Tumkur News: ಕುಣಿಗಲ್‌ನಲ್ಲಿ ಗೃಹಲಕ್ಷ್ಮಿ ನೋಂದಣಿಗೆ ರಶ್; ದಾಖಲೆ ಸರಿಪಡಿಸಲು ಮಹಿಳೆಯರ ಪರದಾಟ
Gruha Lakshmi: ಗೃಹಲಕ್ಷ್ಮಿ ಯೋಜನೆಯ ಸೌಲಭ್ಯ ಪಡೆಯಲು ಆಹಾರ ಇಲಾಖೆ ಸೇರಿದಂತೆ ಜಿಲ್ಲೆಯ ಕುಣಿಗಲ್ ಪಟ್ಟಣದಲ್ಲಿರುವ ಆಧಾರ್ ಸೇವಾ ಕೇಂದ್ರದಲ್ಲಿ ಸ್ತ್ರೀಯರು ಹೆಚ್ಚಿನ ಸಂಖ್ಯೆಯಲ್ಲಿ ಜಮಾವಣೆಗೊಂಡು ದಾಖಲೆ ಸರಿಪಡಿಸಲು ಪರದಾಡಿದರು.
ತುಮಕೂರು: ಗೃಹಲಕ್ಷ್ಮಿ ಯೋಜನೆ ಘೋಷಣೆಯಾದ ನಂತರ ಆಹಾರ ಇಲಾಖೆ ಸೇರಿದಂತೆ ಜಿಲ್ಲೆಯ ಕುಣಿಗಲ್ ಪಟ್ಟಣದಲ್ಲಿರುವ ಆಧಾರ್ ಸೇವಾ ಕೇಂದ್ರದಲ್ಲಿ ಸ್ತ್ರೀಯರು ಹೆಚ್ಚಿನ ಸಂಖ್ಯೆಯಲ್ಲಿ ಜಮಾವಣೆಗೊಂಡು ದಾಖಲೆ ಸರಿಪಡಿಸಲು ಪರದಾಡಿದರು.
ಗೃಹಲಕ್ಷ್ಮಿ ಯೋಜನೆಯಡಿಯಲ್ಲಿ ಫಲಾನುಭವಿಯು ಪಡಿತರ ಕಾರ್ಡ್ನಲ್ಲಿ ಯಜಮಾನಿಯೇ ಆಗಿರಬೇಕಿದೆ, ಈ ಹಿನ್ನೆಲೆಯಲ್ಲಿ ಕಳೆದ ಸುಮಾರು ವರ್ಷಗಳಿಂದ ಪಡಿತರ ಕಾರ್ಡ್ಗಳಲ್ಲಿ ಅಂದು ಕಾರ್ಡ್ ಮಾಡಿಸಿದಾಗ ಮನೆಯ ಹಿರಿಯರನ್ನೆ ಯಜಮಾನ ಎಂದು ತೋರಿಸಲಾಗಿತ್ತು, ಈಗ ಯಜಮಾನನ ಕಾಲ ಹೋಗಿ ಯಜಮಾನಿ ಕಾಲ ಬಂದಿದ್ದರಿಂದ ಪಡಿತರ ಕಾರ್ಡ್ಗಳಲ್ಲಿ ಯಜಮಾನನ ಬದಲಾಗಿ ಯಜಮಾನಿ ನೋಂದಣಿಗೆ ಪಟ್ಟಣದ ತಾಲೂಕು ಆಡಳಿತ ಸೌಧದಲ್ಲಿನ ಆಹಾರ ಶಾಖೆಯ ಮುಂದೆ ಮಹಿಳೆಯರೂ ಸೇರಿದಂತೆ ಪುರುಷರ ಸಾಲುಗಟ್ಟಿ ನಿಲ್ಲತೊಡಗಿದ್ದಾರೆ.
ಕೆಲವರು ಕಚೇರಿಯೊಳಗೆ ನುಗ್ಗಲು ಮುಂದಾದರು, ಕೊನೆಗೆ ಆಹಾರ ಶಾಖೆ ಸಿಬ್ಬಂದಿ ಪರಿಸ್ಥಿತಿ ನಿಯಂತ್ರಿಸಲು ಪೊಲೀಸ್ ತುರ್ತು ಸಹಾಯವಾಣಿಗೆ ಕರೆ ಮಾಡಿ 112ರ ಸಿಬ್ಬಂದಿ ಕರೆಸಿಕೊಂಡು ಸರತಿ ಸಾಲಿನಲ್ಲಿ ನಿಲ್ಲುವಂತೆ ಜಂಗುಳಿ ನಿಯಂತ್ರಿಸಬೇಕಾಯಿತು, ಪುಟ್ಟಮಕ್ಕಳೊಂದಿಗೆ ಆಗಮಿಸಿದ್ದ ತಾಯಂದಿರು ಕಚೇರಿಯ ಪಡಸಾಲೆಯಲ್ಲೆ ಮಕ್ಕಳಿಗೆ ತಿಂಡಿ ತಿನ್ನಿಸುವುದು ಸೇರಿದಂತೆ ಇತರೆ ಕಾರ್ಯ ನೇರವೇರಿಸಿದರು, ಕಚೇರಿಯಲ್ಲಿ ಬಂದಂತಹ ಜನತೆಗೆ ಕುಡಿಯುವ ನೀರಿನ ವ್ಯವಸ್ಥೆ ಇಲ್ಲದೆ ಕೆಲವರು ಪರದಾಡಿದರು.
ಕುಣಿಗಲ್ ತಾಲೂಕಿನ ಕಾಮನಹಳ್ಳಿಯ ಕೃಷ್ಣಪ್ಪ ಎಂಬಾತ ಮಾತನಾಡಿ, ಸ್ವಾಮಿ ಪರಿಡತರ ಕಾರ್ಡ್ನಲ್ಲಿ ನಮ್ಮ ತಾತನನ್ನು ಯಜಮಾನ ಅಂತ ತೋರಿಸಿದ್ದು, ಇದೀಗ ಯಜಮಾನನಿಗೆ ದುಡ್ಡು ಬರಲ್ವಂತೆ, ಹಾಗಾಗಿ ಅಜ್ಜಿ ಹೆಸರು ನೋಂದಾಯಿಸಲು ಬಂದಿದ್ದೇವೆ, ಇನ್ನೇನಿದ್ದರೂ ಯಜಮಾನಿಯ ಕಾಲ ಸ್ವಾಮಿ, ಯಜಮಾನರಿಗೆ ಬೆಲೆ ಇಲ್ದಂಗಾತು ಎಂದರು.
ಅಂಚಿಪುರದಿಂದ ಬಂದಿದ್ದ ಮಹಿಳೆ ಲಕ್ಷ್ಮಮ್ಮ ಮಾತನಾಡಿ, ನಮ್ಮ ಕಾರ್ಡ್ ಇದೆ, ಆದರೆ ಯಜಮಾನಿ ಎಂದು ನಮೂದು ಸರಿಯಾಗಿಲ್ಲ, ಸರಿ ಮಾಡಿಸಲು ಬಂದಿದ್ದೇನೆ, ನಮ್ಮೂರಿನ ಗ್ರಾಮ ಪಂಚಾಯತ್ನಲ್ಲೆ ಈ ಕೆಲಸ ಮಾಡಿದರೆ ದೂರದಿಂದ ಬರೊದು ತಪ್ಪುತ್ತೆ, ಸರ್ಕಾರ ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು, ಒಂದು ದಿನ ಕೆಲಸ ಬಿಟ್ಟು, ದನಕರು ಬಿಟ್ಟು ಬಂದು ಇಲ್ಲಿ ನಿಲ್ಲಬೇಕಿದೆ ಎಂದು ಸಮಸ್ಯೆ ತೋಡಿಕೊಂಡರು.
ಆಹಾರ ಶಿರಸ್ತೆದಾರ್ ರಾಜು ಮಾತನಾಡಿ, ಗೃಹಲಕ್ಷ್ಮಿ ಯೋಜನೆಯಡಿಯಲ್ಲಿ ಯಜಮಾನಿ ತಿದ್ದುಪಡಿಗೆ ಹೆಚ್ಚಿನ ಫಲಾನುಭವಿಗಳು ಬಂದಿದ್ದಾರೆ, ಎಲ್ಲಾ ಸಿಬ್ಬಂದಿ ಫಲಾನುಭವಿಯ ಸಮಸ್ಯೆ ನಿರ್ವಹಣೆಗೆ ಶ್ರಮಿಸುತ್ತಿದ್ದು, ಸಮರ್ಪಕ ದಾಖಲೆ ನೀಡಿದ ಕೂಡಲೆ ಸಮಸ್ಯೆಗೆ ಸ್ಪಂದಿಸಲಾಗುತ್ತಿದೆ, ಯೋಜನೆ ನೋಂದಣಿ ಆರಂಭವಾದ್ದರಿಂದಲೇ ತಿದ್ದುಪಡಿಗೆ ಫಲಾನುಭವಿಗಳು ಬರುತ್ತಿದ್ದಾರೆ ಎಂದರು.
ಈ ಮಧ್ಯೆ ಆಧಾರ್ ಸೇವಾ ಕೇಂದ್ರದಲ್ಲೂ ಸ್ತ್ರೀಶಕ್ತಿ ಜಮಾವಣೆ ಹೆಚ್ಚಿದ್ದು ಆಧಾರ್‌ನಲ್ಲಿ ಮೊಬೈಲ್ ನಂಬರ್ ಸೇರ್ಪಡೆ ಇತರೆ ಬದಲಾವಣೆಗೆ ಸಾಲುಗಟ್ಟಿ ನಿಂತಿದ್ದರು, ಪುರಸಭೆ ಕಚೇರಿಯಲ್ಲಿ ಗೃಹಲಕ್ಷ್ಮಿ ಯೋಜನೆಯಡಿಯಲ್ಲಿ ನೋಂದಣಿ ಕೌಂಟರ್‌ನಲ್ಲಿ ಸರ್ವರ್ ಕಾಟ ಸೋಮವಾರವೂ ಕಾಡಿದ್ದು ಒಬ್ಬ ಫಲಾನುಭವಿ ನೋಂದಾಯಿಸಲು ಕನಿಷ್ಟ 15 ನಿಮಿಷದಿಂದ 20 ನಿಮಿಷ ಹಿಡಿಯಿತು, ಕೆಲಕಾಲ ಸರ್ವರ್ ಸಮಸ್ಯೆಯಿಂದಾಗಿ ನೋಂದಣಿ ಕಾರ್ಯದಲ್ಲಿ ವಿಳಂಬವಾಯಿತು, ಕೆಲ ಪುರಸಭೆ ಸದಸ್ಯರು ತಮ್ಮ ವಾರ್ಡ್ನ ಫಲಾನುಭವಿಗಳ ಸಮಸ್ಯೆ ನಿವಾರಿಸಲು ನೋಂದಣಿ ಕೇಂದ್ರದಲ್ಲೆ ಮೊಕ್ಕಾಂ ಮಾಡಿ ಸಮಾಧಾನ ಹೇಳುವಂತಾಯಿತು.
ವರದಿ: ಈಶ್ವರ್ ಎಂ