Tumkur News: ರಾಗಿ ಬೀಸಿ ಭತ್ತ ಕುಟ್ಟಿ ಸಂಭ್ರಮ, ತುಮಕೂರು ದೇಸೀ ಉತ್ಸವದಲ್ಲಿ ಮಹಿಳಾ ಸಾಂಸ್ಕೃತಿಕ ವೈಭವ
ಕನ್ನಡ ಸುದ್ದಿ  /  ಕರ್ನಾಟಕ  /  Tumkur News: ರಾಗಿ ಬೀಸಿ ಭತ್ತ ಕುಟ್ಟಿ ಸಂಭ್ರಮ, ತುಮಕೂರು ದೇಸೀ ಉತ್ಸವದಲ್ಲಿ ಮಹಿಳಾ ಸಾಂಸ್ಕೃತಿಕ ವೈಭವ

Tumkur News: ರಾಗಿ ಬೀಸಿ ಭತ್ತ ಕುಟ್ಟಿ ಸಂಭ್ರಮ, ತುಮಕೂರು ದೇಸೀ ಉತ್ಸವದಲ್ಲಿ ಮಹಿಳಾ ಸಾಂಸ್ಕೃತಿಕ ವೈಭವ

Desi Utsav2024 ಕಲ್ಪತರು ನಾಡು ತುಮಕೂರು ಕೃಷಿ ಚಟುವಟಿಕೆಗೂ ಹೆಸರುವಾಸಿ. ಕೃಷಿ ವೈಭವವನ್ನು ನೆನಪಿಸುವ ದೇಸೀ ಉತ್ಸವ ತುಮಕೂರಿನಲ್ಲಿ ಗಮನ ಸೆಳಯಿತು.( ವರದಿ: ಈಶ್ವರ್‌ ತುಮಕೂರು)

ತುಮಕೂರಿನಲ್ಲಿ ಗಮನ ಸೆಳೆದ ದೇಸಿ ಉತ್ಸವ
ತುಮಕೂರಿನಲ್ಲಿ ಗಮನ ಸೆಳೆದ ದೇಸಿ ಉತ್ಸವ

ತುಮಕೂರು: ತುಮಕೂರಿನ ಡಾ.ಗುಬ್ಬಿ ವೀರಣ್ಣ ರಂಗಮಂದಿರದಲ್ಲಿ ಹಳ್ಳಿ ಸಂಸ್ಕೃತಿಯ ವೈಭವ ಮನೆ ಮಾಡಿತ್ತು. ರಾಗಿ ಬೀಸುವ, ಭತ್ತ ಕುಟ್ಟುವ ಗ್ರಾಮೀಣ ಕುಟುಂಬದ ನಿತ್ಯದ ಚಟುವಟಿಕೆಗಳೊಂದಿಗೆ ಹಳ್ಳಿ ಸೊಗಡಿನ ವೇಷಭೂಷಣ ತೊಟ್ಟ ಮಹಿಳೆಯರು ಕೃಷಿ ಕೆಲಸ, ಹಳ್ಳಿ ಆಚರಣೆಗಳನ್ನು ನೃತ್ಯ, ಗೀತ ಗಾಯನದ ಮೂಲಕ ಪ್ರದರ್ಶಿಸಿ ಎಲ್ಲರ ಗಮನ ಸೆಳೆದರು.

ಜಿಲ್ಲಾ ಮಹಿಳಾ ಸಂಘಟನೆ ಆಯೋಜಿಸಿದ್ದ ಜಿಲ್ಲಾ ಮಹಿಳಾ ಸಾಂಸ್ಕೃತಿಕ ಸಮ್ಮೇಳನದ ದೇಸೀ ಉತ್ಸವದಲ್ಲಿ ಗ್ರಾಮೀಣ ಬದುಕಿನ ಸಂಭ್ರಮ ಮೇಳೈಸಿತ್ತು, ಗ್ರಾಮೀಣ ಸೊಗಡು, ಸೊಬಗಿನ ಸಾಂಸ್ಕೃತಿಕ ಕಾರ್ಯಕ್ರಮ, ಧಾನ್ಯ ಬೀಸುವ, ಭತ್ತ ಕುಟ್ಟುವ, ಧಾನ್ಯ ಸ್ವಚ್ಛಗೊಳಿಸುವ ಹಳ್ಳಿ ಕುಟುಂಬಗಳ ಮಹಿಳೆಯರ ದೈನಂದಿನ ಚಟುವಟಿಕೆಗಳ ಪ್ರದರ್ಶನ ದೇಸಿ ಉತ್ಸವಕ್ಕೆ ಮೆರಗು ನೀಡಿತ್ತು.

ಕೆಲವರು ಗ್ರಾಮೀಣ ಹಾಡುಗಳನ್ನು ಹಾಡುತ್ತಿದ್ದರೆ, ಇನ್ನು ಕೆಲವು ಕಡೆ ರಾಗಿ ಬೀಸುತ್ತಿದ್ದುದು ಗಮನ ಸೆಳೆಯಿತು. ಹಿಂದಿನ ದಿನಗಳನ್ನು ಹಲವರು ಮೆಲಕು ಹಾಕಿ ಖುಷಿ ಪಟ್ಟರು.

ಜಿಲ್ಲಾ ಪಂಚಾಯ್ತಿ ಮಾಜಿ ಅಧ್ಯಕ್ಷೆ, ಶಬರಿ ಮಹಿಳಾ ಬ್ಯಾಂಕ್‌ಅಧ್ಯಕ್ಷೆ ಎಸ್.ಆರ್.ಶಾಂತಲಾ ರಾಜಣ್ಣ ದೇಸಿ ಉತ್ಸವಕ್ಕೆ ಚಾಲನೆ ನೀಡಿ ಮಾತನಾಡಿ, ನಮ್ಮ ದೇಸಿ ಕಲೆಗಳಿಗೆ ಒತ್ತು ಕೊಟ್ಟು ಹೊಸ ತಲೆಮಾರಿಗೆ ಪರಿಚಯಿಸುವ ಈ ಕಾರ್ಯ ಶ್ಲಾಘನೀಯ, ಇಂತಹ ಕಲೆಗಳಿಗೆ ಪ್ರೋತ್ಸಾಹ ಕೊಡಬೇಕು, ಅವುಗಳನ್ನು ಅನುಸರಿಸಿ ಹಳೆ ದಿನಗಳನ್ನು ಮತ್ತೆ ತರಬೇಕು ಎಂದು ಆಶಿಸಿದರು.

ಸಗಣಿ ಗೊಬ್ಬರದಿಂದ ಬೆಳೆದ ಆಹಾರ ಧಾನ್ಯ ಆರೋಗ್ಯಕರ ಎಂದು ಗೊತ್ತಾಗಿ ಈಗ ನಾವು ಮತ್ತೆ ಹಳೆ ಕೃಷಿ ಪದ್ಧತಿಯತ್ತ ಮುಖ ಮಾಡಿದ್ದೇವೆ, ಹಾಗೇ ನಮ್ಮ ಹಳ್ಳಿಯ ಪದ್ಧತಿ, ಸಂಸ್ಕೃತಿ ಆಚರಣೆಗೆ ಮತ್ತೆ ಬರಬೇಕು ಎಂದು ಕಿವಿಮಾತು ಹೇಳಿದರು.

ಬಿಜೆಪಿ ಮುಖಂಡ, ಸ್ಫೂರ್ತಿ ಡೆವಲಪರ್ಸ್‌ನ ಎಸ್.ಪಿ.ಚಿದಾನಂದ್ ಮಾತನಾಡಿ, ಆಧುನಿಕತೆ ಬೆಳೆದಂತೆ ತಾಂತ್ರಿಕತೆ ಪ್ರಭಾವದಿಂದ ದೇಶಿ ಸಂಸ್ಕೃತಿ ಮೇಲೆ ಹೊಡೆತ ಬಿದ್ದಿದೆ, ಹಳ್ಳಿಯ ಅನೇಕ ಸಾಂಪ್ರದಾಯಕ ಕಲೆ, ಕಾಯಕ ಕಣ್ಮರೆಯಾಗಿವೆ, ಎಲ್ಲವನ್ನು ನಿರ್ವಹಣೆ ಮಾಡಲು ಯಂತ್ರಗಳ ಬಳಕೆ ಮಾಡುತ್ತಾ ಕೆಲಸ ಸುಲಭವಾಗುತ್ತಿದೆ, ಆದರೆ ಹಳ್ಳಿ ಪದ್ಧತಿ ಒಳಗೊಳ್ಳುವಿಕೆ, ಸಹಬಾಳ್ವೆಯ ಆಚರಣೆ ಮರೆಯಾಗಿವೆ, ಅವುಗಳನ್ನು ನಮ್ಮ ಮಕ್ಕಳಿಗೆ ತಿಳಿಸಿ ಕಲಿಸುವ ಕೆಲಸವಾದರೆ ದೇಶಿ ಸಂಸ್ಕೃತಿಯನ್ನು ಮುಂದಿನ ತಲೆಮಾರಿಗೂ ಕೊಂಡೊಯ್ಯ ಬಹುದು ಎಂದರು.

ಹಿರಿಯ ಪತ್ರಕರ್ತ ಎಸ್.ನಾಗಣ್ಣ ಮಾತನಾಡಿ, ಈಗ ಕಾರ್ಯಕ್ರಮಗಳಲ್ಲಿ ಮಹಿಳೆಯರ ಭಾಗವಹಿಸುವುಕೆ ಹೆಚ್ಚಾಗುತ್ತಿದ್ದು, ಮಹಿಳಾ ಯುಗ ಪ್ರಾರಂಭವಾಗುತ್ತದೆ ಎಂಬ ಆಶಾದಾಯಕ ಬೆಳವಣಿಗೆ ಕಾಣುತ್ತಿದೆ, ಇಂದು ಮಹಿಳೆಯರು ಎಲ್ಲಾ ಕ್ಷೇತ್ರಗಳಲ್ಲಿ ಪುರುಷರಿಗೆ ಸಮಾನರಾಗಿ ದುಡಿಯುತ್ತಿದ್ದಾರೆ, ಇದು ಮಹಿಳಾ ಸ್ವಾವಲಂಬನೆಗೆ ನಂದಿಯಾಗಿದೆ ಎಂದರು.

ಜಿಲ್ಲಾ ಮಹಿಳಾ ಸಂಘಟನೆ ಅಧ್ಯಕ್ಷೆ ಡಾ.ಬಿ.ಸಿ.ಶೈಲಾ ನಾಗರಾಜ್ ಮಾತನಾಡಿ, ನಗರೀಕರಣ, ಜಾಗತೀಕರಣದ ಹೊಡೆತದಲ್ಲಿ ನಮ್ಮ ಗ್ರಾಮೀಣ ಸಂಸ್ಕೃತಿ ಮರೆಯಾಗುತ್ತಿದೆ, ಅದರ ಮಹಿಮೆ ಸಾರಲು, ಅದನ್ನು ಉಳಿಸಲು ಈಗಿನವರಿಗೆ ತಿಳಿಸಲು ಈ ದೇಸಿ ಉತ್ಸವ ಆಯೋಜಿಸಲಾಗಿದೆ ಎಂದರು.

ಲೇಖಕಿ, ನಿವೃತ್ತ ಸರ್ಕರಿ ನೌಕರರ ಸಂಘದ ಅಧ್ಯಕ್ಷೆ ಬಾ.ಹ.ರಮಾಕುಮಾರಿ ಮಾತನಾಡಿ, ದೇಸಿ ಸಂಸ್ಕೃತಿ ಎಂಬುದು ಕಾಯ ಮತ್ತು ಕಾಯಕದ ಅವಿರ್ಭವಿತ ಚೈತನ್ಯ, ಗ್ರಾಮೀಣ ಪ್ರದೇಶದ ಶ್ರಮಿಕ, ರೈತ ವರ್ಗದ ಬದುಕಿನ ಸಂಸ್ಕೃತಿ, ಈಗ ದೇಶಿ ಸಂಸ್ಕೃತಿ ಮನರಂಜನಾ ಕಾರ್ಯಕ್ರಮವಾಗಿ ಆಚರಿಸಲಾಗುತ್ತಿದೆ, ಅದು ಪ್ರದರ್ಶನಕ್ಕೆ ಮೀಸಲಾಗದೆ, ನಮ್ಮ ಹಳ್ಳಿ ಸಂಸ್ಕೃತಿ, ಪದ್ಧತಿಯನ್ನುಯುವ ಪೀಳಿಗೆಗ ಕಲಿಸುವ ಕೆಲಸ ಆಗಬೇಕು, ಕುಟುಂಬಗಳಲ್ಲಿ ಹಿರಿಯರು ತಮ್ಮ ಮಕ್ಕಳಿಗೆ ಕಲಿಸಲಿ ಎಂದು ಆಶಿಸಿದರು.

ಕಾರ್ಯಕ್ರಮಕ್ಕೂ ಮುನ್ನಾ ನಗರದ ಬಿಜಿಎಸ್ ವೃತ್ತದಿಂದ ರಂಗಮಂದಿರ ವರೆಗೆ ಕುಂಭ ಕಳಸ, ಕಂಸಾಳೆ, ಕೋಲಾಟ ಮತ್ತಿತರ ಜಾನಪದ ಕಲೆಗಳ ಆಕರ್ಷಕ ಪ್ರದರ್ಶನದ ಮೆರವಣಿಗೆ ನಡೆಯಿತು.

( ವರದಿ: ಈಶ್ವರ್‌ ತುಮಕೂರು)

Whats_app_banner