Tumkur News: ರಾಮನಗರ ಎಕ್ಸ್‌ಪ್ರೆಸ್ ಲಿಂಕ್ ಕೆನಾಲ್‌ಗೆ ತೀವ್ರ ವಿರೋಧ, ಗೃಹ ಸಚಿವರ ಮನೆಗೆ ಮುತ್ತಿಗೆ, ಶಾಸಕ ಬಂಧನ
ಕನ್ನಡ ಸುದ್ದಿ  /  ಕರ್ನಾಟಕ  /  Tumkur News: ರಾಮನಗರ ಎಕ್ಸ್‌ಪ್ರೆಸ್ ಲಿಂಕ್ ಕೆನಾಲ್‌ಗೆ ತೀವ್ರ ವಿರೋಧ, ಗೃಹ ಸಚಿವರ ಮನೆಗೆ ಮುತ್ತಿಗೆ, ಶಾಸಕ ಬಂಧನ

Tumkur News: ರಾಮನಗರ ಎಕ್ಸ್‌ಪ್ರೆಸ್ ಲಿಂಕ್ ಕೆನಾಲ್‌ಗೆ ತೀವ್ರ ವಿರೋಧ, ಗೃಹ ಸಚಿವರ ಮನೆಗೆ ಮುತ್ತಿಗೆ, ಶಾಸಕ ಬಂಧನ

ಹೇಮಾವತಿ ನೀರು ಬಳಕೆ ಮಾಡಿಕೊಳ್ಳುವ ರಾಮನಗರ ಎಕ್ಸ್‌ಪ್ರೆಸ್‌ ಲಿಂಕ್‌ ಕೆನಾಲ್‌ಗೆ ವಿರೋಧಿಸಿ ತುಮಕೂರಿನಲ್ಲಿ ಪ್ರತಿಭಟನೆ ನಡೆಸಲಾಗಿದ್ದು,ಶಾಸಕ ಸುರೇಶ್‌ ಗೌಡ ಅವರನ್ನು ಬಂಧಿಸಲಾಗಿದೆ.ವರದಿ: ಈಶ್ವರ್‌ ತುಮಕೂರು

ತುಮಕೂರಿನಲ್ಲಿ ಶಾಸಕ ಸುರೇಶ್‌ಗೌಡ ಅವರನ್ನು ಬಂಧಿಸಲಾಯಿತು.
ತುಮಕೂರಿನಲ್ಲಿ ಶಾಸಕ ಸುರೇಶ್‌ಗೌಡ ಅವರನ್ನು ಬಂಧಿಸಲಾಯಿತು.

ತುಮಕೂರು: ಹೇಮಾವತಿ ಎಕ್ಸ್‌ಪ್ರೆಸ್ ಲಿಂಕ್ ಕೆನಾಲ್ ವಿರೋಧಿಸಿ ಗೃಹ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ್ ಅವರ ಗೊಲ್ಲಹಳ್ಳಿ ನಿವಾಸದ ಮುಂಭಾಗ ಧರಣಿ ಸತ್ಯಾಗ್ರಹ ನಡೆಸಲು ತೆರಳಿದ್ದ ಮಾಜಿ ಸಚಿವ ಸೊಗಡು ಶಿವಣ್ಣ, ಶಾಸಕರಾದ ಎಂ.ಟಿ.ಕೃಷ್ಣಪ್ಪ, ಬಿ.ಸುರೇಶಗೌಡ ಸೇರಿದಂತೆ 40ಕ್ಕು ಹೆಚ್ಚು ಜನರನ್ನು ಬಂಧಿಸಿ ನಂತರ ಬಿಡುಗಡೆ ಮಾಡಲಾಗಿದೆ. ಹೇಮಾವತಿ ಎಕ್ಸ್‌ಪ್ರೆಸ್ ಲಿಂಕ್ ಕೆನಾಲ್ ಕಾಮಗಾರಿ ಸ್ಥಗಿತಗೊಳಿಸಿ ಅವೈಜ್ಞಾನಿಕವಾಗಿರುವ ಈ ಯೋಜನೆ ಕೈ ಬಿಡುವಂತೆ ಒತ್ತಾಯಿಸಿ ಮಾಜಿ ಸಚಿವ ಸೊಗಡು ಶಿವಣ್ಣ ನೇತೃತ್ವದಲ್ಲಿ ವಿವಿಧ ಪಕ್ಷಗಳ ಹಾಲಿ ಮತ್ತು ಮಾಜಿ ಶಾಸಕರು, ವಿವಿಧ ಸಂಘಟನೆಗಳ ಪದಾಧಿಕಾರಿಗಳು ಸಚಿವ ಡಾ.ಜಿ.ಪರಮೇಶ್ವರ್ ಅವರ ಮನೆ ಮುಂದೆ ಹೋರಾಟಕ್ಕೆ ಕರೆ ನೀಡಿದ್ದರು, ಅದರಂತೆ ಗುರುವಾರ ಪ್ರತಿಭಟನಾ ಸ್ಥಳದ ಸಿದ್ಧತೆ ಪರಿಶೀಲನೆಗೆ ಮುಖಂಡರಾದ ಪ್ರಭಾಕರ್ ಅವರೊಂದಿಗೆ ಮಾಜಿ ಸಚಿವ ಸೊಗಡು ಶಿವಣ್ಣ ಅವರು ಸಚಿವ ಡಾ.ಜಿ.ಪರಮೇಶ್ವರ್ ಅವರ ಗೊಲ್ಲಹಳ್ಳಿಯ ನಿವಾಸದ ಬಳಿ ತೆರಳಿದ್ದ ಸಂದರ್ಭದಲ್ಲಿ ಪೊಲೀಸರು ಅವರನ್ನು ಬಂಧಿಸಿ ನಗರದ ಜಿಲ್ಲಾ ಸಶಸ್ತ್ರ ಮೀಸಲು ಪಡೆ ಮೈದಾನ ಬಳಿ ಕರೆ ತಂದರು.

ನಮ್ಮ ಜಿಲ್ಲೆಯ ನೀರನ್ನು ಅವೈಜ್ಞಾನಿಕ ಯೋಜನೆಯ ಮೂಲಕ ಬೇರೊಂದು ಜಿಲ್ಲೆಗೆ ತೆಗೆದುಕೊಂಡು ಹೋಗಲು ಹೊರಟಿರುವ ಹೇಮಾವತಿ ಲಿಂಕ್ ಕೆನಾಲ್ ಕಾಮಗಾರಿ ಸ್ಥಗಿತಕ್ಕೆ ಒತ್ತಾಯಿಸಿ ಶಾಂತಿಯುತ ಪ್ರತಿಭಟನೆಗೆ ಮುಂದಾಗಿದ್ದ ನಮ್ಮನ್ನು ಪೊಲೀಸರು ಅಕ್ರಮವಾಗಿ ಬಂಧಿಸಿದ್ದಾರೆ, ಇದು ಖಂಡನೀಯ ಎಂದು ಡಿಆರ್ ಗ್ರೌಂಡ್‌ನಲ್ಲಿಯೇ ಮಾಜಿ ಸಚಿವ ಸೊಗಡು ಶಿವಣ್ಣ ಉಪಹಾರ, ನೀರು ಸೇವಿಸದೆ ಧರಣಿ ನಡೆಸಿದರು.

ನಮ್ಮ ಹೋರಾಟ ಹತ್ತಿಕ್ಕುವ ಕೆಲಸ ಮಾಡುತ್ತಿರುವುದು ಪ್ರಜಾ ಪ್ರಭುತ್ವದ ಕಗ್ಗೊಲೆಯಾಗಿದೆ, ವೀಡಿಯೋ ಮಾಡಿ, ಮೊಬೈಲ್ ಕಸಿದು ನಮ್ಮನ್ನು ಬೇರೊಂದು ರೀತಿಯಲ್ಲಿ ಪೊಲೀಸರು ಪ್ರಚೋದಿಸುತ್ತಿದ್ದಾರೆ, ಆಧುನಿಕ ಚಾಲನ್ ಮೂಲಕ ಕುಣಿಗಲ್‌ಗೆ ನೀರು ತೆಗೆದುಕೊಂಡು ಹೋಗಲು ನಾವೇ ಮುಂದೆ ನಿಂತು ಸಹಕರಿಸುತ್ತೇನೆ, ಆದರೆ ಪೈಪ್‌ಲೈನ್ ಮೂಲಕ ನೀರು ಕೊಂಡೊಯ್ಯಲು ಯಾವುದೇ ಕಾರಣಕ್ಕೂ ಅವಕಾಶ ಕೊಡುವುದಿಲ್ಲ ಎಂದು ಶಿವಣ್ಣ ಆಕ್ರೋಶ ವ್ಯಕ್ತಪಡಿಸಿದರು.

ಹೋರಾಟ ನಡೆಸಲು ಮುಂದಾಗಿದ್ದ ಮಾಜಿ ಸಚಿವ ಸೊಗಡು ಶಿವಣ್ಣರವರನ್ನು ಬಂಧಿಸಿರುವ ಪೊಲೀಸರ ಕ್ರಮ ಖಂಡಿಸಿ ಹಾಗೂ ಬಿಡುಗಡೆ ಮಾಡುವಂತೆ ಒತ್ತಾಯಿಸಿ ಬಿಜೆಪಿ ಹಾಗೂ ಕನ್ನಡ ಪರ ಸಂಘಟನೆಗಳ ಕಾರ್ಯಕರ್ತರು ನಗರದ ಡಿಎಆರ್ ಕಚೇರಿ ಮುಂದೆ ಕಪ್ಪುಪಟ್ಟಿ ಧರಿಸಿ ಪ್ರತಿಭಟನೆ ನಡೆಸಿದರು, ಡಿಎಆರ್ ಕಚೇರಿ ಮುಂಭಾಗ ಕಪ್ಪುಪಟ್ಟಿ ಧರಿಸಿ ಪ್ರತಿಭಟನೆ ನಡೆಸುತ್ತಿದ್ದ ಮುಖಂಡರಾದ ಧನಿಯಾಕುಮಾರ್, ಕೆ.ಪಿ.ಮಹೇಶ್, ಕುಮಾರಸ್ವಾಮಿ, ಶಬ್ಬೀರ್, ರಾಮಚಂದ್ರರಾವ್, ನವೀನ್, ಶಂಕರಪ್ಪ, ಏಕಾಂತಯ್ಯ, ಜಯಪ್ರಕಾಶ್, ನಾರಾಯಣರಾವ್, ಊರುಕೆರೆ ನಂಜುಂಡಪ್ಪ, ಟಿ.ಜೆ.ಸನತ್, ಗಣೇಶ್ ಸೇರಿದಂತೆ ಹಲವರನ್ನು ಎಸ್ಪಿ ಅಶೋಕ್ ಸೂಚನೆ ಮೇರೆಗೆ ಪೊಲೀಸರು ಬಂಧಿಸಿದರು.

ಪೊಲೀಸರ ಕಣ್ತಪ್ಪಿಸಿ ಶಾಸಕ ಬಿ.ಸುರೇಶಗೌಡ ಪ್ರತಿಭಟನೆ

ಗೃಹ ಸಚಿವರ ಮನೆ ಮುಂದೆ ಪ್ರತಿಭಟನೆ ನಡೆಸುವುದನ್ನು ತಡೆಯುವ ಸಲುವಾಗಿ ಪೊಲೀಸರು ತುಮಕೂರು ಗ್ರಾಮಾಂತರ ಶಾಸಕ ಬಿಜೆಪಿಯ ಬಿ.ಸುರೇಶಗೌಡ ಅವರನ್ನು ಬಂಧಿಸಲು ಕುಣಿಗಲ್ ರಸ್ತೆಯ ಬಾಣಾವರ ಸಮೀಪದ ಬಿಜೆಪಿ ಕಚೇರಿ ಬಳಿ ತೆರಳಿದ್ದರು, ಆದರೆ ಪೊಲೀಸರ ಕಣ್ತಪ್ಪಿಸಿ ಕಾರು ಬಿಟ್ಟು ತಲೆಗೆ ಹೆಲ್ಮೆಟ್ ಧರಿಸಿ ದ್ವಿಚಕ್ರವಾಹನ ಏರಿ ಗೊಲ್ಲಹಳ್ಳಿಯಲ್ಲಿರುವ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರ ಮನೆ ತಲುಪಿದ ಶಾಸಕರು, ವಾಹನದಿಂದ ಇಳಿದು ಪ್ರತಿಭಟನೆ ಕೂಗುತಿದ್ದಂತೆಯೇ ಆವರನ್ನು ಬಂಧಿಸಿ ಜಿಲ್ಲಾ ಸಶಸ್ತ್ರ ಮೀಸಲು ಪಡೆ ಮೈದಾನಕ್ಕೆ ಕರೆ ತರಲಾಯಿತು.

ಈ ವೇಳೆ ಮಾತನಾಡಿದ ಶಾಸಕ ಬಿ.ಸುರೇಶಗೌಡ, ತುಮಕೂರು ಹೇಮಾವತಿ ಎಕ್ಸ್‌ಪ್ರೆಸ್ ಲಿಂಕ್ ಕೆನಾಲ್ ಯೋಜನೆ ಸ್ಥಗಿತಗೊಳಿಸುವಂತೆ ಆಗ್ರಹಿಸಿ ಸಾಂಕೇತಿಕವಾಗಿ ಸಚಿವ ಪರಮೇಶ್ವರ್ ಅವರ ಮನೆ ಮುಂದೆ ಹೋರಾಟ ಹಮ್ಮಿಕೊಂಡಿದ್ದೆವು, ಹೋರಾಟಕ್ಕೆ ಮುಂದಾಗಿದ್ದ ಮಾಜಿ ಸಚಿವ ಸೊಗಡು ಶಿವಣ್ಣ ಹಾಗೂ ಬೆಳಗುಂಬ ಪ್ರಭಾಕರ್ ಅವರನ್ನು ಏಕಾಏಕಿ ಬಂಧಿಸಿರುವುದು ಕಾನೂನು ಬಾಹಿರ, ಪ್ರಜಾ ಪ್ರಭುತ್ವ ವ್ಯವಸ್ಥೆಯಲ್ಲಿ ಹೋರಾಟ ಸರ್ವೆ ಸಾಮಾನ್ಯ, ನಮ್ಮ ಹಕ್ಕುಗಳನ್ನು ಕೇಳುವ ಸಂದರ್ಭದಲ್ಲಿ ಬಂಧಿಸಿರುವುದು ಖಂಡನೀಯ, ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಎಸ್ಪಿ ಮಧ್ಯಸ್ಥಿಕೆ ಫಲಪ್ರದ, ಪ್ರತಿಭಟನೆ ತಾತ್ಕಾಲಿಕ ಸ್ಥಗಿತ

ಪ್ರತಿಭಟನಾ ನಿರತ ಜನಪ್ರತಿನಿಧಿಗಳು ಹಾಗೂ ರೈತರನ್ನು ಭೇಟಿಯಾಗಿ ಮಾತುಕತೆ ನಡೆಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಶೋಶ್ ಅವರು ಜೂನ್ 06ರ ವರೆಗೆ ಹೇಮಾವತಿ ಎಕ್ಸ್‌ ಪ್ರೆಸ್ ಲಿಂಕ್ ಕೆನಾಲ್‌ನ ಎಲ್ಲಾ ಕಾಮಗಾರಿ ಸ್ಥಗಿತಗೊಳಿಸಲು ಜಿಲ್ಲಾಧಿಕಾರಿ ಆದೇಶ ನೀಡಿದ್ದಾರೆ, ಜೂನ್ 06ರ ನಂತರ ಮುಖಂಡರ ಸಭೆ ಕರೆದು ಚರ್ಚಿಸಿ, ತೀರ್ಮಾನ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ ಹಿನ್ನೆಲೆಯಲ್ಲಿ ಪ್ರತಿಭಟನೆ ಹಿಂಪಡೆದಿದ್ದಾರೆ.

(ವರದಿ: ಈಶ್ವರ್‌ ತುಮಕೂರು)

(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)

Whats_app_banner