Tumkur Crime: ತುಮಕೂರಿನಲ್ಲಿ ಮೂವರು ಮಕ್ಕಳನ್ನು ಕೊಂದು ಆತ್ಮಹತ್ಯೆಗೆ ಶರಣಾದ ದಂಪತಿ: 5 ನಿಮಿಷದ ವಿಡಿಯೋದಲ್ಲಿದೆ ವಿವರ
Tumkur Crime News ತುಮಕೂರಿನಲ್ಲಿ ಸಾಲಗಾರರ ಕಾಟ ತಾಳಲಾರದೇ ದಂಪತಿ ತಮ್ಮ ಮಕ್ಕಳನ್ನು ಕೊಂದು ತಾವೂ ಆತ್ಮಹತ್ಯೆಗೆ ಶರಣಾಗಿದ್ಧಾರೆ. ಐದು ನಿಮಿಷದ ವಿಡಿಯೋ ಮಾಡಿ ಡೆತ್ ನೋಟ್ ಕೂಡ ಬರೆದಿಟ್ಟಿದ್ದಾರೆ.
ತುಮಕೂರು: ಸಾಲಗಾರರ ಕಿರುಕುಳದಿಂದ ಬೇಸತ್ತು ಮೂವರು ಮಕ್ಕಳನ್ನು ಕತ್ತು ಹಿಸುಕಿ ಕೊಂದು ದಂಪತಿಯೂ ಆತ್ಮಹತ್ಯೆಗೆ ಶರಣಾದ ಹೃದಯವಿದ್ರಾವಕ ಘಟನೆ ತುಮಕೂರು ನಗರದಲ್ಲಿ ನಡೆದಿದೆ.
ತಮಗೆ ತೊಂದರೆ ನೀಡಿದವರ ಎಲ್ಲಾ ಹೆಸರುಗಳು ಹಾಗೂ ಘಟನೆ ಕುರಿತು ಐದು ನಿಮಿಷದ ವಿಡಿಯೋ ಮಾಡಿ ದಂಪತಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಅಲ್ಲದೇ ಎರಡು ಪುಟದ ಡೆತ್ ನೋಟ್ ಕೂಡ ಬರೆದಿಟ್ಟಿದ್ಧಾರೆ.
ಸಂಬಂಧಿಕರಿಗೆ ವಿಡಿಯೋ ಕಳುಹಿಸಿದ್ದರೆ, ಡೆತ್ ನೋಟ್ ಮನೆಯಲ್ಲಿಯೇ ಪತ್ತೆಯಾಗಿದೆ. ಘಟನೆ ಸಂಬಂಧ ನಗರದ ತಿಲಕ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು, ಐವರನ್ನು ವಶಕ್ಕೆ ಪಡೆಯಲಾಗಿದೆ.
ತುಮಕೂರು ಸದಾಶಿವ ನಗರ ನಿವಾಸಿ, ಮೂಲತಃ ಶಿರಾ ತಾಲ್ಲೂಕಿನ ಲಕ್ಕನಹಳ್ಳಿ ಗ್ರಾಮದ ಗರೀಬ್ ಸಾಬ್ (32), ಆತನ ಪತ್ನಿ ಸುಮಯ್ಯ (30) ಆತ್ಮಹತ್ಯೆಗೆ ಶರಣಾಗಿದ್ದು, ಮಕ್ಕಳಾದ ಹಾಜಿರಾ (14), ಮೊಹ್ಮದ್ ಸುಭಾನ್ (10), ಮೊಹಮದ್ ಮುನೀರ್ (8) ಪೋಷಕರಿಂದಲೇ ಕೊಲೆಯಾದವರು.
ಕಬಾಬ್ ಅಂಗಡಿ ಇಟ್ಟುಕೊಂಡಿದ್ದ ಮೃತ ಗರೀಬ್ ಸಾಬ್ ಸಂಘಗಳು ಹಾಗೂ ಪರಿಚಿತರ ಬಳಿ 1 ಲಕ್ಷ ಸಾಲ ಪಡೆದಿದ್ದರು. ಕಬಾಬ್ ಅಂಗಡಿಯಿಂದ ಬರುವ ಆದಾಯ ಇವರ ಜೀವನಕ್ಕೆ ಸಾಕಾಗುತ್ತಿಲಿಲ್ಲ. ಗಂಡ, ಹೆಂಡತಿ ಮೂವರು ಮಕ್ಕಳು ಜೀವನ ನಡೆಸೋಕೆ ಕಷ್ಟ ಎದುರಾಗಿತ್ತು.ಆ ಸಾಲಕ್ಕೆ ಹೆದರಿ ಕುಟುಂಬ ಸಮೇತ ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನುವುದು ಪೊಲೀಸರ ವಿವರಣೆ.
ಭಾನುವಾರ ಸಂಜೆ 6 ಗಂಟೆ ವೇಳೆ ಮನೆಯಲ್ಲಿ ಮೊದಲು ಮೂವರು ಮಕ್ಕಳ ಕತ್ತನ್ನು ದಂಪತಿ ಹಿಸುಕಿದ್ದಾರೆ. ಮಕ್ಕಳು ಸಾವನ್ನಪ್ಪಿರೋದು ಖಚಿತವಾದ ಬಳಿಕ ಪತಿ ಗರೀಬ್ ಸಾಬ್ ಹಾಗೂ ಪತ್ನಿ ಸುಮಯ್ಯ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ಕಂಡು ಬಂದಿದೆ.
ವಿಡಿಯೋ ದಾಖಲೆ
ಸಾವಿಗೂ ಮುನ್ನ ಸಂಬಂಧಿಕರಿಗೆ 5 ನಿಮಿಷ 22 ಸೆಕೆಂಡ್ ವಿಡಿಯೋವನ್ನು ಗರೀಬ್ ಸಾಬ್ ಕಳುಹಿಸಿದ್ದಾರೆ. ಅದರಲ್ಲಿ ಅವರು ಮಾತನಾಡಿರುವ ಅಂಶ ಹೀಗಿದೆ.
ನಮ್ಮ ಜಿಲ್ಲೆಯ ಗೃಹ ಮಂತ್ರಿ ಸಾರ್ ಅವರಿಗೆ ನಮಸ್ತೆ. ನಾವು ಲಕ್ಕನಹಳ್ಳಿ ವಾಸಿಯಾಗಿದ್ದು,ಬಡ ಕುಟುಂಬದಲ್ಲಿ ಜನಿಸಿದ್ದೀವಿ. ನಮ್ಮ ಮಕ್ಕಳನ್ನು ಓದಿಸಬೇಕೆಂದು ತುಮಕೂರಿಗೆ ಬಂದೆವು. ತುಮಕೂರಿನ ಸದಾಶಿವ ನಗರದ ಕೃಷ್ಣಾ ಬೇಕರಿ ಪಕ್ಕದ ನಾಲ್ಕನೇ ಮುಖ್ಯ ರಸ್ತೆಯ ಮೂರನೇ ಕ್ರಾಸ್ ಬಿ ನಲ್ಲಿ ಮಹಡಿ ಮನೆಯಲ್ಲಿ ಬಾಡಿಗೆ ಇದ್ದೆ.
ನಮ್ಮ ಮನೆಯ ಕೆಳಗೆ ಖಲಂದರ್ ಅಂತಾ ಇದ್ದಾನೆ. ಬಡತನದಲ್ಲಿ ಹೇಗೋ ಜೀವನ ಮಾಡ್ಕೊಂಡಿದ್ದೆ. ನನಗೆ ಮತ್ತು ನನ್ನ ಹೆಂಡತಿ ಮಕ್ಕಳಿಗೆ ತುಂಬಾ ಹಿಂಸೆ ಕೊಟ್ಟ.ನಾನು ಯಾರತ್ರ ಆದ್ರೂ ವ್ಯವಹಾರ ಮಾಡಿದ್ರೆ, ಅವರತ್ರ ಇಲ್ಲಸಲ್ಲದನ್ನ ಹೇಳ್ತಿದ್ದ. ತುಂಬಾ ದೌರ್ಜನ್ಯ ಮಾಡಿದ್ದಾನೆ. ನಮ್ಮ ಮಕ್ಕಳಿಗೆ ಎಲ್ಲರ ಎದುರು ಹೊಡೆದಿದ್ದಾನೆ.ಆಗ ನ್ಯಾಯ ಕೇಳಿದ್ರೆ ಅವರು ಕೂಡ ಅವನಿಗೆ ಸಪೋರ್ಟ್ ಮಾಡಿದ್ರು. ಅವನು ದುಡ್ಡಿರೋನು. ನಾವು ಬಾಡಿಗೆಯಲ್ಲಿದ್ವಿ, ಅವನು ಬಾಡಿಗೆಯಲ್ಲಿದ್ದ.ನಾವು ಸಂಘಕ್ಕೆ ಸೇರಿಕೊಂಡಿದ್ವಿ. ಎರಡು ಸಾವಿರ ಕಮಿಷನ್ ಕೊಟ್ಟು ಸಾಲ ತಗೋತಿದ್ವಿ. ಇವನ ಮಾತು ಕೇಳದೆ ಇದ್ರೆ, ಏಯ್ ಪೂರ್ತಿ ಸಾಲ ಕಟ್ಟು ಅಂತಾ ಹಿಂಸೆ ಕೊಡ್ತಿದ್ದ. ಸಾಲ ಕೊಟ್ಟವರಿಗೆ ಇಲ್ಲಸಲ್ಲದನ್ನ ಹೇಳಿ ಅವರು ನಮ್ಮ ಮನೆ ಹತ್ರ ಗಲಾಟೆ ಮಾಡೋ ಹಾಗೆ ಮಾಡಿದ್ರು. ದುಡ್ಡು ದುಡ್ಡು ಅಂತೇಳಿ ಪ್ರಾಣ ತಿನ್ನೋರು. ಹತ್ತು ಸಾವಿರಕ್ಕೆ ಸಾವಿರ ರೂಪಾಯಿ ಬಡ್ಡಿ ತಗೋತಿದ್ದರು.
ಇದೇ ರೀತಿ ಅವನ ದೊಡ್ಡ ಮಗ, ಮಗಳು, ಮಹಡಿ ಮನೆ ಶಬಾನಾ, ಅವಳ ಮಗಳು ಎಲ್ಲರೂ ತೊಂದರೆ ಕೊಟ್ಟಿದ್ದಾರೆ. ಮೇಲಗಡೆ ಟ್ಯಾಂಕ್ ನಾವೇ ತೊಳಿಬೇಕಿತ್ತು, ಅವನು ತೊಳೀತಾ ಇರಲಿಲ್ಲ. ಅದಕ್ಕೂ ಜಗಳ ಆಗ್ತಿತ್ತು. ಖಲಂದರ್ ಬರೀ ಸೊಂಟದ ಕೆಳಗೇ ಮಾತಾಡೋನು. ನಾವು ಸಾಯೋಕೆ ಈ ಐದು ಜನರೇ ಕಾರಣ.
ನಮ್ಮ ಮಕ್ಕಳು ಭಯ ಬಿದ್ದಿದ್ದಾರೆ. ನೀವು ಸತ್ರೆ ನಮ್ಮನ್ನ ಬಿಡ್ತಾರಾ ಅಂತಾ. ಅದಕ್ಕೆ ಅವರೂ ನಮ್ಮ ಜೊತೆ ಸಾಯ್ತಿದ್ದಾರೆ. ನಮ್ಮ ಬಗ್ಗೆ ಅಕ್ಕಪಕ್ಕದವರನ್ನ ಕೇಳಿ, ನಾವು ಯಾರ ತಂಟೆಗೂ ಹೋದೋರಲ್ಲ.
ಮೂವರು ಪೊಲೀಸ್ ಅಧಿಕಾರಿಗಳು ಇಲ್ಲೇ ಇದ್ದಾರೆ. ಅದರಲ್ಲಿ ಪಿ.ರವಿ, ಡಿ.ನಾಗರಾಜು ಬಾರ್ ಲೈನ್ ಕ್ವಾಟ್ರರ್ಸ್ ಅಲ್ಲಿದ್ದಾರೆ. ಅವರ ಹೆಂಡ್ತಿ ಲತಕ್ಕ, ಆಮೇಲೆ ಆನಂದ್ ಅಂತಾ ಟ್ರಾಫಿಕ್ ಅಲ್ಲಿದ್ದಾರೆ. ಅವರು ಲಕ್ಕನಹಳ್ಳಿಯವ್ರು, ಬೇಕಿದ್ರೆ ಅವರತ್ರ ನಾವು ಹೇಗೆ ಅಂತಾ ಕೇಳಿ.
ಎಲ್ಲಾ ಪೊಲೀಸರಿಗೂ ಕೈ ಮುಗಿದು ಕೇಳ್ಕೊತಿನಿ. ನಮ್ಮ ದೇಹ ಪೋಸ್ಟ್ ಮಾರ್ಟಮ್ ಮಾಡಿಸ್ಬೇಡಿ. ಸತ್ತ ಮೇಲೆ ನಮಗೆ ನೋವು ಕೊಡಬೇಡಿ. ಖಲಂದರ್ ಗೆ ಸರಿಯಾದ ಶಿಕ್ಷೆ ಕೊಡಿ ಎಂದು ಮೂವರು ಪೊಲೀಸರ ಹೆಸರನ್ನು ಗರೀಬ್ ಸಾಬ್ ಉಲ್ಲೇಖಿಸಿದ್ದಾರೆ
ಐವರನ್ನು ವಶಕ್ಕೆ ಪಡೆದ ಪೊಲೀಸರು
ಘಟನಾ ಸ್ಥಳಕ್ಕೆ ಎಸ್ಪಿ ಕೆ.ವಿ. ಅಶೋಕ್ ಹಾಗೂ ಹಿರಿಯ ಅಧಿಕಾರಿಗಳು ಭೇಟಿ ನೀಡಿದ್ದರು. ಎಫ್ ಎಸ್ ಎಲ್ ತಂಡ ಆಗಮಿಸಿ ದಾಖಲೆ ಪರಿಶೀಲನೆ ನಡೆಸಿತು.ಮೃತರ ಸಂಬಂಧಿಕರು ಆಗಮಿಸಿದ ನಂತರ ತುಮಕೂರು ಜಿಲ್ಲಾಸ್ಪತ್ರೆಯ ಶವಗಾರಕ್ಕೆ ಮೃತದೇಹಗಳನ್ನು ಪೊಲೀಸರು ರವಾನೆ ಮಾಡಿದರು.
ಡೆತ್ ನೋಟ್ ನಲ್ಲಿ ಉಲ್ಲೇಖ ಮಾಡಿದ್ದ ಐವರನ್ನ ವಶಕ್ಕೆ ಪಡೆದ ತಿಲಕ್ ಪಾರ್ಕ್ ಪೊಲೀಸರು ಭಾನುವಾರ ರಾತ್ರಿಯೇ ವಿಚಾರಣೆ ಆರಂಭಿಸಿದ್ಧಾರೆ. ಆತ್ಮಹತ್ಯೆಗೂ ಮುನ್ನ ಐವರ ಹೆಸರು ನಮೂದಿಸಿ ಅವರ ಮೇಲೆ ಆರೋಪ ಮಾಡಿದ್ದರಿಂದ ಪ್ರಮುಖ ಆರೋಪಿ ಖಲಂದರ್ ಮನೆ ಜಪ್ತಿ ಮಾಡಿ ವಿಚಾರಣೆ ನಡೆಸಿದ್ದಾರೆ.
ಡಿಸಿ ಭೇಟಿ
ಗರೀಬ್ ಸಾಬ್ ಕುಟುಂಬ ಕಳೆದ ಒಂದು ವರ್ಷದಿಂದ ತುಮಕೂರಿನಲ್ಲಿ ವಾಸಿಸುತ್ತಿದ್ದು, ಕಬಾಬ್ ಅಂಗಡಿ ಮಾಡ್ತಾ ಜೀವನ ಸಾಗಿಸುತ್ತಿದ್ದರು. ಇಬ್ಬರು ನೇಣಿಗೆ ಶರಣಾಗಿದ್ರೆ, ಮೂವರ ಕುತ್ತಿಗೆ ಫೈಬರ್‌ನಲ್ಲಿ ಕುಯ್ದ ಸ್ಥಿತಿಯಲ್ಲಿದೆ. ಸಾವಿಗೆ ಕಾರಣ ತಿಳಿಯಲು ಒಂದು ಡೆತ್ ನೋಟ್ ಸಿಕ್ಕಿದ್ದು, ಅದರಲ್ಲಿರುವ ವಿವರ ನೋಡಿದರೆ ಸಾಲ ಮಾಡಿಕೊಂಡಿರುವ ಹಾಗಿದೆ. ತಂದೆಯೆ ಮೊದಲು ಮಕ್ಕಳ ಕುತ್ತಿಗೆ ಕತ್ತು ಕೊಯ್ದು ನಂತರ ಇವರು ಆತ್ಮ ಹತ್ಯೆಗೆ ಶರಣಾಗಿದ್ದಾರೆ. ಪರಿಹಾರ ಕೊಡಿಸಲು ಸಿಎಂ ರಿಲೀಫ್ ಫಂಡ್‌ಗೆ ಸರ್ಕಾರಕ್ಕೆ ಬರಿತಿವಿ ಎಂದು ತುಮಕೂರು ಡಿಸಿ ಕೆ.ಶ್ರೀನಿವಾಸ್ ಮಾಹಿತಿ ನೀಡಿದ್ದಾರೆ.
--------------