ಹಾಲು ಉತ್ಪಾದಕರಿಗೆ 900 ಕೋಟಿ ಬಾಕಿ: ಡಿಸಿ ಕಚೇರಿ ಎದುರು ಹಸು ಕಟ್ಟಿ, ಹಾಲು ಕರೆದು ಪ್ರತಿಭಟನೆ
ಕನ್ನಡ ಸುದ್ದಿ  /  ಕರ್ನಾಟಕ  /  ಹಾಲು ಉತ್ಪಾದಕರಿಗೆ 900 ಕೋಟಿ ಬಾಕಿ: ಡಿಸಿ ಕಚೇರಿ ಎದುರು ಹಸು ಕಟ್ಟಿ, ಹಾಲು ಕರೆದು ಪ್ರತಿಭಟನೆ

ಹಾಲು ಉತ್ಪಾದಕರಿಗೆ 900 ಕೋಟಿ ಬಾಕಿ: ಡಿಸಿ ಕಚೇರಿ ಎದುರು ಹಸು ಕಟ್ಟಿ, ಹಾಲು ಕರೆದು ಪ್ರತಿಭಟನೆ

Tumkur News: ಹಾಲು ಉತ್ಪಾದಕರಿಗೆ ನೀಡಬೇಕಾಗಿರುವ 900 ಕೋಟಿ ರೂ. ಹಾಲಿನ ಪ್ರೋತ್ಸಾಹ ಧನ ಬಿಡುಗಡೆ ಸೇರಿದಂತೆ ವಿವಿಧ ಬೇಡಿಕೆಗಳಿಗೆ ಒತ್ತಾಯಿಸಿ ಬಿಜೆಪಿ ಮುಖಂಡರು ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿದರು

ತುಮಕೂರು ಜಿಲ್ಲಾಧಿಕಾರಿ ಕಚೇರಿ ಎದುರು ರೈತರು ಪ್ರತಿಭಟಿಸಿದರು.
ತುಮಕೂರು ಜಿಲ್ಲಾಧಿಕಾರಿ ಕಚೇರಿ ಎದುರು ರೈತರು ಪ್ರತಿಭಟಿಸಿದರು.

ತುಮಕೂರು: ರಾಜ್ಯ ಕಾಂಗ್ರೆಸ್ ಸರ್ಕಾರದ ರೈತ ವಿರೋಧಿ ಧೋರಣೆ ಖಂಡಿಸಿ ಬಿಜೆಪಿ ರೈತ ಮೋರ್ಚಾ ನೇತೃತ್ವದಲ್ಲಿ ಬಿಜೆಪಿ ಮುಖಂಡರು ಶನಿವಾರ ಜಿಲ್ಲಾಧಿಕಾರಿ ಕಚೇರಿ ಮುಂದೆ ಹಸು ತಂದು ಕಟ್ಟಿ, ಹಾಲು ಕರೆದು ಜಿಲ್ಲಾಧಿಕಾರಿಗಳಿಗೆ ಹಾಲು ನೀಡಿ ವಿನೂತನ ಪ್ರತಿಭಟನೆ ನಡೆಸಿದರು. ಹಾಲು ಉತ್ಪಾದಕರಿಗೆ ನೀಡಬೇಕಾಗಿರುವ 900 ಕೋಟಿ ರೂ. ಹಾಲಿನ ಪ್ರೋತ್ಸಾಹ ಧನ ಬಿಡುಗಡೆ ಸೇರಿದಂತೆ ವಿವಿಧ ಬೇಡಿಕೆಗಳಿಗೆ ಒತ್ತಾಯಿಸಿ ಬಿಜೆಪಿ ಮುಖಂಡರು ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿದರು, ಪ್ರತಿಭಟನೆಗೆ ರಾಸುಗಳನ್ನು ತರುವುದಕ್ಕೆ ಪೊಲೀಸರು ಆಕ್ಷೇಪ ವ್ಯಕ್ತಪಡಿಸಿದಾಗ ಪೊಲೀಸರು ಹಾಗೂ ಪ್ರತಿಭಟನಾಕಾರರ ನಡುವೆ ಮಾತಿನ ಚಕಮಕಿ ನಡೆಯಿತು, ಕೊನೆಗೆ ಹೋರಾಟಗಾರರಿಗೆ ಮಣಿದ ಪೊಲೀಸರು ಹಸುಗಳನ್ನು ತರಲು ಅವಕಾಶ ಮಾಡಿಕೊಟ್ಟರು.

ಜಿಲ್ಲಾ ಬಿಜೆಪಿ ಅಧ್ಯಕ್ಷ ರವಿಶಂಕರ್ ಹೆಬ್ಬಾಕ, ರೈತ ಮೋರ್ಚಾ ರಾಜ್ಯ ಉಪಾಧ್ಯಕ್ಷ ಬ್ಯಾಟರಂಗೇಗೌಡ, ಮಾಜಿ ಪ್ರಧಾನ ಕಾರ್ಯದರ್ಶಿ ಎಸ್.ಶಿವಪ್ರಸಾದ್, ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷ ಜಿ.ಅರಿವೇಸಂದ್ರ ಸಿದ್ದರಾಮಯ್ಯ ಮೊದಲಾದವರು ಹಸುಗಳಿಂದ ಹಾಲು ಕರೆದು, ಜಿಲ್ಲಾಧಿಕಾರಿಗಳಿಗೆ ಹಾಲು ಹಾಗೂ ಮನವಿ ಪತ್ರ ನೀಡಿ ರೈತರ ಸಂಕಷ್ಟವನ್ನು ಸರ್ಕಾರಕ್ಕೆ ಮನವರಿಕೆ ಮಾಡಿಕೊಡುವ ಪ್ರಯತ್ನ ಮಾಡಿದರು.

ಈ ವೇಳೆ ಮಾತನಾಡಿದ ಜಿಲ್ಲಾ ಬಿಜೆಪಿ ಅಧ್ಯಕ್ಷ ಎಚ್.ಎಸ್.ರವಿಶಂಕರ್ ಹೆಬ್ಬಾಕ, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಜನವಿರೋಧಿ ನೀತಿಗಳನ್ನೇ ಅನುಸರಿಸಿಕೊಂಡು ಬರುತ್ತಿದೆ, ಅದರ ವಿರುದ್ಧ ಬಿಜೆಪಿ ಬೀದಿಗಿಳಿದು ನಿರಂತರ ಹೋರಾಟ ಮಾಡಿಕೊಂಡೇ ಬರುತ್ತಿದೆ, ಹಿಂದಿನ ಬಿಜೆಪಿ ಸರ್ಕಾರ ರೈತರಿಗೆ ಜಾರಿಗೆ ತಂದಿದ್ದ ಅನೇಕ ಯೋಜನೆಗಳನ್ನು ಈ ಸರ್ಕಾರ ಸ್ಥಗಿತಗೊಳಿಸಿದೆ, ಯಾವುದೇ ಯೋಜನೆ ಅನುಷ್ಠಾನ ಮಾಡದೆ ರೈತರಿಗೆ ವಿಷವುಣಿಸಿ ಬದುಕಲಾರದ ಸ್ಥಿತಿಗೆ ತಂದು ನಿಲ್ಲಿಸಿದೆ ಎಂದು ಹೇಳಿದರು.

ಹಾಲು ಉತ್ಪಾದಕರಿಗೆ ಕೊಡಬೇಕಾಗಿರುವ 900 ಕೋಟಿ ರೂ. ಪ್ರೋತ್ಸಾಹ ಧನ ನೀಡಿಲ್ಲ, ಚುನಾವಣೆ ಸಂದರ್ಭದಲ್ಲಿ ಎರಡು ಕಂತಿನ ಗೃಹಲಕ್ಷಿ ಹಣ ಹಾಕಲು ಸರ್ಕಾರದ ಬಳಿ ದುಡ್ಡು ಇತ್ತು, ಹಾಲಿನ ಪ್ರೋತ್ಸಾಹ ಧನ ನೀಡಲು ಇರಲಿಲ್ಲವೆ? ರೈತರಿಗೆ ನೀಡಬೇಕಾದ ಹಾಲಿನ ಬೆಲೆ ಕಮ್ಮಿ ಮಾಡಿದೆ, ಗ್ರಾಹಕರ ಖರೀದಿ ಬೆಲೆಯನ್ನು ಹೆಚ್ಚು ಮಾಡಿ ಎರಡೂ ವರ್ಗಕ್ಕೆ ಸರ್ಕಾರ ಅನ್ಯಾಯ ಮಾಡಿದೆ, ಈ ಸರ್ಕಾರಕ್ಕೆ ಯಾರ ಹಿತವೂ ಬೇಕಾಗಿಲ್ಲ, ವಾಲ್ಮೀಕಿ ಅಭಿವೃದ್ಧಿ ನಿಗಮದ 187 ಕೋಟಿ ರೂ. ಗಳನ್ನು ಬೇನಾಮಿ ಅಕೌಂಟ್ಗಳಿಗೆ ವರ್ಗಾವಣೆ ಮಾಡಿಕೊಂಡು ಚುನಾವಣೆಗೆ ಬಳಿಸಿಕೊಂಡು ಪರಿಶಿಷ್ಟ ವರ್ಗಕ್ಕೆ ಮೋಸ ಮಾಡಿದೆ, ಜನರ ತೆರಿಗೆ ಹಣ ಲೂಟಿ ಮಾಡುತ್ತಿರುವ ಕಾಂಗ್ರೆಸ್ ಸರ್ಕಾರದಿಂದ ಯಾವುದೇ ಅಭಿವೃದ್ಧಿ ಕೆಲಸಗಳು ಆಗುತ್ತಿಲ್ಲ ಎಂದರು.

ರಾಜ್ಯ ಬಿಜೆಪಿ ರೈತ ಮೋರ್ಚಾ ಉಪಾಧ್ಯಕ್ಷ ಬ್ಯಾಟರಂಗೇಗೌಡ ಮಾತನಾಡಿ, ರಾಜ್ಯ ಸರ್ಕಾರ ರೈತರಿಗೆ ನಿರಂತರವಾಗಿ ಅನ್ಯಾಯ ಮಾಡುತ್ತಿದೆ, ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಕಿಸಾನ್ ಸಮ್ಮಾನ್ ಯೋಜನೆಯಡಿ ಕೇಂದ್ರ ಸರ್ಕಾರ ರೈತರಿಗೆ ನೀಡುವ 6 ಸಾವಿರ ರೂ. ಜೊತೆಗೆ ಹಿಂದಿನ ರಾಜ್ಯ ಬಿಜೆಪಿ ಸರ್ಕಾರ ಕೊಡುತ್ತಿದ್ದ 4 ಸಾವಿರ ರೂ. ಗಳನ್ನು ಈ ಸರ್ಕಾರ ನಿಲ್ಲಿಸಿದೆ, 900 ಕೋಟಿ ರೂ. ಹಾಲಿನ ಪ್ರೋತ್ಸಾಹ ಧನ ಬಾಕಿ ಉಳಿಸಿಕೊಂಡಿದೆ, ಗ್ರಾಹಕರಿಗೆ ಹಾಲಿನ ದರ ಹೆಚ್ಚಳ ಮಾಡಿದೆ, ಹಾಲು ಉತ್ಪಾದಕರಿಗೆ ಲೀಟರ್ ಹಾಲಿಗೆ 1.40 ರೂ. ದರ ಕಡಿಮೆ ಮಾಡಿದೆ, ಬಿತ್ತನೆ ಬೀಜದ ಬೆಲೆ ಏಕೆ 70ರಷ್ಟು ಹೆಚ್ಚಾಗಿದೆ, ರೈತರ ಮಕ್ಕಳಿಗೆ ಅನುಕೂಲವಾಗುತ್ತಿದ್ದ ರೈತ ವಿದ್ಯಾನಿಧಿ ಯೋಜನೆ ನಿಲ್ಲಿಸಲಾಗಿದೆ, ಟ್ರಾನ್ಸ್ ಫಾರ್ಮಾರ್ಗೆ ದುಪ್ಪಟ್ಟು ಹಣ ನೀಡಬೇಕಾಗಿದೆ ಎಂದು ಹೇಳಿದರು.

ರೈತ ಮೋರ್ಚಾ ಜಿಲ್ಲಾಧ್ಯಕ್ಷ ಜಿ.ಅರಿವೇಸಂದ್ರ ಸಿದ್ದರಾಮಯ್ಯ, ಪ್ರಧಾನ ಕಾರ್ಯದರ್ಶಿ ರವೀಂದ್ರ, ನಗರ ಅಧ್ಯಕ್ಷ ಸತ್ಯಮಂಗಲ ಜಗದೀಶ್, ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಗಂಗರಾಜು, ಸಂದೀಪ್ಗೌಡ, ಹಾಲೇಗೌಡ, ಕಾರ್ಯದರ್ಶಿ ಹೆಚ್.ಎಂ.ರವೀಶಯ್ಯ, ಜ್ಯೋತಿ ತಿಪ್ಪೇಸ್ವಾಮಿ, ಜಿಲ್ಲಾ ಖಜಾಂಚಿ ಡಾ.ಪರಮೇಶ್, ನಗರ ಅಧ್ಯಕ್ಷ ಟಿ.ಹೆಚ್.ಹನುಮಂತರಾಜು, ಓಬಿಸಿ ಮೋರ್ಚಾ ಅಧ್ಯಕ್ಷ ಕೆ.ವೇದಮೂರ್ತಿ ಇತರರು ಇದ್ದರು.