Tumkur News: ಲಿಂಗೈಕ್ಯ ಡಾ ಶಿವಕುಮಾರ ಸ್ವಾಮೀಜಿ 117ನೇ ಜಯಂತಿ; ಸಿದ್ದಗಂಗಾ ಮಠಕ್ಕೆ ಹರಿದು ಬಂದ ಭಕ್ತ ಸಾಗರ
ಕನ್ನಡ ಸುದ್ದಿ  /  ಕರ್ನಾಟಕ  /  Tumkur News: ಲಿಂಗೈಕ್ಯ ಡಾ ಶಿವಕುಮಾರ ಸ್ವಾಮೀಜಿ 117ನೇ ಜಯಂತಿ; ಸಿದ್ದಗಂಗಾ ಮಠಕ್ಕೆ ಹರಿದು ಬಂದ ಭಕ್ತ ಸಾಗರ

Tumkur News: ಲಿಂಗೈಕ್ಯ ಡಾ ಶಿವಕುಮಾರ ಸ್ವಾಮೀಜಿ 117ನೇ ಜಯಂತಿ; ಸಿದ್ದಗಂಗಾ ಮಠಕ್ಕೆ ಹರಿದು ಬಂದ ಭಕ್ತ ಸಾಗರ

ಲೋಕಕ್ಕೆ ಬೆಳಕಾದ ತ್ರಿವಿಧ ದಾಸೋಹಿ ಡಾ ಶಿವಕುಮಾರ ಸ್ವಾಮೀಜಿ ಅವರು 117ನೇ ಜಯಂತಿಯನ್ನು ತುಮಕೂರಿನ ಸಿದ್ದಗಂಗಾ ಮಠದಲ್ಲಿ ಅದ್ಧೂರಿಯಾಗಿ ನಡೆಸಲಾಗಿದೆ. ಸಾವಿರಾರು ಭಕ್ತರ ಶ್ರೀಗಳ ಜನ್ಮದಿನಕ್ಕೆ ಸಾಕ್ಷಿಯಾಗಿದ್ದಾರೆ.

ಡಾ ಶಿವಕುಮಾರ ಸ್ವಾಮೀಜಿ 117ನೇ ಜಯಂತಿ ಅಂಗವಾಗಿ ತುಮಕೂರಿನ ಸಿದ್ದಗಂಗಾ ಮಠದಲ್ಲಿ ಸೇರಿರುವ ಭಕ್ತ ಸಾಗರ.
ಡಾ ಶಿವಕುಮಾರ ಸ್ವಾಮೀಜಿ 117ನೇ ಜಯಂತಿ ಅಂಗವಾಗಿ ತುಮಕೂರಿನ ಸಿದ್ದಗಂಗಾ ಮಠದಲ್ಲಿ ಸೇರಿರುವ ಭಕ್ತ ಸಾಗರ.

ತುಮಕೂರು: ಲಕ್ಷಾಂತರ ಬಡ ಮಕ್ಕಳಿಗೆ ಅನ್ನ, ಆಶ್ರಯ ನೀಡಿ ಅವರ ಬದುಕಿಗೆ ಬೆಳಕಾಗಿದ್ದ ಕಾಯಕ ಯೋಗಿ, ತ್ರಿವಿಧ ದಾಸೋಹಿ, ನಡೆದಾಡುವ ದೇವರೆಂದೇ ನಾಡಿನ ಉದ್ದಗಲಕ್ಕೂ ಪ್ರಖ್ಯಾತರಾಗಿದ್ದ ಸಿದ್ದಗಂಗಾ ಮಠದ ಶಿವೈಕ್ಯ ಡಾ. ಶ್ರೀ ಶಿವಕುಮಾರ ಸ್ವಾಮೀಜಿಯವರ 117ನೇ ಜನ್ಮ ಜಯಂತಿ ಹಾಗೂ ಗುರುವಂದನಾ ಮಹೋತ್ಸವ ವಿವಿಧ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಸಿದ್ದಗಂಗಾ ಮಠದಲ್ಲಿ ಸಡಗರ ಸಂಭ್ರಮದಿಂದ ಆಚರಿಸಲಾಯಿತು. 12ನೇ ಶತಮಾನದ ಬಸವಣ್ಣನವರ ತತ್ವಾದರ್ಶಗಳನ್ನು ಪಾಲನೆ ಮಾಡುತ್ತಾ ಸಮಾಜದ ಉದ್ಧಾರಕ್ಕೆ ಸದಾ ತುಡಿಯುತ್ತಿದ್ದ ಲಿಂಗೈಕ್ಯ ಡಾ. ಶಿವಕುಮಾರ ಸ್ವಾಮೀಜಿಯವರ 117ನೇ ಜಯಂತಿಗೆ ವಿವಿಧ ಮಠಾಧೀಶರು, ಹರಗುರು ಚರಮೂರ್ತಿಗಳು, ಗಣ್ಯಾತಿ ಗಣ್ಯರು ಹಾಗೂ ಸಹಸ್ರಾರು ಭಕ್ತರು ಸಾಕ್ಷಿಯಾದರು.

ನಾಡಿನ ಭಕ್ತಾದಿಗಳ ಮನ ಮನೆಗಳ ದೈವೀ ಪ್ರಭೆಯಾಗಿದ್ದ ಡಾ. ಶಿವಕುಮಾರ ಸ್ವಾಮೀಜಿಯವರು ಐಕ್ಯರಾಗಿರುವ ಶಿವಯೋಗಿ ಮಂದಿರದ ಗದ್ದುಗೆಯಲ್ಲಿ ಮುಂಜಾನೆಯಿಂದಲೇ ಧಾರ್ಮಿಕ ವಿಧಿ ವಿಧಾನಗಳು, ಅಭಿಷೇಕ, ಅಷ್ಟೋತ್ತರ, ಮಹಾಮಂಗಳಾರತಿ, ಭಜನಾ ಮಂತ್ರ ಘೋಷಗಳು ಮೊಳಗಿದವು, ಶ್ರೀಗಳ ಗದ್ದುಗೆಗೆ ಮಠಾಧ್ಯಕ್ಷ ಸಿದ್ದಲಿಂಗ ಸ್ವಾಮೀಜಿ ನೇತೃತ್ವದಲ್ಲಿ ಹರಗುರು ಚರಮೂರ್ತಿಗಳ ಸಮ್ಮುಖದಲ್ಲಿ ರುದ್ರಾಭಿಷೇಕ, 108 ಅಷ್ಟೋತ್ತರ ಸೇರಿದಂತೆ ವಿವಿಧ ಧಾರ್ಮಿಕ ಪೂಜಾ ಕೈಂಕರ್ಯ, ಮಹಾ ಮಂಗಳಾರತಿ ನೆರವೇರಿತು.

ಮಠಾಧ್ಯಕ್ಷ ಸಿದ್ದಲಿಂಗ ಸ್ವಾಮೀಜಿಯವರು ಪರಮಪೂಜ್ಯರ ಗದ್ದುಗೆಗೆ ವಿಶೇಷ ಪೂಜೆ ಸಲ್ಲಿಸಿ ಭಕ್ತಿ ಸಮರ್ಪಿಸುವ ಮೂಲಕ ಆಶೀರ್ವಾದ ಪಡೆದರು. ಮೈಸೂರಿನ ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿಯವರು ವಿವಿಧ ಬಗೆಯ ಹಣ್ಣು, ಪುಷ್ಪಗಳಿಂದ ಅಲಂಕರಿಸಿದ್ದ ಗದ್ದುಗೆಗೆ ಪುಷ್ಪ ನಮನ ಸಲ್ಲಿಸಿ ಭಕ್ತಿ ಸಮರ್ಪಿಸಿದರು.

ಶಿವಕುಮಾರ ಸ್ವಾಮೀಜಿ ಪುತ್ಥಳಿ ಮೆರವಣಿಗೆ

ಗದ್ದುಗೆ ಮಂದಿರದ ಮುಂಭಾಗದಿಂದ ಆರಂಭವಾದ ಶ್ರೀಗಳ ಕಂಚಿನ ಪುತ್ಥಳಿ ಹೊತ್ತ ರುದ್ರಾಕ್ಷಿ ಮಂಟಪದ ಮೆರವಣಿಗೆಗೆ ಮಠಾಧ್ಯಕ್ಷ ಸಿದ್ದಲಿಂಗ ಸ್ವಾಮೀಜಿ ಚಾಲನೆ ನೀಡಿದರು. ಮೆರವಣಿಗೆಯುದ್ಧಕ್ಕೂ ನಂದಿಧ್ವಜ ಕುಣಿತ, ಕರಡಿ ವಾದ್ಯ, ಡೋಲು ಕುಣಿತ ಸೇರಿದಂತೆ ವಿವಿಧ ಜಾನಪದ ಕಲಾ ತಂಡಗಳ ಪ್ರದರ್ಶನ ನೋಡುಗರ ಗಮನ ಸೆಳೆದವು, ಶ್ರೀಮಠದ ಆವರಣದಲ್ಲಿ ಮೆರವಣಿಗೆಯುದ್ದಕ್ಕೂ ಪೂರ್ಣಕುಂಭ ಕಳಸ ಹೊತ್ತ ಸುಮಂಗಲಿಯರು, ಹರಗುರುಚರಮೂರ್ತಿಗಳು, ಭಕ್ತಾದಿಗಳು ಹೆಜ್ಜೆ ಹಾಕಿದ್ದು ವಿಶೇಷವಾಗಿತ್ತು.

ಗದ್ದುಗೆ ದರ್ಶನ ಪಡೆದ ಗಣ್ಯರು

ಬೆಳಗ್ಗೆಯಿಂದಲೇ ಶ್ರೀಮಠಕ್ಕೆ ಭಕ್ತರು, ಗಣ್ಯರ ದಂಡು ಹರಿದು ಬರುತ್ತಿದ್ದು, ಹರಿದ್ವಾರ ಪತಂಜಲಿ ಯೋಗಪೀಠದ ಸ್ವಾಮಿ ರಾಮ್‌ದೇವ್ ಜೀ, ಗೃಹ ಸಚಿವ ಡಾ. ಜಿ. ಪರಮೇಶ್ವರ್, ತುಮಕೂರು ಲೋಕಸಭಾ ಬಿಜೆಪಿ ಅಭ್ಯರ್ಥಿ ವಿ. ಸೋಮಣ್ಣ, ಸಂಸದ ಜಿ.ಎಸ್. ಬಸವರಾಜು, ಕಾಂಗ್ರೆಸ್ ಅಭ್ಯರ್ಥಿ ಮುದ್ದಹನುಮೇಗೌಡ, ಬೆಂಗಳೂರು ದಕ್ಷಿಣ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ. ಮಂಜುನಾಥ್, ರುದ್ರೇಶ್, ವಿವಿಧ ಮಠಾಧೀಶರುಗಳು ಶ್ರೀಗಳ ಗದ್ದುಗೆ ದರ್ಶನ ಪಡೆದು ಭಕ್ತಿ ಸಮರ್ಪಿಸಿದರು.

117 ಮಕ್ಕಳಿಗೆ ನಾಮಕರಣ

ಡಾ.ಶಿವಕುಮಾರ ಮಹಾಸ್ವಾಮೀಜಿ ಅನ್ನದಾನ ಸೇವಾ ಟ್ರಸ್ಟ್ ವತಿಯಿಂದ ನಡೆದಾಡುವ ದೇವರು, ತ್ರಿವಿಧ ದಾಸೋಹಮೂರ್ತಿ, ಪದ್ಮಭೂಷಣ ಲಿಂಗೈಕ್ಯ ಡಾ. ಶಿವಕುಮಾರ ಸ್ವಾಮೀಜಿಯವರ 117ನೇ ಜಯಂತ್ಯೋತ್ಸವದ ಅಂಗವಾಗಿ 117 ಮಕ್ಕಳಿಗೆ "ಶಿ" ಅಕ್ಷರದಿಂದ ಪ್ರಾರಂಭವಾಗುವ ಹೆಸರುಗಳನ್ನು ನಾಮಕರಣ ಮಾಡಲಾಯಿತು. ಈ ಉಚಿತ ನಾಮಕರಣ ಮಹೋತ್ಸವದಲ್ಲಿ ಪಾಲ್ಗೊಂಡಿದ್ದವರಿಗೆ ಹೊಸ ತೊಟ್ಟಿಲು, ತೊಟ್ಟಿಲ ಹಾಸಿಗೆ, ತೊಟ್ಟಿಲ ದಿಂಬು ಹಾಗೂ ಶ್ರೀಗಳ ಭಾವಚಿತ್ರವನ್ನು ಉಚಿತವಾಗಿ ನೀಡಲಾಯಿತು.

ಶಿವಕುಮಾರ ಸ್ವಾಮೀಜಿ ಜಯಂತಿ ಹಿನ್ನೆಲೆ 6 ಕಡೆ ದಾಸೋಹ

ರಾಜ್ಯದ ವಿವಿಧೆಡೆಗಳಿಂದ ಶ್ರೀಮಠಕ್ಕೆ ಆಗಮಿಸಿದ್ದ ಲಕ್ಷಾಂತರ ಮಂದಿ ಭಕ್ತಾದಿಗಳಿಗೆ ವಸ್ತು ಪ್ರದರ್ಶನ ಆವರಣ, ಪ್ರಾರ್ಥನಾ ಮಂದಿರ, ಹಳೆಯ ಮತ್ತು ಹೊಸ ಪ್ರಸಾದ ನಿಲಯ, ಸಾದರ ಕೊಪ್ಪಲು ಸೇರಿದಂತೆ 6 ಕಡೆ ದಾಸೋಹ ವ್ಯವಸ್ಥೆ ಮಾಡಲಾಗಿತ್ತು. ಬೆಳಗ್ಗೆ 7 ಗಂಟೆಯಿಂದ ಶ್ರೀಮಠದಲ್ಲಿ ದಾಸೋಹ ಆರಂಭವಾಗಿದ್ದು, ರಾತ್ರಿ 11 ಗಂಟೆಯವರೆಗೂ ದಾಸೋಹ ನಡೆಯಲಿದೆ. ಶ್ರೀಗಳ 117ನೇ ಜಯಂತಿ ಪ್ರಯುಕ್ತ ತುಮಕೂರು ನಗರದಾದ್ಯಂತ ಭಕ್ತವೃಂದ ಪೆಂಡಾಲ್‌ಗಳನ್ನು ಹಾಕಿ ಶ್ರೀಗಳ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಅನ್ನದಾಸೋಹ ಏರ್ಪಡಿಸುವ ಮೂಲಕ ಭಕ್ತಿ ಸಮರ್ಪಿಸಿದರು.

Whats_app_banner