Tumkur News: ತುಮಕೂರು-ಬೆಂಗಳೂರು ಮೆಮು ರೈಲಿನ ಮೇಲಿನ ವಿಶೇಷ ಪ್ರೀತಿ, ಹುಟ್ಟುಹಬ್ಬ ಆಚರಿಸಿ ಸಡಗರ
ಕನ್ನಡ ಸುದ್ದಿ  /  ಕರ್ನಾಟಕ  /  Tumkur News: ತುಮಕೂರು-ಬೆಂಗಳೂರು ಮೆಮು ರೈಲಿನ ಮೇಲಿನ ವಿಶೇಷ ಪ್ರೀತಿ, ಹುಟ್ಟುಹಬ್ಬ ಆಚರಿಸಿ ಸಡಗರ

Tumkur News: ತುಮಕೂರು-ಬೆಂಗಳೂರು ಮೆಮು ರೈಲಿನ ಮೇಲಿನ ವಿಶೇಷ ಪ್ರೀತಿ, ಹುಟ್ಟುಹಬ್ಬ ಆಚರಿಸಿ ಸಡಗರ

Indian Railways ರೈಲಿನೊಂದಿಗೆ ಪ್ರಯಾಣಿಕರ ನಂಟು ಅವರ್ಣನೀಯ. ಇದಕ್ಕೆ ಸಾಕ್ಷಿ ಎನ್ನುವಂತೆ ತುಮಕೂರಿನ ಪ್ರಯಾಣಿಕರು ಬೆಂಗಳೂರು ಮೆಮು ರೈಲಿನ ಜನ್ಮ ದಿನ ಆಚರಿಸೋದು. ಈ ಬಾರಿ ಹೇಗಿತ್ತು ಸಡಗರ..ವರದಿ: ಈಶ್ವರ್‌ ತುಮಕೂರು

ತುಮಕೂರು ಬೆಂಗಳೂರು ಮೆಮು ರೈಲಿನ ಜನ್ಮದಿನವನ್ನು ಕೇಕ್‌ ಕತ್ತರಿಸಿ ಆಚರಿಸಿ ಪ್ರಯಾಣಿಕರು.
ತುಮಕೂರು ಬೆಂಗಳೂರು ಮೆಮು ರೈಲಿನ ಜನ್ಮದಿನವನ್ನು ಕೇಕ್‌ ಕತ್ತರಿಸಿ ಆಚರಿಸಿ ಪ್ರಯಾಣಿಕರು.

ತುಮಕೂರು: ಇದು ನಿಜಕ್ಕೂ ಪ್ರೀತಿಯ ಕ್ಷಣ. ನಿತ್ಯ ತಾವು ಸಂಚರಿಸುವ ರೈಲಿಗೆ ಪ್ರತಿ ವರ್ಷ ನೀಡುವ ನೆನಪಿನ ಉಡುಗೊರೆ. ಅದೂ ನಿತ್ಯ ಪ್ರಯಾಣದ ಸಂಗಾತಿಯಾಗಿರುವ ರೈಲಿನೊಂದಿಗೆ ಬೆಳೆದು ನಿಂತಿರುವ ಭಾವನಾತ್ಮಕ ನಂಟು ಕೂಡ. ತುಮಕೂರು ಜಿಲ್ಲಾ ರೈಲ್ವೆ ಪ್ರಯಾಣಿಕರ ವೇದಿಕೆ ವತಿಯಿಂದ ತುಮಕೂರು ರೈಲು ನಿಲ್ದಾಣದಲ್ಲಿ ತುಮಕೂರು- ಬೆಂಗಳೂರು ವಿಶೇಷ ಮೆಮು ರೈಲಿನ 11ನೇ ಬರ್ತ್‌ಡೇ ಆಚರಿಸಿ ಪ್ರಯಾಣಿಕರು ಸಂಭ್ರಮಿಸಿದರು. ಉದ್ಯೋಗಿ ಪ್ರಯಾಣಿಕರ ಮನವಿ ಮೇರೆಗೆ ಆಗಸ್ಟ್‌ 3, 2013 ರಂದು ಸಂಚಾರ ಆರಂಭಗೊಂಡ ರೈಲಿಗೆ ಪ್ರತಿ ಆಗಸ್ಟ್‌ 3 ರಂದು ಹುಟ್ಟಿದ ದಿನ ಆಚರಿಸಿ ಪ್ರಯಾಣಿಕರು ಸಂಭ್ರಮಿಸುತ್ತಾರೆ, ಉದ್ಯೋಗಕ್ಕಾಗಿ ಪ್ರತಿ ದಿನ ಬೆಂಗಳೂರಿಗೆ ಪ್ರಯಾಣಿಸುವ ಪ್ರಯಾಣಿಕರಿಗೆ ಈ ರೈಲು ಒಂದು ರೀತಿಯಲ್ಲಿ ಜೀವತಂತು ಎನಿಸಿದೆ.

ಶನಿವಾರ ಬೆಳಗ್ಗೆಯೇ ಸುಮಾರು 6.30ರ ವೇಳೆಗೆ ನಗರದ ರೈಲ್ವೆ ಸ್ಟೇಷನ್‌ಗೆ ಆಗಮಿಸಿದ ವೇದಿಕೆ ಪದಾಧಿಕಾರಿಗಳು, ಸದಸ್ಯರು ಮತ್ತು ಪ್ರಯಾಣಿಕರು ಸಡಗರದಿಂದ ರೈಲು ಇಂಜಿನಿಗೆ ಬಾಳೆಕಂದು ಕಟ್ಟಿ, ಹೂವು, ಬಲೂನುಗಳಿಂದ ರೈಲನ್ನು ಸಿಂಗರಿಸಿದರು. ಬೆಳಗ್ಗೆ 8ಕ್ಕೆ ತುಮಕೂರಿನಿಂದ ಹೊರಡುವ ರೈಲಿಗೆ ಸುಮಾರು 7.45ರ ವೇಳೆಗೆ ರೈಲಿನ ಲೋಕೋ ಪೈಲೆಟ್ ಬಿ.ಸುಬ್ರಹ್ಮಣ್ಯಂ ಮತ್ತು ಗಾರ್ಡ್ ಜಿ.ಜಯುಡು ಅವರಿಂದ ಕೇಕ್ ಕಟ್ ಮಾಡಿಸಿ ಸಂಭ್ರಮಿಸಿದರು, ಇದಕ್ಕೂ ಮುನ್ನ ರೈಲಿಗೆ ಶಾಸ್ತ್ರೋಕ್ತವಾಗಿ ಪೂಜೆ ಸಲ್ಲಿಸಲಾಯಿತು, ತುಮಕೂರು ರೈಲು ನಿಲ್ದಾಣ ವ್ಯವಸ್ಥಾಪಕ ನಾಗರಾಜ್.ಎಲ್. ಮತ್ತು ಸಿಬ್ಬಂದಿ ಭಾಗವಹಿಸಿದ್ದರು.

ವೇದಿಕೆ ಉಪಾಧ್ಯಕ್ಷ ಮಾಧವಮೂರ್ತಿ ಗುಡಿಬಂಡೆ, ಪರಮೇಶ್ವರ್ ಸೇರಿದಂತೆ ವೇದಿಕೆಯ ಎಲ್ಲಾ ಪದಾಧಿಕಾರಿಗಳು ಮತ್ತು ಸದಸ್ಯರು ಭಾಗವಹಿಸಿ ಎಲ್ಲಾ ಪ್ರಯಾಣಿಕರು ಪರಸ್ಪರ ಕೇಕ್ ತಿನ್ನಿಸಿ ಖುಷಿ ಪಟ್ಟರು.

ಪ್ರಯಾಣದ ಖುಷಿ

ತುಮಕೂರಿನಿಂದ ಅದೆಷ್ಟೋ ರೈಲುಗಳು ಬೆಂಗಳೂರಿಗೆ ಹೋಗುತ್ತವೆ. ಬೆಂಗಳೂರಿನಿಂದಲೂ ತುಮಕೂರು ಕಡೆ ರೈಲು ಬರುತ್ತವೆ. ಆದರೆ ನಮಗೆ ಈ ರೈಲಿನೊಂದಿಗೆ ನಂಟು ಬೆಳದಿದೆ. ಬೆಂಗಳೂರಿಗೆ ಹೋಗಿ ಬರುವವರನ್ನು ಈ ರೈಲು ನಿತ್ಯ ಕರೆದುಕೊಂಡು ಹೋಗಿ ಬರುತ್ತದೆ. ಏನೋ ಮನೆಯಲ್ಲಿಯೇ ಇದ್ದ ಹಾಗೆ ಈ ರೈಲಿನ ಪ್ರಯಾಣ ಎನ್ನಿಸುತ್ತದೆ. ಈ ಕಾರಣದಿಂದಲೇ ಪ್ರತಿ ವರ್ಷ ಈ ರೈಲು ಆರಂಭದ ದಿನವನ್ನು ಅದರ ಜನ್ಮ ದಿನವಾಗಿ ಆಚರಿಸಿಕೊಂಡು ಬರುತ್ತಿದ್ದೇವೆ. ಈ ವರ್ಷವೂ ಮಾಡಿದ್ದೇವೆ ಎಂದು ಪ್ರಯಾಣಿಕರು ಖುಷಿಯಿಂದಲೇ ಹೇಳಿಕೊಳ್ಳುತ್ತಾರೆ.

ರೈಲಿನ ಹಿನ್ನೆಲೆ ಏನು

2013ರ ಜೂನ್ ಅಂತ್ಯಕ್ಕೆ ಬೆಳಗ್ಗೆ 8 ಕ್ಕೆ ಬರುತ್ತಿದ್ದ ಸೋಲಾಪುರ- ಮೈಸೂರು ರೈಲಿನ ವೇಳೆ ಬೆಳಗ್ಗೆ 6.30ಕ್ಕೆ ಬದಲಾಯಿಸಲಾಯಿತು, ಇದರಿಂದ ಬೆಳಗ್ಗೆ 8 ಗಂಟೆಗೆ ಆ ರೈಲಿಗೆ ಹೊರಡುತ್ತಿದ್ದ ಸುಮಾರು ಒಂದೂವರೆ ಸಾವಿರಕ್ಕೂ ಹೆಚ್ಚು ಜನ ಉದ್ಯೊಗಿಗಳು ಮತ್ತು ಸಾರ್ವಜನಿಕರಿಗೆ ತೀವ್ರ ಸಂಕಷ್ಟವಾಗಿತ್ತು, ಆಗಿನ ರೈಲ್ವೇ ಸಚಿವ ಎಂ.ಮಲ್ಲಿಕಾರ್ಜುನ ಖರ್ಗೆ ಅವರಿಗೆ ವೇದಿಕೆ ವತಿಯಿಂದ ಪತ್ರ ಬರೆದು ಉದ್ಯೋಗಿಗಳು ಮತ್ತು ಪ್ರಯಾಣಿಕರ ಕಷ್ಟ ವಿವರಿಸಿದಾಗ ಕೇವಲ ಒಂದೇ ತಿಂಗಳಲ್ಲಿ ವಿಶೇಷ ರೈಲು ಸಂಚಾರ ಆರಂಭಿಸಿ ಅನುಕೂಲ ಮಾಡಿಕೊಟ್ಟಿದ್ದರು.

ಆಗಸ್ಟ್‌ 3, 2013 ರಂದು ರೈಲು ಸಂಚಾರ ಆರಂಭಗೊಂಡು ಸಾವಿರಾರು ಉದ್ಯೋಗಿಗಳಿಗೆ ಮತ್ತು ಪ್ರಯಾಣಿಕರಿಗೆ ಅನುಕೂಲವಾಗಿತ್ತು, ಈ ಹಿನ್ನೆಲೆಯಲ್ಲಿ ಅಂದಿನ ದಿನವನ್ನು ವಿಶೇಷವಾಗಿ ಪರಿಗಣಿಸಿ ಟ್ರೆûನ್ ಬರ್ತ್ ಡೇ ಆಚರಿಸಿಕೊಂಡು ಬರಲಾಗುತ್ತಿದೆ, ವಿಶೇಷವೆಂದರೆ ರೈಲಿಗೆ ಬರ್ತ್ ಡೇ ಆಚರಿಸುತ್ತಿರುವುದು ರೈಲ್ವೆ ಇತಿಹಾಸದಲ್ಲೇ ಇದು ಪ್ರಥಮ ಎನ್ನಬಹುದಾಗಿದೆ, ಇದರಿಂದ ರೈಲ್ವೆ ಇಲಾಖೆ ಅಧಿಕಾರಿಗಳೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

(ವರದಿ: ಈಶ್ವರ್‌ ತುಮಕೂರು)

Whats_app_banner