Tumkur News: ದೇವೇಗೌಡರ ತವರು ಹಾಸನಕ್ಕೆ ಕೆಎನ್ ರಾಜಣ್ಣ ಉಸ್ತುವಾರಿ; ನಿರೀಕ್ಷೆಯಂತೆ ಪರಮೇಶ್ವರ್‌ಗೆ ತುಮಕೂರು ಉಸ್ತುವಾರಿ
Hassan News: ಕೆಎನ್ ರಾಜಣ್ಣ ಅವರನ್ನು ಹಾಸನ ಜಿಲ್ಲೆಗೆ ಉಸ್ತುವಾರಿ ಮಾಡಿರುವುದು ರಾಜಕೀಯ ವಲಯದಲ್ಲಿ ಬಿಸಿಬಿಸಿ ಚರ್ಚೆಗೆ ಕಾರಣವಾಗಿದೆ.
ತುಮಕೂರು: ಕಳೆದ ಲೋಕಸಭೆ ಚುನಾವಣೆಯಲ್ಲಿ ಮಾಜಿ ಪ್ರಧಾನ ಮಂತ್ರಿ, ಜೆಡಿಎಸ್ ವರಿಷ್ಠ ಹೆಚ್‌ಡಿ ದೇವೇಗೌಡರ ಸೋಲಿಗೆ ಪ್ರಮುಖ ಕಾರಣರಾಗಿದ್ದ ಸಹಕಾರ ಸಚಿವ ಕೆಎನ್ ರಾಜಣ್ಣ ಅವರನ್ನು ದೇವೇಗೌಡರ ತವರು ಹಾಸನ ಜಿಲ್ಲಾ ಉಸ್ತುವಾರಿ ಸಚಿವರಾಗಿ ನೇಮಿಸಿ ಸರ್ಕಾರ ಆದೇಶ ಹೊರಡಿಸಿದೆ.
ದೇವೇಗೌಡರನ್ನು ಸೋಲಿಸಿದ್ದು ನಾನೇ, ನನ್ನ ಮನೆಗೆ ಬಂದು ಮಾತನಾಡದ ದೇವೇಗೌಡರನ್ನು ಸೋಲಿಸಬೇಕು ಎಂದು ತೀರ್ಮಾನಿಸಿದ್ದೆ. ಅದೇ ರೀತಿ ಅವರ ಸೋಲಿಗೆ ಪ್ರಮುಖ ಕಾರಣನಾದೆ ಎಂದು ಬಹಿರಂಗವಾಗಿಯೇ ಹೇಳಿಕೆ ನೀಡಿ ನಿಷ್ಠೂರವಾದಿ ರಾಜಕಾರಣಿ ಎನಿಸಿದ್ದ ಕೆಎನ್ ರಾಜಣ್ಣ ಅವರನ್ನು ಹಾಸನ ಜಿಲ್ಲೆಗೆ ಉಸ್ತುವಾರಿ ಮಾಡಿರುವುದು ರಾಜಕೀಯ ವಲಯದಲ್ಲಿ ಬಿಸಿಬಿಸಿ ಚರ್ಚೆಗೆ ಕಾರಣವಾಗಿದೆ.
ಇನ್ನು ನನ್ನ ಸೋಲಿಗೆ ಕಾರಣವಾದವರನ್ನು ಸೋಲಿಸಿ ಎಂದು ಮಧುಗಿರಿ ವಿಧಾನಸಭಾ ಕ್ಷೇತ್ರದಲ್ಲಿ ಪ್ರಚಾರ ಮಾಡಿದ್ದ ಮಾಜಿ ಪ್ರಧಾನಿ ಹೆಚ್‌ಡಿ ದೇವೇಗೌಡ ಅವರು, ಕೆಎನ್ ರಾಜಣ್ಣ ಅವರನ್ನು ಸೋಲಿಸಲು ಶತಾಯ ಗತಾಯ ಪ್ರಯತ್ನ ಮಾಡಿದ್ದರು. ನನಗೆ ಕಣ್ಣೀರು ಹಾಕಿಸಿದವರಿಗೆ ಈ ಬಾರಿ ಸೋಲಿನ ಶಿಕ್ಷೆ ನೀಡಿ ಅವರಿಗೂ ಕಣ್ಣೀರು ಹಾಕಿಸಬೇಕು ಎಂದು ಮತದಾರರಲ್ಲಿ ಮನವಿ ಮಾಡಿದ್ದರು. ಜೊತೆಗೆ ಮಾಜಿ ಮುಖ್ಯಮಂತ್ರಿ ಹೆಚ್‌ಡಿ ಕುಮಾರಸ್ವಾಮಿ ಸಹ ಪ್ರಚಾರ ನಡೆಸುವ ಮೂಲಕ ಕೆಎನ್‌ಆರ್‌ರನ್ನು ಸೋಲಿಸುವಂತೆ ಕರೆ ನೀಡಿದ್ದರು.
ಆದರೆ ದೇವೇಗೌಡ ಹಾಗೂ ಕುಮಾರಸ್ವಾಮಿ ಕರೆಯ ನಡುವೆಯೂ ಕೆಎನ್ ರಾಜಣ್ಣ 35 ಸಾವಿರಕ್ಕೂ ಹೆಚ್ಚು ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು. ಭರ್ಜರಿ ಅಂತರದಿಂದ ಗೆದ್ದ ಬಳಿಕ ಸಚಿವ ಸಂಪುಟ ಸೇರಿದ್ದ ಕೆಎನ್ ರಾಜಣ್ಣ ಅವರು ಸಹಕಾರ ಸಚಿವರಾಗಿ ಅಧಿಕಾರ ಸ್ವೀಕರಿಸಿದ್ದರು.
ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ ಹೊಡೆದ ಸಿಎಂ ಸಿದ್ದರಾಮಯ್ಯ
ಕೆಎನ್ ರಾಜಣ್ಣ ಅವರನ್ನು ಹಾಸನ ಜಿಲ್ಲಾ ಉಸ್ತುವಾರಿಯಾಗಿ ನೇಮಿಸುವ ಮೂಲಕ ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ ಹೊಡೆಯುವಲ್ಲಿ ಸಿಎಂ ಸಿದ್ದರಾಮಯ್ಯ ಯಶಸ್ವಿಯಾಗಿದ್ದಾರೆ ಎನ್ನಲಾಗುತ್ತಿದೆ. ಸಾಂಪ್ರದಾಯಿಕ ಎದುರಾಳಿಯಾಗಿರುವ ಜೆಡಿಎಸ್‌ನ ದಳಪತಿಗಳನ್ನು ಕಟ್ಟಿ ಹಾಕುವುದರೊಂದಿಗೆ ಪಕ್ಷವನ್ನು ಬಲಗೊಳಿಸುವ ಜವಾಬ್ದಾರಿಯನ್ನು ಆಪ್ತನಿಗೆ ವಹಿಸಿದ್ದಾರೆ ಎನ್ನಲಾಗಿದೆ.
ಹೆಚ್‌ಡಿ ಕುಮಾರಸ್ವಾಮಿಗೆ ಟಾಂಗ್ ನೀಡುವ ಸಮರ್ಥ ನಾಯಕನಿಗೆ ಜೆಡಿಎಸ್ ಭದ್ರಕೋಟೆಯ ಜವಾಬ್ದಾರಿ ವಹಿಸಿ ಮುಂದಿನ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸುವ ಹೊಣೆ ವಹಿಸಲಾಗಿದ್ದು, ಹಾವುಮುಂಗುಸಿಯಂತಿರುವ ದಳಪತಿಗಳನ್ನು ಮೆಟ್ಟಿ ಕಾಂಗ್ರೆಸ್‌ಗೆ ಭದ್ರ ನೆಲೆ ನಿರ್ಮಿಸುವ ನಿಟ್ಟಿನಲ್ಲಿ ಪಕ್ಷ ರಾಜಣ್ಣರಿಗೆ ಹೊಣೆಗಾರಿಕೆ ನೀಡಿದೆ.
ಜಿಲ್ಲೆಗೆ ತಪ್ಪಲಿದೆ ನೀರಿನ ಸಮಸ್ಯೆ
ಜೆಡಿಎಸ್ ವಿರುದ್ಧ ಕಟು ಟೀಕೆ ಮಾಡುವ ಕೆಎನ್ ರಾಜಣ್ಣ ಅವರಿಗೆ ಹಾಸನ ಉಸ್ತುವಾರಿ ವಹಿಸುವ ಮೂಲಕ ತುಮಕೂರು ಜಿಲ್ಲೆಯ ನೀರಿನ ಬವಣೆ ನೀಗಿಸಲು ಸರ್ಕಾರ ಮುಂದಾಗಿದೆ ಎನ್ನುವ ಅಭಿಪ್ರಾಯ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗಿದೆ. ಮಾಧುಸ್ವಾಮಿ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಕಾಲದಲ್ಲಿ ತುಮಕೂರು ಜಿಲ್ಲೆಗೆ ಹಂಚಿಕೆಯಾಗಿದ್ದ ಹೇಮಾವತಿ ನೀರನ್ನು ಸಂಪೂರ್ಣವಾಗಿ ಹರಿಸುವ ಪ್ರಯತ್ನ ಮಾಡಿದ್ದರು. ಮಳೆಯಿಂದ ಕೆರೆಕಟ್ಟೆಗಳು ತುಂಬಿದ್ದರಿಂದ ನಿಗದಿಯಾಗಿದ್ದ ನೀರು ಹರಿಸುವ ಅವಕಾಶವಿದ್ದರೂ ಸಂಗ್ರಹಕ್ಕೆ ಅವಕಾಶವಿಲ್ಲದಂತೆ ಆಗಿತ್ತು. ಈಗ ಕೆರೆ ಕಟ್ಟೆ ಖಾಲಿಯಾಗಿದ್ದು ತುಮಕೂರು ನಗರಕ್ಕೆ ನೀರು ಪೂರೈಸುವ ಬುಗುಡನಹಳ್ಳಿ ಕೆರೆಯಲ್ಲಿ ನೀರಿನ ಲಭ್ಯತೆ ಕಡಿಮೆಯಾಗಿದೆ. ನೀರಿನ ಹಾಹಾಕಾರ ತಡೆಯುವ ನಿಟ್ಟಿನಲ್ಲಿ ರಾಜಣ್ಣ ಅವರು ಹಾಸನ ಉಸ್ತುವಾರಿಯಾಗಿರುವುದು ಪರೋಕ್ಷವಾಗಿ ತುಮಕೂರು ಜಿಲ್ಲೆಗೆ ನೀರಾವರಿ ವಿಚಾರದ ಅನುಕೂಲವಾಗಲಿದೆ ಎನ್ನುವ ಮಾತು ಕೇಳಿ ಬರುತ್ತಿವೆ.
ನಿರೀಕ್ಷೆಯಂತೆ ಪರಂಗೆ ತುಮಕೂರು ಉಸ್ತುವಾರಿ
ಕೊರಟಗೆರೆ ಕ್ಷೇತ್ರದಿಂದ ಗೆಲುವು ಸಾಧಿಸಿ ಗೃಹ ಸಚಿವರಾಗಿ ಅಧಿಕಾರ ಸ್ವೀಕರಿಸಿರುವ ಡಾ.ಜಿ ಪರಮೇಶ್ವರ್ ಅವರಿಗೆ ನಿರೀಕ್ಷೆಯಂತೆ ಸರ್ಕಾರ ಜಿಲ್ಲಾ ಉಸ್ತುವಾರಿ ನೀಡಿದೆ. ಆ ಮೂಲಕ ಜಿಲ್ಲೆಯ ಅಭಿವೃದ್ಧಿಗೆ ಪರಮೇಶ್ವರ್ ಹೆಚ್ಚು ಒತ್ತು ನೀಡಲಿದ್ದಾರೆ ಎನ್ನಲಾಗಿದೆ. ತುಮಕೂರು ನಗರದಲ್ಲಿ ಆಮೆಗತಿಯಲ್ಲಿ ಸಾಗುತ್ತಿರುವ ಕೆಲವು ಸ್ಮಾರ್ಟ್ ಸಿಟಿ ಕಾಮಗಾರಿಗೆ ವೇಗ ನೀಡಬೇಕಿದೆ. ನಗರದ ಎಲ್ಲಾ ಬಡಾವಣೆಗಳಲ್ಲೂ ಉತ್ತಮ ರಸ್ತೆ ನಿರ್ಮಾಣ ಮಾಡಬೇಕಿದೆ. ನೀರಿನ ಸಮಸ್ಯೆ ನಿವಾರಣೆಗೆ ಒತ್ತು ನೀಡಬೇಕಿದೆ. ಸ್ವತಃ ಕ್ರೀಡಾಪಟುವಾಗಿರುವ ಸಚಿವ ಪರಮೇಶ್ವರ್ ಅವರು ಕ್ರೀಡಾಪಟುಗಳಿಗೆ ಬೇಕಾದ ಸೌಲಭ್ಯ, ಎಲ್ಲಾ ವಿಧದ ಕ್ರೀಡಾ ಅಂಕಣ ನಿರ್ಮಾಣ ಸೇರಿದಂತೆ ಜಿಲ್ಲೆಯ ಕ್ರೀಡಾಪಟುಗಳು ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಸ್ಪರ್ಧೆ ಮಾಡಲು ಬೇಕಾದ ತರಬೇತಿ ಜೊತೆಗೆ ಉತ್ತಮ ವಾತಾವರಣ ನಿರ್ಮಾಣ ಮಾಡಬೇಕು ಎಂದು ಕ್ರೀಡಾಪಟುಗಳ ಒತ್ತಾಯವಾಗಿದೆ.
ಇದಿಷ್ಟೇ ಅಲ್ಲದೆ ತುಮಕೂರು ಜಿಲ್ಲೆಯ ಹನ್ನೊಂದು ಕ್ಷೇತ್ರದಲ್ಲೂ ಅಭಿವೃದ್ಧಿಗೆ ಆದ್ಯತೆ ನೀಡಬೇಕಿದೆ. ಪ್ರತಿ ತಾಲ್ಲೂಕಿಗೂ ಉತ್ತಮ ಯೋಜನೆ, ಹೆಚ್ಚಿನ ಅನುದಾನ ತಂದು ಎಲ್ಲಾ ಕ್ಷೇತ್ರಗಳ ಅಭಿವೃದ್ಧಿಗೆ ಜಿಲ್ಲಾ ಉಸ್ತುವಾರಿ ಸಚಿವ ಪರಮೇಶ್ವರ್ ಶ್ರಮಿಸಬೇಕು ಎಂದು ಜಿಲ್ಲೆಯ ಜನರ ಆಗ್ರಹವಾಗಿದೆ.