Prajwal Revnna: ಪ್ರಜ್ವಲ್ ವಿಡಿಯೋ ಬಿಡುಗಡೆ; ಗೃಹ ಸಚಿವರು, ಎಚ್‌ಡಿಕೆ ಹೇಳಿದ್ದೇನು?
Hassan Scandal ಪ್ರಜ್ವಲ್ ರೇವಣ್ಣ ಮೊದಲ ಬಾರಿಗೆ ವಿಡಿಯೋ ಬಿಡುಗಡೆ ಮಾಡಿ ಹೇಳಿಕೆ ನೀಡಿರುವ ಕುರಿತು ಕರ್ನಾಟಕ ಗೃಹ ಸಚಿವ ಡಾ.ಜಿ.ಪರಮೇಶ್ವರ್, ಎಚ್.ಡಿ.ಕುಮಾರಸ್ವಾಮಿ ಹೇಳಿಕೆ ನೀಡಿದ್ದಾರೆ.
ತುಮಕೂರು/ ಚಿಕ್ಕಬಳ್ಳಾಪುರ: ಹಾಸನ ಸಂಸದ ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಸಿಲುಕಿ ದೇಶದಿಂದ ಪರಾರಿಯಾಗಿ ಒಂದು ತಿಂಗಳ ಬಳಿಕ ವಿಡಿಯೋ ಬಿಡುಗಡೆ ಮಾಡಿ ಹೇಳಿಕೆ ನೀಡಿರುವ ಕುರಿತು ಕರ್ನಾಟಕ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಪ್ರತಿಕ್ರಿಯೆ ನೀಡಿದ್ದಾರೆ. ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಕೂಡ ಈ ಕುರಿತು ಹೇಳಿಕೆ ನೀಡಿದ್ದಾರೆ, ಪ್ರಜ್ವಲ್ ರೇವಣ್ಣ ಮೇ 31ಕ್ಕೆ ಎಸ್‌ಐಟಿ ಮುಂದೆ ಹಾಜರಾದರೆ ಅವರನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತದೆ. ಕಾನೂನು ರೀತಿಯಲ್ಲಿ ಪ್ರಕ್ರಿಯೆ ನಡೆಯಲಿದೆ ಎಂದು ಪರಮೇಶ್ವರ್ ಹೇಳಿದರೆ, ಇಡೀ ಪ್ರಕರಣ ಸಿಬಿಐಗೆ ವಹಿಸಿದರೆ ಕಾಂಗ್ರೆಸ್ ನಾಯಕರೇ ಸಿಲುಕಿ ಹಾಕಿಕೊಳ್ಳಲಿದ್ದಾರೆ ಎಂದು ಎಚ್‌ಡಿಕುಮಾರಸ್ವಾಮಿ ಹೇಳಿದ್ದಾರೆ.
ಬಂಧಿಸಿ ವಿಚಾರಣೆ: ಪರಮೇಶ್ವರ್
ತುಮಕೂರು ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಗೃಹ ಸಚಿವ ಜಿ.ಪರಮೇಶ್ವರ, ಹಾಸನ ಲೈಂಗಿಕ ದೌರ್ಜನ್ಯ ಪ್ರಕರಣದ ಪ್ರಮುಖ ಆರೋಪಿಯಾಗಿರುವ ಪ್ರಜ್ವಲ್ ರೇವಣ್ಣ ಮೇ 31ರಂದು ಎಸ್‌ಐಟಿ ಮುಂದೆ ಹಾಜರಾಗುವುದಾಗಿ ವಿಡಿಯೊ ಮೂಲಕ ತಿಳಿಸಿದ್ದಾರೆ. ಮೊದಲು ರಾಜ್ಯಕ್ಕೆ ಬಂದು ತನಿಖೆ ಎದುರಿಸಲಿ. ವಿಶೇಷ ತನಿಖಾ ತಂಡ ಅವರನ್ನು ಮೊದಲು ಬಂಧಿಸಿ ವಿಚಾರಣೆಗೆ ಒಳಪಡಿಸುವ ಕೆಲಸ ಮಾಡಲಿದೆ ಎಂದು ಹೇಳಿದರು
ವಿಶೇಷ ತನಿಖಾ ತಂಡದ ಬಳಿ ಈ ಪ್ರಕರಣದ ಕುರಿತು ಇರುವ ಮಾಹಿತಿ, ದಾಖಲೆಗಳ ಆಧಾರದ ಮೇಲೆ ಪ್ರಜ್ವಲ್ ವಿಚಾರಣೆ ಮಾಡಲಾಗುತ್ತದೆ. ಈಗಾಗಲೇ ಬಂಧನ ವಾರೆಂಟ್ ಜಾರಿಯಾಗಿರುವುದರಿಂದ ತನಿಖೆಯ ಭಾಗವಾಗಿ ಬಂಧನವೂ ಆಗಲಿದೆ. ತಮ್ಮ ಪ್ರಕರಣದಲ್ಲಿ ಎಸ್‌ಐಟಿ ಮುಂದೆ ಪ್ರಜ್ವಲ್ ಏನು ಹೇಳಿಕೆ ಕೊಡುತ್ತಾರೋ ನೋಡೋಣ. ತನಿಖಾ ತಂಡ ಮುಂದಿನ ಕ್ರಮಗಳನ್ನು ಕಾನೂನು ಪರಿಮಿತಿಯೊಳಗೆ ಕೈಗೊಳ್ಳಲಿದೆ. ರಾಜ್ಯದಲ್ಲಿ ಇಂತಹ ಘಟನೆ ಎಂದೂ ಆಗಿರಲಿಲ್ಲ.ಎಂದು ಅವರು ತಿಳಿಸಿದರು.
ಸಿಬಿಐಗೆ ವಹಿಸಿಬಿಡಿ: ಎಚ್‌ಡಿಕೆ
ಚಿಕ್ಕಬಳ್ಳಾಪುರ ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಸಿಎಂ ಹಾಗೂ ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ.ಕುಮಾರ ಸ್ವಾಮಿ, ಸಂಸದ ಪ್ರಜ್ವಲ್ ರೇವಣ್ಣ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಲಿ. ಆಗ ಕಾಂಗ್ರೆಸ್ ನವರೇ ಸಿಕ್ಕಿಹಾಕಿಕೊಳ್ಳುವುದು ಖಚಿತ ಎಂದು ಹೇಳಿದರು.
ಕೆಲವು ಸಚಿವರಿಗೆ ಬೇರೆ ಕೆಲಸೇ ಇಲ್ಲದಾಗಿದೆ. ಅವರಿಗೆ ತಮ್ಮ ಇಲಾಖೆಯ ನಿರ್ವಹಣೆಗಿಂತ ಪ್ರಜ್ವಲ್ ರೇವಣ್ಣ ಪ್ರಕರಣದ ವಕೀಲಿಕೆಯಲ್ಲಿ ಹೆಚ್ಚು ಆಸಕ್ತಿ ಇದ್ದ ಹಾಗಿದೆ. ಸಿಬಿಐಗೆ ಪ್ರಕರಣವನ್ನು ವಹಿಸಿದರೆ ಪೆನ್ ಡ್ರೈವ್ ಯಾರು ಕೊಟ್ಟಿದ್ದಾರೊ ಅವರೇ ಸಿಕ್ಕಿಹಾಕಿಕೊಳ್ಳುತ್ತಾರೆ. ಇದರ ಹಿಂದಿನ ಉದ್ದೇಶವೂ ಬಯಲಾಗಿದೆ ಎಂದು ಹೇಳಿದರು.
ಹಾಸನ ಭಾಗದಲ್ಲಿ ಶುಂಠಿ ಬೆಳೆದವರು ಬೀದಿಯಲ್ಲಿ ನಿಂತಿದ್ದಾರೆ. ಶುಂಠಿ ಬೆಳೆದ ಹೆಣ್ಣು ಮಕ್ಕಳು ಕಣ್ಣೀರು ಹಾಕುತ್ತಿದ್ದರೂ ಸರ್ಕಾರ ಇದೆಲ್ಲವನ್ನೂ ಮರೆತು ಪ್ರಜ್ವಲ್ ಪ್ರಕರಣವನ್ನೇ ದೊಡ್ಡದು ಮಾಡಿ ಮಾತ್ರ ಭಾರೀ ಪ್ರಚಾರ ನೀಡುತ್ತಿದೆ. ಇದರಿಂದ ಏನು ಸಾಧನೆಯಾಗಲಿದೆ ಎನ್ನುವುದನ್ನು ಮೊದಲು ಹೇಳಿ ಎಂದು ಕುಮಾರ ಸ್ವಾಮಿ ಪ್ರಶ್ನಿಸಿದರು.
(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)