Tumkur News: ದೊಡ್ಡವರ ಮೂಢನಂಬಿಕೆಗೆ ಮಗು ಬಲಿ; ಸೂತಕದ ಹೆಸರಲ್ಲಿ ಊರಾಚೆ ಗುಡಿಸಲು ಸೇರಿದ್ದ ಬಾಣಂತಿ
ಕನ್ನಡ ಸುದ್ದಿ  /  ಕರ್ನಾಟಕ  /  Tumkur News: ದೊಡ್ಡವರ ಮೂಢನಂಬಿಕೆಗೆ ಮಗು ಬಲಿ; ಸೂತಕದ ಹೆಸರಲ್ಲಿ ಊರಾಚೆ ಗುಡಿಸಲು ಸೇರಿದ್ದ ಬಾಣಂತಿ

Tumkur News: ದೊಡ್ಡವರ ಮೂಢನಂಬಿಕೆಗೆ ಮಗು ಬಲಿ; ಸೂತಕದ ಹೆಸರಲ್ಲಿ ಊರಾಚೆ ಗುಡಿಸಲು ಸೇರಿದ್ದ ಬಾಣಂತಿ

ಬಾಣಂತಿ ವಸಂತಾ ಮತ್ತು ಹಸುಗೂಸು ಉಸಿರುಗಟ್ಟಿಸುವಂತಹ ಸಣ್ಣ ಗುಡಿಸಲಿನಲ್ಲೇ ಹಗಲು, ರಾತ್ರಿ ಇರಬೇಕಾದ ಪರಿಸ್ಥಿತಿ ಎದುರಾಗಿತ್ತು. ಇದೀಗ ವಿಪರೀತ ಮಳೆ, ಗಾಳಿಗೆ ಮಗು ಅನಾರೋಗ್ಯಕೀಡಾಗಿ ಪ್ರಾಣಬಿಟ್ಟಿದೆ.

ತುಮಕೂರು ಜಿಲ್ಲೆ ಮಲ್ಲೇನಹಳ್ಳಿ ಗೊಲ್ಲರಹಟ್ಟಿಯಲ್ಲಿ ಮಗುವನ್ನು ಕಳೆದುಕೊಂಡ ತಾಯಿ ವಸಂತಾ.
ತುಮಕೂರು ಜಿಲ್ಲೆ ಮಲ್ಲೇನಹಳ್ಳಿ ಗೊಲ್ಲರಹಟ್ಟಿಯಲ್ಲಿ ಮಗುವನ್ನು ಕಳೆದುಕೊಂಡ ತಾಯಿ ವಸಂತಾ.

ತುಮಕೂರು: ಮೂಢ ನಂಬಿಕೆ ಇನ್ನೂ ಜೀವಂತವಾಗಿದ್ದು, ಅದು ಒಂದು ಮಗುವನ್ನೇ ಬಲಿ ಪಡೆದ ಘಟನೆ ತುಮಕೂರು ತಾಲ್ಲೂಕು ಬೆಳ್ಳಾವಿ ಹೋಬಳಿ ಮಲ್ಲೇನಹಳ್ಳಿಯ ಗೊಲ್ಲರಹಟ್ಟಿಯಲ್ಲಿ ನಡೆದಿದೆ. ಸೂತಕವು ದೇವರಿಗೆ ಆಗಲ್ಲ ಎಂದು ಬಾಣಂತಿ, ಹಸುಗೂಸನ್ನೇ ಊರಿನಿಂದ ಹೊರಗಿಟ್ಟ ಕುಟುಂಬಸ್ಥರು ಇದೀಗ ಮೌಡ್ಯ ಆಚರಣೆಯಿಂದಾಗಿ ಮಗುವನ್ನೇ ಕಳೆದುಕೊಂಡಿದೆ.

ತುಮಕೂರು ಸಮೀಪದ ಮಲ್ಲೇನಹಳ್ಳಿ ಗೊಲ್ಲರಹಟ್ಟಿಯಲ್ಲಿ ಸಿದ್ದೇಶ್ ಮತ್ತು ಮತ್ತು ವಸಂತ ದಂಪತಿಯ ಮಗು ವಿಪರೀತ ಶೀತದಿಂದ ಬಳಲಿ ಮೃತಪಟ್ಟಿದೆ. ಶೀತ ಹೆಚ್ಚಾಗಿದ್ದರಿಂದ ಮಗುವನ್ನು ತುಮಕೂರು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು, ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಹಸುಗೂಸು ಪ್ರಾಣಬಿಟ್ಟಿದೆ. ತಮ್ಮ ದೇವರಿಗೆ ಸೂತಕ ಆಗಲ್ಲ ಎಂದು ಬಾಣಂತಿ, ಮಗುವನ್ನು ಕುಟುಂಬಸ್ಥರು ಊರ ಹೊರಗಿಟ್ಟಿದ್ದರು, ಮಳೆ, ಗಾಳಿಯಿದ್ದರೂ ತಾಯಿ, ಮಗು ಊರ ಹೊರಗಿನ ಚಿಕ್ಕ ಗುಡಿಸಲಿನಲ್ಲಿಯೇ ವಾಸವಿದ್ದರು. ಇದೀಗ ಮೌಢ್ಯವು ಮಗುವಿನ ಜೀವವನ್ನೇ ತೆಗೆದಿದೆ.

ತುಮಕೂರಿನ ಮಲ್ಲೇನಹಳ್ಳಿಯಲ್ಲಿ ತಾತ್ಕಾಲಿಕ ಟೆಂಟ್‌ನಲ್ಲಿ ವಸಂತಾ ತನ್ನ ಮಗುವಿನೊಂದಿಗೆ ವಿಪರೀತ ಗಾಳಿ, ಮಳೆ ಇದ್ದರೂ ಸಹ ಊರ ಹೊರಗೆ ಇದ್ದರು, ಇದರಿಂದ ಮಗುವಿಗೆ ಅನಾರೋಗ್ಯ ಕಾಣಿಸಿಕೊಂಡಿತ್ತು. ಗ್ರಾಮದ ಸಿದ್ದೇಶ್ ಅವರ ಪತ್ನಿ ವಸಂತಾ ಕಳೆದ ಜೂನ್ 22 ರಂದು ಅವಳಿ ಮಕ್ಕಳಿಗೆ ಜನ್ಮ ನೀಡಿದ್ದರು, ತುಮಕೂರು ಜಿಲ್ಲಾಸ್ಪತ್ರೆಯಲ್ಲಿ ವಸಂತಗೆ ಹೆರಿಗೆ ಆಗಿತ್ತು, ಈ ವೇಳೆ ಒಂದು ಮಗು ಸಾವನ್ನಪ್ಪಿದ್ದರೆ, ಇನ್ನೊಂದು ಮಗು ಬದುಕುಳಿದಿತ್ತು. ಏಳು ತಿಂಗಳಿಗೆ ಹೆರಿಗೆ ಆಗಿದ್ದರಿಂದ ಪ್ರಿಮೆಚೂರ್ಡ್‌ ಬೇಬಿಯನ್ನು ಜಿಲ್ಲಾಸ್ಪತ್ರೆಯ ಐಸಿಯುನಲ್ಲಿಡಲಾಗಿತ್ತು. ಕಳೆದ ಜುಲೈ 14 ರಂದು ಆಸ್ಪತ್ರೆಯಿಂದ ಡಿಸ್‌ಚಾರ್ಜ್ ಮಾಡಲಾಗಿತ್ತು.

ಆಸ್ಪತ್ರೆಯಿಂದ ಬರುತ್ತಿದ್ದಂತೆ ಕುಟುಂಬಸ್ಥರು ತಾಯಿ ಮತ್ತು ಮಗುವನ್ನು ಊರಾಚೆ ಇರುವ ಗುಡಿಸಲಿಗೆ ರವಾನೆ ಮಾಡಿದ್ದರು. ಹೀಗಾಗಿ ಬಾಣಂತಿ ವಸಂತಾ ಮತ್ತು ಹಸುಗೂಸು ಉಸಿರುಗಟ್ಟಿಸುವಂತಹ ಸಣ್ಣ ಗುಡಿಸಲಿನಲ್ಲೇ ಹಗಲು, ರಾತ್ರಿ ಇರಬೇಕಾದ ಪರಿಸ್ಥಿತಿ ಎದುರಾಗಿತ್ತು. ಇದೀಗ ವಿಪರೀತ ಮಳೆ, ಗಾಳಿಗೆ ಮಗು ಅನಾರೋಗ್ಯಕೀಡಾಗಿ ಪ್ರಾಣಬಿಟ್ಟಿದೆ.

(ವರದಿ: ಈಶ್ವರಪ್ಪ)

Whats_app_banner