Nagara Panchami 2024: ನಾಗರ ಕಲ್ಲು, ಹುತ್ತಗಳಿಗೆ ಹಾಲೆರದ ಭಕ್ತರು, ತುಮಕೂರಲ್ಲಿ ಶ್ರದ್ಧಾ ಭಕ್ತಿಯಿಂದ ನಾಗರಪಂಚಮಿ ಹಬ್ಬ ಆಚರಣೆ-tumkur news nagara panchami 2024 celebrated across tumkur district by pouring milk to naga idols offering pooja ,ಕರ್ನಾಟಕ ಸುದ್ದಿ
ಕನ್ನಡ ಸುದ್ದಿ  /  ಕರ್ನಾಟಕ  /  Nagara Panchami 2024: ನಾಗರ ಕಲ್ಲು, ಹುತ್ತಗಳಿಗೆ ಹಾಲೆರದ ಭಕ್ತರು, ತುಮಕೂರಲ್ಲಿ ಶ್ರದ್ಧಾ ಭಕ್ತಿಯಿಂದ ನಾಗರಪಂಚಮಿ ಹಬ್ಬ ಆಚರಣೆ

Nagara Panchami 2024: ನಾಗರ ಕಲ್ಲು, ಹುತ್ತಗಳಿಗೆ ಹಾಲೆರದ ಭಕ್ತರು, ತುಮಕೂರಲ್ಲಿ ಶ್ರದ್ಧಾ ಭಕ್ತಿಯಿಂದ ನಾಗರಪಂಚಮಿ ಹಬ್ಬ ಆಚರಣೆ

Tumkur News ತುಮಕೂರು ಜಿಲ್ಲೆಯಲ್ಲಿ( Tumkur) ನಾಗರಪಂಚಮಿಯನ್ನು(Nagara Panchami 2024) ಸಡಗರದಿಂದ ಆಚರಿಸಲಾಯಿತು.ವರದಿ: ಈಶ್ವರ್‌ ತುಮಕೂರು

ತುಮಕೂರು ಜಿಲ್ಲೆಯ ನಾನಾ ಕಡೆಗಳಲ್ಲಿ ನಾಗರಪಂಚಮಿ ಆಚರಣೆ ಜೋರಾಗಿತ್ತು.
ತುಮಕೂರು ಜಿಲ್ಲೆಯ ನಾನಾ ಕಡೆಗಳಲ್ಲಿ ನಾಗರಪಂಚಮಿ ಆಚರಣೆ ಜೋರಾಗಿತ್ತು.

ತುಮಕೂರು: ಶ್ರಾವಣ ಮಾಸ ಎಂದರೆ ಅದು ಹಬ್ಬಗಳ ಸಾಲು. ಅದರಲ್ಲಿ ಮೊದಲನೆಯ ಹಬ್ಬವೇ ನಾಗರಪಂಚಮಿ. ಈ ಹಬ್ಬ ಕರ್ನಾಟಕದಲ್ಲಿ ಎಲ್ಲೆಡೆ ಆಚರಿಸಲಾಗುತ್ತದೆ. ಇದರಲ್ಲಿ ಚತುರ್ಥಿ ದಿನ ಹಾಗೂ ಪಂಚಮಿ ದಿನ ಹಾಲು ಎರೆಯಲಾಗುತ್ತದೆ. ಅದರಲ್ಲಿ ಪಂಚಮಿ ದಿನಕ್ಕೆ ಎಲ್ಲಿಲ್ಲದ ಮಹತ್ವ. ನಾಗರಕಟ್ಟೆ ಅಥವಾ ಮೂರ್ತಿಗೆ ಹಾಲು ಎರೆಯುವುದು ವಾಡಿಕೆ. ಕೆಲವರು ಮನೆಯಲ್ಲಿಯೇ ಬೆಳ್ಳಿಯ ನಾಗಪ್ಪನಿಗೂ ಹಾಲು ಎರೆಯುತ್ತಾರೆ. ಆ ಮೂಲಕ ಸಡಗರ, ಸಂಭ್ರಮದಿಂದ ನಾಗರಪಂಚಮಿ ಆಚರಿಸುತ್ತಾರೆ. ನಾಗರಪಂಚಮಿಯಲ್ಲಿ ಉಂಡೆ, ತಂಬಿಟ್ಟು ಮಾಡಿ ನೀಡಲಾಗುತ್ತದೆ. ಅದರಲ್ಲೂ ತವರುಮನೆಯಿಂದ ಉಂಡೆಯನ್ನು ಸಹೋದರಿಯರಿಗೆ ನೀಡುವ ಸಂಪ್ರದಾಯ ಹಲವು ಕಡೆ ಇದೆ. ಕೊಬ್ಬರಿ ಬಟ್ಟಲಿಗೆ ದಾರಿ ಕಟ್ಟಿಕೊಂಡು ಸುತ್ತುವ ಪರಿಪಾಠವೂ ಇದೆ. ಕೆಲವೆಡೆ ಜೋಕಾಲಿ ಹಾಕಿ ಪಂಚಮಿಗೆ ಆಡುವುದು. ಆ ಮೂಲಕ ಹಿರಿಯರು, ಮಕ್ಕಳು ಒಂದಾಗಿ ಖುಷಿಯ ಕ್ಷಣಗಳನ್ನು ಕಳೆಯುವುದು ಈ ಹಬ್ಬದ ವಿಶೇಷಗಳು.

ತುಮಕೂರು ಜಿಲ್ಲೆಯೂ ಸಾಂಸ್ಕೃತಿಕ ಹಾಗೂ ಧಾರ್ಮಿಕವಾಗಿ ಮಹತ್ವ ಪಡೆದ ಜಿಲ್ಲೆ. ಕಲ್ಪತರು ನಾಡಿನಲ್ಲಿ ಹಲವು ಹಬ್ಬಗಳ ಆಚರಣೆ ಇದೆ. ಇದರಲ್ಲಿ ನಾಗರಪಂಚಮಿಯನ್ನೂ ಜಿಲ್ಲೆಯ ನಾನಾ ಭಾಗಗಳಲ್ಲಿ ಆಚರಿಸಲಾಗುತ್ತದೆ. ಶುಕ್ರವಾರ ಬೆಳಗ್ಗೆಯೇ ತಮ್ಮ ಊರಿನ ಇಲ್ಲವೇ ಬಡಾವಣೆಯ ಸಮೀಪದ ನಾಗಬನ ಇಲ್ಲವೇ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ತೆರಳಿ ಜನ ಹಾಲು ಎರೆದು ಹಬ್ಬ ಆಚರಿಸಿದರು.

ಹಿಂದೂಗಳ ಪವಿತ್ರ ಹಬ್ಬಗಳಲ್ಲಿ ಒಂದಾದ ನಾಗರಪಂಚಮಿ ಹಬ್ಬವನ್ನು ನಗರ ಸೇರಿದಂತೆ ಜಿಲ್ಲೆಯಾದ್ಯಂತ ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು.

ಮಹಿಳೆಯರು, ಪುರುಷರು, ಮಕ್ಕಳು, ವೃದ್ಧರು ಸೇರಿದಂತೆ ಕುಟುಂಬ ಸಮೇತರಾಗಿ ಹುತ್ತಗಳು ಹಾಗೂ ನಾಗರ ಕಲ್ಲು ಇರುವ ಸ್ಥಳಗಳಿಗೆ ತೆರಳಿ ಹೂವುಗಳಿಂದ ಅಲಂಕಾರ ಮಾಡಿ ಹುತ್ತಕ್ಕೆ ಹಾಲೆರೆದು ವಿಶೇಷ ಪೂಜೆ ಸಲ್ಲಿಸುವ ಮೂಲಕ ನಾಗರ ಪಂಚಮಿ ಆಚರಿಸಿ ಭಕ್ತಿ ಸಮರ್ಪಿಸಿದರು.

ನಗರದ ಕೋಡಿ ಬಸವಣ್ಣ ದೇವಾಲಯದ ಹಿಂಭಾಗದಲ್ಲಿರುವ ಅಮಾನಿಕೆರೆ ಏರಿ ಮೇಲಿನ ಹುತ್ತಗಳಿಗೆ, ಬಾರ್‌ಲೈನ್ ರಸ್ತೆಯಲ್ಲಿರುವ ಹಳ್ಳಿಗಳ ಸಮೀಪವಿರುವ ನಾಗರಕಲ್ಲುಗಳು ಸೇರಿದಂತೆ ವಿವಿಧ ಬಡಾವಣೆಗಳ ದೇವಾಲಯಗಳ ಬಳಿ ಇರುವ ಹುತ್ತಗಳು ಹಾಗೂ ನಾಗರ ಕಲ್ಲುಗಳಿಗೆ ಭಕ್ತಾದಿಗಳು ಬೆಳಗ್ಗೆಯಿಂದಲೇ ವಿಶೇಷ ಪೂಜೆ ಸಲ್ಲಿಸಿ ಹಾಲು ಮತ್ತು ತನಿಯೆರೆದು ಭಕ್ತಿ ಸಮರ್ಪಿಸುತ್ತಿದ್ದ ದೃಶ್ಯ ಕಂಡು ಬಂದವು.

ಬೆಳಗ್ಗೆಯಿಂದಲೇ ಶ್ರದ್ಧಾ ಭಕ್ತಿಯಿಂದ ಹುತ್ತಗಳಿಗೆ ಪೂಜೆ ಸಲ್ಲಿಸಿ ನಾಗ ದೋಷಗಳಿಂದ ಮುಕ್ತರನ್ನಾಗಿ ಮಾಡುವಂತೆ ಭಕ್ತಾದಿಗಳು ಪ್ರಾರ್ಥಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು, ನಾಗಾರಾಧನೆ ಭಾರತದ ಸಂಸ್ಕೃತಿಯ ಭಾಗವಾಗಿದ್ದು, ನಾಗ ಪಂಚಮಿಯು ನಾಗದೇವರ ಅಸ್ತಿತ್ವವನ್ನು ಸ್ಮರಿಸುವ ಸಲುವಾಗಿ ಆಚರಿಸಲಾಗುವ ಭಾರತದಲ್ಲಿನ ಪ್ರಮುಖ ಹಬ್ಬಗಳಲ್ಲಿ ಒಂದಾಗಿದ್ದು, ಈ ಹಬ್ಬವನ್ನು ಶ್ರಾವಣ ಮಾಸದ ಚಂದ್ರನ- ಹದಿನೈದು ದಿನಗಳ ಐದನೇ ದಿನದಂದು ಆಚರಿಸಲಾಗುತ್ತದೆ, ಶ್ರಾವಣ ಮಾಸದಲ್ಲಿ ಬರುವ ಈ ಹಬ್ಬವನ್ನು ನಗರ ಪ್ರದೇಶ, ಗ್ರಾಮೀಣ ಪ್ರದೇಶಗಳಲ್ಲೂ ಜನರು ನಾಗರ ಕಲ್ಲುಗಳಿಗೆ, ಹುತ್ತಗಳಿಗೆ ವಿಶೇಷ ಪೂಜೆಯೊಂದಿಗೆ ಭಕ್ತಿ ಭಾವದಿಂದ ಆಚರಿಸುವುದು ವಿಶೇಷವಾಗಿದೆ.

(ವರದಿ: ಈಶ್ವರ್‌ ತುಮಕೂರು)