Tumkur Crime: ಇನ್‌ಸ್ಟಾದಲ್ಲಿ ಪ್ರೇಮಿಸಿ ವಿವಾಹವಾಗಿ ಪತಿಯನ್ನೇ ಕೊಲ್ಲಿಸಿದ ತುಮಕೂರು ಯುವತಿ, 6 ಮಂದಿ ಬಂಧನ
Love murder ವಿಭಿನ್ನ ಕೊಲೆ ಪ್ರಕರಣವನ್ನು ಬೇಗನೇ ತುಮಕೂರು ಜಿಲ್ಲೆ ಕೊರಟಗೆರೆ ಪೊಲೀಸರು ಬೇಧಿಸಿದ್ದಾರೆ.ವರದಿ: ಈಶ್ವರ್ ತುಮಕೂರು
ತುಮಕೂರು: ಆತ ದೂರದ ಕಲಬುರಗಿಯವನು. ಈಕೆ ಕಲ್ಪತರು ನಾಡು ತುಮಕೂರಿನವಳು. ಇಬ್ಬರಿಗೂ ಇನ್ ಸ್ಟಾಗ್ರಾಂ ಮೂಲಕ ಪರಿಚಯವಾಗಿ ನಂತರ ಪ್ರೇಮಕ್ಕೆ ತಿರುಗಿತ್ತು. ಅಲ್ಲಿಂದ ಮದುವೆಯಾಗಿ ಎರಡು ವರ್ಷದ ಮಗುವೂ ಇದೆ. ಆದರೆ ಎರಡನೇ ವರ್ಷದಲ್ಲಿ ಆಕೆ ಇನ್ನೊಬ್ಬನೊಂದಿಗೆ ಸಂಬಂಧ ಬೆಳೆಸಿದ್ದೂ ಅಲ್ಲದೇ ಪ್ರೀತಿಸಿ ಮದುವೆಯಾದ ಪತಿಯನ್ನೇ ಕೊಲೆ ಮಾಡಿಸಿ ಸಿಕ್ಕಿಬಿದ್ದ ಪ್ರಸಂಗವಿದು. ತುಮಕೂರು ಪೊಲೀಸರು ಯುವಕನ ಶವ ಪತ್ತೆಯ ಜಾಡು ಹಿಡಿದಾಗ ಕೊಲೆ ಪ್ರಕರಣ ಬಯಲಾಗಿದೆ. ಯುವತಿ, ಆಕೆಯ ಪ್ರಿಯಕರ ಸೇರಿ ಆರು ಮಂದಿಯನ್ನು ಈಗ ತುಮಕೂರು ಪೊಲೀಸರು ಬಂಧಿಸಿದ್ದಾರೆ. ಅಪ್ಪ ಕೊಲೆಯಾದರೆ, ಅಮ್ಮ ಜೈಲು ಸೇರಿರುವುದರಿಂದ ಎರಡು ವರ್ಷದ ಮಗು ಅನಾಥವಾಗಿದೆ.
ಗಂಡನನ್ನು ಬಿಟ್ಟು ಗುಂಡನ ಹಿಂದೆ ಹೋದವಳ ಕಥೆಯಲ್ಲಿ ಈಗ ಕೊರಟಗೆರೆ ಪೊಲೀಸರ ತನಿಖೆಯಿಂದ ತಿರುವು ದೊರೆತಿದೆ. 3 ಜನ ಆರೋಪಿಗಳ ಮೇಲೆ ಪ್ರಥಮವಾಗಿ ಪ್ರಕರಣ ದಾಖಲಿಸಿದ್ದ ಪೊಲೀಸರು ಮತ್ತೆ ತನಿಖೆ ಚುರುಕು ಮಾಡಿದಾಗ ಬರೋಬ್ಬರಿ 6 ಜನ ಆರೋಪಿಗಳು ಪೊಲೀಸರ ಅತಿಥಿಗಳಾಗಿ ನಂತರ ಜೈಲು ಸೇರಿದ್ದಾರೆ.
ಕೊರಟಗೆರೆ ತಾಲೂಕು ಕಸಬಾ ಹೋಬಳಿ ತುಂಬಾಡಿ- ಸಿದ್ದರಬೆಟ್ಟದ ಮಾರ್ಗದ ಕೆಪಿಟಿಸಿಎಲ್ ಘಟಕದ ಬಳಿ ಜು.28 ರ ಭಾನುವಾರ ರಾತ್ರಿ 8 ಗಂಟೆಯ ವೇಳೆಯಲ್ಲಿ ಪ್ರಕಾಶನ ಹತ್ಯೆಯಾಗಿತ್ತು, ಘಟನೆಗೆ ಸಂಬಂಧ ತನಿಖೆ ಚುರುಕುಗೊಳಿಸಿದ ಕೊರಟಗೆರೆ ಪೊಲೀಸರಿಗೆ ಹೆಂಡತಿಯ ಪಾತ್ರದ ಜೊತೆ ಹಳೇ ಪ್ರೇಮಿಯ ಕೈವಾಡ ಸೇರಿ 6 ಜನ ಆರೋಪಿಗಳ ಹೆಡೆಮುರಿ ಕಟ್ಟುವಲ್ಲಿ ಪೊಲೀಸರ ತಂಡ ಯಶಸ್ವಿಯಾಗಿದ್ದಾರೆ.
ಅಂಚೆ ಕಚೇರಿಯ ಸಿಬ್ಬಂದಿ ಮೃತ ಪ್ರಕಾಶನ ಕೊಲೆಯ ಪ್ರಕರಣದಲ್ಲಿ ಬೆಂಗಳೂರಿನ ಗೋವಿಂದ ರಾಜು (36), ಮಲ್ಲೇಕಾವಿನ ಹರ್ಷಿತಾ (28), ಸೋಮಶೇಖರ್ (27), ಮಹೇಶ್ (32), ಕಂಬದಹಳ್ಳಿಯ ದರ್ಶನ್ (24), ಬಾಗೂರು ರಂಗಸ್ವಾಮಿ ಎಂಬ 6 ಜನ ಆರೋಪಿಗಳು ಈಗ ಕೊರಟಗೆರೆ ಪೊಲೀಸರ ಅತಿಥಿಗಳಾಗಿ ತನಿಖೆ ಇನ್ನಷ್ಟು ಚುರುಕುಗೊಂಡಿದೆ.
ಅನಾಥವಾದ 2 ವರ್ಷದ ಮಗು
ಗುಲ್ಬರ್ಗಾ ಜಿಲ್ಲೆಯ ಚಿಂಚೊಳಿಯ ಮೃತ ಪ್ರಕಾಶ (32) ನಿಗೆ ಇದೇ ಇನ್ಸ್‌ಸ್ಟಾ ಗ್ರಾಂ ಮೂಲಕ ಪರಿಚಯವಾದ ಮಲ್ಲೇಕಾವಿನ ಆರೋಪಿ ಹರ್ಷಿತಾ ಜೊತೆ ಮದುವೆಯಾಗಿ 3 ವರ್ಷವಾಗಿ 2 ವರ್ಷದ ಗಂಡು ಮಗುವಿದೆ. ಕಳೆದ 3 ತಿಂಗಳ ಹಿಂದೆಯಷ್ಟೇ ಹರ್ಷಿತಾ ಗೋವಿಂದರಾಜು ಅಲಿಯಾಸ್ ಗುಂಡನ ಜೊತೆ ಮನೆ- ಗಂಡ ಮತ್ತು ಮಗು ಬಿಟ್ಟು ಓಡಿ ಹೋಗಿದ್ದಳು, ಗಂಡನ ದೂರಿನ ಬಳಿಕ ಪೊಲೀಸರ ಮೂಲಕ ರಾಜಿ ಸಂಧಾನ ಆಗಿತ್ತು, ಗುಂಡನ ಸಹವಾಸದಿಂದ ಗಂಡನ ಪ್ರಾಣವನ್ನೇ ತೆಗೆಯುವ ನಿರ್ಧಾರಕ್ಕೆ ಬಂದ ಹರ್ಷಿತ ಜೈಲು ಪಾಲಾಗಿ 2 ವರ್ಷದ ಗಂಡು ಮಗು ಅನಾಥವಾಗಿದೆ.
ಯುವಕನನ್ನು ಪ್ರೇಮಿಸಿ ಮದುವೆಯಾದರೂ ಕ್ಷುಲ್ಲಕ ಕಾರಣಗಳಿಗೆ ಇಬ್ಬರ ನಡುವೆ ಜಗಳಗಳು ನಡೆದಿದ್ದವು. ಆಕೆ ಸ್ನೇಹಿತ ಹಾಗೂ ಇತರರೊಂದಿಗೆ ಕೊಲೆ ಮಾಡಿಸಿರುವುದು ಬಯಲಾಗಿದ್ದು, ಒಪ್ಪಿಕೊಂಡಿದ್ದಾಳೆ. ಪ್ರಕರಣದ ತನಿಖೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸ್ಥಳಕ್ಕೆ ತುಮಕೂರು ಎಸ್ಪಿ ಅಶೋಕ್, ಮಧುಗಿರಿ ಡಿವೈಎಸ್ಪಿ ರಾಮಕೃಷ್ಣಯ್ಯ ಮಾರ್ಗದರ್ಶನದಲ್ಲಿ ಕೊರಟಗೆರೆ ಸಿಪಿಐ ಅನಿಲ್, ಪಿಎಸೈಗಳಾದ ಚೇತನ್‌ಗೌಡ, ಯೊಗೀಶ್, ಎಎಸೈ ಮಂಜುನಾಥ ಅವರು 6 ಜನ ಆರೋಪಿಗಳನ್ನು ಕೊಲೆಯಾದ 24 ಗಂಟೆಯೊಳಗೆ ಅರೆಸ್ಟ್ ಮಾಡಿದ್ದಾರೆ, ಕೊರಟಗೆರೆ ಪೊಲೀಸ್ ಠಾಣೆಯಲ್ಲಿ 6 ಜನ ಆರೋಪಿಗಳ ಮೇಲೆ ಪ್ರಕರಣ ದಾಖಲಾಗಿದೆ.\
(ವರದಿ: ಈಶ್ವರ್ ತುಮಕೂರು)