ಕನ್ನಡ ಸುದ್ದಿ  /  ಕರ್ನಾಟಕ  /  Tumkur News: ಮಾಗಡಿಗೆ ಕುಡಿಯುವ ನೀರು, ಎಕ್ಸ್‌ಪ್ರೆಸ್ ಲಿಂಕ್ ಕೆನಾಲ್ ಯೋಜನೆಗೆ ತುಮಕೂರಲ್ಲಿ ಭಾರೀ ವಿರೋಧ

Tumkur News: ಮಾಗಡಿಗೆ ಕುಡಿಯುವ ನೀರು, ಎಕ್ಸ್‌ಪ್ರೆಸ್ ಲಿಂಕ್ ಕೆನಾಲ್ ಯೋಜನೆಗೆ ತುಮಕೂರಲ್ಲಿ ಭಾರೀ ವಿರೋಧ

ಮಾಗಡಿ( Magadi) ಕುಡಿಯುವ ನೀರಿನ ಲಿಂಕ್‌ ನಾಲೆ ಕಾಮಗಾರಿ ವಿರೋಧಿಸಿ ತುಮಕೂರು( Tumkur) ಜಿಲ್ಲೆಯಲ್ಲಿ ಭಾರೀ ಪ್ರತಿಭಟನೆ ನಡೆದಿದೆ.(ವರದಿ: ಈಶ್ವರ್‌ ತುಮಕೂರು)

ತುಮಕೂರಿನಲ್ಲಿ ನಾಲೆವಿರೋಧಿಸಿ ಪೊಲೀಸ್‌ ಭದ್ರತೆಯಲ್ಲಿ ಪ್ರತಿಭಟನೆ ನಡೆಯಿತು.
ತುಮಕೂರಿನಲ್ಲಿ ನಾಲೆವಿರೋಧಿಸಿ ಪೊಲೀಸ್‌ ಭದ್ರತೆಯಲ್ಲಿ ಪ್ರತಿಭಟನೆ ನಡೆಯಿತು.

ತುಮಕೂರು: ಜಿಲ್ಲೆಯ ಕುಡಿಯುವ ನೀರಿನ ಜೀವನಾಡಿಯಾಗಿರುವ ಹೇಮಾವತಿ ನಾಲೆಗೆ ಪ್ರತ್ಯೇಕ ಎಕ್ಸ್‌ಪ್ರೆಸ್ ಲಿಂಕ್ ಕೆನಾಲ್ ಮೂಲಕ ಮಾಗಡಿಗೆ ನೀರು ಕೊಂಡೊಯ್ಯಲು ಕೈಗೊಂಡಿರುವ ಯೋಜನೆ ಕೈಬಿಡುವಂತೆ ಆಗ್ರಹಿಸಿ ಗುಬ್ಬಿ ತಾಲೂಕಿನ ಡಿ.ರಾಂಪುರದ ಹೇಮಾವತಿ ಶಾಖಾ ನಾಲೆ ಬಳಿ ಮಾಜಿ ಸಚಿವ ಸೊಗಡು ಶಿವಣ್ಣ ನೇತೃತ್ವದಲ್ಲಿ ನೂರಾರು ರೈತರು, ವಿವಿಧ ಮಠಾಧೀಶರು, ವಿವಿಧ ರಾಜಕೀಯ ಪಕ್ಷಗಳ ನಾಯಕರು, ವಿವಿಧ ಸಂಘಟನೆಗಳ ಕಾರ್ಯಕರ್ತರು ಪಕ್ಷಾತೀತವಾಗಿ ಸಾಂಕೇತಿಕವಾಗಿ ನಾಲೆಗೆ ಮೂರು ಹಿಡಿ ಮಣ್ಣು ಹಾಕುವ ಮೂಲಕ ಪ್ರತಿಭಟನೆ ನಡೆಸಿದರು.

ಟ್ರೆಂಡಿಂಗ್​ ಸುದ್ದಿ

ಮಾಜಿ ಸಚಿವ ಸೊಗಡು ಶಿವಣ್ಣ, ಶಾಸಕರಾದ ಎಂ.ಟಿ.ಕೃಷ್ಣಪ್ಪ, ಸುರೇಶ್‌ಗೌಡ, ಜ್ಯೋತಿಗಣೇಶ್, ಮಾಜಿ ಶಾಸಕ ಮಸಾಲೆ ಜಯರಾಮ್, ಹೆಚ್.ನಿಂಗಪ್ಪ, ಜಿಲ್ಲಾ ಜೆಡಿಎಸ್ ಅಧ್ಯಕ್ಷ ಆರ್.ಸಿ.ಆಂಜಿನಪ್ಪ ಸೇರಿದಂತೆ ಇನ್ನಿತರೆ ಮುಖಂಡರ ನೇತೃತ್ವದಲ್ಲಿ ಹೇಮಾವತಿ ಶಾಖಾ ನಾಲೆಯ 70ನೇ ಕಿ.ಮೀ. ಸ್ಥಳವಾದ ಡಿ.ರಾಂಪುರದ ಬಳಿ ತುರುವೇಕೆರೆ, ತಿಪಟೂರು, ಗುಬ್ಬಿ, ತುಮಕೂರು ಗ್ರಾಮಾಂತರ, ತುಮಕೂರು ನಗರದ ನೂರಾರು ಸಂಖ್ಯೆಯಲ್ಲಿ ರೈತರು, ಹೋರಾಟಗಾರರು ಜಮಾಯಿಸಿ ಪ್ರತಿಭಟಿಸಿ ಕಾಮಗಾರಿ ಸ್ಥಗಿತಗೊಳಿಸುವಂತೆ ರಾಜ್ಯ ಸರಕಾರಕ್ಕೆ ಒತ್ತಾಯಿಸಿದರು.

ಹೇಮಾವತಿ ನೀರು ಬಿಡೋಲ್ಲ

ನಮ್ಮ ನೀರು, ನಮ್ಮ ಹಕ್ಕು ಹೋರಾಟದ ಕುರಿತು ಮಾತನಾಡಿದ ಮಾಜಿ ಸಚಿವ ಸೊಗಡು ಶಿವಣ್ಣ, ಪೈಪ್ ಲೈನ್ ಮೂಲಕ ಮಾಗಡಿ, ರಾಮನಗರಕ್ಕೆ (843.71 ಎಂಸಿಎಫ್‌ಟಿ) ನೀರು ತೆಗೆದುಕೊಂಡು ಹೋಗುವುದರಿಂದ ಜಿಲ್ಲೆಯ ಜನರಿಗೆ ತೀವ್ರ ಅನ್ಯಾಯವಾಗುತ್ತದೆ, ಇಲ್ಲಿನ ಜನರಿಗೆ ಕುಡಿಯುವ ನೀರು ಸಿಗದಂತಾಗುತ್ತದೆ, ಯಾವುದೇ ಕಾರಣಕ್ಕೂ ಜಿಲ್ಲೆಯಿಂದ ಹೇಮಾವತಿ ನೀರು ತೆಗೆದುಕೊಂಡು ಹೋಗಲು ಬಿಡುವುದಿಲ್ಲ ಎಂದರು.

ಹೇಮಾವತಿಯಿಂದ ಜಿಲ್ಲೆಗೆ 24.5 ಟಿಎಂಸಿ ನೀರು ಹಂಚಿಕೆ ಮಾಡಲಾಗಿದೆ, ಹಂಚಿಕೆ ಮಾಡಿರುವಷ್ಟು ನೀರು ಜಿಲ್ಲೆಗೆ ಯಾವ ವರ್ಷವೂ ಹರಿದು ಬಂದಿಲ್ಲ, ಜಿಲ್ಲೆಗೆ ಹಂಚಿಕೆ ಮಾಡಿರುವ ನೀರಿನಲ್ಲೇ ಮಾಗಡಿ ತಾಲೂಕಿಗೆ ನೀರು ತೆಗೆದುಕೊಂಡು ಹೋಗಲಾಗುತ್ತಿದೆ, ಜಿಲ್ಲೆಯಲ್ಲಿ 23 ಕುಡಿಯುವ ನೀರಿನ ಯೋಜನೆ ಜಾರಿಯಲ್ಲಿದ್ದು, ಮಾಗಡಿ ಭಾಗಕ್ಕೆ ನೀರು ಹರಿಸಿದರೆ ಜನರಿಗೆ ಕುಡಿಯುವ ನೀರು ಸಿಗದಾಗುತ್ತದೆ, ಈ ಯೋಜನೆ ಜಾರಿಯಾದರೆ ತುಮಕೂರು ಜಿಲ್ಲೆಗೆ ಮರಣ ಶಾಸನವಾಗಲಿದೆ ಎಂದರು.

ಡಿಕೆಶಿ ಕಂಡರೆ ಹೆದರಿಕೆ

ತುಮಕೂರು ಗ್ರಾಮಾಂತರ ಶಾಸಕ ಸುರೇಶ್‌ಗೌಡ ಮಾತನಾಡಿ, ಸಾಂಕೇತಿಕವಾಗಿ ಹೋರಾಟ ಆರಂಭಿಸಿದ್ದೇವೆ, ಎಲ್ಲಾ ಪಕ್ಷದ ರಾಜಕೀಯ ಮುಖಂಡರು, ಸಂಘ ಸಂಸ್ಥೆಗಳು ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿವೆ, ಈ ಹಿಂದೆ ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಈ ಯೋಜನೆ ಪ್ರಾರಂಭವಾಯಿತು, ನಂತರ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದ ಬಳಿಕ ಯೋಜನೆ ಸ್ಥಗಿತಗೊಳಿಸಿತ್ತು, ಮತ್ತೆ ಈಗ ಕಾಂಗ್ರೆಸ್ ಸರಕಾರ ಈ ಯೋಜನೆ ಜಾರಿಗೆ ತಂದಿದೆ, ಈ ಯೋಜನೆಗೆ ಗುದ್ದಲಿ ಪೂಜೆ ಮಾಡದೆ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ, ಜಿಪಂ ಕೆಡಿಪಿ ಸಭೆಯಲ್ಲಿ ನಾವೆಲ್ಲಾ ಇದನ್ನು ವಿರೋಧಿಸಿದ್ದೆವು, ಆದರೆ ಜಿಲ್ಲೆಯಲ್ಲಿರುವ ಇಬ್ಬರು ಸಚಿವರು ಡಿ.ಕೆ.ಶಿವಕುಮಾರ್ ಅವರಿಗೆ ಹೆದರಿ ಸಚಿವ ಸಂಪುಟದಲ್ಲಿ ಈ ಯೋಜನೆ ವಿರೋಧಿಸಿಲ್ಲ ಎಂದರು.

ರಾಜಕಾರಣಕ್ಕಿಂತ ಜಿಲ್ಲೆಯ ಜನರ ಹಿತ ಮುಖ್ಯ

ತುರುವೇಕೆರೆ ಶಾಸಕ ಎಂ.ಟಿ.ಕೃಷ್ಣಪ್ಪ ಮಾತನಾಡಿ,ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವ ಕುಮಾರ್ ವಿರುದ್ಧ ವಾಗ್ದಾಳಿ ನಡೆಸಿ ತುಮಕೂರಿನಲ್ಲಿರುವ ಸಚಿವರಾದ ಕೆ.ಎನ್.ರಾಜಣ್ಣ ಹಾಗೂ ಡಾ.ಜಿ.ಪರಮೇಶ್ವರ್ ಈ ಕೂಡಲೇ ರಾಜೀನಾಮೆ ನೀಡಬೇಕು, ಇಲ್ಲದಿದ್ದರೆ ಪರಮೇಶ್ವರ್ ಮನೆ ಮುಂದೆ ಪ್ರತಿಭಟನೆ ನಡೆಸಲಾಗುವುದು, ಜನ ತೀರ್ಮಾನಿಸಿದರೆ ಸರಕಾರ ಬರುತ್ತದೆ, ಹೋಗುತ್ತದೆ, ಆದ್ದರಿಂದ ಸರಕಾರ ಜನರಿಗೆ ಅನ್ಯಾಯ ಮಾಡಿದರೆ ಉಳಿವು ಸಾಧ್ಯವಿಲ್ಲ, ಈ ಯೋಜನೆಯ ಕಾಮಗಾರಿ ಕೈಗೊಳ್ಳಲು ಸರಕಾರದ ಆದೇಶ ಇಲ್ಲ. ಯಾವುದೇ ರೀತಿಯ ಭೂಸ್ವಾಧೀನ ಪ್ರಕ್ರಿಯೆ ನಡೆದಿಲ್ಲ, ಆದರೂ ಕಾಮಗಾರಿ ಕೈಗೆತ್ತಿಕೊಂಡಿದ್ದಾರೆ, ತುಮಕೂರು ಜಿಲ್ಲೆಯ ರೈತರು, ಜನರ ಹಿತ ಕಾಪಾಡುವುದು ನಮ್ಮ ಉದ್ದೇಶ, ಇದರಲ್ಲಿ ಯಾವುದೇ ರಾಜಕಾರಣ ಮಾಡುವುದಿಲ್ಲ, ನಮಗೆ ಅದು ಅಗತ್ಯವೂ ಇಲ್ಲ ಎಂದರು.

ಶಾಸಕ ಜ್ಯೋತಿಗಣೇಶ್ ಮಾತನಾಡಿ, 2018 ರಲ್ಲಿ ಈ ಯೋಜನೆ ಜಾರಿಗೆ ತರಲು ನಿರ್ಣಯ ತೆಗೆದುಕೊಂಡಿದ್ದರು, ಅಂದು ಜಿಲ್ಲೆಯ ಎಲ್ಲಾ ಜನಪ್ರತಿನಿಧಿಗಳು ಹೋರಾಟ ಮಾಡಿದ್ದರು, ಬಳಿಕ ಅಧಿಕಾರಕ್ಕೆ ಬಂದ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಈ ಯೋಜನೆ ಸ್ಥಗಿತಗೊಳಿಸಿತ್ತು, ಎಕ್ಸ್‌ಪ್ರೆಸ್ ಲಿಂಕ್ ಕೆನಾಲ್ ಯೋಜನೆ ಮಾಡಿದರೆ ತುಮಕೂರು ಜಿಲ್ಲೆಗೆ ಮರಣ ಶಾಸನ ಕಟ್ಟಿಟ್ಟಬುತ್ತಿ ಎಂದು ಹೇಳಿದರು.

ಪ್ರತಿಭಟನೆಯಲ್ಲಿ ವಿವಿಧ ಮಠಾಧೀಶರಾದ ಬೆಟ್ಟದಹಳ್ಳಿಯ ಚಂದ್ರಶೇಖರ ಸ್ವಾಮೀಜಿ, ಗೋಡೆಕೆರೆ ಮಠದ ಮೃತ್ಯುಂಜಯ ದೇಶಿಕೇಂದ್ರ ಸ್ವಾಮೀಜಿ, ತಮ್ಮಡಿಹಳ್ಳಿ ಮಠದ ಸ್ವಾಮೀಜಿ, ಸರಪಳಿ ಮಠದ ಜ್ಞಾನಾನಂದಪುರಿ ಸ್ವಾಮೀಜಿ, ನೀಲಕಂಠಾ ಚಾರ್ಯ ಸ್ವಾಮೀಜಿ, ರೇವಣಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿ, ವಿದ್ಯಾಶಂಕರ ದೇಶೀ ಕೇಂದ್ರ ಸ್ವಾಮೀಜಿ, ವಿವಿಧ ಪಕ್ಷಗಳ ಮುಖಂಡರಾದ ಬಿ.ಎಸ್.ನಾಗರಾಜು, ದಿಲೀಪ್ ಕುಮಾರ್, ಲೋಕೇಶ್ವರ್, ಡಾ.ಪರಮೇಶ್, ಕುಮಾರಸ್ವಾಮಿ, ಬ್ಯಾಟರಂಗೇ ಗೌಡ, ಗೂಳೂರು ನವೀನ್‌ಗೌಡ, ಟಿ.ಆರ್.ಸದಾಶಿವಯ್ಯ ಸೇರಿದಂತೆ ನೂರಾರು ಮಂದಿ ರೈತರು, ವಿವಿಧ ಸಂಘಟನೆಗಳ ಕಾರ್ಯಕರ್ತರು, ಹೋರಾಟಗಾರರು ಭಾಗಿಯಾಗಿದ್ದರು.

(ವರದಿ: ಈಶ್ವರ್‌ ತುಮಕೂರು)

IPL_Entry_Point

ವಿಭಾಗ