ಕನ್ನಡ ಸುದ್ದಿ  /  ಕರ್ನಾಟಕ  /  Tumkur News: ಹೇಮಾವತಿ ಎಕ್ಸ್‌ಪ್ರೆಸ್ ಲಿಂಕ್ ಕೆನಾಲ್ ವಿರೋಧಿಸಿ ತುಮಕೂರು ಬಂದ್‌ ಯಶಸ್ವಿ; ಏನಿದು ಯೋಜನೆ, ಯಾಕೆ ವಿರೋಧ, ಯಾರು ಏನಂದ್ರು?

Tumkur News: ಹೇಮಾವತಿ ಎಕ್ಸ್‌ಪ್ರೆಸ್ ಲಿಂಕ್ ಕೆನಾಲ್ ವಿರೋಧಿಸಿ ತುಮಕೂರು ಬಂದ್‌ ಯಶಸ್ವಿ; ಏನಿದು ಯೋಜನೆ, ಯಾಕೆ ವಿರೋಧ, ಯಾರು ಏನಂದ್ರು?

Hemavati Express link canal Project: ರಾಜ್ಯ ಸರಕಾರ ಹೇಮಾವತಿ ನಾಲೆಯ 70ನೇ ಕಿ.ಮೀ ನಿಂದ 169ನೇ ಕಿ.ಮೀ ವರೆಗೆ 35 ಕಿ.ಮೀ ಪೈಪ್‌ಲೈನ್ ಅಳವಡಿಸಿ ಕುಣಿಗಲ್, ಮಾಗಡಿ, ರಾಮನಗರಕ್ಕೆ ನಿಗದಿಪಡಿಸಿದ ನೀರು ತೆಗೆದುಕೊಂಡು ಹೋಗಲು ಮುಂದಾಗಿದೆ. ಇದನ್ನು ವಿರೋಧಿಸಿ ನಡೆಸಿದ ತುಮಕೂರು ಬಂದ್‌ ಯಶಸ್ವಿಯಾಗಿದೆ. (ವರದಿ: ವರದಿ: ಈಶ್ವರ್‌ ಎಂ)

Tumkur News: ಹೇಮಾವತಿ ಎಕ್ಸ್‌ಪ್ರೆಸ್ ಲಿಂಕ್ ಕೆನಾಲ್ ವಿರೋಧಿಸಿ ತುಮಕೂರು ಬಂದ್‌
Tumkur News: ಹೇಮಾವತಿ ಎಕ್ಸ್‌ಪ್ರೆಸ್ ಲಿಂಕ್ ಕೆನಾಲ್ ವಿರೋಧಿಸಿ ತುಮಕೂರು ಬಂದ್‌

ತುಮಕೂರು: ಹೇಮಾವತಿ ಎಕ್ಸ್‌ಪ್ರೆಸ್ ಲಿಂಕ್ ಕೆನಾಲ್ (Hemavati Express link canal Project) ವಿರೋಧಿಸಿ ಮಂಗಳವಾರ ಕರೆ ನೀಡಿದ್ದ ತುಮಕೂರು ಜಿಲ್ಲಾ ಬಂದ್‌ಗೆ ಜಿಲ್ಲೆಯಲ್ಲಿ ವ್ಯಾಪಕ ಬೆಂಬಲ ವ್ಯಕ್ತವಾಗಿದ್ದು, ವಿವಿಧ ಮಠಾಧೀಶರು, ರೈತ ಸಂಘಟನೆಗಳ ಪದಾಧಿಕಾರಿಗಳು, ಕನ್ನಡಪರ ಸಂಘಟನೆಗಳು, ಲಾರಿ ಚಾಲಕರು ಮತ್ತು ಮಾಲೀಕರ ಸಂಘ, ಚಿನ್ನಬೆಳ್ಳಿ ವ್ಯಾಪಾರಿಗಳ ಸಂಘ, ಧಾನ್ಯ ವರ್ತಕರ ಸಂಘ ಸೇರಿದಂತೆ ಹಲವಾರು ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿ ಬಂದ್ ಯಶಸ್ವಿಗೊಳಿಸಿದ್ದಾರೆ.

ತುಮಕೂರು ಬಂದ್‌ ಯಶಸ್ವಿ

ಹೇಮಾವತಿ ಎಕ್ಸ್‌ಪ್ರೆಸ್ ಲಿಂಕ್ ಕೆನಾಲ್ ವಿರೋಧಿ ಹೋರಾಟ ಸಮಿತಿ,ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಇನ್ನಿತರ ಸಂಘಟನೆಗಳ ಸಹಕಾರದಲ್ಲಿ ಕರೆದಿದ್ದ ತುಮಕೂರು ಬಂದ್ ಅಂಗವಾಗಿ ನೂರಾರು ಹೋರಾಟಗಾರರು, ನಾಗರಿಕರು ನಗರದ ಟೌನ್‌ಹಾಲ್ ವೃತ್ತದಲ್ಲಿ ಸಮಾವೇಶಗೊಂಡು ಬಿ.ಹೆಚ್.ರಸ್ತೆ, ಎಂ.ಜಿ.ರಸ್ತೆ ಮೂಲಕ ಜಿಲ್ಲಾಧಿಕಾರಿ ಕಚೇರಿ ವರೆಗೂ ಪ್ರತಿಭಟನಾ ಮೆರವಣಿಗೆ ನಡೆಸಿಹೇಮಾವತಿ ಎಕ್ಸ್‌ಪ್ರೆಸ್ ಲಿಂಕ್ ಕೆನಾಲ್ ಯೋಜನೆ ರದ್ದುಗೊಳಿ ಸುವಂತೆ ಒತ್ತಾಯಿಸಿದ ಮನವಿಯಲ್ಲಿ ರಾಜ್ಯಪಾಲರಿಗೆ ಕಳುಹಿಸಲು ಅಪರ ಜಿಲ್ಲಾಧಿಕಾರಿ ಶಿವಾನಂದ ಬಿ.ಕರಾಳೆ ಅವರಿಗೆ ಸಲ್ಲಿಸಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಈ ವೇಳೆ ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಗೌರವಾಧ್ಯಕ್ಷ ಹಾಗೂ ಜಿಲ್ಲಾಧ್ಯಕ್ಷ ಎ.ಗೋವಿಂದರಾಜು ಮಾತನಾಡಿ, ತುಮಕೂರು ಜಿಲ್ಲೆಯ ಹೇಮಾವತಿ ನೀರಿಗೆ ಕಂಕಟವಾಗಿರುವ ಹೇಮಾವತಿ ಎಕ್ಸ್‌ಪ್ರೆಸ್ ಲಿಂಕ್ ಕೆನಾಲ್ ಕಾಮಗಾರಿ ಸ್ಥಗಿತಗೊಳಿಸುವಂತೆ ಕಳೆದ ಎರಡು ತಿಂಗಳಿನಿಂದ ರೈತರು, ಜನಪ್ರತಿನಿಧಿಗಳು ವಿವಿಧ ರೀತಿಯ ಹೋರಾಟ ಮಾಡುತ್ತಾ ಬಂದಿದ್ದರೂ ಸರಕಾರ ಗಂಭೀರವಾಗಿ ಪರಿಗಣಿಸಿದಂತೆ ಕಂಡು ಬರುತ್ತಿಲ್ಲ, ಜೂನ್ 20 ರಂದು ನಡೆದ ಜಿಲ್ಲೆಯ ಜನಪ್ರತಿನಿಧಿಗಳ ಸಭೆಯಲ್ಲಿಯೂ ಈ ಭಾಗದ ಶಾಸಕರ ಅಹವಾಲನ್ನು ಗಣನೆಗೆ ತೆಗೆದುಕೊಳ್ಳದೆ ಹಠಮಾರಿತನದ ಧೋರಣೆ ಅನುಸರಿಸುತ್ತಿರುವುದು ಖಂಡನೀಯ ಎಂದರು.

ಏನಿದು ಯೋಜನೆ, ಯಾಕೆ ಪ್ರತಿಭಟನೆ?

"ರಾಜ್ಯ ಸರಕಾರ ಹೇಮಾವತಿ ನಾಲೆಯ 70ನೇ ಕಿ.ಮೀ ನಿಂದ 169ನೇ ಕಿ.ಮೀ ವರೆಗೆ 35 ಕಿ.ಮೀ ಪೈಪ್‌ಲೈನ್ ಅಳವಡಿಸಿ ಕುಣಿಗಲ್, ಮಾಗಡಿ, ರಾಮನಗರಕ್ಕೆ ನಿಗದಿಪಡಿಸಿದ ನೀರು ತೆಗೆದುಕೊಂಡು ಹೋಗಲು ಮುಂದಾಗಿದೆ, ಇದು ಅವೈಜ್ಞಾನಿಕ ಯೋಜನೆಯಾಗಿದೆ, ಅಲ್ಲದೆ ಕಾನೂನು ಬಾಹಿರ ಕೂಡ, ಪೈಪ್‌ಲೈನ್ ಅಳವಡಿಸುವಾಗ ರೈತರ ಭೂಮಿಗೆ ಪರಿಹಾರ ನೀಡದೆ, ಸ್ಥಳೀಯ ಗ್ರಾಮ ಪಂಚಾಯತಿಗಳ ಒಪ್ಪಿಗೆ ಪಡೆಯದೆ ದುಂಡಾವರ್ತನೆಯಿಂದ ನೀರು ತೆಗೆದುಕೊಂಡು ಹೋಗಲು ಹೊರಟಿದೆ, ಇದಕ್ಕೆ ನಮ್ಮ ವಿರೋಧವಿದೆ, ಕುಣಿಗಲ್ ತಾಲೂಕಿಗೆ ನೀರು ಒದಗಿಸುವ ಹೇಮಾವತಿ ಮೂಲ ನಾಲೆ ಆಧುನೀಕರಣ ಗೊಂಡಿದೆ, ಹಾಗಾಗಿ ಆ ನಾಲೆಯ ಮೂಲಕವೇ ಹುತ್ತರಿದುರ್ಗದ ವರೆಗೆ ನಿಗದಿತ ನೀರು ತೆಗೆದುಕೊಂಡು ಹೋಗಬಹುದು, ಅನಗತ್ಯ ಖರ್ಚು ಮಾಡುತ್ತಿರುವ ಪೈಪ್‌ಲೈನ್ ಕಾಮಗಾರಿ ಕೈಬಿಡಬೇಕು, ಇಲ್ಲದಿದ್ದರೆ ಜನರು ಧಂಗೆ ಏಳುವ ಕಾಲ ದೂರವಿಲ್ಲ" ಎಂದು ಎ.ಗೋವಿಂದರಾಜು ಪ್ರತಿಭಟನೆ ಸಂದರ್ಭ ಮಾಹಿತಿ ನೀಡಿದ್ದಾರೆ.

ಎಕ್ಸ್‌ಪ್ರೆಸ್ ಲಿಂಕ್‌ ಕೆನಾಲ್‌ನಿಂದ ತೊಂದರೆ

"ಇದು ತುಮಕೂರು ಜಿಲ್ಲೆಯ ಜೀವ ಜಲದ ಪ್ರಶ್ನೆಯಾಗಿದೆ, ತುಮಕೂರು ಜಿಲ್ಲೆಗೆ 24.05 ಟಿಎಂಸಿ ನೀರು ಹಂಚಿಕೆಯಾಗಿದ್ದರೂ ಇದುವರೆಗೂ ತುಮಕೂರು ನಗರದ 35 ವಾರ್ಡ್‌ಗಳಿಗೂ ಸಂಪೂರ್ಣವಾಗಿ ಕುಡಿಯಲು ಹೇಮಾವತಿ ನೀರು ನೀಡಲು ಸಾಧ್ಯವಾಗಿಲ್ಲ, ಹೀಗಿರುವಾಗ ನಾಲೆಯ ಅರ್ಧದಲ್ಲಿಯೇ ಎಕ್ಸ್‌ಪ್ರೆಸ್ ಲಿಂಕ್ ಕೆನಾಲ್ ಮೂಲಕ ನೀರು ತೆಗೆದುಕೊಂಡು ಹೋದರೆ ಜಿಲ್ಲೆಯ ಇತರೆ ತಾಲೂಕುಗಳಿಗೆ ಕುಡಿಯುವ ನೀರಿಗೂ ಪರದಾಡಬೇಕಾದ ಸ್ಥಿತಿ ಇದೆ, ಈಗಾಗಲೇ ಹೇಮಾವತಿ ನಾಲೆಯ 70ನೇ ಕಿ.ಮೀ ನಿಂದ 228ನೇ ಕಿ.ಮೀ ವರೆಗೆ ನಾಲೆಯನ್ನು ಆಧುನೀಕರಣಗೊಳಿಸಿದ್ದು, ನಿಗದಿಪಡಿಸಿದ ನೀರು ಹರಿಯಲು ಯಾವುದೇ ಸಮಸ್ಯೆ ಇಲ್ಲ, ಜಿಲ್ಲೆಗೆ ಆಗುವ ಅನ್ಯಾಯ ಅರಿತು ಇಂದಿನ ಹೋರಾಟಕ್ಕೆ ಮಠಾಧೀಶರು, ರೈತರು, ಕನ್ನಡಪರ ಸಂಘಟನೆಗಳ ಮುಖಂಡರು ಎಲ್ಲಾ ನಾಗರಿಕರು ಬೆಂಬಲ ಸೂಚಿಸಿದ್ದಾರೆ, ಇವರೆಲ್ಲರಿಗೂ ಕೃತಜ್ಞತೆ ಸಲ್ಲಿಸುತ್ತೇನೆ, ಯೋಜನೆ ನಿಲ್ಲುವವರೆಗೂ ನಮ್ಮ ಹೋರಾಟ ಮುಂದುವರೆಯಲಿದೆ" ಎಂದು ಪ್ರತಿಭಟನೆ ನೇತೃತ್ವ ವಹಿಸಿದ್ದ ಮಾಜಿ ಸಚಿವ ಸೊಗಡು ಶಿವಣ್ಣ ಹೇಳಿದ್ದಾರೆ.

ಯೋಜನೆ ನಿಲ್ಲಿಸಲು ಒತ್ತಾಯ

"ತುಮಕೂರು ಜಿಲ್ಲೆಯ ಜನರಿಗೆ ನೀರು ಸಾಕಾಗದೆ ಪರಿತಪಿಸುತ್ತಿರುವ ಸ್ಥಿತಿಯಲ್ಲಿ ಮಾಗಡಿ ಮತ್ತು ರಾಮನಗರಕ್ಕೆ ನೀರು ತೆಗೆದುಕೊಂಡು ಹೋಗಲು ಹೊರಟಿರುವುದು ತರವಲ್ಲ, ಇದುವರೆಗೂ ಜಿಲ್ಲೆಗೆ ನಿಗದಿಯಾದ ನೀರು ಹರಿದಿಲ್ಲ, ವಾರದಲ್ಲಿ ಮೂರು ದಿನ ಕೊರಟಗೆರೆಯ ಜಟ್ಟಿ ಅಗ್ರಹಾರ ಕೆರೆ ಮತ್ತು ಮಧುಗಿರಿಯ ಸಿದ್ದಾಪುರ ಕೆರೆಗೆ ನೀರು ನೀಡಿದ್ದು, ಇದರಿಂದ ಯಾವ ಪ್ರಯೋಜನವು ಆಯಾಯ ತಾಲೂಕಿನ ಜನರಿಗೆ ಆಗಿಲ್ಲ, ಹೇಮಾವತಿ ಅಚ್ಚುಕಟ್ಟು ಪ್ರದೇಶಕ್ಕೆ ಸೇರಿದ ಭೂಮಿಗಳಲ್ಲಿಯೇ ರೈತರ ಕೊಳವೆ ಬಾವಿಗಳಿಗೆ ನೀರಿಲ್ಲ, ರೈತರು ಆತ್ಮಹತ್ಯೆಯ ಹಾದಿ ತುಳಿಯುತಿದ್ದಾರೆ, ಒಂದು ವೇಳೆ ಎಕ್ಸ್‌ಪ್ರೆಸ್ ಲಿಂಕ್‌ ಕೆನಾಲ್ ಜಾರಿಗೆ ಬಂದರೆ ರೈತರ ಆತ್ಮಹತ್ಯೆ ಮತ್ತಷ್ಟು ಹೆಚ್ಚಾಗಲಿದೆ, ಸರಕಾರ ಇದನ್ನು ಗಂಭೀರವಾಗಿ ಪರಿಗಣಿಸಿ ಯೋಜನೆ ಕೈಬಿಡಬೇಕು" ಎಂದು ಹೋರಾಟದಲ್ಲಿ ಪಾಲ್ಗೊಂಡಿದ್ದ ಮಠಾಧೀಶರ ಪರವಾಗಿ ಸಿದ್ದರಬೆಟ್ಟದ ವೀರಭದ್ರ ಶಿವಾಚಾರ್ಯ ಸ್ವಾಮೀಜಿ ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಅನ್ನಪೂರ್ಣೇಶ್ವರಿ ಸಂಸ್ಥಾನದ ಬಸವಲಿಂಗ ಮಹಾಸ್ವಾಮೀಜಿ, ಗೊಲ್ಲಹಳ್ಳಿಯ ವಿಭವ ವಿದ್ಯಾ ಶಂಕರ ಸ್ವಾಮೀಜಿ, ಓಂಕಾರಮುನಿ ಸ್ವಾಮೀಜಿ, ತಿಪ್ಪೇರುದ್ರ ಸ್ವಾಮೀಜಿ, ಕನ್ನಡ ಸೇನೆಯ ಅಧ್ಯಕ್ಷ ಧನಿಯಕುಮಾರ್, ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಿ.ಎಸ್.ಶಂಕರಪ್ಪ, ತಾಲೂಕು ಅಧ್ಯಕ್ಷ ಚಿಕ್ಕಬೋರೇಗೌಡ, ಮಹಿಳಾ ಅಧ್ಯಕ್ಷೆ ನಾಗರತ್ನಮ್ಮ, ಪಂಚಾಕ್ಷರಯ್ಯ, ಸಿಪಿಐಎಂನ ಎನ್.ಕೆ.ಸುಬ್ರಮಣ್ಯ, ಜೆಡಿಯು ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಜಿ.ಎಲ್. ರವಿ ಇನ್ನಿತರರು ಭಾಗವಹಿಸಿದ್ದರು.

  • ವರದಿ: ಈಶ್ವರ್‌ ಎಂ, ತುಮಕೂರು