Tumkur News: ಗೃಹ ಸಚಿವ ಡಾ.ಪರಮೇಶ್ವರ ಕ್ಷೇತ್ರದಲ್ಲಿ ಕಳ್ಳತನ, ಆರೋಪಿ ಬಂಧನ; ಜೀವ ಪಣಕ್ಕಿಟ್ಟು ಸಿನಿಮೀಯ ಶೈಲಿಯಲ್ಲಿ ಸೆರೆ ಹಿಡಿದ ಪೇದೆ-tumkur news koratagere theft case police arrest prime accused at bangalore cinema style tumkur sp ashok appreciate ,ಕರ್ನಾಟಕ ಸುದ್ದಿ
ಕನ್ನಡ ಸುದ್ದಿ  /  ಕರ್ನಾಟಕ  /  Tumkur News: ಗೃಹ ಸಚಿವ ಡಾ.ಪರಮೇಶ್ವರ ಕ್ಷೇತ್ರದಲ್ಲಿ ಕಳ್ಳತನ, ಆರೋಪಿ ಬಂಧನ; ಜೀವ ಪಣಕ್ಕಿಟ್ಟು ಸಿನಿಮೀಯ ಶೈಲಿಯಲ್ಲಿ ಸೆರೆ ಹಿಡಿದ ಪೇದೆ

Tumkur News: ಗೃಹ ಸಚಿವ ಡಾ.ಪರಮೇಶ್ವರ ಕ್ಷೇತ್ರದಲ್ಲಿ ಕಳ್ಳತನ, ಆರೋಪಿ ಬಂಧನ; ಜೀವ ಪಣಕ್ಕಿಟ್ಟು ಸಿನಿಮೀಯ ಶೈಲಿಯಲ್ಲಿ ಸೆರೆ ಹಿಡಿದ ಪೇದೆ

Koratagere Crime ತುಮಕೂರು ಜಿಲ್ಲೆ ಕೊರಟಗೆರೆಯಲ್ಲಿ ನಡೆದಿದ್ದ ಅಪರಾಧ ಪ್ರಕರಣದ ಆರೋಪಿಯನ್ನು ಪೊಲೀಸ್‌ ಪೇದೆ ಜೀವ ಪಣಕ್ಕಿಟ್ಟು ಸಿನಿಮೀಯ ರೀತಿಯಲ್ಲಿ ಸೆರೆ ಹಿಡಿದಿದ್ದಾರೆ.ವರದಿ: ಈಶ್ವರ್‌, ತುಮಕೂರು

ಕಳ್ಳ ಮಂಜನನ್ನು ಹಿಡಿದ ಪೇದೆ ದೊಡ್ಡಲಿಂಗಯ್ಯ ಅವರಿಗೆ ತುಮಕೂರು ಎಸ್ಪಿ ಅಶೋಕ್‌ ಪ್ರಮಾಣ ಪತ್ರ ವಿತರಿಸಿದರು.
ಕಳ್ಳ ಮಂಜನನ್ನು ಹಿಡಿದ ಪೇದೆ ದೊಡ್ಡಲಿಂಗಯ್ಯ ಅವರಿಗೆ ತುಮಕೂರು ಎಸ್ಪಿ ಅಶೋಕ್‌ ಪ್ರಮಾಣ ಪತ್ರ ವಿತರಿಸಿದರು.

ತುಮಕೂರು: ಗೃಹ ಸಚಿವ ಡಾ.ಪರಮೇಶ್ವರ್‌ ಅವರ ಸ್ವಕ್ಷೇತ್ರವಾದ ಕೊರಟಗೆರೆ ಪಟ್ಟಣದಲ್ಲಿ ಕಳೆದ ತಿಂಗಳು ನಡೆದಿದ್ದ ಕಳ್ಳತನ ಪ್ರಕರಣದ ಆರೋಪಿ ಬೆಂಗಳೂರಿನ ಸದಾಶಿವ ನಗರದ ಟ್ರಾಫಿಕ್ ಸಿಗ್ನಲ್‌ನಲ್ಲಿ ದ್ವಿಚಕ್ರ ವಾಹನದ ಮೂಲಕ ಆಗಮಿಸಿದ ವೇಳೆ ಕೊರಟಗೆರೆ ಪೊಲೀಸ್ ಠಾಣೆಯ ಪೇದೆ ದೊಡ್ಡಲಿಂಗಯ್ಯ ಸಿನಿಮಿಯ ರೀತಿಯಲ್ಲಿ ಹಿಡಿದಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ರಾಮನಗರ, ಕೋಳಾಲ ಮತ್ತು ತುಮಕೂರು ಜಿಲ್ಲೆಯ ಹತ್ತಾರು ಪೊಲೀಸ್ ಠಾಣೆಯಲ್ಲಿ ನಟೋರಿಯಸ್ ರೌಡಿ ಮತ್ತು ಖತರ್ನಾಕ್ ಕಳ್ಳ ಮಂಜುನಾಥ (46) ಅಲಿಯಾಸ್ ಹೊಟ್ಟೆ ಮಂಜನ ಮೇಲೆ 75 ಕ್ಕೂ ಹೆಚ್ಚು ಕಳ್ಳತನ ಪ್ರಕರಣ ದಾಖಲಾಗಿದೆ, ನಟೋರಿಯಸ್ ರೌಡಿಯನ್ನು ಪೊಲೀಸ್ ಪೇದೆ ದೊಡ್ಡಲಿಂಗಯ್ಯ ತನ್ನ ಪ್ರಾಣವನ್ನೇ ಪಣಕ್ಕಿಟ್ಟು ಸಿನಿಮೀಯ ಶೈಲಿಯಲ್ಲಿ ಹಿಡಿದು ವಶಕ್ಕೆ ಪಡೆದಿದ್ದಾರೆ.

ಪೇದೆ ಮೇಲೆ ಆರೋಪಿಯಿಂದ ಹಲ್ಲೆ

ಸದಾಶಿವ ನಗರದ ಟ್ರಾಫಿಕ್‌ನಲ್ಲಿ ಕೊರಟಗೆರೆ ಪೇದೆ ದೊಡ್ಡಲಿಂಗಯ್ಯ ಆರೋಪಿ ಹೊಟ್ಟೆ ಮಂಜನನ್ನು ನಿಲ್ಲಿಸಲು ಪ್ರಯತ್ನಿಸಿದ ವೇಳೆ ಪೇದೆ ಮೇಲೆಯೇ ಬೈಕ್ ಹತ್ತಿಸಲು ಮುಂದಾಗಿದ್ದಾನೆ, ವಾಹನ ಮೇಲೆ ಬಂದ್ರು ಆರೋಪಿಯನ್ನು ಬಿಡದೆ ಆತನ ಕಾಲನ್ನು ಗಟ್ಟಿಯಾಗಿ ಹಿಡಿದುಕೊಂಡ ಮೇಲು ವಾಹನ ವೇಗವಾಗಿ ಚಲಾಯಿಸಿದ್ದಾನೆ, ನಂತರ ಸಂಚಾರಿ ಠಾಣೆಯ ಮಹಿಳಾ ಎಎಸೈ ಮೇಲೆಯು ಆರೋಪಿ ಹಲ್ಲೆ ಮಾಡಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಡಿಸಿಸಿ ಬ್ಯಾಂಕ್ ಬಳಿ ವೃದ್ಧೆಯ ಸರ ಕಳ್ಳತನ

ಕೊರಟಗೆರೆ ಪಟ್ಟಣದ ಆಸ್ಪತ್ರೆಗೆ ಚಿಕ್ಕನಹಳ್ಳಿಯ ಗಿರಿಜಮ್ಮ (76) ಬಂದಾಗ ವಂಚಕ ಮಂಜುನಾಥ ನಿಮಗೆ ವೃದ್ಧಾಪ್ಯ ವೇತನ ಮಾಡಿಕೊಡುವ ಆಮಿಷವೊಡ್ಡಿ ಡಿಸಿಸಿ ಬ್ಯಾಂಕ್‌ನ ಬಳಿಗೆ ಕರೆದೊಯ್ದು ಬಂಗಾರ ಸರ ನೋಡಿದ್ರೆ ಕೆಲಸ ಆಗೋದಿಲ್ಲ ಅಂತಾ ಹೇಳಿ ವೃದ್ಧೆಯ ಕೊರಳಿನಲ್ಲಿದ್ದ ಬಂಗಾರ ಸರ ಬಿಚ್ಚಿಸಿ ಬ್ಯಾಗ್‌ನಲ್ಲಿ ಇಟ್ಟುಕೊಳ್ಳುವಂತೆ ತಾನೇ ಬ್ಯಾಗ್ ನೀಡ್ತಾನೆ, ಬ್ಯಾಂಕ್‌ನೊಳಗೆ ಹೋದ ಕಳ್ಳ ಮತ್ತೆ ವೃದ್ಧೆಗೆ ಕಾಣದಂತೆ ಬ್ಯಾಗ್ ಕಬಳಿಸಿ ಪರಾರಿ ಆದ ಪ್ರಕರಣದ ಮೇಲೆ ಪೊಲೀಸರಿಂದ ತನಿಖೆ ನಡೆಯುತ್ತಿತ್ತು.

45 ದಿನಗಳ ಕಾಲ ಪೊಲೀಸರ ಹುಡುಕಾಟ

ಕೊರಟಗೆರೆ ವೃದ್ಧೆಯ ಕಳ್ಳತನದ ಪ್ರಕರಣದ ಬೆನ್ನತ್ತಿದ ಕೊರಟಗೆರೆ ಪೊಲೀಸರ ತಂಡ ಕೊರಟಗೆರೆ ಪಟ್ಟಣ, ತುಮಕೂರು, ಊರ್ಡಿಗೆರೆ, ಬೆಂಗಳೂರು, ದಾಬಸ್‌ಪೇಟೆ ಮತ್ತು ನೆಲಮಂಗಲದ ರಸ್ತೆಗಳಲ್ಲಿ 45 ದಿನ ಹುಡುಕಾಟ ನಡೆಸಿ ಸಿಸಿಟಿವಿ ಪರಿಶೀಲಿಸಿದ್ದಾರೆ, ತುಮಕೂರಿನ ಕಮಾಂಡ್ ಸೆಂಟರ್ ಸಿಸಿ ಟಿವಿಯ ವೀಡಿಯೊ ಮತ್ತು ನೆಲಮಂಗಲದ ಟ್ರಾಫಿಕ್ ಮೇನೆಜ್‌ಮೆಂಟ್ ಸಹಾಯದಿಂದ ಆರೋಪಿಯನ್ನು ಕೊರಟಗೆರೆ ಪೊಲೀಸರ ಕಠಿಣ ಪರಿಶ್ರಮದಿಂದ ಬಂಧಿಸುವಲ್ಲಿ ಯಶಸ್ವಿ ಆಗಿರುವ ಘಟನೆ ನಡೆದಿದೆ.

ನೆಲಮಂಗಲ ತಾಲೂಕಿನ ಹುಳಿಚಿಕ್ಕನ ಹಳ್ಳಿಯ ಮಂಜುನಾಥ (46) ಅಲಿಯಾಸ್ ಹೊಟ್ಟೆ ಮಂಜ ಬಂಧಿತ ಆರೋಪಿ, ಕೊರಟಗೆರೆ ಪೊಲೀಸ್ ಠಾಣೆಯಲ್ಲಿ ಚಿಕ್ಕನಹಳ್ಳಿ ಗ್ರಾಮದ ವೃದ್ಧೆ ಗಿರಿಜಮ್ಮನ ದೂರಿನ ಅನ್ವಯ ಜು.20 ರಂದು ಪ್ರಕರಣ ದಾಖಲಾಗಿದೆ, ಸಿಪಿಐ ಅನಿಲ್ ಮತ್ತು ಪಿಎಸೈ ಚೇತನ್ ನೇತೃತ್ವದಲ್ಲಿ ತನಿಖೆ ನಡೆದಿತ್ತು, ತನಿಖೆಯಲ್ಲಿ ಎಎಸೈ ಗಂಗಾಧರಪ್ಪ, ಪೇದೆ ದೊಡ್ಡಲಿಂಗಯ್ಯ, ಮೋಹನ್, ಸಿದ್ದರಾಮ, ಪ್ರದೀಪ ಸೇರಿದಂತೆ ಇತರರು ಭಾಗಿಯಾಗಿದ್ದರು.

ಎಸ್‌ಪಿ ಪ್ರಶಂಸೆ

ಕುಖ್ಯಾತ ಆರೋಪಿ ಮಂಜುನಾಥ್ ಅಲಿಯಾಸ್ ಹೊಟ್ಟೆ ಮಂಜನ ಬಂಧಿಸಿದ ಕೊರಟಗೆರೆ ಪೊಲೀಸ್ ಠಾಣೆಯ ಸಿಬ್ಬಂದಿ ದೊಡ್ಡಲಿಂಗಯ್ಯ ಮತ್ತು ಮೋಹನ್ ಅವರಿಗೆ ಜಿಲ್ಲಾ ಪೊಲೀಸ್ ಅಧೀಕ್ಷಕ ಅಶೋಕ್.ಕೆ.ವಿ. ಅವರು ಮುಕ್ತ ಕಂಠದಿಂದ ಶ್ಲಾಘಿಸಿ ಪ್ರಶಂಸಾ ಪತ್ರ ವಿತರಿಸಿದರು. ಇನ್ನು ಮುಂದೆಯೂ ಇದೇ ರೀತಿ ತಮ್ಮ ಉತ್ತಮ ಕಾರ್ಯ ನಿರ್ವಹಿಸುವಂತೆ ಸೂಚಿಸಿದರು.

ವರದಿ: ಈಶ್ವರ್‌, ತುಮಕೂರು