Tumkur News: ಮದುವೆಯಾದ ನಾಲ್ಕೇ ದಿನಕ್ಕೆ ಆಭರಣದೊಂದಿಗೆ ನಕಲಿ ವಧು ಪರಾರಿ, ನಾಲ್ವರು ಆರೋಪಿಗಳನ್ನು ಬಂಧಿಸಿದ ಗುಬ್ಬಿ ಪೊಲೀಸರು
Fraud Marriage ತುಮಕೂರು ಜಿಲ್ಲೆಯಲ್ಲಿ ವಿಭಿನ್ನ ಅಪರಾಧ ಪ್ರಕರಣ. ಯುವಕನನ್ನು ವರಿಸಿದ ಯುವತಿ ಚಿನ್ನಾಭರಣದೊಂದಿಗೆ ಪರಾರಿಯಾಗಿದ್ದ ಪ್ರಕರಣವನ್ನು ತುಮಕೂರು ಪೊಲೀಸರು ಬೇಧಿಸಿದ್ದಾರೆ.ವರದಿ: ಈಶ್ವರ್ ತುಮಕೂರು
ತುಮಕೂರು: ಗುಣನೋಡು ಹೆಣ್ಣು ಕೊಡು ಎನ್ನುವ ಮಾತೊಂದಿಗೆ. ಅದು ಮದುವೆ ವಿಚಾರದಲ್ಲಿ ಕೊಂಚ ಎಚ್ಚರಿಕೆ ವಹಿಸಲೇಬೇಕು. ಕೆಲವೊಮ್ಮೆ ಮೋಸ ಹೋಗುವ ಸನ್ನಿವೇಶವೂ ಎದುರಾಗಬಹುದು. ತುಮಕೂರು ಜಿಲ್ಲೆಯಲ್ಲೂ ಇದೇ ಆಗಿರುವುದು. ಮಗನಿಗೆ ಹೆಣ್ಣು ಸಿಗಲಿಲ್ಲ ಎಂದು ಪರಿಚಯದವರ ಕಡೆಯಿಂದ ಮದುವೆ ಮಾಡಿಕೊಂಡು ಬಂದ ಹುಡುಗಿಯೇ ಭಾರೀ ಪ್ರಮಾಣದಲ್ಲಿ ದೋಖಾ ಮಾಡಿರುವ ಪ್ರಕರಣವಿದು. ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ಅತ್ತಿಕಟ್ಟೆ ಗ್ರಾಮದಲ್ಲಿ ಮದುವೆಯಾದ ನಾಲ್ಕು ದಿನಕ್ಕೆ ವಧು ಸುಮಾರು 2.5 ಲಕ್ಷಕ್ಕೂ ಹೆಚ್ಚು ಮೌಲ್ಯದ ಒಡವೆ, ಹಣ ತೆಗೆದುಕೊಂಡು ಪರಾರಿಯಾಗಿರುವ ಘಟನೆ ನಡೆದಿದ್ದು, ಈಗ ಅವರನ್ನು ಬಂಧಿಸುವ ಮೂಲಕ ಪೊಲೀಸರು ಸೆರೆ ಮನೆಗೆ ಕಳುಹಿಸಿರುವ ಘಟನೆ ನಡೆದಿದೆ.
ಗುಬ್ಬಿ ತಾಲೂಕಿನ ಅತ್ತಿಕಟ್ಟೆ ಗ್ರಾಮದ ಪಾಲಾಕ್ಷ ಎಂಬುವವರ ಮಗನಿಗೆ ಹೆಣ್ಣು ಎಲ್ಲೂ ಸಿಗಲಿಲ್ಲವೆಂದು ಉತ್ತರ ಕರ್ನಾಟಕ ಭಾಗದ ವಧು ತರಲು ನಿಶ್ಚಯಿಸಿದಾಗ ಕುಷ್ಟಗಿ ಮೂಲದ ಬಸವರಾಜು ಎಂಬಾತನ ಮೂಲಕ ಹುಬ್ಬಳ್ಳಿಯ ಲಕ್ಷ್ಮಿ ಎಂಬಾಕೆಯ ಪರಿಚಯವಾಗಿತ್ತು, ಲಕ್ಷ್ಮಿ ಮದುವೆಯ ಬ್ರೋಕರ್ ಆಗಿ ಕೆಲಸ ಮಾಡುತ್ತಿದ್ದು ತನ್ನ ಮಗನಿಗೆ ವಯಸ್ಸಾಗುತ್ತಿದ್ದು ಒಂದು ಹೆಣ್ಣು ಬೇಕು ಎಂದು ಕೇಳಿಕೊಂಡಾಗ ಲಕ್ಷ್ಮಿ ಇವರ ಪರಿಸ್ಥಿತಿ ನೋಡಿ ಮೋಸ ಮಾಡುವ ತೀರ್ಮಾನಕ್ಕೆ ಬಂದಿದ್ದು, ಹುಬ್ಬಳ್ಳಿಯಲ್ಲಿ ಒಬ್ಬಳು ಹುಡುಗಿ ಇದ್ದು ತಂದೆ ತಾಯಿ ಯಾರು ಇಲ್ಲ, ನೀವೇ ಮುಂದೆ ನಿಂತು ಮದುವೆ ಮಾಡಿಕೊಳ್ಳಬೇಕು ಎಂದು ಹೇಳಿ ಕೋಮಲ ಎಂಬ ಹುಡುಗಿಯ ಫೋಟೋ ಕಳಿಸಿದ್ದರು, ಬಳಿಕ ಹುಡುಗಿಯನ್ನ ಗಂಡಿನ ಮನೆಗೆ ಕರೆದುಕೊಂಡು ಬಂದಿದ್ದು ಹುಡುಗಿಯ ನೆಂಟರಿಷ್ಟರು ಎಂದು ಹೇಳಿ ಐದು ಆರು ಜನರನ್ನ ಕರೆತಂದು 2023 ನವೆಂಬರ್ 11 ರಂದು ಗುಬ್ಬಿ ತಾಲೂಕಿನ ಹತ್ತಿಕಟ್ಟೆಗೆ ಬಂದಿದ್ದಂತಹ ಇಡೀ ನಕಲಿ ಕುಟುಂಬ ಮದುವೆಯ ಮಾತುಕತೆ ನಡೆಸಿ ಮರುದಿನ ಮುಂಜಾನೆಯೇ ಗ್ರಾಮದ ದೇವಾಲಯದಲ್ಲಿ ಮದುವೆ ಸಹ ಮುಗಿಸಿದರು. ಮದುವೆ ಎಂದ ಮೇಲೆ ವಧುವಿಗೆ ನೀಡಬೇಕಾದ 25 ಗ್ರಾಂ ಚಿನ್ನಾಭರಣ ವಧು ತೋರಿಸಿದ ಬ್ರೋಕರ್‌ಗೆ 1.5 ಲಕ್ಷ ಹಣ ನೀಡಿದ್ದರು, ಹೆಣ್ಣಿನ ಕಡೆಯವರು ಎಂದು ಮದುವೆಗೆ ಎಂಟು ಜನ ಸಂಬಂಧಿಕರು ಸಹ ಬಂದಿದ್ದರು, ನಂತರ ಮದುವೆ ಮುಗಿದ ಮೂರು ದಿನದ ನಂತರ ನಯವಾದ ಮಾತುಗಳಿಂದಲೇ ನೆಪ ಹೇಳಿಕೊಂಡಂತಹ ನಕಲಿ ಕುಟುಂಬ ಹಣ ಚಿನ್ನದ ಒಡವೆ ಸಹಿತ ಮದು ಮಗಳನ್ನು ಕರೆದುಕೊಂಡು ಹೋದರು.
ವಾರ ಕಳೆದರೂ ಸೊಸೆ ಬರಲಿಲ್ಲವೆಂದು ಆತಂಕಗೊಂಡ ಪಾಲಾಕ್ಷಯ್ಯ ಕುಟುಂಬ ಹುಬ್ಬಳ್ಳಿಗೆ ತೆರಳಿ ವಿಚಾರಿಸಿದಾಗ ನಡೆದದ್ದು ನಕಲಿ ಮದುವೆ, ಬಂದವರು ದೊಡ್ಡ ದೋಖಾ ಗಿರಾಕಿಗಳು ಎಂದು ತಿಳಿದ ಕೂಡಲೇ ಗುಬ್ಬಿಗೆ ಬಂದಂತಹ ಪಾಲಾಕ್ಷ ಕುಟುಂಬ ಗುಬ್ಬಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿತ್ತು.
ಸುಮಾರು ಆರು ತಿಂಗಳನಿಂದ ತಲೆಮರೆಸಿ ಕೊಂಡಿದ್ದಂತಹ ಕುಟುಂಬದವರು ಈಗ ಮಹಾರಾಷ್ಟ್ರ ಮತ್ತು ಹುಬ್ಬಳ್ಳಿಯಲ್ಲಿ ಸಿಕ್ಕಿಬಿದ್ದಿದ್ದಾರೆ. ಮದುವೆ ಹೆಸರಿನಲ್ಲಿ ವಂಚಿಸಲು ನಕಲಿ ಆಧಾರ್ ಕಾರ್ಡ್ ಸೃಷ್ಟಿ ಮಾಡಿದ್ದು ಮದುವೆ ಹೆಸರಿನಲ್ಲಿಯೇ ವಂಚನೆ ಮಾಡುವುದನ್ನು ರೂಡಿ ಮಾಡಿಕೊಂಡಿರುವ ಬಗ್ಗೆ ಅನುಮಾನ ವ್ಯಕ್ತವಾಗಿದೆ, ಮೂರು ವರ್ಷದಲ್ಲಿ ನಾಲ್ಕು ಮಂದಿ ಪುರುಷರಿಗೆ ಮದುವೆ ಹೆಸರಿನಲ್ಲಿ ಪಂಗನಾಮ ಹಾಕಿರುವ ಸುದ್ದಿ ತಿಳಿದು ಬಂದಿದ್ದು ಇಡೀ ಪ್ರಕರಣಕ್ಕೆ ಬ್ರೋಕರ್ ಲಕ್ಷ್ಮಿ ಸೂತ್ರಧಾರಿಯಾಗಿದ್ದು ಮಿಕ್ಕವರು ಪಾತ್ರಧಾರಿಯಾಗಿ ಕೆಲಸ ಮಾಡಿದ್ದಾರೆ, ಸದ್ಯ ನಾಲ್ವರನ್ನು ಗುಬ್ಬಿ ಪೊಲೀಸರು ಬಂಧಿಸಿದ್ದು ಜೈಲಿಗೆ ಕಳಿಸಿದ್ದಾರೆ.
ಮದುವೆ ಹೆಸರಲ್ಲಿ ಮೋಸ ಮಾಡಿರುವ ಪ್ರಕರಣ ಇದಾಗಿದ್ದು. ತುಮಕೂರು ಪೊಲೀಸರು ಆರೋಪಿಗಳನ್ನು ಬಂಧಿಸಲು ಬಲೆ ಬೀಸಿದ್ದರು. ಈಗ ಕೆಲವರು ಸಿಕ್ಕಿಬಿದ್ದಿದ್ದು. ಇನ್ನೂ ಕೆಲವರನ್ನು ಬಂಧಿಸಲಾಗುವುದು ಎಂದು ತುಮಕೂರು ಪೊಲೀಸರು ಹೇಳಿದ್ಧಾರೆ.
(ವರದಿ: ಈಶ್ವರ್ ತುಮಕೂರು)