ತುಮಕೂರು: ಖತರ್ನಾಕ್ ಕಳ್ಳನಿಗೆ ಖಾಕಿ ಗುಂಡೇಟು; 18ಕ್ಕೂ ಹೆಚ್ಚು ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಕಳ್ಳ ಸೆರೆ
18 ಕ್ಕೂ ಹೆಚ್ಚು ಸರಗಳ್ಳತನ ಪ್ರಕರಣದಲ್ಲಿ ಭಾಗಿಯಾಗಿದ್ದ ಕಳ್ಳನನ್ನು ಬಂಧಿಸುವಲ್ಲಿ ತುಮಕೂರು ಪೊಲೀಸರು ಯಶಸ್ವಿಯಾಗಿದ್ದಾರೆ. ಆದರೆ ಬಂಧನದ ವೇಳೆ ಆರೋಪಿ ಪೊಲೀಸರ ಮೇಲೆ ಹಲ್ಲೆ ಮಾಡಿ ಪರಾರಿಯಾಗಲು ಯತ್ನಿಸಿದಾಗ ಕಾಲಿಗೆ ಗುಂಡು ಹಾರಿಸಿ ಬಂಧಿಸಲಾಗಿದೆ.
ತುಮಕೂರು: ವಿವಿಧ ಸರಗಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಆರೋಪಿಯೊಬ್ಬನನ್ನು ಬಂಧಿಸಿ ಕರೆ ತರುತ್ತಿದ್ದ ಸಂದರ್ಭದಲ್ಲಿ ಮಾರ್ಗ ಮಧ್ಯೆ ಪೊಲೀಸರ ಮೇಲೆ ಬಿಯರ್ ಬಾಟಲ್ ನಿಂದ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ ಆರೋಪಿಯ ಕಾಲಿಗೆ ಗುಂಡು ಹೊಡೆದು ಹೆಡೆಮುರಿ ಕಟ್ಟಿ ಸಿನಿಮೀಯ ರೀತಿಯಲ್ಲಿ ಪೊಲೀಸರು ವಶಕ್ಕೆ ಪಡೆದ ಘಟನೆ ಸೋಮವಾರ (ಜೂನ್ 24) ನಡೆದಿದೆ. ಮಧುಗಿರಿ ತಾಲೂಕಿನ ಈಜೀ ಹಳ್ಳಿ ಕ್ರಾಸ್ ಬಳಿ ಘಟನೆ ನಡೆದಿದ್ದು, ಆಂಧ್ರ ಪ್ರದೇಶದ ಹಿಂದೂಪುರ ಮೂಲದ ರಿಜ್ವಾನ್ ಬಿನ್ ಬಾಬುಜಾನ್ (34) ಬಂಧಿತ ಆರೋಪಿ (Tumkur Crime News).
ಏನಿದು ಪ್ರಕರಣ?
ಕಳೆದ ಎರಡು ತಿಂಗಳ ಹಿಂದೆ ಪೊಲೀಸರು ಚುನಾವಣಾ ಪ್ರಕ್ರಿಯೆಯಲ್ಲಿ ನಿರತರಾಗಿದ್ದ ಸಂದರ್ಭ ಬಳಸಿಕೊಂಡು ಆರೋಪಿಗಳಾದ ಚಿನ್ನಾ ಮತ್ತು ರಿಜ್ವಾನ್ ಎಂಬುವವರು ಒಟ್ಟು 15 ಕ್ಕೂ ಹೆಚ್ಚು ನಿರಂತರ ಸರಗಳ್ಳತನ ಪ್ರಕರಣದಲ್ಲಿ ಭಾಗಿಯಾಗಿದ್ದರು, ಕಳೆದ ಒಂದು ವಾರದ ಹಿಂದೆ ಎ1 ಆರೋಪಿ ಚಿನ್ನಾ ಎಂಬಾತನನ್ನು ಪೊಲೀಸರು ಬಂಧಿಸಿದ್ದರು. ಸೋಮವಾರ ಖಚಿತ ಮಾಹಿತಿ ಮೇರೆಗೆ ಎ2 ಆರೋಪಿ ರಿಜ್ವಾನ್‌ನನ್ನು ಬಂಧಿಸಲು ಮಧುಗಿರಿ ಡಿವೈಎಸ್‌ಪಿ ರಾಮಚಂದ್ರಪ್ಪ, ಸಿಪಿಐ ಹನುನಂತರಾಯಪ್ಪ, ಪಿಎಸ್‌ಐ ಶ್ರೀನಿವಾಸ್, ದಾದಪೀರ್ ಹಾಗೂ ಪೊಲೀಸ್ ಸಿಬ್ಬಂದಿ ರಮೇಶ್ ತಂಡ ಬೆಂಗಳೂರಿನ ಹೊಸಕೋಟೆಗೆ ತೆರಳಿದ್ದರು, ಆರೋಪಿಯನ್ನು ಬಂಧಿಸಿ ಕರೆದುಕೊಂಡು ಬರುವಾಗ ಕೊಡಿಗೇನಹಳ್ಳಿ ಹೋಬಳಿಯ ಈಜಿಹಳ್ಳಿ ಕ್ರಾಸ್ ಬಳಿ ಬಹಿರ್ದೆಸೆಗೆ ಹೋಗುತ್ತೇನೆ ಎಂದು ಪೊಲೀಸರಿಗೆ ತಿಳಿಸಿದ್ದಾನೆ.
ಪೊಲೀಸರು ವಾಹನ ನಿಲ್ಲಿಸಿ ಬಹಿರ್ದೆಸೆಗೆ ಹೋಗಲು ಅನುವು ಮಾಡಿಕೊಟ್ಟಿದ್ದಾರೆ. ಈ ಸಂದರ್ಭವನ್ನು ಬಳಸಿಕೊಂಡ ಆರೋಪಿ ರಿಜ್ವಾನ್ ಬಯಲಿನಲ್ಲಿ ಬಿದ್ದಿದ್ದ ಬಿಯರ್ ಬಾಟಲ್ ತೆಗೆದುಕೊಂಡು ಪಕ್ಕದಲ್ಲೇ ಇದ್ದ ಪೊಲೀಸ್ ಪೇದೆ ರಮೇಶ್ ಎಂಬುವವರ ಎಡಗೈಗೆ ಚುಚ್ಚಿದ್ದು, ಪೇದೆ ನೆಲಕ್ಕೆ ಬಿದ್ದಿದ್ದಾರೆ, ಇದೇ ಸಂದರ್ಭ ಬಳಸಿಕೊಂಡ ಆರೋಪಿ ಪರಾರಿಯಾಗಲು ಯತ್ನಿಸಿದ್ದಾನೆ, ಎಚ್ಚೆತ್ತ ಪೊಲೀಸರು ಕೂಡಲೇ ಆರೋಪಿಯನ್ನ ಶರಣಾಗುವಂತೆ ಮೂರು ಬಾರಿ ಗಾಳಿಯಲ್ಲಿ ಗುಂಡು ಹಾರಿಸಿದ್ದರೂ ಆರೋಪಿ ಶರಣಾಗದೆ ಮತ್ತೆ ದಾಳಿ ಮಾಡಲು ಯತ್ನಿಸಿದ್ದು, ಈ ಸಂದರ್ಭದಲ್ಲಿ ಸಿಪಿಐ ಹನುಮಂತರಾಯಪ್ಪ ಆತ್ಮರಕ್ಷಣೆಗಾಗಿ ನೇರವಾಗಿ ಆರೋಪಿಯ ಕಾಲಿಗೆ ಗುಂಡು ಹೊಡೆದು ಬಂಧಿಸಿದ್ದಾರೆ.
ಆರೋಪಿಯು ಒಟ್ಟು 18 ಕ್ಕೂ ಹೆಚ್ಚು ಸರಗಳ್ಳತನ ಪ್ರಕರಣದಲ್ಲಿ ಭಾಗಿಯಾಗಿದ್ದು, ಮಧುಗಿರಿ 3, ಮಿಡಗೇಶಿ 4, ಬಡವನಹಳ್ಳಿ 2, ಕೊರಟಗೆರೆ 1, ಕೊಡಿಗೇನಹಳ್ಳಿ 2, ಮಡಕಶಿರಾ 1, ಪಟ್ಟನಾಯಕನ ಹಳ್ಳಿ 2, ಗೌರಿಬಿದನೂರು 1 ಸೇರಿದಂತೆ ಹಲವು ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ದೂರು ದಾಖಲಾಗಿದೆ.
ಒಮ್ಮೆ ಎಸ್ಕೇಪ್ ಆಗಿದ್ದ ಆರೋಪಿ ಕಳೆದ ಎರಡು ತಿಂಗಳ ಹಿಂದೆ ಆರೋಪಿ ರಿಜ್ವಾನ್ ನನ್ನು ಹಿಂದೂಪುರದಲ್ಲಿ ಬಂಧಿಸಲು ತೆರಳಿದ್ದ ಪೊಲೀಸರಿಗೆ ದಿಕ್ಕು ತಪ್ಪಿಸಿದ್ದ ಆರೋಪಿ ಒಮ್ಮೆ ಎಸ್ಕೇಪ್ ಆಗಿದ್ದ ಎನ್ನಲಾಗಿದ್ದು, ಎರಡನೇ ಬಾರಿ ಖಚಿತ ಮಾಹಿತಿ ಪಡೆದ ಪೊಲೀಸರು ಆರೋಪಿಯನ್ನು ಬೆನ್ನಟ್ಟಿ ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)