದೇಶಕ್ಕೆ ಮಾರಲು ಮುಂದಾಗಿರುವುದು ಖಂಡನೀಯ ಎಂದರು.
ಹೋರಾಟಕ್ಕೆ ಸಿದ್ದ
ಮಾಜಿ ಶಾಸಕ ಬಿ.ಬಿ.ರಾಮಸ್ವಾಮಿಗೌಡ ಮಾತನಾಡಿ, ಕಾನೂನಾತ್ಮಕ ಹೋರಾಟ ಸೇರಿದಂತೆ ಎಲ್ಲಾ ರೀತಿಯ ಹೋರಾಟ ನಡೆಸಲು ಸಿದ್ದ ಎಂದರು.
ಬಿಜೆಪಿ ಮುಖಂಡ ರಾಜೇಶ್‌ಗೌಡ ತಾಲೂಕಿನ ಜನರ ಸ್ವತ್ತಾಗಿರುವ ಕುದುರೆ ಫಾರಂ ಉಳಿಸಿಕೊಳ್ಳುವುದು ನಮ್ಮ ಉದ್ದೇಶ. ಇದಕ್ಕಾಗಿಯೇ ಪ್ರತಿಭಟನೆ ನಡೆಸಲಾಗುತ್ತಿದ್ದು. ಮುಂದೆಯೂ ಹೋರಾಟಗಳು ನಡೆಯಲಿವೆ ಎಂದು ತಿಳಿಸಿದರು.
ತಾಲೂಕು ಬಿಜೆಪಿ ಅಧ್ಯಕ್ಷ ಬಲರಾಮ್, ತಾಲೂಕು ಜೆಡಿಎಸ್ ಅಧ್ಯಕ್ಷ ಜಗದೀಶ್, ಮಾಜಿ ಸಚಿವೆ ಲಲಿತಾನಾಯಕ್, ಕಾರ್ಮಿಕ ಸಂಘಟನೆ ಮುಖಂಡ ಮುನಾಫ್, ಕಾಡುಗೊಲ್ಲ ಅಸ್ಮಿತೆ ಸಮಿತಿ ಅಧ್ಯಕ್ಷ ನಾಗಣ್ಣ, ಕರವೇ ಅಧ್ಯಕ್ಷ ಮಂಜುನಾಥ, ಕನ್ನಡಸೇನೆ ಅಧ್ಯಕ್ಷ ಶ್ರೀನಿವಾಸ, ಅಂಬರೀಶ್ ಅಭಿಮಾನಿ ಸಂಘದ ಅಧ್ಯಕ್ಷ ನಾಗೇಶ್ ಪಾಲ್ಗೊಂಡಿದ್ದರು.