Tumkur News: ತುಮಕೂರು ಜಿಲ್ಲೆಯಲ್ಲಿ ಮಕ್ಕಳ ಅಪಹರಣ ಜಾಲ, 7 ಮಂದಿ ಬಂಧಿಸಿದ ಪೊಲೀಸರು, ಮಕ್ಕಳ ರಕ್ಷಣೆ, ಒಂದು ಮಗು ಸಾವು
ಕನ್ನಡ ಸುದ್ದಿ  /  ಕರ್ನಾಟಕ  /  Tumkur News: ತುಮಕೂರು ಜಿಲ್ಲೆಯಲ್ಲಿ ಮಕ್ಕಳ ಅಪಹರಣ ಜಾಲ, 7 ಮಂದಿ ಬಂಧಿಸಿದ ಪೊಲೀಸರು, ಮಕ್ಕಳ ರಕ್ಷಣೆ, ಒಂದು ಮಗು ಸಾವು

Tumkur News: ತುಮಕೂರು ಜಿಲ್ಲೆಯಲ್ಲಿ ಮಕ್ಕಳ ಅಪಹರಣ ಜಾಲ, 7 ಮಂದಿ ಬಂಧಿಸಿದ ಪೊಲೀಸರು, ಮಕ್ಕಳ ರಕ್ಷಣೆ, ಒಂದು ಮಗು ಸಾವು

ತುಮಕೂರು ಜಿಲ್ಲೆಯಲ್ಲಿ ಪ್ರಬಲವಾಗಿದ್ದ ಮಕ್ಕಳ ಅಪಹರಣ, ಮಾರಾಟ ಜಾಲವನ್ನು ಪೊಲೀಸರು ಬೇಧಿಸಿದ್ದಾರೆ.ವರದಿ: ಈಶ್ವರ್‌ ತುಮಕೂರು

ತುಮಕೂರು ಜಿಲ್ಲೆಯಲ್ಲಿ ಮಕ್ಕಳ ಅಪಹರಣ, ಮಾರಾಟ ಜಾಲವನ್ನು ಪೊಲೀಸರು ಬಯಲಿಗೆಳೆದಿದ್ದಾರೆ.
ತುಮಕೂರು ಜಿಲ್ಲೆಯಲ್ಲಿ ಮಕ್ಕಳ ಅಪಹರಣ, ಮಾರಾಟ ಜಾಲವನ್ನು ಪೊಲೀಸರು ಬಯಲಿಗೆಳೆದಿದ್ದಾರೆ.

ತುಮಕೂರು: ಕಲ್ಪತರು ನಾಡು ತುಮಕೂರು ಜಿಲ್ಲೆಯಲ್ಲಿ ಮಕ್ಕಳ ಖರೀದಿ ಹಾಗೂ ಮಾರಾಟ ಜಾಲ ಜೋರಾಗಿಯೇ ನಡೆದಿದೆ. ಜಿಲ್ಲೆಯ ಗುಬ್ಬಿ ತಾಲೂಕಿನಲ್ಲಿ ದಾಖಲಾಗಿದ್ದ 11 ತಿಂಗಳ ಮಗು ಅಪಹರಣ ಪ್ರಕರಣದ ಬೆನ್ನತ್ತಿದ ಪೊಲೀಸರು ಪ್ರಕರಣದಲ್ಲಿ ಭಾಗಿಯಾಗಿದ್ದ ಏಳು ಆರೋಪಿಗಳನ್ನು ಬಂಧಿಸಿದ್ದಾರೆ. ಹುಟ್ಟುವ ಮಕ್ಕಳ ಕುರಿತು ಮಾಹಿತಿ ಪಡೆದು ಅವುಗಳನ್ನು ಮಾರಾಟ ಮಾಡಿ ಹಣ ಮಾಡಿಕೊಳ್ಳುತ್ತಿದ್ದ ದೊಡ್ಡ ದಂದೆಯನ್ನೇ ಪೊಲೀಸರು ಬೇಧಿಸಿದ್ದಾರೆ. ತುಮಕೂರು ಮಾತ್ರವಲ್ಲದೇ ಮಂಡ್ಯ, ಬೆಂಗಳೂರು ಸಹಿತ ಹಲವು ಕಡೆಗಳಲ್ಲಿ ಮಕ್ಕಳ ಖರೀದಿ, ಮಾರಾಟ ಜಾಲ ಹರಡಿರುವುದು ತನಿಖೆಯಿಂದ ಬಯಲಾಗಿದೆ. ಏಳು ಮಕ್ಕಳನ್ನು ರಕ್ಷಿಸಲಾಗಿದ್ದು. ಒಂದು ಮಗು ಮೃತಪಟ್ಟಿದೆ. ಇನ್ನು ಒಂದು ಮಗುವನ್ನು ಪೋಷಕರಿಗೆ ನೀಡಲಾಗಿದೆ. ಇನ್ನೂ ಐದು ಮಕ್ಕಳನ್ನು ಮಕ್ಕಳ ಕಲ್ಯಾಣ ಸಮಿತಿಗೆ ಹಸ್ತಾಂತರ ಮಾಡಲಾಗಿದೆ.

ಸುದ್ದಿಗೋಷ್ಠಿಯಲ್ಲಿ ವಿವರಣೆ ನೀಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ. ಅಶೋಕ್, ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪಿ ಹುಳಿಯಾರಿನ ಮೆಹಬೂಬ್ ಶರೀಫ್ ತನ್ನ ಹೆಂಡತಿಯ ಹೆಸರಿನಲ್ಲಿ ಖಾಸಗಿ ಆಸ್ಪತ್ರೆ ನಡೆಸುತ್ತಿರುವುದಾಗಿ ತಿಳಿಸಿದ್ದು ಪ್ರಕರಣದ ಆರೋಪಿ ಶರೀಫ್ ನೀಡಿದ ಮಾಹಿತಿ ಆಧರಿಸಿ ಆರೋಪಿಗಳು ಮಾರಾಟ ಮಾಡಿದ್ದ ಒಂಬತ್ತು ಮಕ್ಕಳ ಪೈಕಿ ಐದು ಮಕ್ಕಳನ್ನು ರಕ್ಷಿಸಲಾಗಿದೆ. ಒಂದು ಮಗು ಮೃತಪಟ್ಟಿದ್ದು ಇನ್ನೊಂದು ಮಗುವನ್ನು ಪೋಷಕರಿಗೆ ಹಿಂದಿರುಗಿಸಿರುತ್ತಾರೆ, ಇದರ ಜೊತೆಗೆ ರಕ್ಷಿಸಿರುವ 5 ಮಕ್ಕಳ ಪೈಕಿ ಒಂದು ಮಗುವನ್ನು ಪೋಷಕರಿಗೆ ನೀಡಿದ್ದು ನಾಲ್ಕು ಮಕ್ಕಳನ್ನು ಮಕ್ಕಳ ಕಲ್ಯಾಣ ಸಮಿತಿ ಆದೇಶದ ಮೇರೆಗೆ ದತ್ತು ಸ್ವೀಕಾರ ಕೇಂದ್ರದಲ್ಲಿ ಇರಿಸಲಾಗಿದೆ ಎಂದು ತಿಳಿಸಿದರು.

ಪ್ರಕರಣದಲ್ಲಿ ಬಳಸಲಾಗಿದ್ದ ಮಾರುತಿ 800 ಕಾರು 50 ಸಾವಿರ ನಗದು ಹಾಗೂ ನಾಲ್ಕು ಮೊಬೈಲ್ ಫೋನ್ ವಶಕ್ಕೆ ಪಡೆಯಲಾಗಿದೆ, ಪ್ರಕರಣದ ಪ್ರಮುಖ ಆರೋಪಿಗಳಾದ ತುಮಕೂರಿನ ಖಾಸಗಿ ನರ್ಸಿಂಗ್ ಕಾಲೇಜಿನಲ್ಲಿ ಕೆಲಸ ನಿರ್ವಹಿಸುತ್ತಿದ್ದ ಮಹೇಶ್, ಚಿಕ್ಕನಾಯಕನ ಹಳ್ಳಿ ತಾಲೂಕಿನ ಮೆಹಬೂಬ್ ಶರೀಫ್, ಗುಬ್ಬಿ ತಾಲೂಕಿನ ಬಿಕ್ಕೆ ಗುಡ್ಡದ ರಾಮಕೃಷ್ಣಪ್ಪ, ತುಮಕೂರಿನ ಭಾರತಿ ನಗರದ ಹನುಮಂತರಾಜು, ನಾಗಮಂಗಲ ತಾಲೂಕಿನ ಮುಬಾರಕ್ ಪಾಷ, ಮಧುಗಿರಿ ತಾಲೂಕಿನ ಬಡವನಹಳ್ಳಿಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕೆಲಸ ನಿರ್ವಹಿಸುತ್ತಿದ್ದ ಪೂರ್ಣಿಮಾ, ಶಿರಾ ಜ್ಯೋತಿ ನಗರದ ಖಾಸಗಿ ಆಸ್ಪತ್ರೆಯ ಸ್ಟಾಫ್ ನರ್ಸ್ ಸೌಜನ್ಯ ಸೇರಿದಂತೆ ಪ್ರಕರಣದಲ್ಲಿ ಭಾಗಿಯಾಗಿದ್ದ ಏಳು ಆರೋಪಿಗಳನ್ನು ಪೊಲೀಸರು ಬಂಧಿಸಲಾಗಿದೆ.

ಈ ಆರೋಪಿಗಳು ಅಂತರ್ ಜಿಲ್ಲಾ ಮಟ್ಟದಲ್ಲಿ ಮಕ್ಕಳನ್ನು ಮಾರಾಟ ಮಾಡುವ ಬೃಹತ್ ಜಾಲ ಹೊಂದಿರುವುದು ತನಿಖೆ ವೇಳೆ ಗೊತ್ತಾಗಿದೆ. ಅಪಹರಿಸಲಾದ ಮಕ್ಕಳನ್ನು ಮೂರರಿಂದ ನಾಲ್ಕು ಲಕ್ಷ ರೂ.ಗಳಿಗೆ ಮಾರಾಟ ಮಾಡುತ್ತಿದ್ದರು ಎನ್ನುವ ಸ್ಫೋಟಕ ಮಾಹಿತಿ ಬಯಲಾಗಿದೆ. ಪ್ರಕರಣದ ಬಗ್ಗೆ ಮತ್ತಷ್ಟು ಮಾಹಿತಿ ಪಡೆಯುವ ನಿಟ್ಟಿನಲ್ಲಿ ತನಿಖೆ ಚುರುಕು ಗೊಳಿಸಲಾಗಿದ್ದು, ತಂಡಗಳನ್ನು ರಚನೆ ಮಾಡಲಾಗಿದೆ. ಈ ಪ್ರಕರಣದಲ್ಲಿ ಯಾರೇ ಇದ್ದರೂ ಅವರನ್ನು ಬಂಧಿಸಲಾಗುವುದು ಎನ್ನುವುದು ತುಮಕೂರು ಎಸ್‌ಪಿ ಅಶೋಕ್ ವಿವರಣೆ.

ತನಿಖಾ ತಂಡದ ನೇತೃತ್ವ ವಹಿಸಿದ್ದ ಎಎಸ್‌ಪಿಗಳಾದ ವಿ.ಮರಿಯಪ್ಪ ಮತ್ತು ಅಬ್ದುಲ್ ಖಾದರ್ ಹಾಗೂ ಶಿರಾ ಉಪ ವಿಭಾಗದ ಡಿವೈಎಸ್ಪಿ ಬಿ.ಕೆ.ಶೇಖರ್, ಗುಬ್ಬಿ ವೃತ್ತದ ಸಿಪಿಐ ಗೋಪಿನಾಥ್, ಗುಬ್ಬಿ ಪೊಲೀಸ್ ಠಾಣೆಯ ಪಿಎಸ್‌ಐ ಸುನಿಲ್ ಕುಮಾರ್ ಸಿಬ್ಬಂದಿ ನವೀನ್ ಕುಮಾರ್, ವಿಜಯ್ ಕುಮಾರ್, ಮಧುಸೂದನ್ ಹಾಗೂ ಜಿಲ್ಲಾ ಪೊಲೀಸ್ ಕಚೇರಿಯ ನರಸಿಂಹರಾಜು, ದುಶಾಂತ್ ಅವರ ಕಾರ್ಯಕ್ಕೆ ಎಸ್‌ಪಿ ಅಶೋಕ್‌ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

(ವರದಿ: ಈಶ್ವರ್‌, ತುಮಕೂರು)

Whats_app_banner