ತುಮಕೂರು ಸಿದ್ಧಗಂಗಾ ಜಾತ್ರೆ: ವಸ್ತು ಪ್ರದರ್ಶನದಲ್ಲಿ ಅಯೋಧ್ಯೆ ರಾಮ ಮಂದಿರ ಪ್ರಮುಖ ಆಕರ್ಷಣೆ, ಮಾರ್ಚ್ 9ಕ್ಕೆ ರಥೋತ್ಸವ
ಮಹಾಶಿವರಾತ್ರಿಯ ಪ್ರಯುಕ್ತ ಸಿದ್ದಗಂಗಾ ಮಠದಲ್ಲಿ ಮಾರ್ಚ್ 8 ರಂದು ಬೆಳ್ಳಿ ರಥೋತ್ಸವ, ಮುತ್ತಿನ ಪಲ್ಲಕ್ಕಿ ಉತ್ಸವ ನಡೆಯಲಿದೆ. ಮಾರ್ಚ್ 9ರಂದು ಸಿದ್ದಲಿಂಗೇಶ್ವರ ಸ್ವಾಮಿ ರಥೋತ್ಸವ, ಮಾರ್ಚ್ 11 ರಂದು ತೆಪ್ಪೋತ್ಸವ ನಡೆಯಲಿದೆ.
ತುಮಕೂರು: ಇತಿಹಾಸ ಪ್ರಸಿದ್ದ ಸಿದ್ದಗಂಗಾ ಮಠದ ಆರಾಧ್ಯ ದೈವ ಶ್ರೀಸಿದ್ದಲಿಂಗೇಶ್ವರ ಸ್ವಾಮಿ ಜಾತ್ರಾ ಮಹೋತ್ಸವ ಅಂಗವಾಗಿ ಕೃಷಿ ಮತ್ತು ಕೈಗಾರಿಕಾ ವಸ್ತು ಪ್ರದರ್ಶನ ಫೆ 26 ರಿಂದ ಮಾರ್ಚ್ 12 ರ ವರೆಗೆ 16 ದಿನ ನಡೆಯಲಿದೆ. ಸಿದ್ದಗಂಗಾ ಮಠದಲ್ಲಿ ನಡೆಯಲಿರುವ ಈ ಬಾರಿಯ ಕೃಷಿ ಮತ್ತು ಕೈಗಾರಿಕಾ ವಸ್ತು ಪ್ರದರ್ಶನದಲ್ಲಿ ಸರ್ಕಾರಿ ಇಲಾಖೆಗಳು ಹಾಗೂ ಖಾಸಗಿ ಸಂಸ್ಥೆಗಳು ಸೇರಿದಂತೆ ಒಟ್ಟು 170ಕ್ಕೂ ಅಧಿಕ ಮಳಿಗೆ ತೆರೆಯಲಾಗುತ್ತಿದೆ ಎಂದು ಸಿದ್ದಗಂಗಾ ವಸ್ತು ಪ್ರದರ್ಶನ ಟ್ರಸ್ಟ್‌ನ ಕಾರ್ಯದರ್ಶಿ ಗಂಗಾಧರಯ್ಯ, ಜಂಟಿ ಕಾರ್ಯದರ್ಶಿ ಎಸ್.ಶಿವಕುಮಾರ್ ಹಾಗೂ ಕೆಂ.ಬ.ರೇಣುಕಯ್ಯ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಅಯೋಧ್ಯೆಯ ರಾಮ ಮಂದಿರ ಮಾದರಿ ಸಹ ಈ ಬಾರಿಯ ವಸ್ತು ಪ್ರದರ್ಶನದಲ್ಲಿ ಪ್ರದರ್ಶನಗೊಳ್ಳತ್ತಿರುವುದು ವಿಶೇಷ. ಇದಕ್ಕಾಗಿ ಈಗಾಗಲೇ ಅಗತ್ಯ ಸಿದ್ಧತೆ ಪೂರ್ಣಗೊಂಡಿವೆ. ಕೃಷಿ ಮತ್ತು ಕೈಗಾರಿಕಾ ವಸ್ತು ಪ್ರದರ್ಶನದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಸಿದ್ದಗಂಗಾ ತಾಂತ್ರಿಕ ಮಹಾ ವಿದ್ಯಾಲಯ, ಕೃಷಿ ಜೀವಂತ ಪ್ರಾತ್ಯಕ್ಷಿಕೆ ಹಾಗೂ ತಾಂತ್ರಿಕತೆ ಬಳಕೆಯ ಪ್ರದರ್ಶನ, ಸ್ವಾಭಾವಿಕ ಅರಣ್ಯದ ದೃಶ್ಯ, ಶಿಕ್ಷಣ ಇಲಾಖೆ, ಪಶು ಸಂಗೋಪನಾ ಇಲಾಖೆ, ಕೃಷಿ ಇಲಾಖೆ, ರೇಷ್ಮೆ ಇಲಾಖೆ ಹಾಗೂ ಬೆಂಗಳೂರಿನ ವಾರ್ತಾ ಇಲಾಖೆ ಸೇರಿದಂತೆ 20ಕ್ಕೂ ಅಧಿಕ ಸರ್ಕಾರಿ ಇಲಾಖೆಗಳು ಹಾಗೂ 150ಕ್ಕೂ ಹೆಚ್ಚು ಖಾಸಗಿ ವಾಣಿಜ್ಯ ಮಳಿಗೆಗಳು ಸೇರಿ ಒಟ್ಟು 170ಕ್ಕೂ ಅಧಿಕ ಮಳಿಗೆಗಳನ್ನು ತೆರೆದು ಸಾರ್ವಜನಿಕರಿಗೆ ಅಗತ್ಯ ಮಾಹಿತಿಯನ್ನು ನೀಡಲಾಗುವುದು ಎಂದು ಹೇಳಿದರು.
ಕೃಷಿ ಮತ್ತು ಕೈಗಾರಿಕಾ ವಸ್ತು ಪ್ರದರ್ಶನವು ಕಳೆದ 59 ವರ್ಷಗಳಿಂದಲೂ ನಡೆಯುತ್ತಿದೆ. ಈ ಬಾರಿ ವಸ್ತು ಪ್ರದರ್ಶನವು 60ನೇ ವರ್ಷಕ್ಕೆ ಪದಾರ್ಪಣೆ ಮಾಡಿದೆ. ವಸ್ತು ಪ್ರದರ್ಶನದಲ್ಲಿ ಮಳಿಗೆ ತೆರೆಯುವವರಿಗೆ ಪ್ರತಿನಿತ್ಯ ಊಟದ ವ್ಯವಸ್ಥೆ ಇರುತ್ತದೆ. ಪ್ರತಿದಿನವೂ ಸಂಜೆ ಪೌರಾಣಿಕ ನಾಟಕ ಪ್ರದರ್ಶನ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಏರ್ಪಡಿಸಲಾಗುವುದು ಎಂದು ತಿಳಿಸಿದರು. ಸ್ಥಳೀಯ ಕಲಾವಿದರೂ ಸೇರಿ, ರಾಜ್ಯದ ವಿವಿಧೆಡೆಗಳಿಂದ ಆಗಮಿಸುವ ಕಲಾವಿದರು ನಾಟಕ ಪ್ರದರ್ಶನದಲ್ಲಿ ಪಾಲ್ಗೊಳ್ಳಲಿದ್ದಾರೆ.
ಮಹಾಶಿವರಾತ್ರಿಯ ಪ್ರಯುಕ್ತ ಸಿದ್ದಗಂಗಾ ಮಠದಲ್ಲಿ ಮಾರ್ಚ್ 8 ರಂದು ಬೆಳ್ಳಿ ರಥೋತ್ಸವ, ಮುತ್ತಿನ ಪಲ್ಲಕ್ಕಿ ಉತ್ಸವ ನಡೆಯಲಿದೆ. ಮಾರ್ಚ್ 9ರಂದು ಸಿದ್ದಲಿಂಗೇಶ್ವರ ಸ್ವಾಮಿ ರಥೋತ್ಸವ, ಮಾರ್ಚ್ 11 ರಂದು ತೆಪ್ಪೋತ್ಸವ ನಡೆಯಲಿದೆ. ಇದರೊಂದಿಗೆ ಜಾತ್ರೆ ಮತ್ತು ವಸ್ತು ಪ್ರದರ್ಶನಕ್ಕೆ ತೆರೆ ಬೀಳಲಿದೆ.
ಫೆ 26 ಕ್ಕೆ ವಸ್ತು ಪ್ರದರ್ಶನ ಆರಂಭ
ಫೆ 26 ರಂದು ಸಂಜೆ 7 ಗಂಟೆಗೆ ಸಿದ್ಧಗಂಗೆ ಮಠದ ಅಧ್ಯಕ್ಷ ಸಿದ್ದಲಿಂಗ ಸ್ವಾಮೀಜಿ ಸಾನ್ನಿಧ್ಯದಲ್ಲಿ ಕೃಷಿ ಮತ್ತು ಕೈಗಾರಿಕಾ ವಸ್ತು ಪ್ರದರ್ಶನದ ಉದ್ಘಾಟನಾ ಸಮಾರಂಭ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ಉದ್ಘಾಟನಾ ಕಾರ್ಯಕ್ರಮ ನಡೆಯಲಿದೆ. ಗ್ರಾಮಾಂತರ ಶಾಸಕ ಬಿ.ಸುರೇಶ್‌ಗೌಡ ಅಧ್ಯಕ್ಷತೆ ವಹಿಸುವರು, ವಸ್ತು ಪ್ರದರ್ಶನವನ್ನು ಕೃಷಿ ಸಚಿವ ಚಲುವರಾಯಸ್ವಾಮಿ ಉದ್ಘಾಟಿಸಲಿದ್ದಾರೆ.
ವಿಭಾಗ