ಕಾಡುಗೊಲ್ಲ ಸಮುದಾಯದ ಜನರ ಸಾಮಾಜಿಕ ವಾಸ್ತವಕ್ಕೆ ಹಿಡಿದ ಕೈಗನ್ನಡಿ; ಆಗಬೇಕಾದ್ದೇನು ಎಂದು ವಿವರಿಸಿದ್ದಾರೆ ಡಾ.ವಡ್ಡಗೆರೆ ನಾಗರಾಜಯ್ಯ
ಕನ್ನಡ ಸುದ್ದಿ  /  ಕರ್ನಾಟಕ  /  ಕಾಡುಗೊಲ್ಲ ಸಮುದಾಯದ ಜನರ ಸಾಮಾಜಿಕ ವಾಸ್ತವಕ್ಕೆ ಹಿಡಿದ ಕೈಗನ್ನಡಿ; ಆಗಬೇಕಾದ್ದೇನು ಎಂದು ವಿವರಿಸಿದ್ದಾರೆ ಡಾ.ವಡ್ಡಗೆರೆ ನಾಗರಾಜಯ್ಯ

ಕಾಡುಗೊಲ್ಲ ಸಮುದಾಯದ ಜನರ ಸಾಮಾಜಿಕ ವಾಸ್ತವಕ್ಕೆ ಹಿಡಿದ ಕೈಗನ್ನಡಿ; ಆಗಬೇಕಾದ್ದೇನು ಎಂದು ವಿವರಿಸಿದ್ದಾರೆ ಡಾ.ವಡ್ಡಗೆರೆ ನಾಗರಾಜಯ್ಯ

ಹೆಣ್ಣುಮಕ್ಕಳನ್ನು ಮುಟ್ಟುಚೆಟ್ಟು, ಬಾಣಂತಿ ಸಮಯಗಳಲ್ಲಿ ಮಡಿಮೈಲಿಗೆ ಸೂತಕವೆಂದು ಮನೆಯಾಚೆ ಪ್ರತ್ಯೇಕ ಗುಡಿಸಲಲ್ಲಿರಿಸುವ ಮೂಢಪದ್ಧತಿಯನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಿದ್ದಾರೆ. ಇದರ ವಿರುದ್ದ ಅರಿವು ಮೂಡಿಸುವ ಕಾರ್ಯ ಇನ್ನಷ್ಟು ಆಗಬೇಕು. ಬದಲಾವಣೆಯು ನಿಧಾನ ಗತಿಯ ನಿರಂತರ ಪ್ರಕ್ರಿಯೆ ಎಂಬುದನ್ನು ಮರೆಯಬಾರದು ಎಂದು ಡಾ.ವಡ್ಡಗೆರೆ ನಾಗರಾಜಯ್ಯ ವಿವರಿಸಿರುವುದು ಹೀಗೆ.

ಮೌಢ್ಯದ ಕುರಿತಾಗಿ ಜಾಗೃತಿ ಮೂಡಿಸುವ ಎಚ್‌ಟಿ ಕನ್ನಡ ಸಂಪಾದಕೀಯ ಮತ್ತು ವಿವಿಧ ಪತ್ರಿಕಾ ವರದಿಗಳ ತುಣುಕು.
ಮೌಢ್ಯದ ಕುರಿತಾಗಿ ಜಾಗೃತಿ ಮೂಡಿಸುವ ಎಚ್‌ಟಿ ಕನ್ನಡ ಸಂಪಾದಕೀಯ ಮತ್ತು ವಿವಿಧ ಪತ್ರಿಕಾ ವರದಿಗಳ ತುಣುಕು.

ಕಾಡುಗೊಲ್ಲ ಸಮುದಾಯದ ಪುರಾತನ ಪದ್ದತಿಯ ಪ್ರಕಾರ ಊರಾಚೆ ಪ್ರತ್ಯೇಕವಾದ ತಾತ್ಕಾಲಿಕ ಗುಡಿಸಲಿನಲ್ಲಿ ಬಾಣಂತಿಯೊಬ್ಬಳು ತನ್ನ ನವಜಾತ ಶಿಶುವಿನೊಂದಿಗೆ ವಾಸವಿದ್ದಾಗ ಮಳೆಗೆ ಸಿಕ್ಕಿ ನವಜಾತ ಶಿಶು ಸತ್ತುಹೋಗಿರುವ ಸುದ್ದಿ ವ್ಯಾಪಕವಾಗಿ ಚರ್ಚೆಯಾಗುತ್ತಿದೆ. ತುಮಕೂರು ಜಿಲ್ಲೆಯ ಬೆಳ್ಳಾವಿ ಹೋಬಳಿಯ ಮಲ್ಲೇನಹಳ್ಳಿ ಗ್ರಾಮದ ಕಾಡುಗೊಲ್ಲರ ಹಟ್ಟಿಯಲ್ಲಿ ಸಂಭವಿಸಿರುವ ಈ ಘಟನೆ ಕರ್ನಾಟಕ ಮತ್ತು ಕರ್ನಾಟಕದ ಆಚೆಗೂ ನೆಲೆಸಿರುವ ಎಲ್ಲಾ ಕಾಡುಗೊಲ್ಲ ಸಮುದಾಯದ ಜನರ ಸಾಮಾಜಿಕ ವಾಸ್ತವತೆಗೆ ಕನ್ನಡಿ ಹಿಡಿಯುತ್ತದೆ.

ಕರ್ನಾಟಕದ ರಾಜಧಾನಿಯಾಗಿರುವ ಬೆಂಗಳೂರು ‌ಮೆಟ್ರೋಪಾಲಿಟನ್ ಮಹಾನಗರದ ನಾಗದೇವನಹಳ್ಳಿಯ ಕಾಡುಗೊಲ್ಲರು ಈಗಲೂ ತಮ್ಮ ಹೆಣ್ಣುಮಕ್ಕಳು ಮುಟ್ಟಾದಾಗ‌ ಮೂರು ದಿನ ಮತ್ತು ಹೆರಿಗೆಯ ಸಮಯದಲ್ಲಿ ‌ಮೂರು ತಿಂಗಳು ಮನೆಯಾಚೆ ಪ್ರತ್ಯೇಕವಾದ ಗುಡಿಸಲು ಅಥವಾ ಕುಟೀರಗಳಲ್ಲಿರಿಸುವ ಪದ್ದತಿಯನ್ನು ಅನುಸರಿಸುತ್ತಿದ್ದಾರೆ.

ಕರ್ನಾಟಕದ ಅನೇಕ ಕಡೆಗಳಲ್ಲಿ ಕಾಡುಗೊಲ್ಲ ಸಮುದಾಯದ ಬಹುತೇಕ ಜನ ಇಂದಿಗೂ ಕಳ್ಳೆಬೇಲಿಯೊಳಗಿನ ಹಟ್ಡಿಗಳಲ್ಲಿ ಹುಲ್ಲುಗುಡಿಸಲಿನ ಗುಡಿಗಳಲ್ಲಿ ತಮ್ಮದೇ ಸಾಂಸ್ಕೃತಿಕ ನಾಯಕರನ್ನು ದೇವರುಗಳೆಂದು ಆರಾಧಿಸುತ್ತಾ ಹುಲ್ಲುಗುಡಿಸಲುಗಳಲ್ಲಿ ವಾಸಿಸುತ್ತಿದ್ದಾರೆ.

ಹೆಣ್ಣುಮಕ್ಕಳನ್ನು ಮುಟ್ಟುಚೆಟ್ಟು, ಬಾಣಂತಿ ಸಮಯಗಳಲ್ಲಿ ಮಡಿಮೈಲಿಗೆ ಸೂತಕವೆಂದು ಮನೆಯಾಚೆ ಪ್ರತ್ಯೇಕವಾಗಿ ಗುಡಿಸಲುಗಳಲ್ಲಿರಿಸುವ ಮೂಢ ಪದ್ದತಿಯನ್ನು ಇಂದಿಗೂ ಕಟ್ಟುನಿಟ್ಟಾಗಿ ಪಾಲಿಸುತ್ತಿದ್ದಾರೆ. ಮಾದಿಗ ಸಮುದಾಯದ ಜನರನ್ನು ತಮ್ಮ ಹಟ್ಟಿಯೊಳಕ್ಕೆ ಸೇರಿಸದಿರುವ, ಮುಟ್ಟಿನ ಸಮಯದಲ್ಲಿ ಹೆಣ್ಣುಮಕ್ಕಳನ್ನು ಮುಟ್ಟಿಸಿಕೊಳ್ಳದಿರುವ ಮತ್ತು ಹಟ್ಟಿಯೊಳಕ್ಕೆ ಪ್ರವೇಶ ನಿರ್ಬಂಧಿಸುವ, ಹೆಣ್ಣುಮಕ್ಕಳಿಗೆ ದೇವರ ಗುಡಿಗಳ ಪ್ರವೇಶ ಮತ್ತು ಪೂಜಿಸುವ ಧಾರ್ಮಿಕ ಅಧಿಕಾರಗಳ ನಿರಾಕರಣೆ ಇನ್ನೂ ಮುಂತಾದ ಮೌಡ್ಯಾಚರಣೆಗಳ ವಿರುದ್ದ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ನಾವು ಕಳೆದೆರಡು ದಶಕಗಳಿಂದಲೂ ನಡೆಸುತ್ತಾ ಬಂದಿದ್ದೇವೆ.

ಕೇವಲ ಕಾಡುಗೊಲ್ಲರಷ್ಟೇ ಅಲ್ಲದೇ ಭಾರತದಲ್ಲಿರುವ ಬಹುತೇಕ ಬುಡಕಟ್ಟು ಸಮುದಾಯಗಳು ಹೆಣ್ಣುಮಕ್ಕಳ ವಿಷಯದಲ್ಲಿ ಬದಲಾವಣೆಗೆ ಒಪ್ಪದೆ ತೀರಾ ಜಿಗುಟಾಗಿವೆ. ಬಹುಮುಖ್ಯವಾಗಿ ತಾವು ನಂಬಿದ ದೇವರುಗಳಿಗೆ ಅಂಟುಮುಂಟಾಗದಂತೆ ನೋಡಿಕೊಳ್ಳಲು ಮಹಿಳೆಯರನ್ನು ನಿರ್ದಿಷ್ಟ ಸಂದರ್ಭಗಳಲ್ಲಿ ಮುಟ್ಟಿಸಿಕೊಳ್ಳದೇ ದೂರ ಇರಿಸಬೇಕೆಂಬ ನಂಬಿಕೆ ಕಾಡುಗೊಲ್ಲರಲ್ಲಿ ಬಲವಾಗಿ ಬೇರೂರಿದೆ.

ನಿಜವಾಗಿಯೂ ಇವರು ಆರಾಧಿಸುವ ದೈವಗಳು ಆಯಾ ಸಮುದಾಯಕ್ಕಾಗಿ ದುಡಿದು ಮಡಿದ ಸಾಂಸ್ಕೃತಿಕ ನಾಯಕರೇ ಆಗಿರುತ್ತಾರೆ. ವೈರಿಗಳ ವಿರುದ್ಧ ಕಾದಾಡಿ ತಮ್ಮ ಸಮುದಾಯವನ್ನು, ಪಶು ಸಂಪತ್ತು ಮತ್ತು ಹುಲ್ಲುಗಾವಲು ಪ್ರದೇಶಗಳನ್ನು ಹಾಗೂ ವಾಸದ ನೆಲೆಗಳನ್ನು ಕಾಪಾಡಿ ರಕ್ಷಿಸಿದ ಆ ನಾಯಕರು ತಮ್ಮ ಬದುಕಿನ ಉಪಯೋಗಕ್ಕೆ ಬಂದವರಾದ್ದರಿಂದಲೇ ಸಹಜವಾಗಿ ದೇವರುಗಳ ಸ್ಥಾನದಲ್ಲಿ ಪ್ರತಿಷ್ಠಾಪಿತರಾಗಿ ಪರಿಸರದ ಘಟಕಗಳೇ ಆಗಿರುತ್ತಾರೆ.

ಎಲ್ಲಾ ಬುಡಕಟ್ಟು, ಅಲೆಮಾರಿ, ಆದಿವಾಸಿಗಳಲ್ಲಿಯೂ ತಮ್ಮದೇ ಆದ ನಂಬಿಕೆ, ಆಚಾರ ವಿಚಾರ ಸಂಪ್ರದಾಯಗಳು ಅಸ್ತಿತ್ವದಲ್ಲಿವೆ. ಇವೆಲ್ಲವುಗಳಿಗೂ ಆಯಾ ಸಮುದಾಯಗಳು ಕಟ್ಟುನಿಟ್ಟಾದ ನಿಯಮಗಳನ್ನು ಅಳವಡಿಸಿ ಜಾರಿಯಲ್ಲಿಟ್ಟುಕೊಂಡಿವೆ. ಕಾಡುಗೊಲ್ಲರ ಆಚರಣೆಗಳಿಗೂ ಮತ್ತು ಮೇಲ್ವರ್ಗದವರು ಅನುಸರಿಸುತ್ತಿರುವ ಶ್ರೇಣೀಕೃತ ಜಾತಿವ್ಯವಸ್ಥೆಗೂ ನೇರವಾಗಿ ಯಾವುದೇ ಸಂಬಂಧವಿದ್ದಂತೆ ಕಾಣಿಸುವುದಿಲ್ಲ.

ಯಾಕೆಂದರೆ ಮೇಲ್ವರ್ಗದ ಮುಖ್ಯವಾಹಿನಿ ಸಮಾಜದಿಂದ ದೂರವೇ ಉಳಿದಿರುವ ಕಾಡುಗೊಲ್ಲರು ಇಂದಿಗೂ ಹಟ್ಟಿ ಎಂದು ಕರೆಯಲಾಗುವ ತಮ್ಮದೇ ಪ್ರತ್ಯೇಕ ಬೌಗೋಳಿಕ ನೆಲೆಗಳಲ್ಲಿ ವಾಸಿಸುತ್ತಿದ್ದಾರೆ. ಸಂಪ್ರದಾಯ, ನಂಬಿಕೆ, ಆಚರಣೆಗಳು ತಮ್ಮ ಸಾಮಾಜಿಕ ಆಸ್ಮಿತೆಯ ಮತ್ತು ಸಾಂಸ್ಕೃತಿಕ ಪ್ರತ್ಯೇಕತೆಯನ್ನು ಗುರುತಿಸುವುದರ ಅನನ್ಯ ಲಕ್ಷಣಗಳೆಂದೇ ಪರಿಗಣಿಸಿದ್ದಾರೆ. ಇಂತಹ ನಡವಳಿಕೆಗಳು ಆದಿಮ ಸ್ಥಿತಿಯಲ್ಲಿರುವ ಸಮುದಾಯಗಳಲ್ಲಿ ಪ್ರಶ್ನಾತೀತ ಸಂಗತಿಗಳೆಂದೇ ಪಾಲನೆಯಲ್ಲಿವೆ.

"ಅಂಬೇಡ್ಕರ್ ಅವರ ಸಂವಿಧಾನದ ಕಾನೂನುಗಳು ಇಂತಹ ಆಚರಣೆಗಳನ್ನು ಒಪ್ಪಲಾರವು. ಇವೆಲ್ಲವೂ ಕಾನೂನು ಬಾಹಿರ" ಎಂದು ಯಾರಾದರೂ ಕೇಳಿದರೆ, "ನಿಮ್ಮ ಅಂಬೇಡ್ಕರ್ ಬಂದಿದ್ದಾಗಲೀ ಸಂವಿಧಾನ ಬರೆದದ್ದಾಗಲೀ ನಿನ್ನೆಮೊನ್ನೆ. ನಮ್ಮ ಕುಲಾಚಾರ ಸಂಪ್ರದಾಯಗಳು ಸಾವಿರಾರು ವರ್ಷಗಳಿಂದಲೂ ಬಂದಿವೆ. ಆಗೆಲ್ಲಾ ನಿಮ್ಮ ಅಂಬೇಡ್ಕರ್ರೇ ಇದ್ರಾ... ಅವರ ಕಾನೂನೇ ಇತ್ತಾ ? ಹೋಗಯ್ಯ ಕಂಡಿದ್ದೀವಿ" ಎಂದು ಎದುರುಬಿದ್ದು ಪ್ರಶ್ನಿಸುವ ಮಟ್ಟಿಗೆ ಇಂದಿಗೂ ಅಜ್ಞಾನದಲ್ಲಿದ್ದಾರೆ.

ಮಾದಿಗರನ್ನು ತಮ್ಮ ಹಟ್ಟಿಗಳಿಗೆ ಪ್ರವೇಶಿಸದಂತೆ ನಿರ್ಬಂಧಿಸಿರುವ ಕಾಡುಗೊಲ್ಲರು, ತಮ್ಮದೇ ಸಮುದಾಯದ ಪುರುಷರನ್ನು ಹೊರತುಪಡಿಸಿ ಬೇರೆ ಯಾವುದೇ ಸಮುದಾಯದವರನ್ನೂ ತಮ್ಮ ದೈವಸ್ಥಾನಗಳಿಗೆ ಸೇರಿಸುವುದಿಲ್ಲ. ತಮ್ಮ ‌ಕುಲದಾಚೆಯ ಬ್ರಾಹ್ಮಣನಾದರೂ ಸರಿಯೇ ಗುಡಿಯೊಳಕ್ಕೆ ಬಿಟ್ಟುಕೊಳ್ಳುವುದಿಲ್ಲ. ಇದು ಇನ್ನೊಬ್ಬರನ್ನು ಅವಮಾನಿಸುವ ಬದಲಾಗಿ ತಮ್ಮ‌ ಬುಡಕಟ್ಟುತನ, ಸಾಮಾಜಿಕ ಆಸ್ಮಿತೆ ಮತ್ತು ಸಾಂಸ್ಕೃತಿಕ ಪ್ರತ್ಯೇಕತೆಯನ್ನು ಕಾಯ್ದುಕೊಳ್ಳುವ ಹಕ್ಕು ಎಂದೇ ಕಾಡುಗೊಲ್ಲರು ಭಾವಿಸಿದ್ದಾರೆ. ಇಂತಹ ವಿಚಾರಗಳಲ್ಲಿ ಜಾಗೃತಿ ಮೂಡಿಸಲು ಕಾಡುಗೊಲ್ಲರ ಹಟ್ಟಿಗಳಲ್ಲಿ ಸರ್ಕಾರ ಅರಿವಿನ ಶಿಬಿರಗಳನ್ನು ಆಯೋಜಿಸುವ ಅಗತ್ಯವಿದೆ.

ಹಟ್ಟಿಗಳನ್ನು ಕಂದಾಯ ಗ್ರಾಮಗಳನ್ನಾಗಿ ಘೋಷಿಸಿ ಅಭಿವೃದ್ದಿ ಪಡಿಸುವ ಯೋಜನೆಗಳನ್ನು ರೂಪಿಸಬೇಕಿದೆ. ಶಿಕ್ಷಣಕ್ಕೆ ಸುಸಜ್ಜಿತ ಶಾಲೆ, ವೈಜ್ಞಾನಿಕ ಮನೋಧರ್ಮ ರೂಪಿಸುವ ಹೊಸ ಪಠ್ಯಗಳು, ಆರೋಗ್ಯ ಸೌಲಭ್ಯ, ಸಂವಿಧಾನ ಮತ್ತು ಕಾನೂನುಗಳ ಸಾಕ್ಷರತೆ, ಆರ್ಥಿಕ ಸಬಲೀಕರಣದ ಯೋಜನೆಗಳು, ರಾಜಕೀಯ ಪ್ರಾತಿನಿಧ್ಯ, ಸರ್ಕಾರ ಮತ್ತಿತರ ಸಾರ್ವಜನಿಕ ವಲಯಗಳ ನೌಕರಿ ಇನ್ನೂ ಮುಂತಾದ ಸೌಲಭ್ಯಗಳನ್ನು ಒದಗಿಸಿದಾಗ ಮಾತ್ರ ಇಂತಹ ಸಮುದಾಯಗಳ ಸುಧಾರಣೆ ಸಾಧ್ಯವಾಗುತ್ತದೆ. ಇದರ ಹೊರತು ಕಾಡುಗೊಲ್ಲರ ಅಥವಾ ಯಾವುದೇ ಬುಡಕಟ್ಟು ಸಮುದಾಯದ ಆಚಾರ ವಿಚಾರ ಸಂಪ್ರದಾಯಗಳನ್ನು ದುರಂತವೆಂಬಂತೆ ಬಿಂಬಿಸುವುದು ಅವರ ಸಾಂಸ್ಕೃತಿಕ ಬದುಕಿನ ಅಸ್ಮಿತೆಗಳನ್ನು ದಿಕ್ಕು ತಪ್ಪಿಸಿದಂತಾಗುತ್ತದೆ. ಬದಲಾವಣೆ ಎಂಬುದು ನಿಧಾನ ಗತಿಯ ನಿರಂತರ ಪ್ರಕ್ರಿಯೆ ಎಂಬುದನ್ನು ಮನಗಾಣೋಣ.

Whats_app_banner