Karnataka News: ತುಮಕೂರು, ಚಿತ್ರದುರ್ಗ ಜಿಲ್ಲೆಯ ಗೊಲ್ಲರಹಟ್ಟಿಗಳಲ್ಲಿ ಮೂಢನಂಬಿಕೆಗಳ ಜಾಗೃತಿಗೆ ಎರಡು ವರ್ಷಗಳಿಂದ ಅನುದಾನವೂ ಸ್ಥಗಿತ
Golla Community ತುಮಕೂರು ಹಾಗೂ ಚಿತ್ರದುರ್ಗ ಜಿಲ್ಲೆಯಲ್ಲಿ ಕಾಡು ಗೊಲ್ಲ ಸಮುದಾಯದಲ್ಲಿರುವ ಮೂಢನಂಬಿಕೆಗಳ ಜಾಗೃತಿಗೆ ಅನುದಾನವೂ ಇಲ್ಲ. ಇದರಿಂದ ಎರಡು ವರ್ಷದಿಂದ ಜಾಗೃತಿ ಕಾರ್ಯಕ್ರಮಗಳೂ ನಿಂತಿವೆ. ಈಗ ಬಾಣಂತಿ, ಮಗುವಿನ ಪ್ರಕರಣ ಬಯಲಾಗುತ್ತದೆ ತುಮಕೂರು ಜಿಲ್ಲಾಡಳಿತವೂ ಜಾಗೃತಿಗೆ ಮುಂದಾಗಿದೆ. ಏನೇನು ಕಾರ್ಯಕ್ರಮ ಇರಲಿದೆ ಎನ್ನುವ ವರದಿ ಇಲ್ಲಿದೆ.
ಬೆಂಗಳೂರು: ತುಮಕೂರು ಹಾಗೂ ಚಿತ್ರದುರ್ಗ ಜಿಲ್ಲೆಗಳಲ್ಲಿ ಕಾಡುಗೊಲ್ಲ ಸಮುದಾಯದ ಹೆಣ್ಣು ಮಕ್ಕಳಿಗೆ ಸಂಪ್ರದಾಯದ ವಿಚಾರದಲ್ಲಿ ಆಗುತ್ತಿರುವ ಸಾಮಾಜಿಕ ಅಡೆತಡೆ ಹಾಗೂ ಆರೋಗ್ಯ ತೊಂದರೆಗಳ ಕುರಿತು ಜಾಗೃತಿ ಮೂಡಿಸುವ ಕಾರ್ಯ ಎರಡು ವರ್ಷದಿಂದ ಆಗೇ ಇಲ್ಲ. ಇದಕ್ಕೆ ಕಾರಣ ಅನುದಾನದ ಕೊರತೆ !
ಕರ್ನಾಟಕ ಸರ್ಕಾರ ಹಿಂದುಳಿದ ವರ್ಗಗಳ ಇಲಾಖೆ ಮೂಲಕ ಹಲವು ಸಮುದಾಯದಲ್ಲಿ ಬೇರು ಬಿಟ್ಟಿರುವ ಮೂಢನಂಬಿಕೆ ಹಾಗೂ ಹಲವು ಸಂಪ್ರದಾಯದಿಂದ ಆಗುತ್ತಿರುವ ತೊಂದರೆಗಳ ಬಗ್ಗೆ ಜಾಗೃತಿ ಮೂಡಿಸುತ್ತಲೇ ಇದೆ. ಇದಕ್ಕಾಗಿ ಪ್ರತಿ ವರ್ಷ ಇಂತಿಷ್ಟು ಅನುದಾನವನ್ನೂ ಮೀಸಲಿಡುತ್ತಿದೆ. ಎರಡು ವರ್ಷದಿಂದ ಆರ್ಥಿಕ ನೆರವು ನಿಲ್ಲಿಸಿರುವುದರಿಂದ ಇಲಾಖೆಯವರೂ ಕಾರ್ಯಕ್ರಮ ನಡೆಸಲು ಆಗಿಲ್ಲ. ಕೆಲ ವರ್ಷಗಳ ಹಿಂದೆ ಕಾಡುಗೊಲ್ಲ ಸಮುದಾಯದಲ್ಲಿ ಮುಟ್ಟಾದ ಹೆಣ್ಣು ಮಕ್ಕಳನ್ನು ಹೊರಕ್ಕೆ ಕೂರಿಸುತ್ತಿದ್ದ ಕುರಿತು ಸಾಕಷ್ಟು ಚರ್ಚೆಗಳಾಗಿದ್ದವು. ಈಗ ಬಾಣಂತಿ ಹಾಗೂ ಎಳೆಯ ಮಕ್ಕಳನ್ನು ಗುಡಿಸಲಿನಲ್ಲಿರಿಸುವ ಬಗ್ಗೆ ವರದಿಗಳು ಪ್ರಸಾರವಾಗುತ್ತಿದ್ದಂತೆ ಇದೇ ಸಮುದಾಯದಲ್ಲಿನ ಮೌಢ್ಯಾಚರಣೆ ಮತ್ತೆ ಮುನ್ನಲೆಗೆ ಬಂದಿದೆ. ಅದರಲ್ಲೂ ಕರ್ನಾಟಕ ಹೈಕೋರ್ಟ್ ಸೂಚನೆ ಮೇರೆಗೆ ತುಮಕೂರು ಜಿಲ್ಲಾ ನ್ಯಾಯಾಧೀಶರ ಸಮ್ಮುಖದಲ್ಲಿ ಗುಡಿಸಲುಗಳ ನಾಶದ ಜತೆಗೆ ಪೋಷಕರ ವಿರುದ್ದ ತುಮಕೂರು ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಾದ ನಂತರ ಚರ್ಚೆಗಳು ಶುರುವಾಗಿವೆ. ತುಮಕೂರು ಜಿಲ್ಲಾಡಳಿತ ಸೂಚನೆ ಹಿನ್ನೆಲೆಯಲ್ಲಿ ಸಮುದಾಯದ ಪೂಜಾರಿಗಳು, ಗೌಡರು, ಹಿರಿಯರಿಗೆ ಜಾಗೃತಿ ಮೂಡಿಸುವ ಪ್ರಯತ್ನ ನಡೆಯುತ್ತಿದೆ.
ಎರಡು ಜಿಲ್ಲೆಗಳಲ್ಲಿ ಅಧಿಕ
ತುಮಕೂರು ಜಿಲ್ಲೆಯ ಶಿರಾ, ಚಿಕ್ಕನಾಯಕನಹಳ್ಳಿ, ತುಮಕೂರು, ಚಿತ್ರದುರ್ಗ ಜಿಲ್ಲೆಯ ಹಿರಿಯೂರು, ಚಳ್ಳಕೆರೆ, ಹೊಳಲ್ಕೆರೆ ಸೇರಿದಂತೆ ಎರಡೂ ಜಿಲ್ಲೆಗಳ ಹಲವು ಕಡೆ ಗೊಲ್ಲರಹಟ್ಟಿಗಳಲ್ಲಿಈಗಲೂ ಮೌಢ್ಯದ ಸಂಪ್ರದಾಯಗಳು ಬಳಕೆಯಲ್ಲಿವೆ. ಅದರಲ್ಲೂ ಹೆಣ್ಣು ಮಕ್ಕಳನ್ನು ಮೌಢ್ಯದ ನೆಪದಲ್ಲಿ ತೊಂದರೆ ನೀಡುವ ಪ್ರಕರಣಗಳು ವರದಿಯಾಗುತ್ತಲೇ ಇವೆ. ಎರಡೂ ಜಿಲ್ಲೆಗಳಲ್ಲಿ ಕಾಡು ಗೊಲ್ಲ ಸಮುದಾಯದ ಮೂರು ಲಕ್ಷ ಮಂದಿ ಇದ್ದಾರೆ. ಮುಟ್ಟಾದ ಹೆಣ್ಣು ಮಕ್ಕಳನ್ನು ಮನೆಯಿಂದ ಹೊರಗೆ ಕೂರಿಸುವುದು, ಹೆರಿಗೆಯಾದ ಹೆಣ್ಣು ಮಕ್ಕಳನ್ನು ಚಳಿ, ಮಳೆ, ಗಾಳಿಯನ್ನೂ ಲೆಕ್ಕಿಸದೇ ಗುಡಿಸಲು ಹಾಕಿ ಅದರಲ್ಲಿಯೇ ತಿಂಗಳಗಟ್ಟಲೇ ಇರಿಸುವುದು ಈಗಲೂ ಮುಂದುವರಿದಿದೆ. ಈ ಕುರಿತು ಗೊಲ್ಲ ಸಮುದಾಯದಲ್ಲಿ ಜಾಗೃತಿ ಮೂಡಿಸುವ ಕೆಲಸ ಆಗುತ್ತಲೇ ಇದೆ. ಸಮುದಾಯದ ಹಿರಿಯರಿಗೆ ಜಾಗೃತಿ ಮೂಡಿಸಿದ್ದರೂ ಕೆಲವು ಪೂಜಾರಿಗಳು ತಪ್ಪು ದಂಡ ವಿಧಿಸುವ, ಪೂಜಾ ವಿಧಾನಗಳನ್ನು ಹೇಳಿ ಮತ್ತೆ ಮೂಢನಂಬಿಕೆಗೆ ತಳ್ಳುವುದೂ ನಿಂತಿಲ್ಲ, ನಿರಂತರ ಜಾಗೃತಿ ನಂತರವೂ ಇಂತಹ ಪ್ರಕರಣಗಳು ಆಗಾಗ ಬಯಲಾಗುತ್ತಿವೆ.
ಈ ಸಂಪ್ರದಾಯ ಹೊಸದೇನೂ ಅಲ್ಲ. ಎರಡೂ ಜಿಲ್ಲೆಗಳಲ್ಲಿರುವ ಗೊಲ್ಲರ ಹಟ್ಟಿಯಲ್ಲಿ ಕಂಡು ಬರುತ್ತವೆ. ಜಾಗೃತಿ ಮೂಡಿಸಿದರೂ ಕೆಲವರು ಮತ್ತೆ ಆಚರಿಸುವಂತೆ ಮಾಡುತ್ತಿದ್ದಾರೆ ಎನ್ನುವುದು ಕರ್ನಾಟಕ ಬುಡಕಟ್ಟು ಪರಿಷತ್‌ನ ಚಿತ್ರದುರ್ಗ ಜಿಲ್ಲಾ ಅಧ್ಯಕ್ಷ ಮಾಲತೇಶ ಅರಸ್ ಬೇಸರದ ನುಡಿ.
ಅನುದಾನ ಸ್ಥಗಿತ
ಈ ಭಾಗದಲ್ಲಿ ಇಂತಹ ವಿಚಾರ ಮುನ್ನೆಲೆಗೆ ಬಂದಾಗ ಸಾಕಷ್ಟು ಕಡೆ ಜಾಗೃತಿ ಕಾರ್ಯಕ್ರಮ, ಬೇರೆ ಬೇರೆ ಅಧಿಕಾರಿಗಳ ತಂಡ ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ನೀಡುತ್ತಿವೆ. ಅದರಲ್ಲೂ ಹಿಂದುಳಿದ ವರ್ಗಗಳ ಇಲಾಖೆಯಿಂದ ನಿರಂತರವಾಗಿ ಕಾರ್ಯಕ್ರಮ ಆಯೋಜಿಸುತ್ತಾ ಬರಲಾಗುತ್ತಿದೆ. ಇದಕ್ಕಾಗಿಯೇ ಪ್ರತಿ ವರ್ಷ ಸರ್ಕಾರದಿಂದ 30 ರಿಂದ 40 ಸಾವಿರ ರೂ.ವರೆಗೂ ಆರ್ಥಿಕ ನೆರವು ನೀಡಲಾಗುತ್ತಿತ್ತು. ಎರಡು ವರ್ಷದಿಂದ ಅದನ್ನೂ ನಿಲ್ಲಿಸಲಾಗಿದೆ. ಇದರಿಂದ ಇಲಾಖೆಗಳೂ ಕಾರ್ಯಕ್ರಮವನ್ನೇ ನಡೆಸಿಲ್ಲ.
ಅದರಲ್ಲೂಈಗ ಈ ವಿಚಾರ ಮತ್ತೆ ಮುನ್ನೆಲೆಗೆ ಬಂದು ಮಗು ಮೃತಪಟ್ಟ ನಂತರ ಜಿಲ್ಲಾನ್ಯಾಯಾಧೀಶರು ಗುಡಿಸಲು ನಾಶ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಜಾಗೃತಿ ಮೂಡಿಸಲು ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್ ಸೂಚನೆ ನೀಡಿದ್ದಾರೆ. ನಾಲ್ಕೈದು ಇಲಾಖೆಗಳು ಜಂಟಿಯಾಗಿ ಜಾಗೃತಿ ಕಾರ್ಯಕ್ರಮ ರೂಪಿಸುತ್ತೇವೆ. ಈ ಬಾರಿ ಪೋಷಕರು ಹಾಗೂ ಹೆಣ್ಣು ಮಕ್ಕಳ ಜತೆಗೆ ಮೂಢನಂಬಿಕೆಗೆ ಬೆಂಬಲವಾಗಿ ನಿಂತಿರುವ ಪೂಜಾರಿಗಳು, ಗೌಡರಿಗೂ ತಿಳುವಳಿಕೆ ನೀಡುತ್ತೇವೆ ಎಂದು ತುಮಕೂರು ಜಿಲ್ಲಾ ಹಿಂದುಳಿದ ವರ್ಗಗಳ ಇಲಾಖಾ ಅಧಿಕಾರಿ ಎಸ್.ಆರ್.ಗಂಗಣ್ಣ ತಿಳಿಸಿದರು.
ಮೊದಲ ಬಾರಿಗೆ ಮೊಕದ್ದಮೆ
ಈವರೆಗೂ ಇಂತಹ ಮೂಢನಂಬಿಕೆಗಳ ಪ್ರಕರಣ ನಡೆದಾಗ ಜಾಗೃತಿ ಮೂಡಿಸಿ ಅಧಿಕಾರಿಗಳು ಸುಮ್ಮನಾಗುತ್ತಿದ್ದರು. ಮೊದಲ ಬಾರಿಗೆ ಹೈಕೋರ್ಟ್ ಸೂಚನೆ ಮೇರೆಗೆ ಗುಡಿಸಲು ನಾಶದ ಜತೆಗೆ ತುಮಕೂರು ಜಿಲ್ಲೆಯಲ್ಲಿ ಪೋಷಕರ ವಿರುದ್ದ ಪ್ರಕರಣ ದಾಖಲಿಸಲಾಗಿದೆ.
ಇಂತಹ ಮೂಢನಂಬಿಕೆಗೆ ಒತ್ತು ನೀಡಿದರೆ ಕಾನೂನು ರೀತಿಯಲ್ಲಿ ಮುಂದೆ ಗಂಭೀರ ಕ್ರಮವೂ ಆಗಲಿದೆ. ಕ್ರಿಮಿನಲ್ ಮೊಕದ್ದಮೆಯನ್ನು ಆಚರಿಸಿದವರು ಹಾಗೂ ಪೋಷಿಸಿದವರ ವಿರುದ್ದ ದಾಖಲಿಸಲಾಗುವುದು ಎಂದು ಪೊಲೀಸ್ ಇಲಾಖೆಯವರೂ ಕೂಡ ಹೇಳುತ್ತಿದ್ದಾರೆ.
ಗೊಲ್ಲ ಸಮುದಾಯ ಮೂಢನಂಬಿಕೆಯನ್ನೇ ಸಂಪ್ರದಾಯ ಎಂದು ಭಾವಿಸಿರುವುದು ದುರಾದೃಷ್ಟಕರ. ಮೂಢನಂಬಿಕೆಯಿದ ಬಾಣಂತಿ ಹಾಗೂ ಹಸು ಗೂಸನ್ನು ಊರಿನ ಹೊರಗಿನ ಗುಡಿಸಲಿನಲ್ಲಿ ಇಡುವುದು ಅಕ್ಷಮ್ಯ ಹಾಗೂ ಕಾನೂನು ಬಾಹಿರ. ಆಧುನಿಕ ಜಗತ್ತಿನಲ್ಲಿ ಇನ್ನೂ ಮೂಢನಂಬಿಕೆ ಆಚರಣೆ ತರವಲ್ಲ, ಹಳೇ ಸಂಪ್ರದಾಯವನ್ನೇ ನಂಬಿ ಕೂರುವುದು ಒಳಿತಲ್ಲ, ಗೊಲ್ಲ ಸಮುದಾಯ ಮೂಢ ನಂಬಿಕೆ ತೊರೆದು ಅಭಿವೃದ್ಧಿ ಹೊಂದುವತ್ತ ಚಿಂತಿಸಬೇಕು. ಸಮುದಾಯದ ಸುಶಿಕ್ಷಿತರು ಇಂತಹ ಮೂಢನಂಬಿಕೆಗಳ ಬಗ್ಗೆ ಸಮುದಾಯದವರಲ್ಲಿ ಜಾಗೃತಿ ಮೂಡಿಸಬೇಕಿದೆ. ಯಾವುದೇ ಭಾಗದಲ್ಲಿ ಇಂತಹ ಪ್ರಕರಣ ಕಂಡು ಬಂದಲ್ಲಿ ಸಂಬಂಧಿಸಿದವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲಾಗುವುದು ಎಂದು ತುಮಕೂರು ಜಿಲ್ಲಾ ನ್ಯಾಯಾಧೀಶರಾದ ಉಂಡಿ ಮಂಜುಳಾ ಶಿವಪ್ಪ ಅವರ ಎಚ್ಚರಿಕೆ ನೀಡುತ್ತಾರೆ.
ಸಮುದಾಯ ಭವನ ಬೇಕು
ಗೊಲ್ಲರ ಹಟ್ಟಿಗಳು ಎರಡೂ ಜಿಲ್ಲೆಗಳ ಬಹುತೇಕ ಹಳ್ಳಿಗಳಲ್ಲಿ ಇವೆ. ಈ ಗ್ರಾಮಗಳಲ್ಲಿ ಡಾ.ಅಂಬೇಡ್ಕರ್, ಡಾ.ಬಾಬು ಜಗಜೀವನರಾಂ ಸಮುದಾಯಭವನಗಳು ಇವೆ. ಆದರೆ ಗೊಲ್ಲ ಸಮುದಾಯಕ್ಕೆ ಪ್ರತ್ಯೇಕ ಭವನಗಳಿಲ್ಲ. ಭವನ ನಿರ್ಮಿಸಿದರೆ ಅವರೂ ಸಾಮಾಜಿಕ ಚಟುವಟಿಕೆಗಳನ್ನು ರೂಪಿಸಲು ಸಹಕಾರಿಯಾಗುತ್ತದೆ. ಈ ಬೇಡಿಕೆ ಹಲವು ವರ್ಷಗಳಿಂದ ಸರ್ಕಾರದ ಮುಂದೆ ಇದ್ದರೂ ಜಾರಿ ಮಾತ್ರ ಆಗಿಲ್ಲ ಎನ್ನುವ ಬೇಸರ ಸಮುದಾಯದಲ್ಲಿದೆ.