Tumkur News: ಹೆಸರಾಯಿತು ಕರ್ನಾಟಕ ಉಸಿರಾಯಿತು ಕನ್ನಡ ಅಭಿಯಾನ, ಚಿಕ್ಕನಾಯಕನಹಳ್ಳಿಯಲ್ಲಿ ಕನ್ನಡ ಜ್ಯೋತಿ ರಥಯಾತ್ರೆಗೆ ಅದ್ದೂರಿ ಸ್ವಾಗತ
Kannada Ratha ಕರ್ನಾಟಕ ಹೆಸರು ನಾಮಕರಣವಾಗಿ ಐವತ್ತು ವರ್ಷ ತುಂಬಿದ ನೆನಪಿನಲ್ಲಿ ರೂಪಿಸಿರುವ ಕನ್ನಡ ರಥ ಯಾತ್ರೆಯನ್ನು ಚಿಕ್ಕನಾಯಕನಹಳ್ಳಿಯಲ್ಲಿ ಸ್ವಾಗತಿಸಲಾಯಿತು.
ತುಮಕೂರು: ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ. ಕನ್ನಡದ ಅಸ್ಮಿತೆ ಹಾಗೂ ಅಸ್ತಿತ್ವದ ವಿಚಾರದಲ್ಲಿ ನಮ್ಮವರ ಅಭಿಮಾನ ಮೊದಲಿನಿಂದಲೂ ಜೋರಾಗಿಯೇ ಇದೆ. ಕರ್ನಾಟಕವೂ ರಚನೆಯಾಗಿ ಐದು ದಶಕ ತುಂಬಿ ಹೋಗಿದ್ದು. ಈ ಸಂಬಂಧ ಅಲ್ಲಲ್ಲಿ ಚಟುವಟಿಕೆಗಳೂ ನಡೆದಿವೆ. ಅದರಲ್ಲಿ ಹೆಸರಾಯಿತು ಕರ್ನಾಟಕ ಉಸಿರಾಯಿತು ಕನ್ನಡ ಅಭಿಯಾನ ಕೂಡ ಒಂದು. ಸರ್ಕಾರವು ಕರ್ನಾಟಕ ಸಂಭ್ರಮ -50 ರಡಿ ಹೆಸರಾಯಿತು ಕರ್ನಾಟಕ ಉಸಿರಾಯಿತು ಕನ್ನಡ ಅಭಿಯಾನದ ಅಂಗವಾಗಿ ಚಿತ್ರದುರ್ಗ ಜಿಲ್ಲೆಯಿಂದ ಜಿಲ್ಲೆಯ ಚಿಕ್ಕನಾಯಕನಹಳ್ಳಿ ಪಟ್ಟಣಕ್ಕೆ ಭಾನುವಾರ ಆಗಮಿಸಿದ ಕನ್ನಡ ಜ್ಯೋತಿ ರಥಯಾತ್ರೆಯನ್ನು ಅದ್ದೂರಿಯಾಗಿ ಸ್ವಾಗತಿಸಲಾಯಿತು.
ಕನ್ನಡ ಜ್ಯೋತಿ ರಥಯಾತ್ರೆಗೆ ಮುಖ್ಯಮಂತ್ರಿ ಅವರು 2023ರ ನವೆಂಬರ್ 2ರಂದು ವಿಜಯನಗರ ಜಿಲ್ಲೆಯ ಹಂಪಿಯಲ್ಲಿ ಚಾಲನೆ ನೀಡಿದ್ದರು, ಈ ರಥಯಾತ್ರೆಯು ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಸಂಚರಿಸುತ್ತಾ ತುಮಕೂರು ಜಿಲ್ಲೆ ತಲುಪಿದೆ. ಕನ್ನಡದ ಅಭಿಮಾನಿಗಳು, ವಿವಿಧ ಸಂಘ ಸಂಸ್ಥೆಯವರು ರಥಯಾತ್ರೆಯನ್ನು ಕಲ್ಪತರು ನಾಡಿನಲ್ಲಿ ಆತ್ಮೀಯವಾಗಿಯೇ ಬರ ಮಾಡಿಕೊಂಡರು.
ವಿವಿಧ ಜಾನಪದ ಕಲಾತಂಡಗಳ ಮುಖೇನ ಚಿಕ್ಕನಾಯಕನಹಳ್ಳಿ ತಾಲ್ಲೂಕು ಕೇಂದ್ರದ ರಾಜಬೀದಿಗಳಲ್ಲಿ ಕನ್ನಡ ರಥಯಾತ್ರೆಯ ಮೆರವಣಿಗೆ ನಡೆಸಲಾಯಿತು. ಚಿಕ್ಕನಾಯಕನಹಳ್ಳಿ ತಾಲ್ಲೂಕು ತಹಸೀಲ್ದಾರ್ ಜಿ.ಎನ್. ಕೀರ್ತಿ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸಿದ್ಧಲಿಂಗಪ್ಪ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಡಿ. ಎಂ. ರವಿಕುಮಾರ್ ಹಾಗೂ ಕರ್ನಾಟಕ ಜಾನಪದ ಅಕಾಡೆಮಿ ಸದಸ್ಯ ಮಲ್ಲಿಕಾರ್ಜುನ ಕೆಂಕೆರೆ ಅವರು ಕನ್ನಡಾಂಬೆಯ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ಮೆರವಣಿಗೆಗೆ ಚಾಲನೆ ನೀಡಿದರು.
ಕಾರ್ಯಕ್ರಮದಲಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸಿದ್ಧಲಿಂಗಪ್ಪ ಮಾತನಾಡಿ ನಾಡು-ನುಡಿಗಾಗಿ ಶ್ರಮಿಸಿದ ಕಲಾವಿದರು, ಲೇಖಕರು, ಹೋರಾಟಗಾರರನ್ನು ಸ್ಮರಿಸುತ್ತಾ, ವಿಶೇಷವಾಗಿ ವಿದ್ಯಾರ್ಥಿಗಳಲ್ಲಿ ಕನ್ನಡ ಭಾಷೆ ಕುರಿತು ಜಾಗೃತಿ ಮೂಡಿಸುವುದು, ಅಧಿಕಾರಿ ಹಾಗೂ ನಾಗರೀಕರಲ್ಲಿ ಕನ್ನಡ ವಾತಾವರಣ ನಿರ್ಮಾಣ ಮಾಡುವುದು ಈ ರಥಯಾತ್ರೆಯ ಉದ್ದೇಶವಾಗಿದೆ ಎಂದು ತಿಳಿಸಿದರು.
1973ರಲ್ಲಿ ದಿ.ದೇವರಾಜ ಅರಸು ಅವರು ಕರ್ನಾಟಕ ಎಂದು ನಾಮಕರಣ ಮಾಡಿದ ನಂತರ 50ನೇ ವರ್ಷದಲ್ಲಿ ನಾವಿದ್ದೇವೆ, ಈ ರಥಯಾತ್ರೆಯು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಸಂಚರಿಸಿ ನವೆಂಬರ್ 1ರಂದು ಮುಕ್ತಾಯವಾಗುತ್ತದೆ ಎಂದರು.
ಕರ್ನಾಟಕವು ಶಾಂತಿ ಪ್ರಿಯತೆಗೆ ಸಂಕೇತವಾಗಿದ್ದು, ಕರ್ನಾಟಕದ ನೆಲ-ಜಲದ ರಕ್ಷಣೆ ಪ್ರತಿಯೊಬ್ಬ ಕನ್ನಡಿಗರದ್ದಾಗಿದೆ, ಈಗಿನ ಆಂದ್ರಪ್ರದೇಶದ ಮಡಕಶಿರಾ ಬಹುತೇಕ ಅಚ್ಚ ಕನ್ನಡದ ಪ್ರದೇಶವಾಗಿದ್ದರಿಂದ ಮಡಕಶಿರಾವನ್ನು ತುಮಕೂರು ಜಿಲ್ಲೆಗೆ ಸೇರಿಸಬೇಕು ಎಂದು ಮಧುಗಿರಿಯ ಬೇಡತ್ತೂರಿನಿಂದ ಮಡಕಶಿರಾವರೆಗೆ ಶ್ರೀ ಹನುಮಂತಯ್ಯನವರ ನೇತೃತ್ವದಲ್ಲಿ ಕಾಲ್ನಡಿಗೆ ಮೂಲಕ ಜಾಥಾ ನಡೆಸಿ, ಹಲವಾರು ಹೋರಾಟಗಳನ್ನು ನಡೆಸಿದ ಸನ್ನಿವೇಶಗಳನ್ನು ನೆನೆದರು.
ಕಾರ್ಯಕ್ರಮದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳಾದಂತಹ ಕಾಂತರಾಜು, ಸಿಡಿಪಿಓ ಹೊನ್ನಪ್ಪ, ಪಶುಸಂಗೋಪನ ಇಲಾಖೆಯ ಸಹಾಯಕ ನಿರ್ದೇಶಕ ನಾಗಭೂಷಣ್, ಚಿಕ್ಕನಾಯಕನಹಳ್ಳಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ರವಿಕುಮಾರ್ ಇತರರು ಈ ವೇಳೆ ಹಾಜರಿದ್ದರು. ರಥಯಾತ್ರೆಯು ಮುಂದಿನ ಕೆಲವು ದಿನಗಳ ಕಾಲ ಎಲ್ಲಾ ತಾಲ್ಲೂಕುಗಳಲ್ಲೂ ಸಂಚರಿಸಲಿದೆ.
( ವರದಿ: ಈಶ್ವರ್, ತುಮಕೂರು)